ಅಮೆರಿಕದಲ್ಲಿ ಸರಕು ಸೇವಾ ವಿಮಾನ ಪತನ: 7 ಮಂದಿ ಸಾವು
ಅಮೆರಿಕದಲ್ಲಿ ಯುಪಿಎಸ್ ಸರಕು ಸೇವಾ ವಿಮಾನವು ದುರಂತಕ್ಕೀಡಾಗಿ ಸುಟ್ಟು ಕರಕಲಾಗಿದೆ. ಘಟನೆಯಲ್ಲಿ 7 ಮಂದಿ ಸಾವಿಗೀಡಾಗಿದ್ದಾರೆ.
ಲೂಯಿಸ್ವಿಲ್ಲೆ (ಅಮೆರಿಕ):
ಲೂಯಿಸ್ವಿಲ್ಲೆಯಲ್ಲಿನ ಮುಹಮ್ಮದ್ ಅಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿರುವ ಯುಪಿಎಸ್ ವರ್ಲ್ಡ್ಪೋರ್ಟ್ನಿಂದ ಹೊನೊಲುಲುವಿಗೆ ವಿಮಾನ ಹೊರಟಿತ್ತು. ಮಂಗಳವಾರ ಸಂಜೆ 5:15 ರ ಸುಮಾರಿಗೆ ಈ ಅಪಘಾತ ಸಂಭವಿಸಿದೆ ಎಂದು ಅಲ್ಲಿನ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಕೆಂಟಕ್ಕಿಯ ಲೂಯಿಸ್ವಿಲ್ಲೆಯಲ್ಲಿರುವ ಕಂಪನಿಯ ಜಾಗತಿಕ ವಿಮಾನಯಾನ ಕೇಂದ್ರದಿಂದ ಹಾರಿದ ಯುಪಿಎಸ್ ಸರಕು ವಿಮಾನ ನೆಲಕ್ಕೆ ಅಪ್ಪಳಿಸಿ ಸ್ಫೋಟಗೊಂಡಿದೆ. ದುರ್ಘಟನೆಯಲ್ಲಿ ಕನಿಷ್ಠ 7 ಮಂದಿ ಸಾವಿಗೀಡಾದರೆ, 11 ಮಂದಿ ಗಂಭೀರ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ತನಿಖೆಗೆ ಸೂಚಿಸಿದ ಯುಪಿಎಸ್:
ದುರಂತಕ್ಕೀಡಾದ ವಿಮಾನದ ಮಾಲೀಕ ಸಂಸ್ಥೆ ಯುಪಿಎಸ್ ಹೇಳಿಕೆ ಬಿಡುಗಡೆ ಮಾಡಿದೆ. ಅಪಘಾತದ ಬಗ್ಗೆ ರಾಷ್ಟ್ರೀಯ ಸಾರಿಗೆ ಸುರಕ್ಷತಾ ಮಂಡಳಿಯು ತನಿಖೆಯನ್ನು ನಿರ್ವಹಿಸುತ್ತದೆ ಎಂದು ಹೇಳಿದೆ. ಜೊತೆಗೆ ವಿಮಾನ ನಿಲ್ದಾಣವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಬುಧವಾರದವರೆಗೂ ಕಾರ್ಯಾಚರಣೆ ಪುನರಾರಂಭಿಸುವ ನಿರೀಕ್ಷೆಯಿಲ್ಲ.
ಲೀರಿಮ್ ರೊಡ್ರಿಗಸ್ ಎಂಬವರು ದುರಂತದ ವಿಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹರಿಬಿಟ್ಟಿದ್ದಾರೆ. ವಿಮಾನ ನೆಲಕ್ಕೆ ಅಪ್ಪಳಿಸಿದ ತಕ್ಷಣ ಬೃಹತ್ ಜ್ವಾಲೆ ಹೊತ್ತಿಕೊಂಡಿತು. ಸ್ಫೋಟದ ಬಳಿಕ ಕಪ್ಪು ಹೊಗೆಯು ದೊಡ್ಡ ಮೋಡಗಳಂತೆ ಆವರಿಸಿತು. ಸ್ಫೋಟದ ಸಮಯದಲ್ಲಿ ತಾನು ಮತ್ತು ತನ್ನ ಪತಿ ಅದೇ ಪ್ರದೇಶದಲ್ಲಿದ್ದೆವು ಎಂದು ಅವರು ಬರೆದುಕೊಂಡಿದ್ದಾರೆ.
ಲೂಯಿಸ್ವಿಲ್ಲೆಯಲ್ಲಿರುವ ಯುಪಿಎಸ್ ಅತಿದೊಡ್ಡ ಪ್ಯಾಕೇಜ್ ನಿರ್ವಹಣಾ ಸಂಸ್ಥೆಯಾಗಿದೆ. ಈ ಹಬ್ನಲ್ಲಿ ಸಾವಿರಾರು ಕಾರ್ಮಿಕರು ಕೆಲಸ ಮಾಡುತ್ತಾರೆ. 300 ದೈನಂದಿನ ವಿಮಾನಗಳನ್ನು ಇದು ಹೊಂದಿದೆ. ಗಂಟೆಗೆ 4,00,000 ಕ್ಕೂ ಹೆಚ್ಚು ಸರಕನ್ನು ಇದು ವಿತರಿಸುತ್ತದೆ.
ಭೀಕರ ವಿಡಿಯೋ ವೈರಲ್:
ವಿಮಾನ ಅಪಘಾತಕ್ಕೀಡಾದ ವಿಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ. ವಿಮಾನದ ಎಡ ಭಾಗದ ರೆಕ್ಕೆಯು ಬೆಂಕಿಯಿಂದ ಹೊತ್ತಿಕೊಂಡು, ದಟ್ಟ ಹೊಗೆ ಕಾರುತ್ತಿದೆ. ವಿಮಾನವು ಏಕಾಏಕಿ ನೆಲಕ್ಕೆ ಅಪ್ಪಳಿಸಿದ್ದರಿಂದ ಬೆಂಕಿಯ ಉಂಡೆಯಾಗಿ ಸ್ಫೋಟಗೊಂಡಿತು. ರನ್ವೇಯ ಪಕ್ಕದಲ್ಲಿದ್ದ ಕಟ್ಟಡದ ಛಾವಣಿಗೆ ಹಾನಿಯಾಗಿದ್ದೂ ವಿಡಿಯೋದಲ್ಲಿ ಕಾಣಬಹುದು.
ಗಾಯಗೊಂಡ 11 ಮಂದಿಯಲ್ಲಿ ಕೆಲವರ ಸ್ಥಿತಿ ಗಂಭೀರವಾಗಿದೆ. ವಿಮಾನ ಪತನದ ಚಿತ್ರ, ವಿಡಿಯೋ ವೀಕ್ಷಿಸಿದಾಗ ಅಪಘಾತ ಭೀಕರವಾಗಿತ್ತು ಎಂಬುದು ತಿಳಿಯುತ್ತದೆ. ವಿಮಾನದಲ್ಲಿದ್ದ ಮೂವರು ಸಿಬ್ಬಂದಿ ಬಗ್ಗೆ ಮಾಹಿತಿ ಸಿಕ್ಕಿಲ್ಲ ಎಂದು ಕೆಂಟಕ್ಕಿ ಗವರ್ನರ್ ಆಂಡಿ ಬೆಶಿಯರ್ ತಿಳಿಸಿದ್ದಾರೆ.
ಅಪಘಾತದಲ್ಲಿ ಮೃತಪಟ್ಟವರ ಸ್ನೇಹಿತರಿಗೆ, ಕುಟುಂಬಕ್ಕೆ ಸಂದೇಶ ರವಾನಿಸಲಾಗುತ್ತಿದೆ. ಗಾಯಗೊಂಡವರ ಬಗ್ಗೆ ನಿಗಾ ವಹಿಸಲಾಗಿದೆ. ಅವರು ಸುರಕ್ಷಿತವಾಗಿದ್ದಾರೆ ಎಂದು ಖಚಿತಪಡಿಸಿಕೊಳ್ಳಲು ಪ್ರಯತ್ನ ನಡೆಸಲಾಗುತ್ತಿದೆ. ದುರ್ಘಟನೆಯಲ್ಲಿ ಪ್ರಾಣ ಕಳೆದುಕೊಂಡವರ ಕುಟುಂಬಗಳಿಗೆ ಮತ್ತು ಸ್ನೇಹಿತರಿಗೆ ಹೋಗುತ್ತದೆ ನನ್ನ ತೀವ್ರ ಸಂತಾಪಗಳು ಎಂದು ಅವರು ಹೇಳಿದ್ದಾರೆ.
ಇನ್ನಷ್ಟು ಓದಿರಿ :
ಹೈಡ್ರೋಜನ್ ಬಾಂಬ್: ಹರಿಯಾಣದಲ್ಲಿ ಬಿಜೆಪಿಯೊಂದಿಗೆ ಆಯೋಗ ಕೈಜೋಡಿಸಿ 25 ಲಕ್ಷ ಮತಗಳನ್ನು ಕದ್ದಿದೆ