Belagavi news:
ರಾಜಸ್ಥಾನದ ಖೈರ್ತಾಲ್ - ಭಿವಾಡಿ ಪಟ್ಟಣದಲ್ಲಿ ಮಾನವೀಯತೆಯನ್ನೇ ಬೆಚ್ಚಿಬೀಳಿಸುವ ಘಟನೆ ಬೆಳಕಿಗೆ ಬಂದಿದೆ. ಎಂಟು ತಿಂಗಳ ಹೆಣ್ಣು ಮಗುವಿನ ಸ್ವಂತ ತಾಯಿಯೇ ಆ್ಯಸಿಡ್ ಕುಡಿಸಿರುವ ಹೃದಯ ವಿದ್ರಾವಕ ಪ್ರಕರಣ ಸ್ಥಳೀಯರಲ್ಲಿ ಆಕ್ರೋಶ ಮತ್ತು ಆತಂಕಕ್ಕೆ ಕಾರಣವಾಗಿದೆ.
ಪೊಲೀಸರ ಮಾಹಿತಿ ಪ್ರಕಾರ, ಘಟನೆ ನಡೆದ ವೇಳೆ ತಾಯಿ ಮತ್ತು ಮಗು ಮಾತ್ರ ಮನೆಯಲ್ಲಿ ಇದ್ದರು. ಮಗುವಿನ ತಂದೆ ಮೋಹಿತ್ ಕೆಲಸಕ್ಕಾಗಿ ಬೆಳಿಗ್ಗೆ ತೆರಳಿದ್ದರು. ಈ ಸಂದರ್ಭದಲ್ಲಿ ಮಗುವಿಗೆ ಆ್ಯಸಿಡ್ ಕುಡಿಸಿದ್ದಾಳೆ ಎನ್ನಲಾಗಿದೆ. ಗಂಭೀರವಾಗಿ ಅಸ್ವಸ್ಥಗೊಂಡಿರುವ ಕಂದಮ್ಮ ಆಸ್ಪತ್ರೆಗೆ ದಾಖಲಾಗಿದ್ದು, ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದೆ.
ಘಟನೆ ತಿಳಿಯುತ್ತಿದ್ದಂತೆಯೇ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ತಾಯಿಯ ಈ ಅಮಾನುಷ ಕೃತ್ಯಕ್ಕೆ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಜಸ್ಥಾನದ ಭಿವಾಡಿಯಲ್ಲಿ ತಾಯಿ ತನ್ನ 8 ತಿಂಗಳ ಹೆಣ್ಣು ಮಗುವಿಗೆ ಆ್ಯಸಿಡ್ ಕುಡಿಸಿದ ಪ್ರಕರಣ ಮತ್ತಷ್ಟು ಆಘಾತ ಮೂಡಿಸಿದೆ. ಆ್ಯಸಿಡ್ ಸೇವನೆಯಿಂದ ಮಗುವಿನ ಆರೋಗ್ಯ ತೀವ್ರ ಹದಗೆಟ್ಟಿದ್ದು, ಕುಟುಂಬ ಸದಸ್ಯರು ತಕ್ಷಣವೇ ಭಿವಾಡಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ವೈದ್ಯರ ಪ್ರಕಾರ, ಮಗುವಿನ ದೇಹದ ಒಳಾಂಗಗಳು ಗಂಭೀರವಾಗಿ ಗಾಯಗೊಂಡಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಆಳ್ವಾರ್ ಆಸ್ಪತ್ರೆಗೆ ರವಾನಿಸಲಾಗಿದೆ.
ಸದ್ಯ ಕಂದಮ್ಮ ಆಳ್ವಾರ್ ನ ಮಕ್ಕಳ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ವೆಂಟಿ ಲೇಟರ್ ಮೂಲಕ ಉಸಿರಾಟಕ್ಕೆ ವ್ಯವಸ್ಥೆ ಮಾಡಲಾಗಿದೆ. ಮಗುವಿನ ಸ್ಥಿತಿ ಅತ್ಯಂತ ಗಂಭೀರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಈ ಅಮಾನುಷ ಘಟನೆಯನ್ನು ದೃಢಪಡಿಸಿರುವ ಹೆಚ್ಚುವರಿ ಎಸ್ ಪಿ ಶ್ರೀಮಾನ್ ಮೀನಾ, ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಲಾಗಿದೆ ಎಂದು ಹೇಳಿದ್ದಾರೆ. " ತಾಯಿ ಮಗುವಿಗೆ ಆ್ಯಸಿಡ್ ನೀಡಿರುವ ಬಗ್ಗೆ ದೂರು ಸ್ವೀಕರಿಸಿದ್ದೇವೆ. ಘಟನೆಯ ಹಿಂದೆ ಇರುವ ನಿಜವಾದ ಕಾರಣ ಮತ್ತು ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಯುತ್ತಿದೆ" ಎಂದು ತಿಳಿಸಿದ್ದಾರೆ.
ಆ್ಯಸಿಡ್ ಅನ್ನು ಯಾವ ಕಾರಣಕ್ಕಾಗಿ ಮಗುವಿಗೆ ಕುಡಿಸಲಾಯಿತು ಎಂಬುದು ಇನ್ನು ಸ್ಪಷ್ಟವಾಗಿಲ್ಲ. ವೈದಿಕೀಯ ವರದಿ ಹಾಗೂ ತನಿಖೆಯಲ್ಲಿ ಹೊರಬರುವ ಮಾಹಿತಿ ಆಧಾರದ ಮೇಲೆ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಮಗುವಿನ ತಂದೆ, 8 ತಿಂಗಳ ಹೆಣ್ಣು ಮಗು ತಮ್ಮ ಏಕೈಕ ಮಗಳಾಗಿದ್ದು, ಈ ಘಟನೆಯ ಸಂಪೂರ್ಣ ಹೊಣೆ ತಾಯಿಯದ್ದೆ ಆಗಿದೆ. ಮಗು ಆತಂರಿಕವಾಗಿ ಸುಟ್ಟ ಗಾಯಗಳಿಗೆ ತುತ್ತಾಗಿದ್ದು, ವೈದ್ಯರು ಮಗುವನ್ನು ಉಳಿಸಲು ಸೂಕ್ತ ಚಿಕಿತ್ಸೆ ನೀಡುತ್ತಿದ್ದಾರೆ ಎಂದು ಹೇಳಿದ್ದಾರೆ.
ಆಳ್ವಾರ್ ಮಕ್ಕಳ ಆಸ್ಪತ್ರೆಯ ವೈದ್ಯೆ ರಾಶಿ ಕೌಶಿಕ್ ಮಾತನಾಡಿ,ಆ್ಯಸಿಡ್ ಸೇವಿಸಿದ ಆರೋಪದ ಮೇಲೆ ಮಗುವನ್ನು ಆಸ್ಪತ್ರೆಗೆ ದಾಖಲೆಸಲಾಗಿದ್ದು, ಅದು ಅತ್ಯಂತ ಗಂಭೀರ ಸ್ಥಿತಿಯಲ್ಲಿದೆ. ವೈದ್ಯಕೀಯ ಮೇಲ್ವಿಚಾರಣೆ ನಡೆಸಲಾಗಿದ್ದು ಅದರ ಸ್ಥಿತಿಯಲ್ಲಿ ಯಾವುದೇ ಬದಲಾವಣೆ ಕಂಡುಬಂದಿಲ್ಲ ಎಂದು ತಿಳಿಸಿದ್ದಾರೆ.
Also Read:
"ಯತ್ನಾಳ ಸರಿ ಹೇಳಿದ್ದಾರೆ" ಎಂದ ಜನಾರ್ದನ್ ರೆಡ್ಡಿ - ಗಂಗಾವತಿ ಶಾಸಕ ಹೇಳಿದ್ದೇನೆ?