Belagavi News:
ವಾಷಿಂಗ್ಟನ್ ಡಿಸಿ: ಪಶ್ಚಿಮ ಏಷ್ಯಾದಲ್ಲಿ ಉದ್ವಿಗ್ನತೆ ಕಡಿಮೆ ಮಾಡಿ, ಜಾಗತಿಕ ವ್ಯಾಪಾರಕ್ಕೆ ಜೀವನಾಡಿಯಾಗಿರುವ ಹಾರ್ಮುಜ್ ಜಲಸಂಧಿಯನ್ನು ಮತ್ತೆ ತೆರೆಯುವ ನಿಟ್ಟಿನಲ್ಲಿ ಮಹತ್ವದ ರಾಜತಾಂತ್ರಿಕ ಬೆಳವಣಿಗೆ ನಡೆದಿದೆ. ಅಮೆರಿಕ ಮತ್ತು ಇರಾನ್ ನಡುವೆ 14 ಅಂಶಗಳ ಮಹತ್ವದ ಒಪ್ಪಂದಕ್ಕೆ ಸಹಿ ಬಿದ್ದಿದ್ದು, ಇದು ಜಾಗತಿಕ ರಾಜಕೀಯ ಹಾಗೂ ಆರ್ಥಿಕ ಕ್ಷೇತ್ರದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ.
ಒಪ್ಪಂದದ ಪ್ರಮುಖ ಅಂಶಗಳಲ್ಲಿ ಹಾರ್ಮುಜ್ ಜಲಸಂಧಿಯನ್ನು ಪುನಃ ತೆರೆಯುವುದು, ಕೆಲವು ಆರ್ಥಿಕ ಹಾಗೂ ವ್ಯಾಪಾರ ನಿರ್ಬಂಧಗಳನ್ನು ಸಡಿಲಿಸುವುದು ಮತ್ತು ಇರಾನ್ ನ ಪರಮಾಣು ಕಾರ್ಯಕ್ರಮಕ್ಕೆ ಸಂಬಂಧಿಸಿದ ಅಂತಿಮ ಒಪ್ಪಂದದ ಕುರಿತು 60 ದಿನಗಳ ಮಾತುಕತೆ ಪ್ರಕ್ರಿಯೆ ಆರಂಭಿಸುವುದು ಸೇರಿವೆ. ಹಲವು ವರ್ಷಗಳಿಂದ ಉದ್ವಿಗ್ನ ಸಂಬಂಧ ಹೊಂದಿದ ಉಭಯ ರಾಷ್ಟ್ರಗಳ ನಡುವೆ ನಡೆದಿರುವ ಈ ಒಪ್ಪಂದವನ್ನು ಮಹತ್ವದ ರಾಜತಾಂತ್ರಿಕ ಸಾಧನೆ ಎಂದು ಪರಿಗಣಿಸಲಾಗುತ್ತಿದೆ.
14 ಅಂಶಗಳು ಜ್ಞಾಪಕ ಪತ್ರಿಕೆ (MoU) ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯನ್ ಸಹಿ ಹಾಕಿದ್ದಾರೆ. ಈ ಮೂಲಕ ಉಭಯ ರಾಷ್ಟ್ರಗಳು ಪರಸ್ಪರ ಸಹಕಾರ ಹಾಗೂ ಶಾಂತಿಯತ್ತ ಹೆಜ್ಜೆ ಇಟ್ಟಿವೆ.
ಶ್ವೇತಭವನದ ಅಧಿಕಾರಿಗಳ ಮಾಹಿತಿ ಪ್ರಕಾರ, ಪ್ರಾನ್ಸ್ ಅಧ್ಯಕ್ಷ ಎಮ್ಯಾನುಯೆನ್ ಮ್ಯಾಕ್ರನ್ ಆಯೋಜಿಸಿದ್ದ ಪ್ಯಾರಿಸ್ ನ ವಿಶೇಷ ಸಭೆಯಲ್ಲಿ ಟ್ರಂಪ್ ವೈಯಕ್ತಿಕವಾಗಿ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಪೆಜೆಶ್ಕಿಯನ್ ಕೂಡ ಸಹಿ ಮಾಡಿದ್ದು, ಒಪ್ಪಂದ ತಕ್ಷಣದಿಂದ ಜಾರಿಗೆ ಬಂದಿದೆ. ಈ ಬೆಳವಣಿಗೆ ಪಶ್ಚಿಮ ಏಷ್ಯಾದ ಸ್ಥಿರತೆ, ಜಾಗತಿಕ ತೈಲ ಮಾರುಕಟ್ಟೆ ಹಾಗೂ ಅಂತರರಾಷ್ಟ್ರೀಯ ವ್ಯಾಪಾರದ ಮೇಲೆ ಮಹತ್ವದ ಪರಿಣಾಮ ಬೀರುವ ಸಾಧ್ಯತೆ ಇದೆ.
ಇದು ಹಾರ್ಮುಜ್ ಜಲಸಂಧಿಯನ್ನು ತಕ್ಷಣವೇ ಮರು ತೆರೆಯುವ, ಇರಾನ್ ನ ಪುಷ್ಟಿಕರಿಸಿದ ಯುರೇನಿಯಂ ಸಂಗ್ರಹವನ್ನು ಪರಿಹರಿಸುವ ಮತ್ತು ಹಂತ ಹಂತದ ಆರ್ಥಿಕ ಪರಿಹಾರಕ್ಕಾಗಿ ಚೌಕಟ್ಟು ರಚಿಸುವ ಕಾರ್ಯವಿಧಾನ ಎಂದು ಅಮೆರಿಕದ ಹಿರಿಯ ಅಧಿಕಾರಿಗಳು ಹೇಳಿದ್ದಾರೆ.
ಇರಾನ್ ಮತ್ತು ಅಮೆರಿಕ ನಡುವಿನ 14 ಅಂಶಗಳ ಶಾಂತಿ ಜ್ಞಾಪಕ ಪತ್ರಕ್ಕೆ ಸಂಬಂಧಿಸಿದಂತೆ ಇರಾನನ ವಿದೇಶಾಂಗ ಸಚಿವಾಲಯದ ವಕ್ತಾರ ಎಸ್ಮಾಯಿಲ್ ಬಘೈ ಮಹತ್ವದ ಸ್ಪಷ್ಟನೆ ನೀಡಿದ್ದಾರೆ. ಜ್ಞಾಪಕ ಪತ್ರದ ಪಠ್ಯ ಅಂತಿಮಗೊಂಡಿದ್ದು, ಉಭಯ ದೇಶಗಳು ಸಹಿ ಹಾಕಿರುವುದನ್ನು ಅವರು ಖಚಿತಪಡಿಸಿದ್ದಾರೆ. ಹಾರ್ಮುಜ್ ಜಲಸಂಧಿಯ ನಿರ್ವಹಣಾ ವ್ಯವಸ್ಥೆಗಳ ಕುರಿತು ಎರಡು ಕಡೆಗಳು ಹೆಚ್ಚಾಗಿ ಒಪ್ಪಿಗೆ ಸೂಚಿಸುವುದಾಗಿ ಅವರು ತಿಳಿಸಿದ್ದಾರೆ.
ಒಪ್ಪಂದದ ಪ್ರಕಾರ ಲೆಬನಾನ್ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ನಡೆಯುತ್ತಿದ್ದ ಸೇನಾ ಕಾರ್ಯಾಚರಣೆಗಳನ್ನು ತಕ್ಷಣ ಹಾಗೂ ಶಾಶ್ವತವಾಗಿ ನಿಲ್ಲಿಸುವ ಕುರಿತು ಒಪ್ಪಿಗೆ ವ್ಯಕ್ತವಾಗಿದೆ. ಜೊತೆಗೆ ಪರಸ್ಪರ ಸಮಾಲೋಚನೆಯ ಮೂಲಕ ಅಂತಿಮ ಶಾಂತಿ ಒಪ್ಪಂದದ ಮಾತುಕತೆಗಳನ್ನು ನಿರ್ದಿಷ್ಟ ಅವಧಿಯಲ್ಲಿ ಪೂರ್ಣಗೊಳಿಸುವ ಬದ್ಧತೆಯನ್ನು ಎರಡು ರಾಷ್ಟ್ರಗಳು ತೆಗೆದುಕೊಂಡಿವೆ.
ಅಮೆರಿಕ ತನ್ನ ನೌಕಾ ದಿಗ್ಬಂಧನ ಸೇರಿದಂತೆ ಇರಾನ್ ಮೇಲೆ ವಿಧಿಸಿದ್ದ ಹಲವಾರು ನಿರ್ಬಂಧಗಳನ್ನು ಹಂತ ಹಂತವಾಗಿ ತೆರವುಗೊಳಿಸಲು ಒಪ್ಪಿಕೊಂಡಿದೆ. ಪ್ರತಿಯಾಗಿ ಇರಾನ್ ಆರಂಭಿಕ 60 ದಿನಗಳ ಅವಧಿಗೆ ಹಾರ್ಮುಜ್ ಜಲಸಂಧಿಯಲ್ಲಿ ವಾಣಿಜ್ಯ ಹಡುಗುಗಳ ಸುರಕ್ಷಿತ ಸಂಚಾರಕ್ಕೆ ಅವಕಾಶ ಮಾಡಿ ಕೊಡಲಿದೆ.
ಇದೇ ವೇಳೆ ಇರಾನ್ ನ ಸ್ಥಗಿತಗೊಂಡ ಆಸ್ತಿಗಳನ್ನು ಹಂತ ಹಂತವಾಗಿ ಬಿಡುಗಡೆ ಮಾಡುವುದು, ತೈಲ ರಫ್ತಿಗೆ ಅನುಕೂಲ ಕಲ್ಪಿಸುವುದು ಹಾಗೂ ಸುಮಾರು 300 ಬಿಲಿಯನ್ ಡಾಲರ್ ವೆಚ್ಚದ ಅಮೆರಿಕ ಬೆಂಬಲಿತ ಪುನರ್ ನಿರ್ಮಾಣ ಮತ್ತು ಆರ್ಥಿಕ ಅಭಿವೃದ್ಧಿ ಯೋಜನೆಗಳ ಕುರಿತು ಸಹ ಒಪ್ಪಂದದಲ್ಲಿ ಉಲ್ಲೇಖಿಸಲಾಗಿದೆ.
ಒಪ್ಪಂದದ ಪ್ರಮುಖ ಶರತ್ತಿನಂತೆ ಇರಾನ್ ಪರಮಾಣು ಶಸ್ತ್ರಾಸ್ತ್ರ ಗಳನ್ನು ಅಭಿವೃದ್ಧಿಪಡಿಸುವುದು ಅಥವಾ ಖರೀದಿಸುವುದನ್ನು ತ್ಯಜಿಸಲು ಒಪ್ಪಿಕೊಂಡಿದೆ. ಅಂತಾರಾಷ್ಟ್ರೀಯ ಪರಮಾಣು ಶಕ್ತಿ ಸಂಸ್ಥೆ (IAEA) ಮೇಲ್ವಿಚಾರಣೆಯಲ್ಲಿ ಇರಾನ್ ನ ಸಂಗ್ರಹಿಸಿದ ಪುಷ್ಟಿಕರಿಸಿದ ಯುರೇನಿಯಂ ಕುರಿತು ಮುಂದಿನ ಚರ್ಚೆಗಳು ನಡೆಯಲಿವೆ
Also Read:
ವಿಧಾನ ಪರಿಷತ್ ಚುನಾವಣೆ : ಕಾಂಗ್ರೆಸ್ ಗೆಲುವಿಗೆ ಡಿಕೆಶಿ ಹೊಸ ಗೇಮ್ ಪ್ಲಾನ್ !