ಪ್ರಮುಖ ನಕ್ಸಲ್ ಕಮಾಂಡರ್ ಸೇರಿ 6 ಮಂದಿಯ ಎನ್ಕೌಂಟರ್
ಆಂಧ್ರ ಪ್ರದೇಶದ ಗಡಿಭಾಗದಲ್ಲಿ ಇಂದು ನಡೆದ ನಕ್ಸಲ್ ನಿಗ್ರಹ ಕಾರ್ಯಾಚರಣೆಯಲ್ಲಿ ಪ್ರಮುಖ ನಕ್ಸಲ್ ಕಮಾಂಡರ್ ಮಾದ್ವಿ ಹಿದ್ಮಾ ಸೇರಿ ಆರು ಮಂದಿಯನ್ನು ಎನ್ಕೌಂಟರ್ ಮಾಡಲಾಗಿದೆ.
ಮಾರೇಡುಮಿಲ್ಲಿ(ಆಂಧ್ರ ಪ್ರದೇಶ):
ಪ್ರಾಥಮಿಕ ಮಾಹಿತಿಯ ಪ್ರಕಾರ, ಹಿರಿಯ ಮಾವೋವಾದಿ ನಾಯಕ ಮತ್ತು ಕೇಂದ್ರ ಸಮಿತಿ ಸದಸ್ಯ ಎಂದು ಗುರುತಿಸಿಕೊಂಡಿದ್ದ ಮಾದ್ವಿ ಹಿದ್ಮಾ ಎಂಬಾತನನ್ನು ಹೊಡೆದುರುಳಿಸಲಾಗಿದೆ. ಇದು ನಕ್ಸಲ್ ನಿಗ್ರಹ ಕಾರ್ಯಾಚರಣೆಗೆ ಸಿಕ್ಕ ದೊಡ್ಡ ಯಶಸ್ಸೆಂದು ಬಣ್ಣಿಸಲಾಗಿದೆ.
ಅಲ್ಲೂರಿ ಸೀತಾರಾಮ ರಾಜು ಜಿಲ್ಲಾ ಎಸ್ಪಿ ಅಮಿತ್ ಬರ್ದಾರ್ ಮಾತನಾಡಿ, "ಬೆಳಿಗ್ಗೆ 6.30ರಿಂದ 7 ಗಂಟೆಯ ನಡುವೆ ಮಾರೆಡುಮಿಲ್ಲಿ ಮಂಡಲದ ಅರಣ್ಯದಲ್ಲಿ ಎನ್ಕೌಂಟರ್ ನಡೆದಿದೆ. ಪೊಲೀಸ್ ಇಲಾಖೆಯ ವಿವಿಧ ವಿಭಾಗಗಳು ಜಂಟಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದವು. ಎನ್ಕೌಂಟರ್ನಲ್ಲಿ ಆರು ಮಾವೋವಾದಿಗಳು ಮೃತಪಟ್ಟಿದ್ದಾರೆ" ಎಂದು ಮಾಹಿತಿ ನೀಡಿದರು.
ರಾಜ್ಯ ಸರ್ಕಾರಗಳ ಸಹಯೋಗದಲ್ಲಿ ಕೇಂದ್ರ ಸರ್ಕಾರ ನಡೆಸುತ್ತಿರುವ ನಕ್ಸಲ್ ನಿಗ್ರಹ ಕಾರ್ಯಾಚರಣೆಯಲ್ಲಿ ಮತ್ತೊಂದು ದೊಡ್ಡ ಯಶಸ್ಸು ಸಿಕ್ಕಿದೆ. ಮೋಸ್ಟ್ ವಾಂಟೆಡ್ ನಕ್ಸಲ್ ಮಾದ್ವಿ ಹಿದ್ಮಾ ಸೇರಿದಂತೆ 6 ಮಾವೋವಾದಿಗಳನ್ನು ಭದ್ರತಾ ಪಡೆಗಳು ಎನ್ಕೌಂಟರ್ ಮೂಲಕ ಹತ್ಯೆಗೈದಿವೆ.
ಇಲ್ಲಿನ ಅಲ್ಲೂರಿ ಸೀತಾರಾಮ ರಾಜು ಜಿಲ್ಲೆಯ ಮಾರೇಡುಮಿಲ್ಲಿ ಅರಣ್ಯ ಪ್ರದೇಶದಲ್ಲಿ ಭದ್ರತಾ ಪಡೆಗಳೊಂದಿಗೆ ಇಂದು ನಡೆದ ಗುಂಡಿನ ಚಕಮಕಿಯಲ್ಲಿ ನಕ್ಸಲರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಛತ್ತೀಸ್ಗಢದಲ್ಲಿ ಎನ್ಕೌಂಟರ್:
ಪ್ರತ್ಯೇಕ ಘಟನೆಯಲ್ಲಿ ಛತ್ತೀಸ್ಗಢದಲ್ಲೂ ಇಂದು ಬೆಳಿಗ್ಗೆ ನಕ್ಸಲರ ಎನ್ಕೌಂಟರ್ ನಡೆಸಲಾಗಿದೆ. ಎರ್ರಾಬೋರ್ ಪ್ರದೇಶದಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಮಾವೋವಾದಿ ಸಾವನ್ನಪ್ಪಿದ್ದಾನೆ. ಭದ್ರತಾ ಸಿಬ್ಬಂದಿ ಈ ಪ್ರದೇಶದಲ್ಲಿ ಕೂಂಬಿಂಗ್ ಕಾರ್ಯಾಚರಣೆ ನಡೆಸುವಾಗ ಈ ಘಟನೆ ನಡೆದಿದೆ.
"ಎರ್ರಾಬೋರ್ ಪೊಲೀಸ್ ಠಾಣೆ ವ್ಯಾಪ್ತಿಯ ಅರಣ್ಯದಲ್ಲಿ ಬೆಳಿಗ್ಗೆ ಭದ್ರತಾ ಸಿಬ್ಬಂದಿಯ ತಂಡವು ನಕ್ಸಲ್ ನಿಗ್ರಹ ಕಾರ್ಯಾಚರಣೆಗೆ ಹೊರಟಿದ್ದಾಗ, ಆ ಪ್ರದೇಶದಲ್ಲಿ ನಕ್ಸಲರು ಇರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಲಾಯಿತು. ಈ ವೇಳೆ ಗುಂಡಿನ ಚಕಮಕಿಯಲ್ಲಿ ಓರ್ವ ಮಾವೋವಾದಿ ಮೃತಪಟ್ಟಿದ್ದಾನೆ. ಸ್ಥಳದಿಂದ ಒಬ್ಬ ನಕ್ಸಲೀಯನ ಮೃತದೇಹವನ್ನು ವಶಪಡಿಸಿಕೊಳ್ಳಲಾಗಿದೆ. ಆಗಾಗ್ಗೆ ಗುಂಡಿನ ಚಕಮಕಿ ನಡೆಯುತ್ತಿದೆ" ಎಂದು ಜಿಲ್ಲಾ ಎಸ್ಪಿ ಕಿರಣ್ ಚವಾಣ್ ತಿಳಿಸಿದ್ದಾರೆ.
ಭಾನುವಾರ ಸುಕ್ಮಾದ ಭೆಜ್ಜಿ ಮತ್ತು ಚಿಂತಗುಫಾಗಳ ಅರಣ್ಯ ಪ್ರದೇಶಗಳಲ್ಲಿ ಭದ್ರತಾ ಸಿಬ್ಬಂದಿಯೊಂದಿಗೆ ನಡೆದ ಎನ್ಕೌಂಟರ್ನಲ್ಲಿ ಮೂವರು ನಕ್ಸಲರು ಸಾವನ್ನಪ್ಪಿದ್ದರು. ಈ ವರ್ಷ ಛತ್ತೀಸ್ಗಢದಲ್ಲಿ ನಡೆದ ಎನ್ಕೌಂಟರ್ಗಳಲ್ಲಿ 263 ನಕ್ಸಲರು ಹತರಾಗಿದ್ದಾರೆ. ಅವರಲ್ಲಿ 234 ಜನರನ್ನು ಸುಕ್ಮಾ ಸೇರಿದಂತೆ ಏಳು ಜಿಲ್ಲೆಗಳನ್ನು ಒಳಗೊಂಡಿರುವ ಬಸ್ತಾರ್ ವಿಭಾಗದಲ್ಲಿ ಹೊಡೆದುರುಳಿಸಲಾಗಿದೆ.
ಮಾದ್ವಿ ಹಿದ್ಮಾ ಯಾರು?:
ಮಾದ್ವಿ ಹಿದ್ಮಾ ಅಲಿಯಾಸ್ ಸಂತೋಷ್ ಛತ್ತೀಸ್ಗಢದ ಸುಕ್ಮಾ ಜಿಲ್ಲೆಯ ಪೂರ್ವತಿ ಗ್ರಾಮದ ನಿವಾಸಿ. ಈತ ಮಾವೋವಾದಿ ಚಟುವಟಿಕೆಯಲ್ಲಿ ಪ್ರಮುಖವಾಗಿ ಗುರುತಿಸಿಕೊಂಡಿದ್ದ. ಬಸ್ತಾರ್ ಮತ್ತು ದಂತೇವಾಡ ದಳದ ಪ್ರಮುಖ ಸದಸ್ಯನಾಗಿದ್ದ. ಹಿದ್ಮಾ ಚಿಕ್ಕ ವಯಸ್ಸಿನಲ್ಲಿಯೇ ಮಾವೋವಾದಿ ಕೇಂದ್ರ ಸಮಿತಿ ಸೇರಿದ್ದ. ಗೆರಿಲ್ಲಾ ದಾಳಿಯಲ್ಲಿ ಪ್ರಮುಖ ತಂತ್ರಜ್ಞನಾಗಿದ್ದ. ಹಿದ್ಮಾ ಪೀಪಲ್ಸ್ ಲಿಬರೇಶನ್ ಗೆರಿಲ್ಲಾ ಸೈನ್ಯದ ಕಮಾಂಡರ್ ಆಗಿ ಮಾಡಲಾಗಿತ್ತು. ನಂತರ ದಂಡಕಾರಣ್ಯ ವಿಶೇಷ ವಲಯ ಸಮಿತಿಯ ಸದಸ್ಯ ಕೂಡ ಆಗಿದ್ದ.
ಇನ್ನಷ್ಟು ಓದಿರಿ :
ಬಿಹಾರ ಚುನಾವಣೆಯ ಸೋಲಿಗೆ ಇವಿಎಂ ದುರ್ಬಳಕೆ, ಹಣ ಬಲ ಕಾರಣ: ಆರ್ಜೆಡಿ