BELAGAVI NEWS :
ಬೆಂಗಳೂರು: ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ರೈತರ ಹಿತಾಸಕ್ತಿ, ರಾಜ್ಯದ ಕುಡಿಯುವ ನೀರಿನ ಅಗತ್ಯ ಹಾಗೂ ನ್ಯಾಯಾಲಯದ ಆದೇಶ ಈ ಮೂರನ್ನು ಸಮತೋಲನದಲ್ಲಿ ನಿರ್ವಹಿಸಬೇಕಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ಸಿಎಂ ಗೃಹ ಕಚೇರಿ " ಕೃಷ್ಣಾ " ಬಳಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, " ನಾವು ರೈತರನ್ನು ಉಳಿಸಬೇಕು. ಜನರಿಗೆ ಕುಡಿಯುವ ನೀರನ್ನು ಪೂರೈಸಬೇಕು. ತಮಿಳುನಾಡಿಗೆ ನೀರು ಹರಿಸುವ ಕುರಿತು ನ್ಯಾಯಾಲಯ ನೀಡಿರುವ ಆದೇಶವನ್ನು ಪಾಲಿಸಬೇಕು. ಜುಲೈ 15ರಂದು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಸಭೆ ನಡೆಯಲಿದ್ದು, ಅಲ್ಲಿ ಕರ್ನಾಟಕದ ಪರವಾಗಿ ನಮ್ಮ ವಾದವನ್ನು ಮಂಡಿಸುತ್ತೇವೆ. ಸಭೆಯ ಬಳಿಕ ಮುಂದಿನ ತೀರ್ಮಾನವನ್ನು ತಿಳಿಸುತ್ತೇವೆ" ಎಂದು ಹೇಳಿದರು.
ಮಂಡ್ಯ ಜಿಲ್ಲೆ ಶಾಸಕರು ಕಾವೇರಿ ನೀರು ಬಿಡುಗಡೆ ಕುರಿತು ಮನವಿ ಮಾಡಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, " ಮಂಡ್ಯ ಮತ್ತು ಶ್ರೀರಂಗಪಟ್ಟಣದ ಶಾಸಕರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಭೇಟಿಯಾಗಿ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ಸಭೆಯ ಬಳಿಕ ಸರ್ಕಾರದ ನಿರ್ಧಾರವನ್ನು ಪ್ರಕಟಿಸುತ್ತೇವೆ" ಎಂದು ತಿಳಿಸಿದರು.
ಕರ್ನಾಟಕ ಲೋಕಸೇವಾ ಆಯೋಗದ (KPSC) ಅಧ್ಯಕ್ಷರ ಅಮಾನತು ಕುರಿತು ಪ್ರತಿಕ್ರಿಯಿಸಿದ ಮುಖ್ಯಮಂತ್ರಿ, "ರಾಜ್ಯಪಾಲರು ಆದೇಶ ಹೊರಡಿಸಿದ್ದಾರೆ. ಅವರ ನಿರ್ದೇಶನದಂತೆ ಆಯೋಗದಲ್ಲಿರುವ ಹಿರಿಯ ಸದಸ್ಯರಿಗೆ ತಾತ್ಕಾಲಿಕ ಜವಾಬ್ದಾರಿ ನೀಡುವಂತೆ ಸೂಚನೆ ನೀಡಿದ್ದೇನೆ" ಎಂದು ಹೇಳಿದರು.
ತಿರುಪತಿಯಲ್ಲಿ ಮೊದಲ ಆರತಿ ರಾಜ್ಯದ ಜನಪ್ರತಿನಿಧಿಗಳು, ಅಧಿಕಾರಿಗಳಿಗೆ: ತಿರುಪತಿಯಲ್ಲಿ ಕರ್ನಾಟಕಕ್ಕೆ ಸಾಂಪ್ರದಾಯಿಕವಾಗಿ ದೊರೆಯುವ ಮೊದಲ ಆರತಿ ಗೌರವದ ಕುರಿತು ಮಾತನಾಡಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಮಹಾರಾಜರ ಕಾಲದಿಂದಲೂ ಈ ಸಂಪ್ರದಾಯ ಮುಂದುವರಿದಿದೆ ಎಂದು ಹೇಳಿದರು.
"ಪ್ರತಿದಿನ ಒಬ್ಬ ಅಧಿಕಾರಿ ಮೊದಲ ಆರತಿ ಸ್ವೀಕರಿಸುತ್ತಾರೆ. ಇನ್ನು ಮುಂದೆ ಆ ಅಧಿಕಾರಿಯ ಬದಲಿಗೆ ಕರ್ನಾಟಕದಿಂದ ತಿರುಪತಿಗೆ ತೆರಳುವ ಜನಪ್ರತಿನಿಧಿಗಳು, ನ್ಯಾಯಧೀಶರು, ಅಧಿಕಾರಿಗಳು, ಸಂಸದರು, ಮೇಯರ್ ಗಳು ಹಾಗೂ ತಹಸೀಲ್ದಾರ್ ಗಳಿಗೆ ಈ ಅವಕಾಶ ಕಲ್ಪಿಸಲಾಗುತ್ತದೆ. ಇದು ಯಾವುದೇ ನಿರ್ದಿಷ್ಟ ರಾಜಕೀಯ ಪಕ್ಷಕ್ಕೆ ಸೀಮಿತವಾಗಿರುವುದಿಲ್ಲ. ಯಾವ ಪಕ್ಷದ ಜನಪ್ರತಿನಿಧಿಗಳೇ ಆಗಿದ್ದರು, ನಿಗದಿತ ಮಾರ್ಗಸೂಚಿಗಳ ಅನ್ವಯ ಈ ಸೌಲಭ್ಯ ಪಡೆಯಬಹುದು" ಎಂದು ತಿಳಿಸಿದರು.
" ಸರ್ಕಾರದ ಈ ನಿರ್ಧಾರ ಮೊದಲ ಆರತಿ ವಿಚಾರಕ್ಕೆ ಮಾತ್ರ ಸೀಮಿತವಾಗಿರಲಿದೆ. ತಿರುಪತಿ ದೇವಸ್ಥಾನದ ಆಡಳಿತ ಮಂಡಳಿಯ ಇತರ ಎಲ್ಲಾ ಮಾರ್ಗಸೂಚಿಗಳು ಯಥಾಸ್ಥಿತಿಯಲ್ಲಿ ಮುಂದುವರಿಯಲಿದ್ದು, ಅವುಗಳಲ್ಲಿ ಯಾವುದೇ ಹಸ್ತಕ್ಷೇಪ ಮಾಡುವುದಿಲ್ಲ" ಎಂದು ಮುಖ್ಯಮಂತ್ರಿ ಸ್ಪಷ್ಟಪಡಿಸಿದರು.
ಇದೇ ವೇಳೆ, ವಿಧಾನಮಂಡಲದ ಮುಂಗಾರು ಅಧಿವೇಶನ ಕುರಿತು ಪ್ರತಿಕ್ರಿಯಿಸಿದ ಅವರು, " ಆಗಸ್ಟ್ 6 ರಿಂದ ಅಧಿವೇಶನ ಆರಂಭಿಸಲು ತೀರ್ಮಾನಿಸಲಾಗಿದೆ" ಎಂದು ತಿಳಿಸಿದರು. " ಒಂದು ದಿನದ ಕೆಲಸದ ನಿಮಿತ್ತ ನಾನು ದೆಹಲಿಗೆ ತೆರಳಲಿದ್ದೇನೆ. ಬಳಿಕ ಪಕ್ಷದ ಹಿರಿಯ ನಾಯಕರು ಸಭೆ ದಿನಾಂಕವನ್ನು ಅಂತಿಮಗೊಳಿಸಲಿದ್ದು, ನಂತರ ಮತ್ತೆ ದೆಹಲಿಗೆ ಭೇಟಿ ನೀಡುತ್ತೇನೆ" ಎಂದು ಹೇಳಿದರು.