Belagavi News:
ನವದೆಹಲಿ: ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ (UNSC) ಬುಧವಾರ ನಡೆದ ಸಭೆಯಲ್ಲಿ ಭಾರತವು ಪಾಕಿಸ್ತಾನದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದೆ. ಪಾಕಿಸ್ತಾನ ಗಡಿಯಾಚೆಗಿನ ಭಯೋತ್ಪಾದನೆಯನ್ನು ಪ್ರಾಯೋದಿಸುತ್ತಿದ್ದು, ನಾಗರಿಕರನ್ನು ಗುರಿಯಾಗಿಸಿಕೊಂಡು ಅಂತಾರಾಷ್ಟ್ರೀಯ ಮಾನವೀಯ ಕಾನೂನುಗಳನ್ನು ಉಲ್ಲಂಘಿಸುತ್ತಿದೆ ಎಂದು ಭಾರತ ಆರೋಪಿಸಿದೆ.
ನ್ಯೂಯಾರ್ಕ್ ನಲ್ಲಿ ನಡೆದ " ಸಶಸ್ತ್ರ ಸಂಘರ್ಷದಲ್ಲಿ ನಾಗರಿಕರ ರಕ್ಷಣೆ" ಕುರಿತ ವಾರ್ಷಿಕ ಮುಕ್ತ ಚರ್ಚೆಯಲ್ಲಿ ಮಾತನಾಡಿದ ವಿಶ್ವ ಸಂಸ್ಥೆಯ ಭಾರತದ ಖಾಯಂ ಪ್ರತಿನಿಧಿ Harish Parvathaneni, "ಗಡಿಯಾಚೆಗಿನ ಭಯೋತ್ಪಾದನೆಯಿಂದ ಉಂಟಾಗುತ್ತಿರುವ ನಿರಂತರ ಬೆದರಿಕೆ ಬಗ್ಗೆ ಭಾರತ ತೀವ್ರ ಕಳವಳ ಹೊಂದಿದೆ" ಎಂದು ಹೇಳಿದ್ದಾರೆ.
" ಭಾರತ ದಶಕಗಳಿಂದ ಇಂತಹ ಭಯೋತ್ಪಾದನೆಯ ಬಲಿಯಾಗಿದ್ದು, ಭಯೋತ್ಪಾದನೆಯನ್ನು ಪ್ರಾಯೋಜಿಸುವ, ಆಶ್ರಯ ನೀಡುವ ಅಥವಾ ಬೆಂಬಲಿಸುವ ರಾಷ್ಟ್ರಗಳನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೊಣೆಗಾರರನ್ನಾಗಿ ಮಾಡಬೇಕು" ಎಂದು ಅವರು ಒತ್ತಾಯಿಸಿದ್ದಾರೆ.
ಭಾರತದ ಈ ಕಠಿಣ ನಿಲುವು ವಿಶ್ವಸಂಸ್ಥೆ ವೇದಿಕೆಯಲ್ಲಿ ಮತ್ತೆ ಪಾಕಿಸ್ತಾನದ ವಿರುದ್ಧ ಜಾಗತಿಕ ಗಮನ ಸೆಳೆಯುವಂತೆ ಮಾಡಿದೆ.
ಭಯೋತ್ಪಾದನೆಯು ಅದರ ಎಲ್ಲಾ ರೂಪಗಳಲ್ಲಿಯೂ ವಿಶ್ವದಾದ್ಯಂತ ನಾಗರಿಕರಿಗೆ ಅತ್ಯಂತ ಗಂಭೀರ ಬೆದರಿಕೆಗಳಲ್ಲಿ ಒಂದಾಗಿದೆ ಎಂದು ಪ್ರತಿಪಾದಿಸಿದ ಅವರು, ಯಾವುದೇ ಕಾರಣಕ್ಕೂ ಅಸಮಾಧಾನವು ನಾಗರಿಕರ ವಿರುದ್ಧ ಉದ್ದೇಶಪೂರ್ವಕ ದಾಳಿಯನ್ನು ಸಮರ್ಥಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
United Nations ಪ್ರಧಾನ ಕಾರ್ಯದರ್ಶಿಯವರ ವರದಿಯ ಪ್ರಕಾರ, 2025ರಲ್ಲಿ ವಿಶ್ವದ 20 ಸಶಸ್ತ್ರ ಸಂಘರ್ಷಗಳಲ್ಲಿ 37,000ಕ್ಕೂ ಹೆಚ್ಚು ನಾಗರಿಕರು ಸಾವನ್ನಪ್ಪಿದ್ದಾರೆ.
ಅವರು, "ನಿರಂತರ ನಾಗರಿಕ ಸಾವುನೋವುಗಳು, ಜನರ ಬಲವಂತದ ಸ್ಥಳಾಂತರ, ಅಗತ್ಯ ಮೂಲಸೌಕರ್ಯಗಳ ನಾಶ ಹಾಗೂ ಆಸ್ಪತ್ರೆಗಳು, ಶಾಲೆಗಳು, ವೈದ್ಯಕೀಯ ಸಿಬ್ಬಂದಿ ಮತ್ತು ಮಾನವೀಯ ನೆರವು ಕಾರ್ಯಕರ್ತರ ಮೇಲಿನ ದಾಳಿಗಳು ಅತ್ಯಂತ ಆತಂಕಕಾರಿ ಬೆಳವಣಿಗೆಗಳಾಗಿವೆ" ಎಂದು ಹೇಳಿದ್ದಾರೆ.
ಜನನಿಬಿಡ ನಗರ ಪ್ರದೇಶಗಳಲ್ಲಿ ಕ್ಷಿಪಣಿಗಳು, ಬಾಂಬ್ ಗಳು, ಡ್ರೋನ್ ಗಳು ಹಾಗೂ ಕೃತಕ ಬುದ್ಧಿಮತ್ತೆ (AI) ಮತ್ತು ಸ್ವಾಯತ್ತ ತಂತ್ರಜ್ಞಾನಗಳ ಬಳಕೆ ಹೆಚ್ಚುತ್ತಿರುವುದರ ಬಗ್ಗೆ ಕೂಡ ಅವರು ಗಂಭೀರ ಕಳವಳ ವ್ಯಕ್ತಪಡಿಸಿದ್ದಾರೆ.
ಇದೇ ವೇಳೆ, United Nations Assistance Mission in Afghanistan (UNAMA) ಸಂಶೋಧನೆಗಳನ್ನು ಉಲ್ಲೇಖಿಸಿ, ಗಡಿಯಾಚೆಗಿನ ಸಶಸ್ತ್ರ ಹಿಂಸಾಚಾರದಿಂದ ಅಫ್ಘಾನಿಸ್ತಾನದಲ್ಲಿ ಸಂಭವಿಸಿದ ನಾಗರಿಕ ಸಾವು ಗಾಯಗಳಿಗೆ ಪಾಕಿಸ್ತಾನ್ ಸೇನೆಯ ಕ್ರಮಗಳು ಕಾರಣವಾಗಿವೆ ಎಂಬ ಆರೋಪವು ಕೇಳಿ ಬಂದಿದೆ.
"2026ರ ಮೊದಲ ಮೂರು ತಿಂಗಳಲ್ಲಿ, ಪಾಕಿಸ್ತಾನಿ ಮಿಲಿಟರಿ ಪಡೆಗಳು ನಡೆಸಿದ ಗಡಿಯಾಚೆಗಿನ ಸಶಸ್ತ್ರ, ಹಿಂಸಾಚಾರದ ಪರಿಣಾಮವಾಗಿ ಅಫ್ಘಾನಿಸ್ತಾನದಲ್ಲಿ 750 ನಾಗರೀಕರ ಸಾವುಗಳು ಮತ್ತು ಗಾಯಗಳು ದಾಖಲಾಗಿವೆ ಎಂದು ಅಫ್ಘಾನಿಸ್ತಾನದಲ್ಲಿನ ವಿಶ್ವ ಸಂಸ್ಥೆಯ ಸಹಾಯ ಮಿಷನ್ ವರದಿ ಮಾಡಿದೆ. ಅವುಗಳಲ್ಲಿ ಹೆಚ್ಚಿನ ವಾಯುದಾಳಿಗಳಿಂದಾಗಿ ಸಂಭವಿಸಿವೆ' ಎಂದು ಅವರು ಹೇಳಿದ್ದಾರೆ .
Also Read: ಇಂಧನ ದರ ಏರಿಕೆ ಚರ್ಚೆ: ಪ್ರಧಾನಿ ನೇತೃತ್ವದಲ್ಲಿ ಇಂದು ಸಂಜೆ ಕ್ಯಾಬಿನೆಟ್ ಮೀಟಿಂಗ್