ರೈಲ್ವೇ ಪ್ರಯಾಣದಲ್ಲಿ ಪತ್ರಕರ್ತರಿಗೆ ರಿಯಾಯಿತಿ ಸೌಲಭ್ಯ ಮರು ಜಾರಿಗೆ ಪರಿಷತ್ ಆಗ್ರಹ
ಪತ್ರಕರ್ತರಿಗೆ ಭಾರತೀಯ ರೈಲ್ವೇಯಲ್ಲಿ ನೀಡುತ್ತಿದ್ದ ಶೇ. 50ರಷ್ಟು ಪ್ರಯಾಣ ರಿಯಾಯಿತಿಯನ್ನು ಮರು ಜಾರಿಗೊಳಿಸುವಂತೆ ರೈಲ್ವೇ ಸಚಿವರಿಗೆ ವಿಧಾನ ಪರಿಷತ್ ಸದಸ್ಯ ಶಿವಕುಮಾರ್ ಕೆ. ಆಗ್ರಹಿಸಿದ್ದಾರೆ. ಕೋವಿಡ್-19 ಕಾರಣದಿಂದ ಹಿಂಪಡೆದ ಈ ಸೌಲಭ್ಯವು ಪತ್ರಕರ್ತರು ತಮ್ಮ ವೃತ್ತಿಪರ ಕರ್ತವ್ಯ ನಿರ್ವಹಿಸಲು, ಸಾರ್ವಜನಿಕ ಸೇವೆ ಮತ್ತು ಗ್ರೌಂಡ್ ರಿಪೋರ್ಟಿಂಗ್ಗೆ ಅತ್ಯಗತ್ಯವಾಗಿದೆ. ಹೆಚ್ಚುತ್ತಿರುವ ಸಾರಿಗೆ ವೆಚ್ಚದ ಹಿನ್ನೆಲೆಯಲ್ಲಿ ಇದು ಪತ್ರಿಕೋದ್ಯಮಕ್ಕೆ ಬಹುಮುಖ್ಯ ಎಂದು ಅವರು ಮನವರಿಕೆ ಮಾಡಿದ್ದಾರೆ.
ಬೆಂಗಳೂರು:
ಸರ್ಕಾರ ಮಾನ್ಯತೆ ನೀಡಿರುವ ಪತ್ರಕರ್ತರಿಗೆ ಭಾರತೀಯ ರೈಲ್ವೇಯಲ್ಲಿ ನೀಡುತ್ತಿದ್ದ ಶೆ. 50ರಷ್ಟು ಪ್ರಯಾಣ ರಿಯಾಯಿತಿ ಮರು ಜಾರಿಗೆ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಅವರನ್ನು ವಿಧಾನ ಪರಿಷತ್ ಸದಸ್ಯ ಶಿವಕುಮಾರ್ ಕೆ. ಆಗ್ರಹಿಸಿದ್ದಾರೆ. ಪತ್ರಕರ್ತರಿಗೆ ನೀಡುತ್ತಿದ್ದ ಈ ಸೌಲಭ್ಯವನ್ನು ಕೋವಿಡ್-19 ಮಹಾಮಾರಿಯ ಸಮಯದಲ್ಲಿ ರೈಲ್ವೇ ಇಲಾಖೆ ಹಿಂಪಡೆದಿತ್ತು.
ಕೋವಿಡ್-19 ನಂತರ ಸಾರಿಗೆ ವೆಚ್ಚಗಳು ಗಂಭೀರವಾಗಿ ಹೆಚ್ಚಿವೆ ಎಂಬುದು ನಿಮಗೆ ತಿಳಿದಿದೆ. ಅನೇಕ ಮಾಧ್ಯಮ ಸಂಸ್ಥೆಗಳು ಸೀಮಿತ ಬಜೆಟ್ನಡಿ ಕಾರ್ಯನಿರ್ವಹಿಸುತ್ತಿವೆ ಮತ್ತು ಪತ್ರಕರ್ತರ ಪ್ರಯಾಣ ವೆಚ್ಚಗಳನ್ನು ಸಮರ್ಪಕವಾಗಿ ಭರಿಸುವ ಸ್ಥಿತಿಯಲ್ಲಿ ಇಲ್ಲ. ರೈಲು ಪ್ರಯಾಣದಲ್ಲಿ ನೀಡುತ್ತಿದ್ದ ರಿಯಾಯಿತಿ ಹಿಂಪಡೆದಿರುವುದರಿಂದ ಗ್ರೌಂಡ್ ರಿಪೋರ್ಟಿಂಗ್ ಕಡಿಮೆಯಾಗಿದೆ. ಆದುದರಿಂದ, ಸರ್ಕಾರ ಮಾನ್ಯತೆ ಪಡೆದ ಎಲ್ಲಾ ಪತ್ರಕರ್ತರಿಗೆ ಶೇ. 50ರಷ್ಟು ರೈಲು ಪ್ರಯಾಣ ರಿಯಾಯಿತಿಯನ್ನು ಶೀಘ್ರದಲ್ಲೇ ಮರುಸ್ಥಾಪಿಸುವಂತೆ ಅಥವಾ ಅದೇ ಉದ್ದೇಶವನ್ನು ಹೊಂದಿರುವ ಹೊಸ ವ್ಯವಸ್ಥೆಯನ್ನು ರೂಪಿಸುವಂತೆ ರೈಲ್ವೇ ಸಚಿವಾಲಯವನ್ನು ಶಿವಕುಮಾರ್ ಕೆ. ಆಗ್ರಹಿಸಿದ್ದಾರೆ.
ಪತ್ರಿಕೋದ್ಯಮವು ಕೇವಲ ಒಂದು ಉದ್ಯೋಗವಲ್ಲ, ಅದು ಆರೋಗ್ಯಕರ ಪ್ರಜಾಪ್ರಭುತ್ವದ ಕಾರ್ಯನಿರ್ವಹಣೆಗೆ ಅಗತ್ಯವಾದ ಒಂದು ಸಾರ್ವಜನಿಕ ಸೇವೆಯಾಗಿದೆ. ಈ ರಿಯಾಯಿತಿ ಪತ್ರಕರ್ತರು ತಮ್ಮ ವೃತ್ತಿಪರ ಕರ್ತವ್ಯಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಸಹಕಾರಿಯಾಗಲಿದೆ. ನೈಸರ್ಗಿಕ ವಿಕೋಪ, ಚುನಾವಣೆ, ಸರ್ಕಾರದ ಯೋಜನೆಗಳು ಮತ್ತು ಇತರ ಸಾರ್ವಜನಿಕ ಮಹತ್ವದ ವಿಷಯಗಳ ಬಗ್ಗೆ ವರದಿ ಮಾಡಲು ಪತ್ರಕರ್ತರು ದೂರದ ಊರಿಗೆ ಪ್ರಯಾಣಿಸಲು ರೈಲುಗಳನ್ನೇ ಅವಲಂಬಿಸಿದ್ದಾರೆ. ಅದೇ ರೀತಿ, ರೈಲ್ವೇಗಳು ನೀಡುತ್ತಿದ್ದ ಈ ರಿಯಾಯಿತಿ ಎಂದಿಗೂ ಐಶ್ವರ್ಯ ವಸ್ತುವಾಗಿರಲಿಲ್ಲ. ಬದಲಾಗಿ ಪತ್ರಕರ್ತರು ನಿರ್ವಹಿಸುವ ಅತ್ಯಾವಶ್ಯಕ ಸಾರ್ವಜನಿಕ ಸೇವೆಗೆ ನೀಡುತ್ತಿದ್ದ ಮಾನ್ಯತೆ ಆಗಿತ್ತು. ಗ್ರೌಂಡ್ ರಿಪೋರ್ಟಿಂಗ್ ವಿಶ್ವಾಸಾರ್ಹ ಪತ್ರಿಕೋದ್ಯಮದ ಹೃದಯವಾಗಿದೆ. ಆದ್ದರಿಂದ, ಪತ್ರಕರ್ತರಿಗೆ ನೀಡಲಾಗುತ್ತಿದ್ದ ರಿಯಾಯಿತಿ ಪ್ರಯಾಣ ಸೌಲಭ್ಯದ ಮರುಸ್ಥಾಪನೆ ಅಗತ್ಯವಿದೆ ಎಂದು ಅವರು ಮನವರಿಕೆ ಮಾಡಿದ್ದಾರೆ.
ಇನ್ನಷ್ಟು ಓದಿರಿ:
ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಕಾಲ್ತುಳಿತ ಕೇಸ್ನ ಚಾರ್ಜ್ಶೀಟ್ ರೆಡಿ ಘಟನೆಗೆ RCB