ಶಬರಿಮಲೆಗೆ ತೆರಳುವ ಅಯ್ಯಪ್ಪ ಮಾಲಾಧಾರಿಗಳಿಗೆ ಆರೋಗ್ಯ ಇಲಾಖೆಯಿಂದ ಮಾರ್ಗಸೂಚಿ ಪ್ರಕಟ
ಶಬರಿಮಲೆಗೆ ತೆರಳುವ ಅಯ್ಯಪ್ಪ ಮಾಲಾಧಾರಿಗಳಿಗೆ ಆರೋಗ್ಯ ಇಲಾಖೆ ಮಾರ್ಗಸೂಚಿ ಪ್ರಕಟಿಸಿದ್ದು, ಈ ವೈರಸ್ ಬಗ್ಗೆ ಎಚ್ಚರಿಕೆ ಎಚ್ಚರಿಕೆ ವಹಿಸುವಂತೆ ಸಲಹೆಗಳನ್ನು ನೀಡಿದೆ.
ಬೆಂಗಳೂರು :
ಮೆದುಳು ತಿನ್ನುವ ಅಮೀಬಾ (ನೇಗ್ಲೇ ರಿಯಾ ಫೌಲೇರಿ) ಕುರಿತಂತೆ ರಾಜ್ಯದಿಂದ ತೆರಳಿರುವ ಅಯ್ಯಪ್ಪ ಭಕ್ತ ಮಾಲಾಧಾರಿಗಳಿಗೆ ಸುರಕ್ಷತಾ ಸಲಹಾ ಮಾರ್ಗಸೂಚಿಗಳನ್ನು ಪಾಲಿಸುವಂತೆ ಕರ್ನಾಟಕ ರಾಜ್ಯ ಆರೋಗ್ಯ ಇಲಾಖೆ ಸೂಚಿಸಿದೆ.
ಕೇರಳ ರಾಜ್ಯದಲ್ಲಿರುವ ಪುಣ್ಯಕ್ಷೇತ್ರ ಶಬರಿಮಲೆ ಅಯ್ಯಪ್ಪ ದೇವಾಲಯವನ್ನು ಕಳೆದ ಭಾನುವಾರದಿಂದ ಭಕ್ತರಿಗೆ ತೆರೆಯಲಾಗಿದೆ. ಈ ಹಿನ್ನೆಲೆಯಲ್ಲಿ ದೇವಸ್ಥಾನಕ್ಕೆ ಲಕ್ಷಾಂತರ ಮಂದಿಯ ಭಕ್ತಸಾಗರವೇ ಹರಿದು ಬರುತ್ತಿದೆ. ಮತ್ತೊಂದೆಡೆ ಕೇರಳದಲ್ಲಿ ವೈರಸ್ ಭೀತಿ ಕಾಡುತ್ತಿದೆ.
ಕಾಯಿಲೆಯ ಲಕ್ಷಣಗಳೇನು?
ನೀರಿನ ಸಂಪರ್ಕದ ಏಳು ದಿನಗಳ ಒಳಗೆ ಜ್ವರ ತೀವು ತಲೆನೋವು. ವಾಕರಿಕೆ, ವಾಂತಿ, ಕುತ್ತಿಗೆ ಬಿಗಿತ, ಗೊಂದಲ, ಮಾನಸಿಕ ಸ್ಥಿತಿಯಲ್ಲಿ ಬದಲಾವಣೆ ಹಾಗೂ ವ್ಯಕ್ತಿಯ ವರ್ತನೆಯಲ್ಲಿ ಅಸ್ವಸ್ಥತೆಯ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಈ ಲಕ್ಷಣಗಳು ಕಾಣಿಸಿಕೊಂಡರೆ ಅದನ್ನು ನಿರ್ಲಕ್ಷಿಸದೆ ತುರ್ತು ಆರೈಕೆಯನ್ನು ಪಡೆಯಲು ಹತ್ತಿರದ ಸರ್ಕಾರಿ ಆಸ್ಪತ್ರೆ ಅಥವಾ ವೈದ್ಯರನ್ನು ಸಂಪರ್ಕಿಸುವಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಇಲಾಖೆಯ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅಗತ್ಯ ಸಹಕಾರ ಕೋರಿ ಕೇರಳ ಸರ್ಕಾರಕ್ಕೆ ರಾಜ್ಯದ ಸಿಎಸ್ ಡಾ.ಶಾಲಿನಿ ರಜನೀಶ್ ಪತ್ರ: ಶಬರಿಮಲೆ ಯಾತ್ರೆ ಕೈಗೊಳ್ಳುವ ರಾಜ್ಯದ ಯಾತ್ರಿಕರಿಗೆ ಅಗತ್ಯ ಸೌಲಭ್ಯ ಹಾಗೂ ಸುರಕ್ಷತೆ ನೀಡಲು ಕೋರಿ ಕೇರಳದ ಮುಖ್ಯ ಕಾರ್ಯದರ್ಶಿ ಡಾ. ಎ. ಜಯತಿಲಕ್ ಅವರಿಗೆ ರಾಜ್ಯದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಅವರು ಪತ್ರ ಬರೆದಿದ್ದಾರೆ.
ಕರ್ನಾಟಕದಿಂದ ಪ್ರತಿ ವರ್ಷ ಶಬರಿಮಲೆಗೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಅಯ್ಯಪ್ಪ ಸ್ವಾಮಿ ದರ್ಶನಕ್ಕೆ ಯಾತ್ರೆ ಕೈಗೊಳ್ಳುತ್ತಿದ್ದಾರೆ. ಈ ವೇಳೆ ವಿಶೇಷವಾಗಿ ನವೆಂಬರ್ ನಿಂದ ಜನವರಿವರೆಗೆ ಶಬರಿಮಲೆಗೆ ವಾರ್ಷಿಕ ತೀರ್ಥಯಾತ್ರೆ ಕೈಗೊಳ್ಳುವ ಕರ್ನಾಟಕದ ಹೆಚ್ಚಿನ ಸಂಖ್ಯೆಯ ಭಕ್ತರ ಸುಗಮ ಸೌಲಭ್ಯ ಮತ್ತು ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಕೇರಳ ಸರ್ಕಾರ ಅಗತ್ಯ ಸಹಕಾರ ನೀಡುವಂತೆ ಮನವಿ ಮಾಡಿದ್ದಾರೆ.
ಕರ್ನಾಟಕದ ಯಾತ್ರಿಕರು ಹೆಚ್ಚಾಗಿ ಬಳಸುವ ಪ್ರವೇಶ ಮಾರ್ಗಗಳಲ್ಲಿ, ವಿಶೇಷವಾಗಿ ಮಹತ್ವದ ದಿನಗಳಲ್ಲಿ ಹೆಚ್ಚಿನ ಜನಸಂದಣಿ ಇರುವ ಪ್ರದೇಶಗಳಲ್ಲಿ ಸೂಕ್ತ ಸಾರಿಗೆ ವ್ಯವಸ್ಥೆ ಮಾಡಬೇಕು. ಅಗತ್ಯ ವೈದ್ಯಕೀಯ ನೆರವು, ತುರ್ತು ಪ್ರತಿಕ್ರಿಯೆ ಸೇವೆಗಳು ಮತ್ತು ಪ್ರಮುಖ ಸಾರಿಗೆ ಕೇಂದ್ರಗಳಲ್ಲಿ ಆರೋಗ್ಯ ಅಧಿಕಾರಿಗಳೊಂದಿಗೆ ಸಮನ್ವಯ ನಡೆಸಬೇಕು. ಯಾತ್ರಿಕರ ಯೋಗಕ್ಷೇಮ ಖಚಿತಪಡಿಸಿಕೊಳ್ಳಲು ಸಾಕಷ್ಟು ಪೊಲೀಸ್ ಮತ್ತು ಸುರಕ್ಷತಾ ಕ್ರಮಗಳನ್ನು ವಿಶೇಷವಾಗಿ ಸೂಕ್ಷ್ಮ ಅಥವಾ ಹೆಚ್ಚಿನ ಸಾಂದ್ರತೆಯ ಸ್ಥಳಗಳಲ್ಲಿ ವ್ಯವಸ್ಥೆ ಮಾಡಬೇಕು ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಯಾತ್ರಿಕರಿಗೆ ಸೌಲಭ್ಯಗಳು ಮತ್ತು ಕಾರ್ಯವಿಧಾನಗಳನ್ನು ಸಮನ್ವಯ ಮತ್ತು ಸಹಾಯ ಮಾಡಲು ಕನ್ನಡ ಭಾಷೆ ಸೇರಿದಂತೆ ಬಹುಭಾಷೆಗಳ ಸಂವಹನ ಹೊಂದಿರುವ ಸಹಾಯ ಕೇಂದ್ರಗಳು ಅಥವಾ ಮಾಹಿತಿ ಕೇಂದ್ರಗಳ ಸ್ಥಾಪನೆ ಮಾಡಬೇಕು. ತುರ್ತು ಪರಿಸ್ಥಿತಿ ಅಥವಾ ವಿಶೇಷ ಅವಶ್ಯಕತೆಗಳ ಸಂದರ್ಭದಲ್ಲಿ ಕರ್ನಾಟಕದ ಅಧಿಕಾರಿಗಳೊಂದಿಗೆ ಸಮನ್ವಯವನ್ನು ಸಾಧಿಸಲು ಕೇರಳದಲ್ಲಿ ಸಂಪರ್ಕ ಕೇಂದ್ರವನ್ನು ಸ್ಥಾಪಿಸಬೇಕು. ಪ್ರತಿ ತೀರ್ಥಯಾತ್ರೆಯ ಋತುವಿನಲ್ಲಿ ಕೇರಳ ಸರ್ಕಾರವು ನೀಡುವ ನಿರಂತರ ಸಹಕಾರವನ್ನು ಕರ್ನಾಟಕ ಸರ್ಕಾರವು ಆತ್ಮೀಯವಾಗಿ ಗೌರವಿಸುತ್ತದೆ. ನಿಮ್ಮ ಬೆಂಬಲದೊಂದಿಗೆ, ಈ ವರ್ಷದ ತೀರ್ಥಯಾತ್ರೆಯು ಸುಗಮವಾಗಿ ಮುಂದುವರಿಯುತ್ತದೆ ಮತ್ತು ಎಲ್ಲಾ ಭಕ್ತರಿಗೆ ಸುರಕ್ಷಿತ ಮತ್ತು ಅರ್ಥಪೂರ್ಣ ಅನುಭವವನ್ನು ನೀಡುತ್ತದೆ ಎಂಬುದು ನಮಗೆ ವಿಶ್ವಾಸವಿದೆ ಎಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ.
ಈ ನಿಟ್ಟಿನಲ್ಲಿ ನಿಮ್ಮ ಸಕಾರಾತ್ಮಕ ಸ್ಪಂದನೆ ಮತ್ತು ಅಗತ್ಯ ಸಹಕಾರಕ್ಕಾಗಿ ನಾವು ಎದುರು ನೋಡುತ್ತಿದ್ದೇವೆ ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ತಮ್ಮ ಪತ್ರದಲ್ಲಿ ಕೇರಳದ ಮುಖ್ಯ ಕಾರ್ಯದರ್ಶಿಗಳಿಗೆ ತಿಳಿಸಿದ್ದಾರೆ.
ಆರೋಗ್ಯ ಇಲಾಖೆಯ ಸಲಹೆ-ಸೂಚನೆಗಳು:
ಕೇರಳ ರಾಜ್ಯದಲ್ಲಿ ನೇಗ್ಲೇರಿಯಾ ಫೌಲೇರಿಯಿಂದ ಉಂಟಾಗುವ ಅಮೀಬಿಕ್ ಮೆನಿಂಗೊಎನ್ಸೆಫಲೈಟಿಸ್ ಪ್ರಕರಣಗಳು ಕಂಡುಬಂದಿವೆ. ಈ ಹಿನ್ನೆಲೆಯಲ್ಲಿ ರಾಜ್ಯದಿಂದ ಶಬರಿಮಲೆ ಹೊರಡುವ ಯಾತ್ರಿಕರು ತಮ್ಮ ಆರೋಗ್ಯದ ಬಗ್ಗೆ, ಜಾಗರೂಕರಾಗಿರಲು ಮತ್ತು ಸೋಂಕು ತಡೆಯಲು ಅಗತ್ಯ ಮುನ್ನೆಚ್ಚರಿಕೆ ಮತ್ತು ಸುರಕ್ಷತಾ ಕ್ರಮಗಳನ್ನು ಪಾಲಿಸುವ ಕುರಿತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಆಯುಕ್ತಾಲಯವು ಮಾಹಿತಿ ನೀಡಿದೆ.
ನೇಗ್ಲೇರಿಯಾ ಫೌಲೇರಿ ಎಂಬುದು ಒಂದು ಸ್ವತಂತ್ರವಾಗಿ ಬದುಕುವ ಅಮೀಬಾ ಆಗಿದ್ದು, ಇದು ಮುಖ್ಯವಾಗಿ ಬೆಚ್ಚಗಿನ ಸಿಹಿನೀರು ಹಾಗೂ ಮಣ್ಣಿನಲ್ಲಿ ಕಂಡುಬರುತ್ತದೆ. ಉದಾಹರಣೆಗೆ ನಿಂತ ನೀರು, ಕೊಳ, ಈಜು ಕೊಳಗಳು ಹಾಗೂ ಕೆರೆಗಳಿರುತ್ತವೆ. ಈ ಸೋಂಕು ವ್ಯಕ್ತಿಯಿಂದ ವ್ಯಕ್ತಿಗೆ ಅಥವಾ ಕಲುಷಿತಗೊಂಡ ನೀರನ್ನು ಕುಡಿಯುವುದರಿಂದ ಹರಡುವುದಿಲ್ಲ.
ನೇಗ್ಲೇರಿಯಾ ಫೌಲರಿ ಅತ್ಯಂತ ವಿಷಕಾರಿ ಸೂಕ್ಷ್ಮಜೀವಿಯಾಗಿದ್ದು, ನೀರಿನಿಂದ ಮೂಗಿಗೆ ಪ್ರವೇಶಿಸಿದಾಗ ಅದು ಮೆದುಳನ್ನು ತಲುಪಿ, ಅಮೀಬಿಕ್ ಮೆನಿಂಗೊಎನ್ಸೆಫಲೈಟಿಸ್ ಎನ್ನುವ ಅಪರೂಪದ ಗಂಭೀರ ಮತ್ತು ಮಾರಣಾಂತಿಕ ಕಾಯಿಲೆಯನ್ನು ಉಂಟುಮಾಡುತ್ತದೆ. ಆದ್ದರಿಂದ ಯಾತ್ರೆಯ ಸಂದರ್ಭದಲ್ಲಿ ನಿಂತ ನೀರಿನಲ್ಲಿ ಸ್ನಾನ ಮಾಡುವಾಗ ನೀರು ಪ್ರವೇಶಿಸದಂತೆ ಮೂಗಿನ ಕ್ಲಿಪ್ ಗಳನ್ನು ಬಳಸಿ ಅಥವಾ ನಿಮ್ಮ ಮೂಗನ್ನು ಮುಚ್ಚಿ ಹಿಡಿದು ಮುನ್ನೆಚ್ಚರಿಕೆ ವಹಿಸುವುದು ಸೂಕ್ತ ಎಂದು ಇಲಾಖೆಯು ಎಚ್ಚರಿಸಿದೆ.
ಇನ್ನಷ್ಟು ಓದಿರಿ :
ಬೆಂಗಳೂರು: ATM ವಾಹನ ತಡೆದು ₹7 ಕೋಟಿಗೂ ಹೆಚ್ಚು ಹಣ ದರೋಡೆ