belagavi news:
ಬೆಳಗಾವಿ,ಜುಲೈ3 : ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಹಿಡಿಕಲ್ ಜಲಾಶಯದಲ್ಲಿ ನೀರಿನ ಮಟ್ಟ ತೀವ್ರವಾಗಿ ಕುಸಿದ ಪರಿಣಾಮ,1978 ರಿಂದ ಹಿನ್ನೀರಿನಲ್ಲಿ ಮುಳುಗಿದ್ದ ಹುಣ್ಣೂರ ಗ್ರಾಮದ ಐತಿಹಾಸಿಕ ವಿಠ್ಠಲ ದೇವಸ್ಥಾನ ಇದೀಗ ಮತ್ತೆ ಸಂಪೂರ್ಣವಾಗಿ ಗೋಚರಿಸಿದೆ. ಈ ಅಪರೂಪದ ದೃಶ್ಯ ಸಾರ್ವಜನಿಕರು ಹಾಗೂ ಇತಿಹಾಸಾಸಕ್ತರ ಗಮನ ಸೆಳೆಯುತ್ತಿದೆ.
ಹಿಡಕಲ್ ಜಲಾಶಯದಲ್ಲಿನ ನೀರಿನ ಸಂಗ್ರಹ ಕಡಿಮೆಯಾಗಿರುವುದು ಜಲ ಸ್ಥಿತಿಯ ಗಂಭೀರತೆಯನ್ನು ಪ್ರತಿಬಿಂಬಿಸುತ್ತಿದ್ದು, ಹಿನ್ನಿರಿನಲ್ಲಿ ಮುಳುಗಿದ್ದ ಪ್ರಾಚೀನ ವಿಠ್ಠಲ ದೇಗುಲ ಮತ್ತೊಮ್ಮೆ ಅನಾವರಣಗೊಂಡಿರುವುದು ಸ್ಥಳೀಯರಲ್ಲಿ ಕುತೂಹಲ ಮೂಡಿಸಿದೆ.
51 ಟಿಎಂಸಿ ಸಾಮರ್ಥ್ಯದ ಹಿಡಕಲ್ ಜಲಾಶಯದಲ್ಲಿ ಪ್ರಸ್ತುತ ಕೇವಲ 5 ಟಿಎಂಸಿ ನೀರು ಮಾತ್ರ ಉಳಿದಿರುವುದಾಗಿ ತಿಳಿದು ಬಂದಿದೆ, ಜಲಾಶಯದ ನೀರಿನ ಮಟ್ಟ ಗಣನೀಯವಾಗಿ ಕುಸಿದಿದೆ. ಇದೇ ಕಾರಣದಿಂದ 2022ರಲ್ಲೂ ಅಲ್ಪಾವಧಿಗೆ ಗೋಚರಿಸಿದ್ದ ಹುಣ್ಣೂರ ಗ್ರಾಮದ ಐತಿಹಾಸಿಕ ವಿಠ್ಠಲ ದೇವಸ್ಥಾನ ಇದೀಗ ಮತ್ತೊಮ್ಮೆ ಸಂಪೂರ್ಣವಾಗಿ ಅನಾವರಣಗೊಂಡಿದೆ.
ಹಲವು ದಶಕಗಳಿಂದ ಜಲಾಶಯದ ಹಿನ್ನೀರಿನಲ್ಲಿ ಮುಳುಗಿದ್ದರು, ಕಲ್ಲಿನಿಂದ ನಿರ್ಮಿಸಲಾದ ಈ ಪ್ರಾಚೀನ ದೇವಾಲಯಕ್ಕೆ ಯಾವುದೇ ಗಮನಾರ್ಹ ಹಾನಿಯಾಗಿಲ್ಲ. ಅದರ ಭದ್ರವಾದ ವಾಸ್ತು ಶಿಲ್ಪ ಹಾಗೂ ಶಿಲ್ಪ ಕಲೆಯು ಇಂದಿಗೂ ಅಚ್ಚುಕಟ್ಟಾಗಿ ಉಳಿದಿದ್ದು, ದೇವಾಲಯದ ಅಪರೂಪದ ದೃಶ್ಯ ಇತಿಹಾಸಕ್ತರು ಹಾಗೂ ಭಕ್ತರ ಗಮನ ಸೆಳೆಯುತ್ತಿದೆ.
ದಶಕಗಳ ಬಳಿಕ ದರ್ಶನಕ್ಕೆ ಲಭ್ಯವಾಗಿರುವ ಹುನ್ನೂರು ಗ್ರಾಮದ ಐತಿಹಾಸಿಕ ವಿಠಲ ದೇವಾಲಯಕ್ಕೆ ರಾಜ್ಯದ ವಿವಿಧ ಭಾಗಗಳಿಂದ ಭಕ್ತರು ಮತ್ತು ಪ್ರವಾಸಿಗರು ಕುಟುಂಬ ಸಮೇತರಾಗಿ ಭೇಟಿ ನೀಡುತ್ತಿದ್ದಾರೆ. ಹಿನ್ನೀರಿನಿಂದ ಸಂಪೂರ್ಣವಾಗಿ ಹೊರಹಮ್ಮಿರುವ ಈ ಅಪರೂಪದ ದೃಶ್ಯವನ್ನು ಕಣ್ತುಂಬಿಕೊಳ್ಳಲು ಪ್ರತಿದಿನ ಹೆಚ್ಚಿನ ಸಂಖ್ಯೆಯಲ್ಲಿ ಸಾವಿರಾರು ಜನರು ಆಗಮಿಸುತ್ತಿದ್ದು, ದೇವಾಲಯದಲ್ಲಿ ಭಕ್ತರ ಸಂಚಾರ ಹೆಚ್ಚಾಗಿದೆ.
ಇನ್ನೊಂದಡೆ, ಹಿಡಕಲ್ ಜಲಾಶಯದಲ್ಲಿ ನೀರಿನ ಮಟ್ಟ ಗಣನೀಯವಾಗಿ ಕುಸಿದಿರುವುದು ರೈತರು ಹಾಗೂ ಸ್ಥಳೀಯರಲ್ಲಿ ಆತಂಕಕ್ಕೆ ಕಾರಣವಾಗಿದೆ. ಜಲಾಶಯದ ನೀರಿನ ಸಂಗ್ರಹ ಕಡಿಮೆಯಾಗುವುದರಿಂದ ಕೃಷಿ, ಕುಡಿಯುವ ನೀರಿನ ಲಭ್ಯತೆ ಹಾಗೂ ಮುಂದಿನ ದಿನಗಳ ನೀರಿನಲ್ಲಿ ನಿರ್ವಹಣೆ ಕುರಿತು ಜನರಲ್ಲಿ ಕಳವಳ ವ್ಯಕ್ತವಾಗುತ್ತಿದೆ.