ಅಂಗಾಂಗ ದಾನಕ್ಕಾಗಿ ಮೃತದೇಹದಲ್ಲಿ ರಕ್ತ ಪರಿಚಲನೆ ಪುನಾರಂಭಿಸಿದ ವೈದ್ಯರು
ಹೆಚ್ಸಿಎಂಸಿಟಿ ಮಣಿಪಾಲ್ ಆಸ್ಪತ್ರೆ ವೈದ್ಯರು, ಮಹಿಳೆಯ ಮೃತದೇಹದಲ್ಲಿ ರಕ್ತ ಪರಿಚಲನೆಯನ್ನು ಪುನಾರಂಭಿಸಿ ಅಂಗಾಂಗ ದಾನಕ್ಕೆ ಅನುವು ಮಾಡಿಕೊಟ್ಟಿದ್ದಾರೆ.
ನವದೆಹಲಿ:
ಮೋಟಾರ್ ನ್ಯೂರಾನ್ ಕಾಯಿಲೆಯಿಂದ ಪಾರ್ಶ್ವವಾಯುವಿಗೆ ಒಳಗಾಗಿ ಹಾಸಿಗೆ ಹಿಡಿದಿದ್ದ ಗೀತಾ ಚಾವ್ಲಾ ಅವರಿಗೆ ತೀವ್ರ ಉಸಿರಾಟದ ಸಮಸ್ಯೆ ಎದುರಾಗಿದ್ದರಿಂದ ನವೆಂಬರ್ 5 ರಂದು ಆಸ್ಪತ್ರೆಗೆ ಕರೆತರಲಾಗಿತ್ತು. ಗೀತಾ ಅವರ ಆರೋಗ್ಯ ಸ್ಥಿತಿ ತೀವ್ರವಾಗಿ ಹದಗೆಟ್ಟಿದ್ದರಿಂದ, ಕುಟುಂಬಸ್ಥರು ಅವರನ್ನು ವೆಂಟಿಲೇಟರ್ನಲ್ಲಿರಿಸದಿರಲು ನಿರ್ಧರಿಸಿದರು. ಇದರಿಂದ ನವೆಂಬರ್ 6 ರಂದು ರಾತ್ರಿ 8:43ಕ್ಕೆ ಗೀತಾ ನಿಧನರಾದರು.
ಗೀತಾ ಅವರು ತಮ್ಮ ಅಂಗಾಂಗಗಳನ್ನು ದಾನ ಮಾಡಲು ಬಯಸಿದ್ದರು. ಹೀಗಾಗಿ ವೈದ್ಯಕೀಯ ತಂಡ ನಾರ್ಮಥರ್ಮಿಕ್ ರೀಜನಲ್ ಪರ್ಫ್ಯೂಷನ್ (NRP) ಎಂಬ ಅಪರೂಪದ ಮತ್ತು ಸಂಕೀರ್ಣವಾದ ಸರ್ಜರಿ ನಡೆಸಿತು. ಹೃದಯ ಬಡಿತ ನಿಂತು ಮತ್ತು ಇಸಿಜಿ ಲೈನ್ ಫ್ಲಾಟ್ ಆದ ಐದು ನಿಮಿಷಗಳ ಬಳಿಕ ಗೀತಾ ಅವರು ನಿಧನರಾಗಿದ್ದಾರೆಂದು ಘೋಷಿಸಿದ ನಂತರ ಎಕ್ಸ್ಟ್ರಾಕಾರ್ಪೋರಿಯಲ್ ಮೆಂಬ್ರೇನ್ ಆಕ್ಸಿಜನೇಟರ್ (ECMO) ಬಳಸಿ, ವೈದ್ಯರು ಮೃತ ಗೀತಾ ಅವರ ಕಿಬ್ಬೊಟ್ಟೆಯ ಅಂಗಗಳಲ್ಲಿ ರಕ್ತ ಪರಿಚಲನೆಯನ್ನು ಯಶಸ್ವಿಯಾಗಿ ಪುನಾರಂಭಿಸಿದರು.
"ದಾನಕ್ಕಾಗಿ ಅಂಗಗಳನ್ನು ಸಂರಕ್ಷಿಸಲು ಸಾವಿನ ನಂತರವೂ ರಕ್ತ ಪರಿಚಲನೆಯನ್ನು ಪುನಾರಂಭಿಸಿದ್ದು ಏಷ್ಯಾದಲ್ಲಿ ಇದೇ ಮೊದಲು. ಎನ್ಆರ್ಪಿ ಬಳಸುವ ಮೂಲಕ, ಯಕೃತ್ತು ಮತ್ತು ಮೂತ್ರಪಿಂಡಗಳನ್ನು ಸುರಕ್ಷಿತವಾಗಿ ಹೊರ ತೆಗೆಯಬಹುದು ಮತ್ತು ಅಂಗಾಂಗ ಕಸಿ ಮಾಡಲು ಸಾಕಷ್ಟು ಸಮಯದವರೆಗೆ ಅಂಗಾಂಗಗಳನ್ನು ಜೀವಂತವಾಗಿಡಲು ನಮಗೆ ಸಾಧ್ಯವಾಯಿತು ಎಂದು ಮಣಿಪಾಲ್ ಇನ್ಸ್ಟಿಟ್ಯೂಟ್ ಆಫ್ ಕ್ರಿಟಿಕಲ್ ಕೇರ್ ಮೆಡಿಸಿನ್ನ ಅಧ್ಯಕ್ಷ ಡಾ. ಶ್ರೀಕಾಂತ್ ಶ್ರೀನಿವಾಸನ್ ತಿಳಿಸಿದರು.
ಇದರ ನಂತರ, ರಾಷ್ಟ್ರೀಯ ಅಂಗ ಮತ್ತು ಅಂಗಾಂಶ ಕಸಿ ಸಂಸ್ಥೆ (NOTTO) ತಕ್ಷಣದ ಕಸಿಗಾಗಿ ಅಂಗಗಳನ್ನು ಬಳಸಿಕೊಳ್ಳಲು ಅನುಮತಿ ನೀಡಿತು.
ಚಾವ್ಲಾ ಅವರ ಯಕೃತ್ತನ್ನು ಇನ್ಸ್ಟಿಟ್ಯೂಟ್ ಆಫ್ ಲಿವರ್ ಅಂಡ್ ಬೈಲಿಯರಿ ಸೈನ್ಸಸ್ (ILBS) ದಲ್ಲಿ 48 ವರ್ಷದ ವ್ಯಕ್ತಿಗೆ ಕಸಿ ಮಾಡಲಾಯಿತು. ಮೂತ್ರಪಿಂಡಗಳನ್ನು ಸಾಕೇತ್ನ ಮ್ಯಾಕ್ಸ್ ಆಸ್ಪತ್ರೆಯಲ್ಲಿ 63 ಮತ್ತು 58 ವರ್ಷ ವಯಸ್ಸಿನ ಇಬ್ಬರು ಪುರುಷ ರೋಗಿಗಳಿಗೆ ಕಸಿ ಮಾಡಲಾಯಿತು. ಚಾವ್ಲಾ ಅವರ ಕಾರ್ನಿಯಾ ಮತ್ತು ಚರ್ಮವನ್ನು ಸಹ ದಾನ ಮಾಡಲಾಯಿತು. ಇದರಿಂದ ಹಲವು ರೋಗಿಗಳಿಗೆ ಪ್ರಯೋಜನವಾಗಲಿದೆ.
ದ್ವಾರಕಾದ ಹೆಚ್ಸಿಎಂಸಿಟಿ ಮಣಿಪಾಲ್ ಆಸ್ಪತ್ರೆ ವೈದ್ಯರು, ಮೃತಪಟ್ಟ 55 ವರ್ಷದ ಮಹಿಳೆಯ ದೇಹದಲ್ಲಿ ರಕ್ತ ಪರಿಚಲನೆಯನ್ನು ಪುನಾರಂಭಿಸಿ ಅಂಗಾಂಗ ದಾನಕ್ಕೆ ಅನುವು ಮಾಡಿಕೊಟ್ಟಿದ್ದಾರೆ. ಇದು ಏಷ್ಯಾದಲ್ಲೇ ಮೊದಲು ಎಂದು ಆಸ್ಪತ್ರೆಯ ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.
ಮಹಿಳೆಯ ದೇಹದಲ್ಲಿನ ಅಂಗಾಂಗಗಳನ್ನು ಪಡೆಯಲು ಮರಣೋತ್ತರ ಪರೀಕ್ಷೆಯ ನಂತರ ರಕ್ತ ಪರಿಚಲನೆಯನ್ನು ಪುನಾರಂಭಿಸಲಾಯಿತು.
ಅಂಗಾಂಗ ದಾನದಲ್ಲಿ ವಿಶ್ವದಲ್ಲೇ ಎಂಟನೇ ಸ್ಥಾನದಲ್ಲಿರುವ ಭಾರತ:
ಭಾರತದಲ್ಲಿ ಸಾಮಾನ್ಯವಾಗಿ ಮೃತದೇಹದಲ್ಲಿ ಹೃದಯ ಬಡಿತವಿದ್ದು, ಬ್ರೈನ್ ಡೆಡ್ ಆದ ನಂತರ ಅಂಗಾಂಗ ದಾನ ಮಾಡಲಾಗುತ್ತದೆ. ಡೊನೇಷನ್ ಆಫ್ಟರ್ ಸರ್ಕ್ಯೂಲೆಟರಿ ಡೆತ್ (ಮೃತದೇಹದಲ್ಲಿ ರಕ್ತಪರಿಚಲನೆ ನಿಂತು ಹೋದ ನಂತರ) ಅಂಗಾಂಗ ದಾನದಲ್ಲಿ, ಹೃದಯ ಬಡಿತ ನಿಂತುಹೋಗಿರುತ್ತದೆ. ಆದ್ದರಿಂದ ಇಲ್ಲಿ ಸಮಯ ನಿರ್ಣಾಯಕವಾಗಿರುತ್ತದೆ.
ಮಣಿಪಾಲ್ ಇನ್ಸ್ಟಿಟ್ಯೂಟ್ ಆಫ್ ಗ್ಯಾಸ್ಟ್ರೋಎಂಟರಾಲಜಿ & ಹೆಪಾಟೊ-ಬೈಲಿಯರಿ-ಪ್ಯಾಂಕ್ರಿಯಾಟಿಕ್ ಸೈನ್ಸಸ್ನ ಮುಖ್ಯಸ್ಥ ಮತ್ತು ಮಣಿಪಾಲ್ ಅಂಗ ಹಂಚಿಕೆ ಮತ್ತು ಕಸಿ (MOST) ನ ದೇಶಿಯ ಮುಖ್ಯಸ್ಥ ಡಾ. (ಕರ್ನಲ್) ಅವ್ನಿಶ್ ಸೇಥ್ ವಿಎಸ್ಎಂ, "2024 ರಲ್ಲಿ ಬ್ರೈನ್ ಡೆಡ್ ಸಾವಿನ ನಂತರ ಭಾರತವು 1,128 ಅಂಗಾಂಗ ದಾನಗಳೊಂದಿಗೆ ಅಂಗಾಂಗ ದಾನದಲ್ಲಿ ವಿಶ್ವದಲ್ಲೇ ಎಂಟನೇ ಸ್ಥಾನದಲ್ಲಿದೆ" ಎಂದು ಹೇಳಿದರು.
ಆದಾಗ್ಯೂ, ಮೃತರಲ್ಲಿ ರಕ್ತಪರಿಚಲನೆ ನಿಂತ ನಂತರವೂ ನಾವು ಅಂಗಾಂಗ ದಾನಗಳನ್ನು ಸ್ವೀಕರಿಸುವುದನ್ನು ವಿಸ್ತರಿಸಬೇಕಾಗಿದೆ. ಏಷ್ಯಾದಲ್ಲೇ ಇದೇ ಮೊದಲ ಬಾರಿಗೆ ಭಾರತದಲ್ಲಿ ನಡೆದ ನಾರ್ಮಥರ್ಮಿಕ್ ರೀಜನಲ್ ಪರ್ಫ್ಯೂಷನ್ ಸರ್ಜರಿಯು ಸಾವಿನ ನಂತರವೂ ಕಿಬ್ಬೊಟ್ಟೆಯ ಅಂಗಗಳನ್ನು ಜೀವಂತವಾಗಿರಿಸಲು ಸಾಧ್ಯವಿದೆ ಎಂಬುದನ್ನು ತೋರಿಸಿದೆ ಎಂದು ತಿಳಿಸಿದರು.
ಇನ್ನಷ್ಟು ಓದಿರಿ:
SIR ಮೂಲಕ 'ಮತ ಕಳ್ಳತನ'ವನ್ನು ಸಾಂಸ್ಥೀಕರಣಗೊಳಿಸುವ ಪ್ರಯತ್ನ