belagavi news :
ಬೆಳ್ತಂಗಡಿ: ರಾಜ್ಯ ವಿಧಾನ ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ ಆರೋಪ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿರುವ ಬೆನ್ನಲ್ಲೇ, ಹಾಸನ ಜಿಲ್ಲೆಯ ಬೇಲೂರು ಶಾಸಕ ಹುಲ್ಲಹಳ್ಳಿ ಕೆ ಸುರೇಶ್ ಧರ್ಮಸ್ಥಳಕ್ಕೆ ಭೇಟಿ ನೀಡಿ, ತಾವು ಯಾವುದೇ ತಪ್ಪು ಮಾಡಿಲ್ಲ ಎಂದು ಆಣೆ - ಪ್ರಮಾಣ ಮಾಡಿದ್ದಾರೆ.
ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಪಡೆದ ಬಳಿಕ ಮಾತನಾಡಿದ ಅವರು, ತಮ್ಮ ವಿರುದ್ಧ ಅಪಪ್ರಚಾರ ನಡೆಸಿದವರಿಗೂ ಒಳ್ಳೆಯದಾಗಲಿ ಎಂದು ಪ್ರಾರ್ಥನೆ ಸಲ್ಲಿಸಿದ್ದಾಗಿ ತಿಳಿಸಿದ್ದಾರೆ. ತಮ್ಮ ಮೇಲಿನ ಆರೋಪಗಳ ಹಿನ್ನೆಲೆಯಲ್ಲಿ ಭಗವಂತನ ಸನ್ನಿಧಿಯಲ್ಲಿ ನಂಬಿಕೆ ವ್ಯಕ್ತಪಡಿಸಿ, ಕಾಣಿಕಿಯನ್ನು ಹುಂಡಿಗೆ ಸಮರ್ಪಿಸಿದರು.
ವಿಧಾನ ಪರಿಷತ್ ಚುನಾವಣೆಯ ಅಡ್ಡ ಮತದಾನ ವಿವಾದದ ನಡುವೆ ಶಾಸಕ ಸುರೇಶ್ ಅವರ ಈ ನಡೆಯು ರಾಜಕೀಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ.
ನಾನು ಪಕ್ಷಕ್ಕೆ ದ್ರೋಹ ಮಾಡಿಲ್ಲ; ಮಂಜುನಾಥ ಸ್ವಾಮಿ ಸನ್ನಿಧಿಯಲ್ಲಿ ಪ್ರಮಾಣ: ಶಾಸಕ
ಪಕ್ಷಕ್ಕೆ ದ್ರೋಹ ಮಾಡಿಲ್ಲ ಹಾಗೂ ವಿಧಾನಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿಲ್ಲ ಎಂದು ಶಾಸಕ ಸ್ಪಷ್ಟನೆ ನೀಡಿದ್ದಾರೆ.
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, "ನಾನು ಬಿಜೆಪಿಯ ನಿಷ್ಠಾವಂತ ಹಾಗೂ ಪ್ರಾಮಾಣಿಕ ಕಾರ್ಯಕರ್ತ. ಪಕ್ಷದ ವರಿಷ್ಠರು ಸೂಚಿಸಿದ ಅಭ್ಯರ್ಥಿಗೆ ಮತದಾನ ಮಾಡಿದ್ದೇನೆ. ನಾನು ಯಾವುದೇ ರೀತಿಯ ಪಕ್ಷದ್ರೋಹ ಮಾಡಿಲ್ಲ. ಈ ಮಾತಿಗೆ ಮಂಜುನಾಥ ಸ್ವಾಮಿ ಸನ್ನಿಧಿಯಲ್ಲಿ ಪ್ರಮಾಣ ಮಾಡುತ್ತೇನೆ" ಎಂದು ಹೇಳಿದರು.
"ನನ್ನ ವಿರುದ್ಧ ಕೇಳಿ ಬರುತ್ತಿರುವ ಆರೋಪಗಳು ಆಧಾರರಹಿತ. ನನ್ನ ಮೇಲೆ ಬಂದಿರುವ ಆರೋಪಗಳಿಗೆ ಮಂಜುನಾಥ ಸ್ವಾಮಿ ಹಾಗೂ ನನ್ನ ಕ್ಷೇತ್ರದ ಜನರೇ ಸಾಕ್ಷಿ. ಬಿಜೆಪಿ ಪಕ್ಷ ನನಗೆ ತಾಯಿಯಂತಿದ್ದು, ನನ್ನ ಬೆಳವಣಿಗೆಯನ್ನು ಸಹಿಸದ ಕೆಲವರು ಉದ್ದೇಶಪೂರ್ವಕವಾಗಿ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ "ಎಂದು ಅವರು ಆರೋಪಿಸಿದರು.
ಇದಕ್ಕೂ ಮುನ್ನ ದೇವಸ್ಥಾನಕ್ಕೆ ಭೇಟಿ ನೀಡುವ ಮೊದಲು ಅಣ್ಣಪ್ಪ ಬೆಟ್ಟದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಶಾಸಕ, "ನಾನು ಯಾರಿಗೂ ಮೋಸ ಮಾಡಿಲ್ಲ. ನನ್ನ ವಿರುದ್ಧ ಅಪಪ್ರಚಾರ ನಡೆಸುತ್ತಿರುವವರಿಗೆ ದೇವರು ಒಳ್ಳೆಯ ಬುದ್ದಿ ನೀಡಲಿ" ಎಂದು ಪ್ರಾರ್ಥಿಸಿ ತೆಂಗಿನಕಾಯಿ ಒಡೆದರು. ಬಳಿಕ ಮಂಜುನಾಥ ಸ್ವಾಮಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.
ಬೆಂಬಲಿಗರೊಂದಿಗೆ ಧರ್ಮಸ್ಥಳಕ್ಕೆ ಭೇಟಿ ನೀಡಿ; ವಿಜಯೇಂದ್ರ ಹೇಳಿಕೆ ಮತ್ತೆ ಚರ್ಚೆಗೆ
ಶಾಸಕರೊಂದಿಗೆ 250ಕ್ಕೂ ಹೆಚ್ಚು ಬೆಂಬಲಿಗರು ಹಾಗೂ 100ಕ್ಕೂ ಅಧಿಕ ಕಾರುಗಳಲ್ಲಿ ಕೇಸರಿ ಶಾಲು ಧರಿಸಿ, ಬಿಜೆಪಿ ಬಾವುಟಗಳನ್ನು ಹಿಡಿದು ಧರ್ಮಸ್ಥಳಕ್ಕೆ ಆಗಮಿಸಿದರು. ಪವಿತ್ರ ನೇತ್ರಾವತಿ ನದಿಯಲ್ಲಿ ತೀರ್ಥ ಪ್ರೊಕ್ಷಣೆ ಮಾಡಿ ನಮಸ್ಕರಿಸಿದ ಬಳಿಕ ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.
ವಿಧಾನ ಪರಿಷತ್ ಚುನಾವಣೆಯ ಬಳಿಕ ಬಿಜೆಪಿಯ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅಡ್ಡ ಮತದಾನದ ವಿಚಾರವಾಗಿ ನೀಡಿದ ಹೇಳಿಕೆ ಈ ಬೆಳವಣಿಗೆಯೊಂದಿಗೆ ಮತ್ತೆ ಚರ್ಚೆಗೆ ಬಂದಿದೆ. ಚುನಾವಣೆಯ ಫಲಿತಾಂಶದ ನಂತರ ಮಾತನಾಡಿದ್ದ ಅವರು, "ಅಡ್ಡ ಮತದಾನ ಮಾಡಿದವರು ಯಾರು ಎಂಬುದು ಶ್ರೀ ಕ್ಷೇತ್ರದಲ್ಲೇ ಗೊತ್ತಾಗಲಿ. ನನ್ನನ್ನು ಸೇರಿಸಿ ಎಲ್ಲರ ಮೇಲು ಅನುಮಾನ ಮೂಡಿಸುವಂತಾಗಿದೆ. ಈ ವಿಚಾರವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುತ್ತೇವೆ" ಎಂದು ಹೇಳಿದರು.
ವಿಜಯೇಂದ್ರ ಅವರ ಈ ಹೇಳಿಕೆ ರಾಜಕೀಯ ವಲಯದಲ್ಲಿ ಪರ ವಿರೋಧದ ಚರ್ಚೆಗೆ ಕಾರಣವಾಗಿತ್ತು. ಬಳಿಕ ಪಕ್ಷದ ಹೈಕಮಾಂಡ್ ಅಣೆ - ಪ್ರಮಾಣದಂತಹ ಕ್ರಮಗಳನ್ನು ಕೈಗೊಳ್ಳಬಾರದು ಎಂದು ಸೂಚನೆ ನೀಡಿದ ಹಿನ್ನೆಲೆಯಲ್ಲಿ, ವಿಜಯೇಂದ್ರ ಅವರು ಈ ವಿಚಾರವನ್ನು ಮುಂದುವರೆಯುತ್ತದೆ ಕೈ ಬಿಟ್ಟಿದ್ದರು. ಇದೀಗ ಶಾಸಕ ಧರ್ಮಸ್ಥಳಕ್ಕೆ ಭೇಟಿ ನೀಡಿ ಮಂಜುನಾಥ ಸ್ವಾಮಿ ಸನ್ನಿಧಿಯಲ್ಲಿ ಪ್ರಮಾಣ ಮಾಡುವ ಮೂಲಕ ಈ ಬೆಳವಣಿಗೆ ಮತ್ತೊಮ್ಮೆ ರಾಜಕೀಯ ಗಮನ ಸೆಳೆದಿದೆ.