Belagavi news:
ಬೆಂಗಳೂರು, ಮೇ 18: ಮೇ 20ರಂದು ಸಾರಿಗೆ ನೌಕರರು ಮುಷ್ಕರಕ್ಕೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಕೆಎಸ್ಆರ್ ಟಿಸಿ ಈಗಾಗಲೇ ಖಡಕ್ ಎಚ್ಚರಿಕೆ ನೀಡಿದೆ. ಬುಧವಾರ ಕರ್ತವ್ಯಕ್ಕೆ ಹಾಜರಾಗದಿದ್ದರೆ 'ನೋ ವರ್ಕ್ ನೋ ಪೇ' ನಿಯಮ ಅನ್ವಯಿಸಲಾಗುವುದು ಎಂದು ಸಿಬ್ಬಂದಿಗೆ ಸ್ಪಷ್ಟವಾಗಿ ತಿಳಿಸಲಾಗಿದೆ.
KSRTC ವ್ಯವಸ್ಥಾಪಕ ನಿರ್ದೇಶಕ ಅಕ್ರಮ್ ಪಾಷಾ ಅವರು ಮುಷ್ಕರದಲ್ಲಿ ಭಾಗಿಯಾಗದಂತೆ ನೌಕರರಿಗೆ ಸೂಚನೆ ನೀಡಿದ್ದು, ವಿಶೇಷ ಆದೇಶದನ್ವಯ ಕರ್ತವ್ಯಕ್ಕೆ ಗೈರು ಹಾಜರಾಗುವ ಸಿಬ್ಬಂದಿಯ ವಿರುದ್ಧ ಶಿಸ್ತಿನ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.
ಆದರೆ ಈ ಎಚ್ಚರಿಕೆಗಳ ನಡುವೆಯೂ ಸಾರಿಗೆ ನೌಕರರು ತಮ್ಮ ಪಟ್ಟು ಬಿಡಲು ನಿರಾಕರಿಸಿದ್ದು, ಮೇ 20 ರಂದು ಮುಷ್ಕರ ನಡೆಸುವುದು ಖಚಿತ ಎಂದು ಮುಖಂಡರು ತಿಳಿಸಿದ್ದಾರೆ. ಈ ಬೆಳವಣಿಗೆಯಿಂದ ರಾಜ್ಯದ ಸಾರಿಗೆ ಸೇವೆಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಹೆಚ್ಚಾಗಿದೆ.
ಮೇ 20ರಂದು ಕೆಎಸ್ ಆರ್ ಟಿಸಿ ನೌಕರರು ಮುಷ್ಕರ ಖಚಿತವಾಗಿದೆ. ' ನೋ ವರ್ಕ್ ನೋ ಪೇ' ಹಾಗೂ ಶಿಸ್ತು ಕ್ರಮದ ಎಚ್ಚರಿಕೆಗಳ ನಡುವೆಯೂ ನೌಕರರು ತಮ್ಮ ಬೇಡಿಕೆಗಳ ಈಡೇರಿಕೆಗೆ ಪಟ್ಟು ಹಿಡಿದಿದ್ದಾರೆ.
ಮತ್ತೊಂದೆಡೆ, ಮುಷ್ಕರವನ್ನು ಕಾನೂನುಬಾಹಿರ ಎಂದು ಘೋಷಿಸಿರುವ ಕೆಎಸ್ಆರ್ ಟಿಸಿ ಆಡಳಿತ, ಸೇವೆ ವ್ಯತ್ಯಯವಾಗದಂತೆ ತಾತ್ಕಾಲಿಕ ಚಾಲಕರನ್ನು ನೇಮಿಸುವುದು ಹಾಗೂ ಖಾಸಗಿ ಬಸ್ ಗಳ ಮೂಲಕ ಪರ್ಯಾಯ ವ್ಯವಸ್ಥೆ ಕಲ್ಪಿಸಲು ಸಿದ್ಧತೆ ನಡೆಸಿದೆ. ಸಾರ್ವಜನಿಕರಿಗೆ ತೊಂದರೆಯಾಗದಂತೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ಭರವಸೆ ನೀಡಿದ್ದಾರೆ.
'ನಾವು ಯಾವುದಕ್ಕೂ ಹೆದರುವುದಿಲ್ಲ'
ನಮ್ಮ ಬೇಡಿಕೆ ಈಡೇರಿಸಲೇಬೇಕು, ಸಾರಿಗೆ ಮುಷ್ಕರ ಶುರುವಾದ ಮೇಲೆ ಏನೇನು ಆಗುತ್ತೆ ನೋಡೋಣ. ಸಾರಿಗೆ ನೌಕರರನ್ನು ಅರೆಸ್ಟ್ ಮಾಡಿದ್ರೆ ಬಸ್ ಯಾರು ಓಡಿಸುತ್ತಾರೆ? ಎಸ್ಮಾ ಜಾರಿಯಲ್ಲಿದೆ ಅಂತಾರೆ, ನಾವು ಯಾವುದಕ್ಕೂ ಹೆದರುವುದಿಲ್ಲ ಎಂದು ಬೆಂಗಳೂರಿನಲ್ಲಿ ಸಾರಿಗೆ ನೌಕರರ ಮುಖಂಡ ವಿಜಯ್ ಭಾಸ್ಕರ್ ಹೇಳಿದ್ದಾರೆ.
' ಮುಷ್ಕರಕ್ಕೆ ಕರೆ ನೀಡಿರುವುದು ಕಾನೂನುಬಾಹಿರ' ಎಂದು ಕೆ ಎಸ್ ಆರ್ ಟಿ ಸಿ ವ್ಯವಸ್ಥಾಪಕ ನಿರ್ದೇಶಕ ಅಕ್ರಮ್ ಪಾಷಾ ಸ್ಪಷ್ಟಪಡಿಸಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿದ ಅವರು, ಸಾರಿಗೆ ಸಿಬ್ಬಂದಿ ಮುಷ್ಕರಕ್ಕೆ ಕರೆ ನೀಡಿರುವುದು ನಿಯಮಬಾಹಿರವಾಗಿದ್ದು, ಈಗಾಗಲೇ ' ನೋ ವರ್ಕ್ ನೋ ಪೇ' ಆದೇಶ ಜಾರಿಗೆ ತರಲಾಗಿದೆ ಎಂದು ತಿಳಿಸಿದ್ದಾರೆ.
ಮುಷ್ಕರಕ್ಕೆ ಕರೆ ನೀಡಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದು ನಿಶ್ಚಿತವಾಗಿದ್ದು, ಎಲ್ಲಾ ಜಿಲ್ಲೆಗಳ ಎಸ್ಪಿ ಹಾಗೂ ಆರ್ ಟಿಓ ಗಳ ಜೊತೆ ಈಗಾಗಲೇ ಚರ್ಚೆ ನಡೆಸಲಾಗಿದೆ ಎಂದು ಅವರು ಹೇಳಿದ್ದಾರೆ. ಸರ್ಕಾರದ ಸಾಧನ ಸಮಾವೇಶಕ್ಕೆ ಸುಮಾರು 2000 ಬಸ್ಸುಗಳನ್ನು ನಿಯೋಜಿಸಲಾಗುತ್ತಿದ್ದು, ಮೇ 20ರಂದು ರಾಜ್ಯದ ಎಲ್ಲಾ ಡಿಪೋಗಳಿಗೆ ಭದ್ರತೆ ಒದಗಿಸಲಾಗುವುದು ಎಂದು ತಿಳಿಸಿದ್ದಾರೆ.
ಪೋಲಿಸ್ ಇಲಾಖೆಯೊಂದಿಗೆ ಸಮನ್ವಯ ಸಾಧಿಸಿ ಭದ್ರತೆಗಾಗಿ ಸೂಚನೆ ನೀಡಲಾಗಿದೆ. ಜೊತೆಗೆ ಮುಷ್ಕರದಲ್ಲಿ ಭಾಗವಹಿಸಲ್ಲ ಎಂದು ಸಾರಿಗೆ ಸಿಬ್ಬಂದಿಯಿಂದ ಮುಚ್ಚಳಿಕೆ ಪತ್ರಗಳನ್ನು ಪಡೆದುಕೊಂಡಿರುವುದರಿಂದ ಬಸ್ ಸಂಚಾರದಲ್ಲಿ ಹೆಚ್ಚಿನ ವ್ಯತ್ಯಯವಾಗುವುದಿಲ್ಲ ಎಂದು ಅಕ್ರಮ್ ಪಾಷ ತಿಳಿಸಿದ್ದಾರೆ.
ಇದರ ಹೊರತಾಗಿಯೂ ಮುಷ್ಕರ ನಡೆದರೆ, ಸೇವೆ ವ್ಯತ್ಯಯವಾಗದಂತೆ ಪರ್ಯಾಯ ವ್ಯವಸ್ಥೆ ಮಾಡಲಾಗಿದೆ ಎಂದು ಕೆ ಎಸ್ ಆರ್ ಟಿ ಸಿ ವ್ಯವಸ್ಥಾಪಕ ನಿರ್ದೇಶಕ ಅಕ್ರಮ್ ಪಾಷಾ ತಿಳಿಸಿದ್ದಾರೆ. ಇಲಾಖೆಯಲ್ಲಿ ಈಗಾಗಲೇ 2,000 ತರಬೇತಿ ನಿರತ ಸಿಬ್ಬಂದಿ ಹಾಗೂ ನಾಲ್ಕು ನಿಗಮಗಳಲ್ಲಿ ಸುಮಾರು 5000 ತರಬೇತಿ ಚಾಲಕರು ಲಭ್ಯವಿದ್ದು, ಅವರನ್ನು ನಿಯೋಜಿಸಿ ಬಸ್ ಸೇವೆ ಮುಂದುವರಿಸಲಾಗುವುದು ಎಂದು ಹೇಳಿದ್ದಾರೆ.
ಅದೇ ರೀತಿ ಖಾಸಗಿ ಬಸ್ ಮಾಲೀಕರ ಸಂಘದೊಂದಿಗೆ ಚರ್ಚೆ ನಡೆಸಲಾಗಿದ್ದು, ಪ್ರಯಾಣಿಕರಿಗೆ ತೊಂದರೆ ಆಗದಂತೆ ಕಾಸ್ಕಿ ಬಸ್ ಗಳನ್ನು ಸಹ ಸೇವೆಗೆ ಬಳಸಲಾಗುವುದು ಎಂದವರು ತಿಳಿಸಿದ್ದಾರೆ. ಯಾವುದೇ ಸಮಸ್ಯೆಗಳಿದ್ದರೆ ಚರ್ಚೆ ಮೂಲಕ ಪರಿಹರಿಸಲು ಸಾರಿಗೆ ಸಿಬ್ಬಂದಿಗೆ ಮುಕ್ತ ಅವಕಾಶವಿದೆ ಎಂದು ಅಕ್ರಮ್ ಪಾಷಾ ಸ್ಪಷ್ಟಪಡಿಸಿದ್ದಾರೆ.
Also Read: