belagavi news :
ವಾಣಿಜ್ಯ ಬಳಕೆಯ ಅನಿಲ ಸಿಲೆಂಡರ್ ದರದಲ್ಲಿ ಏಕಾಏಕಿ ಬಾರಿ ಏರಿಕೆ ಕಂಡು ಬಂದಿದ್ದು, ಇದರ ಪರಿಣಾಮವಾಗಿ ಹೋಟೆಲ್ಗಳಲ್ಲಿ ಊಟ ಮತ್ತು ಉಪಹಾರಗಳ ಬೆಲೆ ಹೆಚ್ಚಾಗಿದೆ. ಕೆಲವು ಸಣ್ಣ ಹೋಟೆಲ್ ಗಳು ಹಾಗೂ ದರ್ಶಿನಿಗಳು ಶನಿವಾರದಿಂದಲೇ ಹೊಸ ದರಗಳನ್ನು ಜಾರಿಗೆ ತಂದಿವೆ. ಈ ಹಿಂದೆ ರೂ.2,140ಕ್ಕೆ ಲಭ್ಯವಿದ್ದ 19ಕೆಜಿ ವಾಣಿಜ್ಯ ಅನಿಲ ಸಿಲೆಂಡರ್ ದರ ಈಗ ಒಮ್ಮೆಲೇ ರೂ.993 ಹೆಚ್ಚಳವಾಗಿದ್ದು, ವ್ಯಾಪಾರಿಗಳಿಗೆ ದೊಡ್ಡ ಹೊರೆ ತಂದಿದೆ.
ಇದರಿಂದ ಇಡ್ಲಿ, ವಡೆ, ಉಪ್ಮಾ, ಪುಲಾವ್, ದೋಸೆ ಸೇರಿದಂತೆ ವಿವಿಧ ಆಹಾರ ಪದಾರ್ಥಗಳ ಬೆಲೆ ಏರಿಕೆಯಾಗಿದೆ. ಇದಲ್ಲದೆ, ಟೀ ಮತ್ತು ಕಾಫಿ ಬೆಲೆಯು ರೂ.5 ರವರೆಗೆ ಹೆಚ್ಚಳಗೊಂಡಿದ್ದು, ಗ್ರಾಹಕರಿಗೆ ಹೆಚ್ಚುವರಿ ಭಾರವಾಗುತ್ತಿದೆ. ಈ ತರ ಏರಿಕೆ ಜನರನ್ನು ಕಂಗಡಿಸಿದೆ.
ಗ್ರಾಹಕ ಶೇಖರಯ್ಯ ಮಠಪತಿ ಮಾತನಾಡಿ, ಏಕಾಏಕಿ ಸಿಲಿಂಡರ್ ದರ ಏರಿಕೆ ಮಾಡಿರುವುದರಿಂದ ಹೋಟೆಲ್ ಹಾಗೂ ಖಾನಾವಳಿ ಮಾಲೀಕರು ಆಹಾರ ಪದಾರ್ಥಗಳ ದರವನ್ನು ಹೆಚ್ಚಿಸಿದ್ದಾರೆ. ಇದರಿಂದ ನಮ್ಮಂತಹ ಆಟೋ ಚಾಲಕರು ಮತ್ತು ದಿನಗೂಲಿ ಕೆಲಸ ಮಾಡುವ ಜನ ಸಾಮಾನ್ಯರಿಗೆ ತುಂಬಾ ತೊಂದರೆಯಾಗಿದೆ. ಪ್ರತಿಯೊಂದು ಹೋಟೆಲ್ ಹಾಗೂ ಖಾನಾವಳಿಗಳಲ್ಲಿ ಬೇರೆ ಬೇರೆ ದರಗಳಿದ್ದು ಜನರಿಗೆ ಗೊಂದಲ ಉಂಟಾಗಿದೆ.
ಈ ಪರಿಸ್ಥಿತಿಯಿಂದ ಸಾಮಾನ್ಯ ಜನರು ಉಪಹಾರ ಮತ್ತು ಊಟ ಮಾಡಲು ಹಿಂಜರಿವಂತಾಗಿದೆ. ಆದ್ದರಿಂದ ಕೇಂದ್ರ ಸರ್ಕಾರವು ಗ್ರಾಹಕರ ಮೇಲೆ ಹೆಚ್ಚುವರಿ ಬಾರದಂತೆ ಸಿಲಿಂಡರ್ ಬೆಲೆ ಇಳಿಸಲು ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.ಹಿಂದೆ ರೂ 20ಕ್ಕೆ ದೊರೆಯುತ್ತಿದ್ದ ಒಂದು ಪ್ಲೇಟ್ ಇಡ್ಲಿ ಈಗ ರೂ.25ಕ್ಕೆ ಏರಿಕೆಯಾಗಿದೆ. ರೂ.40ಕ್ಕೆ ಸಿಗುತ್ತಿದ್ದ ಪುಲಾವ್ ಈಗ ರೂ 50 ಆಗಿದ್ದು, ರೂ.35 ಇದ್ದ ಮಿಸ್ ರೈಸ್ ಪ್ಲೇಟ್ ರೂ. 45ಕ್ಕೆ ಹೆಚ್ಚಾಗಿದೆ. ಅದೇ ರೀತಿ ರೂ. 120ಕ್ಕೆ ಏರಿಕೆಯಾಗಿದೆ. ಎಲ್ಲಾ ಬಗೆಯ ದೋಸೆಗಳ ದರದಲ್ಲೂ ರೂ.10ರಷ್ಟು ಹೆಚ್ಚಳ ಕಂಡುಬಂದಿದೆ.ಸಿಲೆಂಡರ್ ದರ ಏರಿಕೆ ಹಿನ್ನೆಲೆಯಲ್ಲಿ ಅನಿವಾರ್ಯವಾಗಿ ಆಹಾರ ಪದಾರ್ಥಗಳ ದರವನ್ನು ಹೆಚ್ಚಿಸಲಾಗಿದೆ ಎಂದು ಖಾನಾವಳಿ ಮಾಲೀಕರು ತಿಳಿಸಿದ್ದಾರೆ.
ಖಾನಾವಳಿ ಮಾಲೀಕ ಅಪ್ಪಣ್ಣ ಮಾತನಾಡಿ, ಹಿಂದೆ ನೂರು ಎರಡು ನೂರು ರೂಪಾಯಿ ಏರಿಕೆಯಾಗುತ್ತಿದ್ದ ವಾಣಿಜ್ಯ ಸಿಲಿಂಡರ್ ದರ ಈ ಬಾರಿ ಏಕಾಏಕಿ ಸುಮಾರು ಸಾವಿರ ರೂಪಾಯಿ ಹೆಚ್ಚಾಗಿದೆ. ಇದರಿಂದ ಹೋಟೆಲ್ ಉದ್ಯಮಕ್ಕೆ ಭಾರಿ ಹೊಡೆತ ಬಿದ್ದಿದೆ. ಅನಿವಾರ್ಯ ಪರಿಸ್ಥಿತಿಯಿಂದ ಊಟದ ದರವನ್ನು ಹೆಚ್ಚಿಸಬೇಕಾಗಿತು. ಇದರ ಪರಿಣಾಮ ಗ್ರಾಹಕರಿಗೂ ತೊಂದರೆಯಾಗುತ್ತಿದೆ. ಕೇಂದ್ರ ಸರ್ಕಾರವು ವಾಣಿಜ್ಯ ಬಳಕೆ ಸಿಲಿಂಡರ್ ದರವನ್ನು ಕಡಿಮೆ ಮಾಡಿಕೊಡಬೇಕು. ಈ ಹಿಂದೆ ಒಂದು ಊಟಕ್ಕೆ ರೂ.100 ಇತ್ತು, ಆದರೆ ಈಗ ರೂ. 120 ಪಡೆಯಲಾಗುತ್ತಿದೆ. ಇನ್ನು ನಾಲ್ಕೈದು ದಿನಗಳ ನಂತರ ಗ್ರಾಹಕರ ಸಂಖ್ಯೆ ಕಡಿಮೆಯಾಗುವ ಸಾಧ್ಯತೆ ಇರುವುದರಿಂದ ಆತಂಕ ಉಂಟಾಗಿದೆ"ಎಂದು ತಿಳಿಸಿದ್ದಾರೆ.
Also Read:
ಮತ ಎಣಿಕೆ ಕೇಂದ್ರದಲ್ಲಿ ಮಮತಾ - ಸುವೆಂದು ಮುಖಾಮುಖಿ : ಎಡಪಕ್ಷಗಳು 1ಕ್ಕೆ ಕುಸಿತ, ಕಾಂಗ್ರೆಸ್ ಗೆ 2 ಸ್ಥಾನ