BELAGAVI NEWS :
ಬೆಂಗಳೂರು ಜೂನ್ 4: ರಾಜ್ಯದ ಎಲ್ಲಾ ಇಲಾಖೆಗಳಲ್ಲಿ ಬಾಕಿ ಉಳಿದಿರುವ ಕೆಲಸಗಳನ್ನು 25 ದಿನಗಳೊಳಗೆ ಪೂರ್ಣಗೊಳಿಸುವಂತೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ಪ್ರತಿ ಜಿಲ್ಲೆಯ ಪ್ರಮುಖ ಸಮಸ್ಯೆಗಳು ಹಾಗೂ ಬಾಕಿ ಉಳಿದಿರುವ ಕಾಮಗಾರಿಗಳ ಕುರಿತು ಸಮಗ್ರ ಮಾಹಿತಿಯನ್ನು ಸಂಗ್ರಹಿಸಿ ವರದಿ ಸಲ್ಲಿಸುವಂತೆ ನಿರ್ದೇಶನ ನೀಡಿದರು.
"ಜಿಲ್ಲೆಗಳ ಪ್ರತಿಯೊಂದು ಸಮಸ್ಯೆಗಳನ್ನು ಪಟ್ಟಿ ಮಾಡಿ ಸಲ್ಲಿಸಿ. ಜಿಲ್ಲಾ ಉಸ್ತುವಾರಿ ಸಚಿವರು ಆ ಸಮಸ್ಯೆಗಳ ಬಗ್ಗೆ ವಿಶೇಷ ಗಮನಹರಿಸುವಂತೆ ಸೂಚಿಸಲಾಗುವುದು. ಜನರ ಸಮಸ್ಯೆಗಳಿಗೆ ತ್ವರಿತ ಪರಿಹಾರ ಒದಗಿಸುವುದು ನಮ್ಮ ಆದ್ಯತೆ" ಎಂದು ಅವರು ಹೇಳಿದರು.
ಆಡಳಿತದಲ್ಲಿ ವೇಗ ಮತ್ತು ಕಾರ್ಯಕ್ಷಮತೆ ಹೆಚ್ಚಿಸುವ ಉದ್ದೇಶದಿಂದ ಬಾಕಿ ಉಳಿದಿರುವ ಕೆಲಸಗಳನ್ನು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಡಿ.ಕೆ. ಶಿವಕುಮಾರ್ ಸ್ಪಷ್ಟಗಳು ಗಡುವು ನೀಡಿದ್ದಾರೆ.
ರಾಜ್ಯದ ಎಲ್ಲಾ ಜಿಲ್ಲಾ ಕಾರ್ಯದರ್ಶಿಗಳು ತಮ್ಮ ಇಲಾಖೆಗೆ ಸಂಬಂಧಿಸಿದಂತೆ ಬಾಕಿ ಉಳಿದಿರುವ ಕೆಲಸಗಳ ಸಮಗ್ರ ಪಟ್ಟಿಯನ್ನು ಸಿದ್ಧಪಡಿಸಿ ಸಲ್ಲಿಸುವಂತೆ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೂಚನೆ ನೀಡಿದ್ದಾರೆ.
ಬಾಕಿ ಉಳಿದಿರುವ ಕಾಮಗಾರಿಗಳ ವಿವರಗಳ ಜೊತೆಗೆ, ಮುಂದಿನ 25 ದಿನಗಳೊಳಗೆ ಆಯಾ ಜಿಲ್ಲೆಗಳ ಅಭಿವೃದ್ಧಿಗೆ ಹೊಸದಾಗಿ ಕೈಗೊಳ್ಳಬಹುದಾದ ಯೋಜನೆಗಳು ಹಾಗೂ ಆರ್ಥಿಕ ಮಿತಿಯೊಳಗೆ ಪರಿಹರಿಸಬಹುದಾದ ಸಮಸ್ಯೆಗಳ ಕುರಿತಾದ ವರದಿಯನ್ನು ಸಲ್ಲಿಸುವಂತೆ ಅವರು ನಿರ್ದೇಶಿಸಿದ್ದಾರೆ.
ಪ್ರತಿ ಜಿಲ್ಲೆಯ ಅಗತ್ಯತೆ ಮತ್ತು ಅಭಿವೃದ್ಧಿ ಆದ್ಯತೆಗಳನ್ನು ಗಮನದಲ್ಲಿಟ್ಟುಕೊಂಡು ಕಾರ್ಯ ಯೋಜನೆ ರೂಪಿಸಲು ಈ ಮಾಹಿತಿ ಸಹಕಾರಿಯಾಗಲಿದೆ ಎಂದು ಸಿಎಂ ತಿಳಿಸಿದ್ದಾರೆ, ಜನಸಾಮಾನ್ಯರ ಸಮಸ್ಯೆಗಳಿಗೆ ಶೀಘ್ರ ಪರಿಹಾರ ಕಂಡುಹಿಡಿಯುವ ಜೊತೆಗೆ ಅಭಿವೃದ್ಧಿ ಕಾರ್ಯಗಳಿಗೆ ಹೊಸ ದಿಕ್ಕು ನೀಡುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ.
ಜಿಲ್ಲಾವಾರ ಸಮಸ್ಯೆಗಳು, ಬಾಕಿ ಕಾಮಗಾರಿಗಳು ಮತ್ತು ಹೊಸ ಅಭಿವೃದ್ಧಿ ಪ್ರಸ್ತಾವನೆಗಳ ಬಗ್ಗೆ ಸಮಗ್ರ ವರದಿ ಸಲ್ಲಿಸಲು ಅಧಿಕಾರಿಗಳಿಗೆ 25 ದಿನಗಳ ಗಡುವು ನೀಡಲಾಗಿದೆ.
"ನನಗೆ ಇತಿಹಾಸ ಬರೆಯಲು ಅಥವಾ ಓದಲು ಇಷ್ಟವಿಲ್ಲ. ಇತಿಹಾಸ ನಿರ್ಮಾಣ ಮಾಡಬೇಕು. ಜನರಿಗೆ ಉಪಯೋಗವಾಗುವ ಕೆಲಸಗಳ ಮೂಲಕ ಸಾಕ್ಷಿಯಾಗಿ ಉಳಿಯುವ ಸಾಧನೆಗಳನ್ನು ಮಾಡಿ ಹೋಗಬೇಕು" ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅಧಿಕಾರಿಗಳಿಗೆ ಕರೆ ನೀಡಿದ್ದಾರೆ.
ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಮಾತನಾಡಿದವರು ಕೇವಲ ಕಡತಗಳ ನಿರ್ವಹಣೆಗೆ ಸೀಮಿತವಾಗದೆ ಜನರ ಬದುಕಿನಲ್ಲಿ ಬದಲಾವಣೆ ತರಬಲ್ಲ ಯೋಜನೆಗಳು ಮತ್ತು ಕಾರ್ಯಗಳನ್ನು ಕೈಗೊಳ್ಳಬೇಕು ಎಂದು ಸೂಚಿಸಿದರು.
ಸಕಾರಾತ್ಮಕ ಮನೋಭಾವ ದೊಂದಿಗೆ ಕೆಲಸ ಮಾಡಬೇಕು ಹಾಗು ವ್ಯವಸ್ಥೆಯೊಳಗೆ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಪ್ರಯತ್ನ ನಡೆಸ ಬೇಕು ಎಂದು ಅವರು ಸಲಹೆ ನೀಡಿದರು. ಆಡಳಿತದ ಪ್ರತಿಯೊಂದು ಹಂತದಲ್ಲೂ ಫಲಿತಾಂಶ ನೀಡಲು ಕಾರ್ಯ ಪದ್ಧತಿ ಅಳವಡಿಸಿಕೊಳ್ಳುವ ಮೂಲಕ ಅಭಿವೃದ್ಧಿಗೆ ಹೊಸ ವೇಗ ನೀಡಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.
ಜನಪರ ಆಡಳಿತ ತ್ವರಿತ ಸಮಸ್ಯೆ ಪರಿಹಾರ ಮತ್ತು ಶಾಶ್ವತ ಅಭಿವೃದ್ಧಿಯೇ ಸರ್ಕಾರದ ಪ್ರಮುಖ ಗುರಿಯಾಗಿದೆ ಅಧಿಕಾರಿಗಳು ಅದಕ್ಕೆ ಅನುಗುಣವಾಗಿ ಕಾರ್ಯನಿರ್ವಹಿಸಬೇಕು ಎಂದು ಡಿ.ಕೆ ಶಿವಕುಮಾರ್ ಹೇಳಿದರು.
Also Read:
ಚಾರ್ ಧಾಮ್ ಯಾತ್ರೆಗೆ ಲಕ್ಷಾಂತರ ಭಕ್ತರು: ಬದರಿನಾಥ, ಕೇದಾರನಾಥದಲ್ಲಿ ದೀರ್ಘ ಸರತಿ