Belagavi News :
ಅಜ್ಮೀರದ ಜಗನ್ನಾಥ ದೇಗುಲದಲ್ಲೂ ಪುರಿಯ ಸಂಪ್ರದಾಯದ ಆಚರಣೆ
ಅಜ್ಮೀರ್: ಓಡಿಸಾದ ಪುರಿ ಜಗನ್ನಾಥ ಧಾಮದಲ್ಲಿ ಸಂಭ್ರಮ ಆರಂಭವಾಗಿದ್ದು, ಸ್ನಾನ ಯಾತ್ರೆಯ ಆಚರಣೆಗಳು ಪೂರ್ಣಗೊಂಡಿವೆ. ಪುರಿ ಶ್ರೀ ಮಂದಿರದ ಸಾಂಪ್ರದಾಯಿಕ ಆಚರಣೆಗಳು ಸುಮಾರು 2,005ಕಿ.ಮೀ ದೂರದಲ್ಲಿರುವ ರಾಜಸ್ಥಾನದ ಅಜ್ಮೀರದ ಜಗನ್ನಾಥ ದೇಗುಲದಲ್ಲೂ ಭಕ್ತಿ ಮತ್ತು ನಂಬಿಕೆಯೊಂದಿಗೆ ಮುಂದುವರೆಯುತ್ತಿವೆ.
ಪುರಿ ದೇಗುಲದ ಸಂಪ್ರದಾಯದಂತೆಯೇ ಇಲ್ಲಿಯೂ ಸ್ನಾನ ಪೂರ್ಣಿಮೆಯಂದು ಭಗವಾನ್ ಜಗನ್ನಾಥ, ಬಲಭದ್ರ ಹಾಗೂ ದೇವಿ ಸುಭದ್ರೆಯರ ತ್ರಿಮೂರ್ತಿಗಳಿಗೆ ವಿಧಿವತ್ತಾಗಿ ಸ್ನಾನ ಮಾಡಿಸಲಾಗುತ್ತದೆ. ಬಳಿಕ ದೇವರುಗಳನ್ನು ಹದಿನೈದು ದಿನಗಳ ಕಾಲ ಏಕಾಂತದಲ್ಲಿ ಇರಿಸುವ ಆಚರಣೆಯು ಇಲ್ಲಿ ಪಾಲಿಸಲಾಗುತ್ತದೆ.
ಇಲ್ಲಿನ ಭಕ್ತರ ಪ್ರಕಾರ, ಅಜ್ಮೀರದ ಜಗನ್ನಾಥ ದೇಗುಲದ ಆಚರಣೆಗಳು ಕೇವಲ ಸಾಂಕೇತಿಕವಾಗಿಲ್ಲ; ಅವು ಭಕ್ತರೊಂದಿಗೆ ಆಳವಾದ ಭಾವನಾತ್ಮಕ ಸಂಬಂಧ ಹೊಂದಿವೆ. ಭಗವಂತನನ್ನು ಕುಟುಂಬದ ಸದಸ್ಯನಂತೆ ಕಾಣುವ ಪರಂಪರೆಯ ಭಾಗವಾಗಿ, ಆತ ನಗುತ್ತಾನೆ, ಪ್ರಯಾಣಿಸುತ್ತಾನೆ, ವಿಶ್ರಾಂತಿ ಪಡೆಯುತ್ತಾನೆ, ಅನಾರೋಗ್ಯಕ್ಕೆ ಒಳಗಾಗಿ ಮತ್ತೆ ಚೇತರಿಸಿಕೊಳ್ಳುತ್ತಾನೆ ಎಂಬ ಭಾವನೆಯೊಂದಿಗೆ ಭಕ್ತರು ಸೇವೆ ಸಲ್ಲಿಸುತ್ತಾರೆ.
ಈ ನಂಬಿಕೆ ಮತ್ತು ಸಂಪ್ರದಾಯವೇ ಪುರಿಯ ಜಗನ್ನಾಥ ಧಾಮದ ಆಚರಣೆಗಳನ್ನು ಅಜ್ಮೀರದಲ್ಲೂ ಶ್ರದ್ಧೆಯಿಂದ ಮುಂದುವರೆಸಲು ಕಾರಣವಾಗಿದೆ ಎಂದು ಭಕ್ತರು ಹೇಳುತ್ತಾರೆ.
92 ವರ್ಷಗಳ ಇತಿಹಾಸದ ಅಜ್ಮೀರ್ ಜಗನ್ನಾಥ ದೇಗುಲದಲ್ಲಿ ಪುರಿ ಸಂಪ್ರದಾಯದ ಆಚರಣೆ
ರಾಜಸ್ಥಾನದ ಅಜ್ಮೀರದಲ್ಲಿರುವ ಶ್ರೀ ಜಗನ್ನಾಥ ದೇಗುಲವೂ 92 ವರ್ಷಗಳ ಇತಿಹಾಸ ಹೊಂದಿದ್ದು, ಪುರಿ ಜಗನ್ನಾಥ ಧಾಮದ ಸಂಪ್ರದಾಯಗಳನ್ನು ಇಂದಿಗೂ ಅದೇ ಭಕ್ತಿ ಮತ್ತು ಶ್ರದ್ಧೆಯಿಂದ ಪಾಲಿಸಿಕೊಂಡು ಬರುತ್ತಿದೆ. ರಾಜಸ್ಥಾನದಲ್ಲಿ ಜಗನ್ನಾಥನಿಗೆ ಮೀಸಲಾದ ಪ್ರಮುಖ ಹಾಗೂ ಏಕೈಕ ದೇಗುಲಗಳಲ್ಲಿ ಇದು ಒಂದಾಗಿದೆ.
ದೇಗುಲ ನಿರ್ಮಾಣಕ್ಕೂ ಮುನ್ನ ಪುರಿಯಿಂದ ಭಗವಾನ್ ಜಗನ್ನಾಥ, ಬಲಭದ್ರ, ಸುಭದ್ರ ಹಾಗೂ ಶಶಿಗೋಪಾಲರ ಪವಿತ್ರ ವಿಗ್ರಹಗಳನ್ನು ತರಲಾಗಿತ್ತು. ಕೇವಲ ವಿಗ್ರಹಗಳನ್ನು ಮಾತ್ರವಲ್ಲದೆ, ಪುರಿ ಜಗನ್ನಾಥ ದೇಗುಲದ ಆಚರಣೆಗಳು ಮತ್ತು ಸಾಂಪ್ರದಾಯಗಳ ಆತ್ಮವನ್ನು ಇಲ್ಲಿ ಸ್ಥಾಪಿಸಲಾಗಿದೆ ಎಂದು ಭಕ್ತರು ನಂಬುತ್ತಾರೆ.
ಪ್ರತಿ ದಿನ ಸುಮಾರು 300ಕ್ಕೂ ಹೆಚ್ಚು ಭಕ್ತರು ಈ ದೇಗುಲಕ್ಕೆ ಭೇಟಿ ನೀಡುತ್ತಾರೆ. ಏಕಾದಶಿ ಸೇರಿದಂತೆ ವಿಶೇಷ ಧಾರ್ಮಿಕ ಸಂದರ್ಭಗಳಲ್ಲಿ ಭಕ್ತರ ಸಂಖ್ಯೆ ಮತ್ತಷ್ಟು ಹೆಚ್ಚಾಗುತ್ತದೆ.
ಈ ವರ್ಷ ಜೂನ್ 30 ರಿಂದ ಜುಲೈ 15ರವರೆಗೆ ಸ್ನಾನ ಯಾತ್ರೆಯ ಬಳಿಕ ನಡೆಯುವ ವಿಶೇಷ ಆಚರಣೆಯ ಭಾಗವಾಗಿ, ಭಗವಾನ್ ಜಗನ್ನಾಥರನ್ನು 15 ದಿನಗಳ ಕಾಲ ಏಕಾಂತದಲ್ಲಿ ಇರಿಸಲಾಗುತ್ತದೆ. ಈ ಅವಧಿಯಲ್ಲಿ ಭಕ್ತರಿಗೆ ದರ್ಶನಕ್ಕೆ ಅವಕಾಶ ಇರುವುದಿಲ್ಲ.
ದೇವರು ಅನಾರೋಗ್ಯಕ್ಕೆ ಒಳಗಾಗಿದ್ದಾರೆ ಎಂಬ ಭಕ್ತಿಯ ಪರಂಪರೆಯ ನಂಬಿಕೆಯಂತೆ, ಅರ್ಚಕರು ಜಗನ್ನಾಥರಿಗೆ ಗಿಡಮೂಲಿಕೆಗಳ ಆಯುರ್ವೇದದ ಕಷಾಯ, ಲಘು ಗಂಜಿ ಸೇರಿದಂತೆ ವಿಶೇಷ ಆರೈಕೆಯನ್ನು ಮಾಡುತ್ತಾರೆ. ಕುಟುಂಬದ ಸದಸ್ಯರೊಬ್ಬರು ಅನಾರೋಗ್ಯಕ್ಕೆ ಒಳಗಾದಾಗ ಹೇಗೆ ಕಾಳಜಿ ವಹಿಸುತ್ತಾರೋ, ಅದೇ ರೀತಿಯ ಪ್ರೀತಿಯಿಂದ ದೇವರ ಸೇವೆ ಮಾಡಲಾಗುತ್ತದೆ ಎಂದು ದೇಗುಲದ ಭಕ್ತರು ಹೇಳುತ್ತಾರೆ.
ಭಕ್ತಿಯ ಮೇಲೆ ನಿರ್ಮಿಸಲಾದ 92 ವರ್ಷಗಳ ಪರಂಪರೆ:
ಅಜ್ಮೀರದ ಶ್ರೀ ಜಗನ್ನಾಥ ದೇಗುಲವು ಭಕ್ತಿ ಮತ್ತು ಸಾಂಪ್ರದಾಯದ ಆಧಾರದ ಮೇಲೆ ಬೆಳೆದಿರುವ ಐತಿಹಾಸಿಕ ಕ್ಷೇತ್ರವಾಗಿದೆ. ದೇವಾಲಯಗಳ ಟ್ರಸ್ಟ್ ಸಮಿತಿಯ ಅಧ್ಯಕ್ಷ ಸಂಜಯ್ ಕಂಡೋಯ ಅವರ ಪ್ರಕಾರ, ಸುಮಾರು 92 ವರ್ಷಗಳ ಹಿಂದೆ ಕೈಗಾರಿಕೋದ್ಯಮಿ ರಾಮ್ ರಿಚ್ಪಾಲ್ ಸಿರಿಯಾ ಅವರು ಈ ದೇಗುಲವನ್ನು ಸ್ಥಾಪಿಸಿದರು.
ದೇಗುಲ ಸ್ಥಾಪನೆಯಾದ ಬಳಿಕ ಹಲವು ವರ್ಷಗಳ ಕಾಲ ಸಿರಿಯ ಕುಟುಂಬವೇ ದೇಗುಲದ ನಿರ್ವಹಣೆ ಹಾಗೂ ದೈನಂದಿನ ಪೂಜಾ ಕಾರ್ಯಗಳನ್ನು ವೈಯಕ್ತಿಕವಾಗಿ ನೋಡಿಕೊಂಡಿತು. ಬಳಿಕ ಶ್ರೀ ಅಗರ್ವಾಲ್ ಮಾರ್ವಾರಿ ಪಂಚಾಯತ್ ಧಾಡಾಗೆ ದೇಗುಲದ ನಿರ್ವಹಣೆ ಜವಾಬ್ದಾರಿ ವಹಿಸಲಾಯಿತು. ಅಲ್ಲಿಂದ ಇಂದಿನವರೆಗೂ ಧಾರ್ಮಿಕ ಆಚರಣೆಗಳು ಮತ್ತು ಸಂಪ್ರದಾಯಗಳನ್ನು ಮುಂದುವರೆಸಿಕೊಂಡು ಬರಲಾಗುತ್ತಿದೆ.
ದೇಗುಲದ ಅಧಿಕೃತ ದಾಖಲೆಗಳ ಪ್ರಕಾರ, ಈ ಕ್ಷೇತ್ರವು ಸುಮಾರು 90 ವರ್ಷಗಳಿಗೂ ಹೆಚ್ಚು ಇತಿಹಾಸ ಹೊಂದಿದೆ. ದೇಗುಲ ಉದ್ಘಾಟನೆಯದಾಗಿನಿಂದಲೂ ಇಲ್ಲಿ ಒಂದೇ ವಿಗ್ರಹಗಳನ್ನು ಪೂಜಿಸಲಾಗುತ್ತಿದೆ.
ಪುರಿ ಜಗನ್ನಾಥ ದೇಗುಲದಲ್ಲಿ ನಡೆಯುವಂತೆ ಇಲ್ಲಿ ನಬಕಲೇಬರಾ ಆಚರಣೆಯ ಮೂಲಕ ವಿಗ್ರಹಗಳನ್ನು ನಿಯಮಿತವಾಗಿ ಬದಲಾಯಿಸುವ ಪದ್ಧತಿ ಇಲ್ಲ. ಬದಲಾಗಿ, ಅಜ್ಮೀರದ ದೇಗುಲವು ತನ್ನದೇ ಆದ ವಿಶೇಷ ಸಂಪ್ರದಾಯ ಮತ್ತು ಆಚರಣೆಗಳನ್ನು ಅನುಸರಿಸುತ್ತಿದೆ ಎಂದು ದೇಗುಲದ ಆಡಳಿತ ಮಂಡಳಿ ತಿಳಿಸಿದೆ.
ಪುರಿಯಲ್ಲಿ, ಜಗನ್ನಾಥ ದೇವರ ವಿಗ್ರಹಗಳನ್ನು ಬದಲಾಯಿಸಲಾಗುತ್ತದೆ, ಆದರೆ ಇಲ್ಲಿ ಆಷಾಡ ಮಾಸದಲ್ಲಿ ವಿಗ್ರಹಗಳ ಬಣ್ಣವನ್ನು ಮಾತ್ರ ನವೀಕರಿಸಲಾಗುತ್ತದೆ. ಮುಂದಿನ ಹೆಚ್ಚುವರಿ ಆಷಾಢ ಮಾಸ 2034ರಲ್ಲಿ ಬರುತ್ತದೆ. ಆಗ ನಾವು ವಿಗ್ರಹಗಳನ್ನು ಬದಲಾಯಿಸಲು ಮುಂದಾಗಿದ್ದು, ಅದಕ್ಕೂ ಪುರಿಯಿಂದಲೇ ತರಿಸಲಾಗುವುದು ಎಂದರು.
ಪವಿತ್ರ ಸ್ನಾನ, ಏಕಾಂತ ಆಚರಣೆ : ಅಜ್ಮೀರದಲ್ಲೂ ಪುರಿ ಸಂಪ್ರದಾಯದ ಅನುಸರಣೆ
ಅಜ್ಮೀರದ ಶ್ರೀ ಜಗನ್ನಾಥ ದೇಗುಲದಲ್ಲೂ ಪುರಿ ಜಗನ್ನಾಥ ದೇಗುಲದಲ್ಲೂ ಪುರಿ ಜಗನ್ನಾಥ ಧಾಮದ ಸಂಪ್ರದಾಯದಂತೆ ವಿಶೇಷ ಆಚರಣೆಗಳು ನಡೆಯುತ್ತಿವೆ. ಜೂನ್ 29 ರಂದು ಸಾಂಪ್ರದಾಯಿಕ ಪೂಜೆ, ಸಂಗೀತದೊಂದಿಗೆ ಗರ್ಭಗುಡಿಯಿಂದ ವಿಗ್ರಹಗಳನ್ನು ಹೊರ ತಂದು ವಿಶೇಷ ಸ್ನಾನ ಕಾರ್ಯಕ್ರಮ ನೆರವೇರಿಸಲಾಯಿತು.
ಸುಮಾರು ನಾಲ್ಕು ಗಂಟೆಗಳ ಕಾಲ ನಡೆದ ಈ ಆಚರಣೆಯಲ್ಲಿ ಹಣ್ಣು, ಸುವಾಸನೆಯುಕ್ತ ನೀರು, ಪಂಚಾಮೃತ ಹಾಗೂ 1008 ಹೂಜಿಗಳ ಪವಿತ್ರ ನೀರಿನಿಂದ ಭಗವಾನ ಜಗನ್ನಾಥ, ಬಲಭದ್ರ ಹಾಗೂ ಸುಭದ್ರೆಯರಿಗೆ ಅಭಿಷೇಕ ಮಾಡಲಾಯಿತು.
ಪುರಿ ಶ್ರೀ ಮಂದಿರದ ಸಾಂಪ್ರದಾಯದಂತೆ ಇಲ್ಲಿಯೂ ಸ್ನಾನ ಯಾತ್ರೆಯ ಬಳಿಕ ಭಗವಂತನು ಅನಾರೋಗ್ಯಕ್ಕೆ ಒಳಗಾಗುತ್ತಾನೆ ಎಂಬ ನಂಬಿಕೆಯೊಂದಿಗೆ 15 ದಿನಗಳ ಕಾಲ ಏಕಾಂತದಲ್ಲಿ ಇರಿಸುವ ಆಚರಣೆ ನಡೆಯುತ್ತದೆ. ಈ ಅವಧಿಯಲ್ಲಿ ಭಕ್ತರಿಗೆ ದರ್ಶನ ಇರುವುದಿಲ್ಲ. 16ನೇ ದಿನ ನಯನೋತ್ಸವದೊಂದಿಗೆ ಮತ್ತೆ ದರ್ಶನ ಆರಂಭವಾಗಲಿದ್ದು, ಬಳಿಕ ರಥ ಯಾತ್ರೆಯ ಸಂಭ್ರಮ ನಡೆಯಲಿದೆ. ಏಳು ದಿನಗಳ ಕಾಲ ಅತ್ತೆ ಮನೆಯಲ್ಲಿ ಇರುವ ಜಗನ್ನಾಥನನ್ನು ನಂತರ ಭವ್ಯ ಮೆರವಣಿಗೆಯ ಮೂಲಕ ಮತ್ತೆ ದೇಗುಲಕ್ಕೆ ಕರೆತರಲಾಗುತ್ತದೆ.
ನಾಲ್ಕು ಪೀಳಿಗೆಯಿಂದ ಮುಂದುವರಿದ ದೇವರ ಸೇವೆ:
ದೇಗುಲದ ಆರ್ಚಕ ಪಂಡಿತ್ ಭರತ್ ಶರ್ಮ ಮಾತನಾಡಿ, ತಮ್ಮ ಕುಟುಂಬದ ನಾಲ್ಕನೇ ತಲೆಮಾರಿನವರು ಈಗ ಜಗನ್ನಾಥನ ಸೇವೆಯಲ್ಲಿ ತೊಡಗಿದ್ದಾರೆ ಎಂದು ತಿಳಿಸಿದ್ದಾರೆ. ಪೂರ್ವಜರು ಹಾಗೂ ಸಂತರು-ಋಷಿಗಳು ಪುರಿಯಿಂದ ಅಜ್ಮೀರ್ ಗೆ ವಿಗ್ರಹಗಳನ್ನು ತಂದರು ಎಂಬ ನಂಬಿಕೆ ಇದೆ ಎಂದು ಅವರು ಹೇಳಿದ್ದಾರೆ.
ಪುರಿ ಸಂಪ್ರದಾಯದಂತೆ ಜೂನ್ 30 ರಿಂದ ಜುಲೈ 15 ರವರೆಗೆ ಭಕ್ತರಿಗೆ ಭಗವಂತನ ದರ್ಶನ ಇರುವುದಿಲ್ಲ. ಜುಲೈ 16ರಂದು ನಯನೋತ್ಸವದ ಬಳಿಕ ಮತ್ತೆ ದರ್ಶನ ಆರಂಭವಾಗಿ ರಥಯಾತ್ರೆ ನಡೆಯಲಿದೆ ಎಂದು ಅವರು ವಿವರಿಸಿದ್ದಾರೆ.
ಕಳೆದ ಎರಡು ವರ್ಷಗಳಿಂದ ಪ್ರತಿದಿನ ದೇಗುಲಕ್ಕೆ ಭೇಟಿ ನೀಡುವ ಭಕ್ತ ಮಹೇಂದ್ರ ಗೆಹ್ಲೋಟ್, ಈ ಆಚರಣೆಗಳು ಕೇವಲ ಸಂಪ್ರದಾಯವಲ್ಲ, ಭಕ್ತಿಯ ಅನುಭವವಾಗಿದೆ ಎಂದು ಹೇಳಿದ್ದಾರೆ. ಅಜ್ಮೀರದ ಜಗನ್ನಾಥ ದೇಗುಲಕ್ಕೆ ಭೇಟಿ ನೀಡಲು ಆರಂಭಿಸಿದ ಬಳಿಕ ತಾವು ಪೂರಿ ಜಗನ್ನಾಥ ಧಾಮಕ್ಕೂ ತೆರಳಿ, ಅಲ್ಲಿ ಮೊದಲ ಬಾರಿಗೆ ಭಗವಂತನ 15 ದಿನಗಳ ಏಕಾಂತ ಆಚರಣೆಯನ್ನು ವೀಕ್ಷಿಸಿದ್ದಾಗಿ ತಿಳಿಸಿದ್ದಾರೆ.
ಭಕ್ತರ ಮತ್ತು ಭಗವಂತನ ನಡುವಿನ ಸಂಬಂಧದ ಪ್ರತೀಕವಾದ ಏಕಾಂತ ಆಚರಣೆ
ಅಜ್ಮೀರದ ಜಗನ್ನಾಥ ದೇಗುಲದ ಆಚರಣೆಗಳ ಕುರಿತು ಮಾತನಾಡಿದ ಭಕ್ತರು, ದೇವರೇ ಏಕಾಂತದ ಅವಧಿಯಲ್ಲಿ ದೇವರು ಕೂಡ ಭಕ್ತನಂತೆ ಅನಾರೋಗ್ಯಕ್ಕೆ ಒಳಗಾಗುತ್ತಾನೆ ಎಂಬ ನಂಬಿಕೆಯು ಭಗವಂತನನ್ನು ಇನ್ನಷ್ಟು ಹತ್ತಿರವಾಗಿರುತ್ತದೆ ಎಂದು ಹೇಳಿದರು. "ನಮ್ಮಂತೆ ದೇವರು ಕೂಡ ನರಳುತ್ತಾನೆ ಎಂಬ ಭಾವನೆ ದೇವರು ಮತ್ತು ಭಕ್ತನ ನಡುವಿನ ಸಂಬಂಧವನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ. ದೇಗುಲದ ಆಧ್ಯಾತ್ಮಿಕ ಶಕ್ತಿ ಅದ್ಭುತವಾಗಿದೆ" ಎಂದು ಅವರು ಅಭಿಪ್ರಾಯ ಪಟ್ಟರು.
ಅಜ್ಮೀರ ಮತ್ತು ಪುರಿ ಜಗನ್ನಾಥ ಧಾಮದ ನಡುವೆ ಯಾವುದೇ ವ್ಯತ್ಯಾಸವನ್ನು ತಾವು ಕಂಡಿಲ್ಲ ಎಂದು ಅವರು ಹೇಳಿದರು. ಪುರಿ ಆಗಲಿ ಅಥವಾ ಅಜ್ಮೀರವಾಗಲಿ, ಜಗನ್ನಾಥನ ಆರಾಧನೆಯಲ್ಲಿ ಒಂದೇ ರೀತಿಯ ಭಕ್ತಿ ಮತ್ತು ಅನುಭವ ದೊರೆಯುತ್ತದೆ ಎಂದು ತಿಳಿಸಿದರು.
ಸದಾಚಾರದಿಂದ ತಮ್ಮ ಕರ್ಮಗಳನ್ನು ಪಾಲಿಸಿದರೆ, ಜಗನ್ನಾಥನು ಭಕ್ತರ ಕರ್ಮಕ್ಕೆ ಅನುಗುಣವಾಗಿ ಆಶೀರ್ವದಿಸುತ್ತಾನೆ ಎಂಬುದು ಇಲ್ಲಿನ ಭಕ್ತರ ನಂಬಿಕೆಯಾಗಿದೆ.