ಹತ್ತರಗಿ ಟೋಲ್ ಬಳಿ ರಾಷ್ಟ್ರೀಯ ಹೆದ್ದಾರಿಗೆ ನುಗ್ಗಿದ ರೈತರು
ಕಬ್ಬಿಗೆ ಸೂಕ್ತ ಮತ್ತು ನ್ಯಾಯಯುತ ದರ ನಿಗದಿ ಪಡಿಸುವಂತೆ ಒತ್ತಾಯಿಸಿ ಪ್ರತಿಭಟಿಸುತ್ತಿರುವ ರೈತರು ಇಂದು ಟ್ರ್ಯಾಕ್ಟರ್ ಸಮೇತ ರಾಷ್ಟ್ರೀಯ ಹೆದ್ದಾರಿಗೆ ನುಗ್ಗಿದರು.
ಬೆಳಗಾವಿ:
ಮೂಡಲಗಿ ತಾಲೂಕಿನ ಗುರ್ಲಾಪುರ ಕ್ರಾಸ್ನಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ನೇತೃತ್ವದಲ್ಲಿ ರೈತರ ಹೋರಾಟ 9ನೇ ದಿನಕ್ಕೆ ಕಾಲಿಟ್ಟಿದೆ. ಇತ್ತ ಹುಕ್ಕೇರಿ ತಾಲೂಕಿನ ಸಾವಿರಾರು ರೈತರು ಟ್ರ್ಯಾಕ್ಟರ್ಗಳ ಸಮೇತ ಹತ್ತರಗಿ ಟೋಲ್ ಗೇಟ್ ಬಳಿ ರಾಷ್ಟ್ರೀಯ ಹೆದ್ದಾರಿಗೆ ನುಗ್ಗಿದರು. ಈ ವೇಳೆ ರಾಜ್ಯ ಸರ್ಕಾರ ಮತ್ತು ಕಾರ್ಖಾನೆ ಮಾಲೀಕರ ವಿರುದ್ಧ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ, ಪ್ರತಿಭಟನಾಕಾರರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟರು.
ಪ್ರತಿ ಟನ್ ಕಬ್ಬಿಗೆ 3500 ರೂ. ದರ ನಿಗದಿ ಪಡಿಸುವಂತೆ ಒತ್ತಾಯಿಸಿ ಬೆಳಗಾವಿ ಜಿಲ್ಲೆಯಲ್ಲಿ ರೈತರು ನಡೆಸುತ್ತಿರುವ ಹೋರಾಟ ಶುಕ್ರವಾರ ತೀವ್ರ ಸ್ವರೂಪ ಪಡೆದಿದೆ. ಹುಕ್ಕೇರಿ ತಾಲೂಕಿನ ಹತ್ತರಗಿ ಟೋಲ್ ಗೇಟ್ ಬಳಿ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನಾಕಾರರು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಬೆಳಗಾವಿ ಚನ್ನಮ್ಮ ವೃತ್ತದಲ್ಲೂ ಪ್ರತಿಭಟನೆ:
ಮತ್ತೊಂದೆಡೆ ಬೆಳಗಾವಿ ನಗರದಲ್ಲಿ ಕೇಂದ್ರ ಬಸ್ ನಿಲ್ದಾಣದಿಂದ ರಾಣಿ ಚನ್ನಮ್ಮ ವೃತ್ತದವರೆಗೆ ತಲೆ ಮೇಲೆ ಕಬ್ಬು ಹೊತ್ತುಕೊಂಡು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಪ್ರತಿಭಟನಾ ರ್ಯಾಲಿ ನಡೆಸಲಾಯಿತು. ಈ ವೇಳೆ ಚನ್ನಮ್ಮ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿದ ಹೋರಾಟಗಾರರು, ಟೈಯರ್ಗೆ ಬೆಂಕಿ ಹಚ್ಚಿ ರಾಜ್ಯ ಸರ್ಕಾರ ಮತ್ತು ಸಕ್ಕರೆ ಕಾರ್ಖಾನೆ ಮಾಲೀಕರ ವಿರುದ್ಧ ಆಕ್ರೋಶ ಹೊರ ಹಾಕಿದರು.
3,500 ರೂ. ದರ ಘೋಷಿಸುವವರೆಗೆ ಹೋರಾಟ ಮುಂದುವರಿಕೆ:
ಸುಮಾರು ಒಂದು ಗಂಟೆಗೂ ಅಧಿಕ ಕಾಲ ಹೆದ್ದಾರಿ ಬಂದ್ ಆಗಿದ್ದ ಪರಿಣಾಮ ಸಾವಿರಾರು ವಾಹನಗಳು ಸಾಲುಗಟ್ಟಿ ನಿಂತಿದ್ದವು. ಇದರಿಂದ ವಾಹನ ಸವಾರರು ಪರದಾಡಿದರು. ಒಂದು ಗಂಟೆ ಬಳಿಕ ಸರ್ವೀಸ್ ರಸ್ತೆಯಲ್ಲಿ ರೈತರು ಹೋರಾಟ ಶುರು ಮಾಡಿದ್ದಾರೆ. ಇಲ್ಲಿಯೇ ಅಡುಗೆ ಕೂಡ ಮಾಡುತ್ತಿದ್ದಾರೆ. 3,500 ರೂ. ದರ ಘೋಷಿಸುವವರೆಗೆ ಹೋರಾಟ ಮುಂದುವರಿಯುತ್ತದೆ ಎಂದು ಪ್ರತಿಭಟನಾಕಾರರು ಎಚ್ಚರಿಸಿದ್ದಾರೆ. ಸದ್ಯ ರಾಷ್ಟ್ರೀಯ ಹೆದ್ದಾರಿಗಳಲ್ಲಿ ವಾಹನ ಸಂಚಾರಕ್ಕೆ ಸಾರ್ವಜನಿಕರಿಗೆ ಪೊಲೀಸರು ಮುಕ್ತ ಮಾಡಿದ್ದಾರೆ.
ಈ ವೇಳೆ ಮಾತನಾಡಿದ ರೈತ:
ಕಲ್ಲಯ್ಯ ಮಠಮತಿ, 3500 ರೂ. ದರ ನೀಡಲು ಇವರಿಗೆ ಏನು ತ್ರಾಸ ಆಗುತ್ತದೆ..? ನಾವೇನು ಹೆಚ್ಚಿಗೆ ಬೇಡುತ್ತಿಲ್ಲ. ವರ್ಷದಿಂದ ವರ್ಷಕ್ಕೆ ಕಾರ್ಖಾನೆಗಳನ್ನು ಹೆಚ್ಚೆಚ್ಚು ಆರಂಭಿಸುತ್ತಿದ್ದಾರೆ. ಚುನಾವಣೆಗಳಲ್ಲಿ ಸಾವಿರಾರು ರೂ. ದುಡ್ಡು ಹಂಚುವ ಇವರು ನಾವು ಕಷ್ಟಪಟ್ಟು ಬೆಳೆದ ಕಬ್ಬಿಗೆ ಯಾಕೆ ಸೂಕ್ತ ಬೆಲೆ ಕೊಡುವುದಿಲ್ಲ. ನಾವೇ ಕಬ್ಬು ಬೆಳೆಯದಿದ್ದರೆ ಇವರ ಕಾರ್ಖಾನೆಗಳು ಹೇಗೆ ನಡೆಯುತ್ತವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
1 ಎಕರೆ ಕಬ್ಬು ಬೆಳೆಸಲು ಏನಿಲ್ಲ ಅಂದರೂ 35 ಸಾವಿರ ರೂ.ಖರ್ಚಾಗುತ್ತದೆ. ನಮ್ಮ ಭಾಗದಲ್ಲಿ ಎಕರೆಗೆ ಬರುವುದು 35-40 ಟನ್ ಕಬ್ಬು ಮಾತ್ರ. ಇದರಲ್ಲಿ ಇವರು ಕೊಡುವ ದರ, ಖರ್ಚು ತೆಗೆದರೆ ನಮಗೆ ಉಳಿಯುವುದು ಎಷ್ಟು..? ಅದರಲ್ಲಿ ನಮ್ಮ ಕುಟುಂಬದ ಜೀವನ ನಡೆಸುವುದಾದರೂ ಹೇಗೆ..? ಮೊನ್ನೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ರೈತರು ಮತ್ತು ಕಾರ್ಖಾನೆಯವರು ಇಬ್ಬರೂ ಉಳಿಯಬೇಕು ಎನ್ನುತ್ತಾರೆ. ಹಾಗಾದರೆ, ಲಾಭ ಆಗದೇ ಅವರು ಮತ್ತೊಂದು ಕಾರ್ಖಾನೆ ಆರಂಭಿಸುತ್ತಿದ್ದಾರಾ ಎಂದು ಪ್ರಶ್ನಿಸಿದರು.
ಇನ್ನಷ್ಟು ಓದಿರಿ:
ಮನೆಯಲ್ಲೇ ಕೇಸರಿ ಬೆಳೆದ ದೊಡ್ಡಬಳ್ಳಾಪುರದ ಯುವ ಐಟಿ ಉದ್ಯೋಗಿ