28 ಕೃಷ್ಣಮೃಗಗಳ ಸಾವಿನ ಕೇಸ್: ಗೊಂದಲ ಮೂಡಿಸಿರುವ ಅರಣ್ಯ ಅಧಿಕಾರಿಗಳ ಹೇಳಿಕೆ
ಬೆಳಗಾವಿಯ ಕಿತ್ತೂರು ಚನ್ನಮ್ಮ ಮೃಗಾಲಯದಲ್ಲಿ 28 ಕೃಷ್ಣಮೃಗಗಳ ಸಾವಿನ ಪ್ರಕರಣ ಗಂಭೀರ ಸ್ವರೂಪ ಪಡೆದಿದೆ. ಅರಣ್ಯ ಅಧಿಕಾರಿಗಳು ಸಚಿವರಿಗೆ ಆಹಾರದಿಂದ ಉಂಟಾದ ಸಮಸ್ಯೆ ಎಂದು ಮಾಹಿತಿ ನೀಡಿದ್ದರೆ, ಮಾಧ್ಯಮಗಳಿಗೆ ಬ್ಯಾಕ್ಟೀರಿಯಾ ಸೋಂಕು ಎಂದಿದ್ದಾರೆ. ಎಫ್ಎಸ್ಎಲ್ ವರದಿಗೂ ಮುನ್ನ ನೀಡಿದ ಈ ಗೊಂದಲದ ಹೇಳಿಕೆಗಳು ಅನುಮಾನಕ್ಕೆ ಎಡೆಮಾಡಿಕೊಟ್ಟಿವೆ.
ಬೆಳಗಾವಿ:
ಕಿತ್ತೂರು ಚನ್ನಮ್ಮ ಕಿರು ಮೃಗಾಲಯದಲ್ಲಿ 28 ಕೃಷ್ಣಮೃಗಗಳು ಮೃತಪಟ್ಟ ಪ್ರಕರಣ ವಿಚಾರವಾಗಿ ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರ ದಿಕ್ಕನ್ನು ಅರಣ್ಯ ಇಲಾಖೆ ಅಧಿಕಾರಿಗಳು ತಪ್ಪಿಸಿದ್ರಾ ಎನ್ನುವ ಅನುಮಾನ ವ್ಯಕ್ತವಾಗಿದೆ. ಆಹಾರದಿಂದ ಉಂಟಾದ ಸಮಸ್ಯೆಯಲ್ಲಿ ಕೃಷ್ಣ ಮೃಗಗಳ ಸಾವಾಗಿದೆ ಎಂದು ಸಚಿವರಿಗೆ ಅಧಿಕಾರಿಗಳು ಮಾಹಿತಿ ಕೊಟ್ಟಿದ್ದರೆ, ಪ್ರಾಥಮಿಕ ಮಾಹಿತಿ ಪ್ರಕಾರ ಬ್ಯಾಕ್ಟೀರಿಯಾ ಇನ್ಫೆಕ್ಷನ್ನಿಂದ ಅವು ಮೃತಪಟ್ಟಿವೆ ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ. ಎಫ್ಎಸ್ಎಲ್ಗೂ ಸ್ಯಾಂಪಲ್ ಕಳುಹಿಸಿದ್ದೇವೆ ಎಂದು ಹೇಳುತ್ತಿದ್ದು, ಪ್ರಯೋಗಾಲಯದ ವರದಿ ಬರುವ ಮುನ್ನವೇ ಬ್ಯಾಕ್ಟೀರಿಯಾ ಇನ್ಫೆಕ್ಷನ್ ಎಂದು ಅಧಿಕಾರಿಗಳು ಹೇಳಿದ್ದೇಗೆ ಎನ್ನುವ ಪ್ರಶ್ನೆ ಉದ್ಭವಿಸಿದೆ.
2 ದಿನಗಳ ಅಂತರದಲ್ಲಿ 28 ಕೃಷ್ಣ ಮೃಗಗಳ ಸಾವು:
ಬೆಳಗಾವಿ ತಾಲೂಕಿನ ಭೂತರಾಮನಹಟ್ಟಿ ಗ್ರಾಮದಲ್ಲಿರುವ ಕಿತ್ತೂರು ಚನ್ನಮ್ಮ ಕಿರು ಮೃಗಾಲಯದಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಕೃಷ್ಣ ಮೃಗಗಳು ಸಾವಿಗೀಡಾಗಿವೆ. ಎರಡು ದಿನಗಳ ಅಂತರದಲ್ಲಿ ಒಟ್ಟು 28 ಕೃಷ್ಣ ಮೃಗಗಳು ಮೃತಪಟ್ಟಿರೋದು ಆತಂಕಕ್ಕೆ ಕಾರಣವಾಗಿದೆ. ನವೆಂಬರ್ 13 ರಂದು ಮೃಗಾಲಯದಲ್ಲಿನ 8 ಕೃಷ್ಣ ಮೃಗಗಳು ಪ್ರಾಣ ಕಳೆದುಕೊಂಡಿದ್ದವು. ಅವುಗಳ ಸಾವಿನ ಕಾರಣ ತಿಳಿಯಲು ಸ್ಯಾಂಪಲ್ ಅನ್ನು ಲ್ಯಾಬ್ಗಗೆ ಕಳುಹಿಸಲಾಗಿತ್ತು. ಅದರ ವರದಿ ಬರುವ ಮುನ್ನವೇ ಮತ್ತೆ 20 ಕೃಷ್ಣ ಮೃಗಗಳು ಮೃತಪಟ್ಟಿದ್ದವು. ಕೃಷ್ಣ ಮೃಗಗಳು ನಿಗೂಢವಾಗಿ ಸಾವನ್ನಪ್ಪಿರುವುದು ಅರಣ್ಯ ಇಲಾಖೆಯವರ ಬೇಜವಾಬ್ದಾರಿಯಿಂದವಾ ಅಥವಾ ಕಾಯಿಲೆಯಿಂದನಾ ಎನ್ನುವ ಬಗ್ಗೆ ತನಿಖೆ ಮುಂದುವರಿದಿದೆ.
ಇಂದು ಕೃಷ್ಣಮೃಗಗಳ ಮರಣೋತ್ತರ ಪರೀಕ್ಷೆ:
ಕೃಷ್ಣ ಮೃಗಗಳ ಸಾವು ಪ್ರಕರಣ ಸಂಬಂಧ ಇಂದು ಇಬ್ಬರು ವೈದ್ಯರಿಂದ ಮೂರು ಕೃಷ್ಣ ಮೃಗಗಳ ಮರಣೋತ್ತರ ಪರೀಕ್ಷೆ ನಡೆಯಲಿದ್ದು, ಬೆಂಗಳೂರಿನ ಬನ್ನೇರುಘಟ್ಟದಿಂದ ವೈದ್ಯರ ತಂಡ ಆಗಮಿಸಿದೆ. ಯಾವ ಕಾರಣಕ್ಕೆ ಕೃಷ್ಣಮೃಗಗಳು ಮೃತಪಟ್ಟಿವೆ ಅಂತಾ ಪ್ರಾಥಮಿಕ ತನಿಖೆ ನಡೆಸುವ ನಿಟ್ಟಿನಲ್ಲಿ 3 ಕೃಷ್ಣಮೃಗಗಳ ಕಳೇಬರದ ಪರಿಶೀಲನೆ ನಡೆಯಲಿದೆ. ಜೊತೆಗೆ ಒಂದು ವಾರದಿಂದ ನೀಡಿರುವ ಆಹಾರದ ಸ್ಯಾಂಪಲ್ ಕೂಡ ವೈದ್ಯರು ಪಡೆಯಲಿದ್ದಾರೆ. ಬದುಕುಳಿದ 10 ಕೃಷ್ಣಮೃಗಗಳ ಆರೋಗ್ಯ ತಪಾಸಣೆಯನ್ನೂ ಈ ವೇಳೆ ನಡೆಸಲಿದ್ದು, ಅಗತ್ಯ ಕ್ರಮ ಕೈಗೊಳ್ಳಲಿದ್ದಾರೆ.
ಇನ್ನಷ್ಟು ಓದಿರಿ :
ಬಳ್ಳಾರಿ ಮಹಾನಗರ ಪಾಲಿಕೆಯ ಮೇಯರ್ ಆಗಿ ಪೂಜಾರಿ ಗಾದೆಪ್ಪ ಆಯ್ಕೆ