ಬಿಹಾರ ಚುನಾವಣೆಯ ಸೋಲಿಗೆ ಇವಿಎಂ ದುರ್ಬಳಕೆ, ಹಣ ಬಲ ಕಾರಣ: ಆರ್ಜೆಡಿ
ನ್ಯಾಯಯುತ ಚುನಾವಣೆಗಳು ಬೇಕಾದರೆ ಹಳೆಯ ವ್ಯವಸ್ಥೆಯನ್ನು ಜಾರಿಗೆ ತರಬೇಕು. ಇವಿಎಂಗಳ ಬದಲು ಮತಪೆಟ್ಟಿಗೆಗಳನ್ನು ಬಳಸಿ ಚುನಾವಣೆ ನಡೆಸಬೇಕು ಎಂದು ಆರ್ಜೆಪಿ ಸಲಹೆ ನೀಡಿದೆ.
ಪಟ್ನಾ(ಬಿಹಾರ):
ಪಕ್ಷದ ನಾಯಕ ತೇಜಸ್ವಿ ಯಾದವ್ ಅವರ ನೇತೃತ್ವದಲ್ಲಿ ನೂತನವಾಗಿ ಆಯ್ಕೆಯಾದ ಶಾಸಕರು ಮತ್ತು ಪಕ್ಷದ ಹಿರಿಯ ನಾಯಕರೊಂದಿಗೆ ಇಂದು ನಡೆದ ಸಭೆಯಲ್ಲಿ, ಚುನಾವಣೆಯ ಸೋಲಿನ ಕುರಿತು ಅವಲೋಕನ ನಡೆಯಿತು.
ಇದಾದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಆರ್ಜೆಡಿ ರಾಜ್ಯಾಧ್ಯಕ್ಷ ಮಂಗನಿ ಲಾಲ್ ಮಂಡಲ್, "ಪಕ್ಷ ಸೋಲಿನ ಕುರಿತು ವಿವರವಾದ ಪರಿಶೀಲನೆ ನಡೆಸಿತು. ಚುನಾವಣೆಯಲ್ಲಿ ಇವಿಎಂ ದುರ್ಬಳಕೆ ಮತ್ತು ಹಣದ ಬಲ ಪ್ರಮುಖ ಪಾತ್ರ ವಹಿಸಿದೆ. ಚುನಾವಣೆಗೆ ಮುನ್ನ ಮುಕ್ತವಾಗಿ ಹಣ ಹಂಚಿಕೆ ಮಾಡಲಾಗಿದೆ" ಎಂದು ಆರೋಪಿಸಿದರು.
"ಮತದಾರರ ಮೇಲೆ ಪ್ರಭಾವ ಬೀರಲು ಅಪಾರ ಪ್ರಮಾಣದ ಹಣ ಹಂಚಲಾಯಿತು. ಚುನಾವಣೆಯ ಸಂದರ್ಭದಲ್ಲಿ ಆರ್ಜೆಡಿ ನಾಯಕರನ್ನು ಟೀಕಿಸಲಾಯಿತು. ಪಕ್ಷದ ಕಾರ್ಯಕರ್ತರಿಗೆ ವಿವಿಧ ಸ್ಥಳಗಳಲ್ಲಿ ಕಿರುಕುಳ ನೀಡಿ, ಬಂಧಿಸಲಾಯಿತು. ಈ ಕುರಿತು ಚುನಾವಣಾ ಆಯೋಗ ಮತ್ತು ವೀಕ್ಷಕರಿಗೆ ಮಾಹಿತಿ ನೀಡಿದ್ದರೂ, ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಇವಿಎಂ ಅನ್ನು ಕುಶಲತೆಯಿಂದ ಬಳಕೆ ಮಾಡಿರುವುದು ಬಹಿರಂಗಗೊಂಡಿದೆ" ಎಂದು ಆಕ್ರೋಶ ಹೊರಹಾಕಿದರು.
"ಚುನಾವಣೆಯಲ್ಲಿ ಇವಿಎಂಗಳನ್ನು ತಿರುಚಲಾಗಿದೆ. ಹಾಗಾಗಿ, ಈ ಇವಿಎಂ ಯಂತ್ರಗಳನ್ನು ರದ್ದುಗೊಳಿಸಬೇಕು. ನ್ಯಾಯಯುತ ಚುನಾವಣೆಗಳು ಬೇಕಾದರೆ ಹಳೆಯ ವ್ಯವಸ್ಥೆಯನ್ನು ಜಾರಿಗೆ ತರಬೇಕು. ಇವಿಎಂಗಳ ಬದಲಿಗೆ ಮತಪೆಟ್ಟಿಗೆಗಳನ್ನು ಬಳಸಿ ಚುನಾವಣೆಗಳನ್ನು ನಡೆಸಬೇಕು" ಎಂದು ಅವರು ಸಲಹೆ ನೀಡಿದರು.
ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಕೇವಲ 25 ಸ್ಥಾನಗಳನ್ನು ಗೆಲ್ಲುವ ಮೂಲಕ ಭಾರಿ ಹಿನ್ನಡೆ ಅನುಭವಿಸಿದ ರಾಷ್ಟ್ರೀಯ ಜನತಾ ದಳ(ಆರ್ಜೆಡಿ), ಪಕ್ಷದ ಸೋಲಿಗೆ ಇವಿಎಂ ದುರ್ಬಳಕೆ ಮತ್ತು ಹಣದ ಶಕ್ತಿ ಕಾರಣ ಎಂದು ಆರೋಪಿಸಿದೆ.
ಸಭೆಯಲ್ಲಿ ಹೊಸದಾಗಿ ಆಯ್ಕೆಯಾದ ಶಾಸಕರು ತೇಜಸ್ವಿ ಯಾದವ್ ಅವರನ್ನು ತಮ್ಮ ಶಾಸಕಾಂಗ ಪಕ್ಷದ ನಾಯಕರನ್ನಾಗಿ ಸರ್ವಾನುಮತದಿಂದ ಆಯ್ಕೆ ಮಾಡಿದರು ಎಂದು ಆರ್ಜೆಡಿ ಶಾಸಕ ಭಾಯಿ ವೀರೇಂದ್ರ ಹೇಳಿದ್ದಾರೆ.
2020ರಲ್ಲಿ ಏಕೈಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದ ರಾಷ್ಟ್ರೀಯ ಜನತಾ ದಳ(ಆರ್ಜೆಡಿ) ಈ ಚುನಾವಣೆಯಲ್ಲಿ ಕೇವಲ 25 ಸ್ಥಾನಗಳೊಂದಿಗೆ ಮೂರನೇ ಸ್ಥಾನಕ್ಕೆ ಕುಸಿದಿದೆ. ಆಡಳಿತಾರೂಢ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್ಡಿಎ) ಒಟ್ಟು 243 ಸ್ಥಾನಗಳ ಪೈಕಿ 202 ಸ್ಥಾನಗಳನ್ನು ಗೆದ್ದರೆ, ವಿರೋಧ ಪಕ್ಷವಾದ ಇಂಡಿಯಾ ಬಣ ಕೇವಲ 25 ಸ್ಥಾನಗಳಿಗೆ ಸೀಮಿತವಾಯಿತು.
ಇವಿಎಂಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ ಅವರು, "ಇವಿಎಂಗಳಲ್ಲಿ ವಂಚನೆ ನಡೆದಿತ್ತು. ನಾವು ಇವಿಎಂಗಳ ವಿರುದ್ಧ ಹೋರಾಡಬೇಕು. ಇವಿಎಂಗಳಿಂದಾಗಿ ನಾವು ಸೋತಿದ್ದೇವೆ" ಎಂದು ಪುನರುಚ್ಚರಿಸಿದರು.
ಇನ್ನಷ್ಟು ಓದಿರಿ :
ಈ ಬಾರಿ ಕೇರಳದ ಪದ್ಮನಾಭಸ್ವಾಮಿ ದೇಗುಲದಲ್ಲಿ 'ಮುರಜಪಂ'