Belagavi News:
ಹೈದರಾಬಾದ್: ಬಲವಾದ ಎಲ್ ನಿನೊ ಪರಿಣಾಮದಿಂದ ಜಾಗತಿಕ ಮಟ್ಟದಲ್ಲಿ ಆಹಾರ ಬೆಲೆಗಳು ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಆಕ್ಸ್ ಫರ್ಡ್ ಅರ್ಥಶಾಸ್ತ್ರ, ಸಂಸ್ಥೆಯ ಅಧ್ಯಯನ ಎಚ್ಚರಿಸಿದೆ. ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಹಣದುಬ್ಬರ ನಿಯಂತ್ರಣಕ್ಕೆ ಬರುತ್ತಿದ್ದರೂ, ಏಷ್ಯಾ ಮತ್ತು ಆಫ್ರಿಕಾದಲ್ಲಿ ಆಹಾರ ಹಣದುಬ್ಬರ ಮತ್ತೆ ಹೆಚ್ಚಾಗುವ ಸಾಧ್ಯತೆಗಳಿವೆ ಎಂದು ವರದಿ ತಿಳಿಸಿದೆ.
ಅಧ್ಯಯನದ ಪ್ರಕಾರ, ಎಲ್ ನಿನೊ ಪರಿಣಾಮವು ಆಗ್ನೇಯ ಏಷ್ಯಾದಲ್ಲಿ ಅಕ್ಕಿ, ಆಸ್ಟ್ರೇಲಿಯಾದಲ್ಲಿ ಗೋಧಿ ಹಾಗೂ ಮೆಕ್ಸಿಕೊದಲ್ಲಿ ಜೋಳದ ಉತ್ಪಾದನೆ ಮೇಲೆ ತೀವ್ರ ಪರಿಣಾಮ ಬೀರುವ ಸಾಧ್ಯತೆ ಇದೆ. ಇದರಿಂದ ಜಾಗತಿಕ ಆಹಾರ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿ ಬೆಲೆ ಏರಿಕೆಗೆ ಕಾರಣವಾಗಬಹುದು. ಕಚ್ಚಾ ತೈಲದ ಬೆಲೆ ಏರಿಕೆಯೂ ಆಹಾರ ಹಣದುಬ್ಬರದ ಮೇಲೆ ಒತ್ತಡ ತರಬಹುದು ಎಂದು ವರದಿ ಹೇಳಿದೆ.
ದಕ್ಷಿಣ ಆಫ್ರಿಕಾದಲ್ಲಿ ಹಣದುಬ್ಬರ ಸಾಮಾನ್ಯ ನೀರಿಕ್ಷೆಗಿಂತ ಶೇಕಡಾ 1ರಷ್ಟು ಹೆಚ್ಚಾಗಿದ್ದು, ಏಷ್ಯಾದಲ್ಲಿ ಆಹಾರ ಹಣದುಬ್ಬರ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ. ಆದರೆ ಬ್ರೆಜಿಲ್ ಮತ್ತು ಅರ್ಜೆಂಟೀನಾದಲ್ಲಿ ಹವಾಮಾನ ಬೆಳೆಗಳಿಗೆ ಅನುಕೂಲಕರವಾಗಿರುವುದರಿಂದ ಅಲ್ಲಿನ ಕೃಷಿ ಉತ್ಪಾದನೆಗೆ ಎಲ್ ನಿನೊ ಪರಿಣಾಮ ತುಲನಾತ್ಮಕವಾಗಿ ಕಡಿಮೆಯಾಗಲಿದೆ ಎಂದು ಅಧ್ಯಯನ ತಿಳಿಸಿದೆ.
' ಎಲ್ ನಿನೊ ಮತ್ತೆ ಬಂದಿದೆ: ಅಭಿವೃದ್ಧಿಶೀಲ ರಾಷ್ಟ್ರಗಳು ಮತ್ತು ಬೆಳೆಗಳ ಮೇಲೆ ತೀವ್ರ ಪರಿಣಾಮ' ಎಂಬ ಶೀರ್ಷಿಕೆಯ ವರದಿಯಲ್ಲಿ ಈ ಅಂಶಗಳನ್ನು ಉಲ್ಲೇಖಿಸಲಾಗಿದ್ದು, ಹವಮಾನ ವೈಪರೀತ್ಯದ ಪರಿಣಾಮ ಜಾಗತಿಕ ಆಹಾರ ಭದ್ರತೆ ಹಾಗೂ ಬೆಲೆ ಸ್ಥಿರತೆಯ ಮೇಲೆ ಗಮನಾರ್ಹ ಪರಿಣಾಮ ಬೀರುವ ಸಾದ್ಯತೆ ಇದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಎಂಟನೇ ಸ್ಥಾನದಲ್ಲಿ ಭಾರತ: ಜಾಗತಿಕ ಹವಮಾನ ಪರಿಸ್ಥಿತಿಗಳ ಅಧ್ಯಯನದ ಪ್ರಕಾರ ಎಲ್ ನಿನೊದಿಂದ ತೀವ್ರವಾಗಿ ಪರಿಣಾಮ ಬೀರುವ ದೇಶಗಳ ಪಟ್ಟಿಯಲ್ಲಿ ಭಾರತ ಎಂಟನೇ ಸ್ಥಾನದಲ್ಲಿದೆ ಎಂದು ವರದಿ ತಿಳಿಸಿದೆ. ಭಾರತ ಸೇರಿದಂತೆ ಆಗ್ನೇಯ ಏಷ್ಯಾ ಮತ್ತು ಆಫ್ರಿಕಾ ದೇಶಗಳು ಈ ಹವಾಮಾನ ವೈಪರೀತ್ಯದಿಂದ ಹೆಚ್ಚು ಪರಿಣಾಮ ಅನುಭವಿಸುವ ಸಾಧ್ಯತೆ ಇದೆ.
ಇಂಡೋನೇಷ್ಯಾ, ಫಿಲಿಪ್ಪೀನ್ಸ್ ಮತ್ತು ಭಾರತ ಸೇರಿದಂತೆ ಹಲವು ದೇಶಗಳು ಅಕ್ಕಿ ಮತ್ತು ಜೋಳದ ಪ್ರಮುಖ ಉತ್ಪಾದಕರಾಗಿದ್ದರೂ, ಎಲ್ ನಿನೊದಿಂದ ಉಂಟಾಗುವ ಬರ ಪರಿಸ್ಥಿತಿ ಕೃಷಿ ಇಳುವರಿಯನ್ನು ಕಡಿಮೆ ಮಾಡುವ ಸಾಧ್ಯತೆ ಇದೆ ಎಂದು ಅಧ್ಯಯನ ಎಚ್ಚರಿಸಿದೆ. ಇದರ ಪರಿಣಾಮವಾಗಿ ಆಹಾರ ಪೂರೈಕೆ ಸರಪಳಿಯಲ್ಲಿ ಒತ್ತಡ ಹೆಚ್ಚಾಗಬಹುದು.
ಭಾರತ, ಥಾಯ್ಲೆಂಡ್, ಪಾಕಿಸ್ತಾನ್, ಕಾಂಬೋಡಿಯಾ ಮತ್ತು ವಿಯೆಟ್ನಾಂ ಪ್ರಮುಖ ಅಕ್ಕಿ ರಫ್ತುದಾರ ದೇಶಗಳಾಗಿದ್ದು, ಈ ದೇಶಗಳಲ್ಲಿ ಉತ್ಪಾದನೆ ಕುಸಿದರೆ ಜಾಗತಿಕ ಅಕ್ಕಿ ಪೂರೈಕೆಗೆ ದೊಡ್ಡ ಪರಿಣಾಮ ಬೀರುವ ಸಾದ್ಯತೆ ಇದೆ. ಅದೇ ರೀತಿ ರಷ್ಯಾ, ಕೆನಡಾ, ಯುರೋಪಿಯನ್ ಒಕ್ಕೂಟ ( EU), ಆಸ್ಟ್ರೇಲಿಯಾ ಮತ್ತು ಅಮೆರಿಕ ಗೋಧಿ ರಫ್ತು ಮಾಡುವ ಪ್ರಮುಖ ರಾಷ್ಟ್ರಗಳಾಗಿವೆ. ಇಲ್ಲಿ ಉತ್ಪಾದನೆ ಕಡಿಮೆಯಾದರೆ ಫಿಲಿಪ್ಪೀನ್ಸ್, ಆಲ್ಜೀರಿಯಾ, ಚೀನಾ, ಈಜಿಪ್ಟ್ ಮತ್ತು ಇಂಡೋನೇಷ್ಯಾ ದೇಶಗಳ ಮೇಲೆ ಆಹಾರ ಪೂರೈಕೆಯ ಒತ್ತಡ ಹೆಚ್ಚಾಗಲಿದೆ.
ಮತ್ತೊಂದೆಡೆ, ಅಮೆರಿಕ, ಅರ್ಜೆಂಟೀನಾ, ಬ್ರೆಜಿಲ್, ಉಕ್ರೇನ್ ಮತ್ತು ರಷ್ಯಾದಲ್ಲಿ ಜೋಳ (ಕಾರ್ನ್) ಉತ್ಪಾದನೆ ಕಡಿಮೆಯಾದರೆ ವಿಯೆಟ್ನಾಂ, ಜಪಾನ್, ಯುರೋಪಿಯನ್ ಒಕ್ಕೂಟ, ಚೀನಾ ಮತ್ತು ಮೆಕ್ಸಿಕೊ ಸೇರಿದಂತೆ ಅನೇಕ ದೇಶಗಳು ಗಂಭೀರ ಪರಿಣಾಮ ಎದುರಿಸಬೇಕಾಗಬಹುದು ಎಂದು ವರದಿ ಎಚ್ಚರಿಸಿದೆ.
ಎಲ್ ನಿನೊ ಮಾತ್ರ ಆಹಾರ ಬೆಲೆ ಏರಿಕೆಯನ್ನು ನಿರ್ಧರಿಸುವ ಏಕೈಕ ಮಾನದಂಡವಲ್ಲ ಎಂದು ಆಕ್ಸ್ ಫರ್ಡ್ ಅರ್ಥಶಾಸ್ತ್ರ, ಅಧ್ಯಯನವು ಸ್ಪಷ್ಟಪಡಿಸಿದೆ. ದೇಶಿಯ ಮಾರುಕಟ್ಟೆಗಳಲ್ಲಿ ಆಹಾರ ಪದಾರ್ಥಗಳಿಗೆ ನೀಡಲಾಗುವ ಸಾಧ್ಯತೆ ಅಂತಾರಾಷ್ಟ್ರೀಯ ಬೆಲೆಗಳಿಗೆ ಸ್ಥಳೀಯ ಮಾರುಕಟ್ಟೆಯ ಪ್ರತಿಕ್ರಿಯೆ ಮೀಸಲು ದಾಸ್ತಾನುಗಳ ಸ್ಥಿತಿ ಹಾಗೂ ರಸಗೊಬ್ಬರಗಳ ಲಭ್ಯತೆ ಸೇರಿದಂತೆ ಹಲವು ಅಂಶಗಳು ಆಹಾರ ಬೆಲೆಗಳ ಮೇಲೆ ನೇರ ಪರಿಣಾಮ ಬೀರುತ್ತವೆ ಎಂದು ವರದಿ ತಿಳಿಸಿದೆ.
ಎಲ್ ನಿನೊ ಸಂಭವಿಸಿದ ಸಂದರ್ಭದಲ್ಲಿಯೂ ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಬೆಲೆಗಳು ಸದಾ ಏರಿಕೆಯಾಗುತ್ತವೆ ಎಂಬುದಿಲ್ಲ. 1982-83, 1998 ಮತ್ತು 2016 ರಂತಹ ವರ್ಷಗಳಲ್ಲಿ ವಿಭಿನ್ನ ಪರಿಣಾಮಗಳು ಕಂಡುಬಂದಿವೆ. 1982 ಮತ್ತು 1998 ರಲ್ಲಿ ಬೆಲೆಗಳು ಏರಿಕೆಯಾದರೆ, 2015-16 ರಲ್ಲಿ ಆಹಾರ ಬೆಳೆಗಳು ಗಮನಾರ್ಹವಾಗಿ ಕುಸಿದಿದ್ದವು. ಅದೇ ರೀತಿ ಎಲ್ ನಿನೊ ಇಲ್ಲದಿದ್ದರೂ 2008 ಮತ್ತು 2022 ರಲ್ಲಿ ಜಾಗತಿಕ ಆಹಾರ ಬೆಲೆಗಳು ತೀವ್ರವಾಗಿ ಏರಿಕೆಯಾಗಿದ್ದವು ಎಂದು ಅಧ್ಯಯನ ಸೂಚಿಸಿದೆ.
ದೀರ್ಘಕಾಲದ ಹಣದುಬ್ಬರದ ಸಾಧ್ಯತೆಯನ್ನೂ ವರದಿ ಉಲ್ಲೇಖಿಸಿದೆ. ಈ ವರ್ಷ ರಸಗೊಬ್ಬರ ಪೂರೈಕೆಯ ಅಡಚಣೆಗಳು ಭಾರತ, ಇಂಡೋನೇಷ್ಯಾ, ವಿಯೆಟ್ನಾಂ ಹಾಗೂ ಆಫ್ರಿಕಾದ ಕೆಲವು ಭಾಗಗಳಲ್ಲಿ ಪ್ರಮುಖ ಬೆಳೆ ಋತುಗಳ ಮೇಲೆ ಪರಿಣಾಮ ಬೀರಿವೆ. ಚೀನಾ ಮತ್ತು ಭಾರತದಲ್ಲಿನ ದೊಡ್ಡ ಧಾನ್ಯದ ದಾಸ್ತಾನುಗಳು ತಾತ್ಕಾಲಿಕವಾಗಿ ಬೆಲೆ ಏರಿಕೆಯನ್ನು ನಿಯಂತಿಸಬಹುದಾದರು ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಹಣದುಬ್ಬರ ದೀರ್ಘಕಾಲ ಮುಂದುವರಿಯುವ ಸಾಧ್ಯತೆ ಇದೆ ಎಂದು ಎಚ್ಚರಿಸಲಾಗಿದೆ.
2026 ರ ಕೊನೆಯ ಅಥವಾ 2027 ರ ಆರಂಭದ ವೇಳೆಗೆ ದಾಸ್ತಾನುಗಳು ಖಾಲಿಯಾಗುವ ಸಾಧ್ಯತೆ ಇದ್ದು, ಆ ಸಂದರ್ಭದಲ್ಲಿ ಆಹಾರಗಳೇ ಅಸಮತೋಲನ ಮತ್ತು ಹವಾಮಾನ ವೈಪರೀತ್ಯಗಳ ಪರಿಣಾಮಗಳು ಸೇರಿ ದೀರ್ಘಕಾಲದ ಹಣದುಬ್ಬರಕ್ಕೆ ಕಾರಣವಾಗಬಹುದು ಎಂದು ಆಕ್ಸ್ ಫರ್ಡ್ ಅರ್ಥಶಾಸ್ತ್ರ ಅಧ್ಯಯನ ಅಭಿಪ್ರಾಯಪಟ್ಟಿದೆ.
Also Read:
ಮಾದಕ ವಸ್ತು ತಡೆಗಟ್ಟಲು ಸಾರ್ವಜನಿಕರ ಸಹಭಾಗಿತ್ವ ಅತ್ಯಗತ್ಯ: ನಟ ವಿನಯ್ ರಾಜ್ ಕುಮಾರ್