belagavi news :
ಬೆಳಗಾವಿ: ಶಿವಂ ಅಸೋಸಿಯೇಟ್ಸ್ ಮಾಲೀಕ ಶಿವಾನಂದ್ ನೀಲಣ್ಣವರ ಹೂಡಿಕೆದಾರರಿಗೆ ವಂಚನೆ ಮಾಡಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ ಎಂದು ಸಿಐಡಿ ಡಿಐಜಿ ಡಾ. ಭೀಮಾಶಂಕರ್ ಗುಳೇದ್ ತಿಳಿಸಿದ್ದಾರೆ. ಇದುವರೆಗೆ ಸುಮಾರು 40,700 ಜನರಿಂದ ₹2,400 ಕೋಟಿ ಹಣ ಸಂಗ್ರಹಿಸಿರುವುದು ಪತ್ತೆಯಾಗಿದೆ ಎಂದು ಅವರು ಮಾಹಿತಿ ನೀಡಿದರು.
ಬೆಳಗಾವಿ ಅತಿಥಿ ಗೃಹದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದವರು, ಹೊಸದಾಗಿ ಬಂದ ಹೂಡಿಕೆದಾರರ ಹಣದಿಂದ ಹಳೆಯ ಹೂಡಿಕೆದಾರರಿಗೆ ಬಡ್ಡಿ ಪಾವತಿಸುವ ವಿಧಾನ ಅನುಸರಿಸಲಾಗುತ್ತಿತ್ತು ಎಂದು ಹೇಳಿದರು. ಸಂಗ್ರಹವಾಗುವ ಹಣಕ್ಕಿಂತ ಬಡ್ಡಿ ಪಾವತಿಯ ಮೊತ್ತ ಹೆಚ್ಚಾದಾಗ ಪಾವತಿಗಳನ್ನು ಸ್ಥಗಿತಗೊಳಿಸಲಾಗುತ್ತಿತ್ತು ಎಂದು ತನಿಖೆಯಲ್ಲಿ ತಿಳಿದುಬಂದಿದೆ.
ಸಂಗ್ರಹಿಸಿದ ಹಣದಲ್ಲಿ ಸುಮಾರು ₹540 ಕೋಟಿ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲಾಗಿದ್ದು, ಅದರಲ್ಲಿ ₹170 ಕೋಟಿ ನಷ್ಟವಾಗಿದೆ. ತನಿಖೆ ವೇಳೆ ಇದುವರೆಗೆ ಸುಮಾರು ₹660 ಕೋಟಿ ಕೊರತೆ (ಶಾರ್ಟೇಜ್) ಪತ್ತೆಯಾಗಿದ್ದು, ಅದರಲ್ಲಿ ₹330 ಕೋಟಿ ವಸೂಲಿ ಸಾಧ್ಯತೆ ಇದೆ ಎಂದು ಸಿಐಡಿ ತಿಳಿಸಿದೆ.
ಶಿವಾನಂದ್ ನೀಲಣ್ಣವರ ಜೊತೆ ಇನ್ನೊಬ್ಬ ಪಾಲುದಾರ ಕೂಡ ಇದ್ದು, ಕಂಪನಿಯ ಹಣದಲ್ಲಿ ಸುಮಾರು ₹55 ಕೋಟಿ ಹಣವನ್ನು ವೈಯಕ್ತಿಕ ಖಾತೆಗಳಿಗೆ ವರ್ಗಾವಣೆ ಮಾಡಿರುವುದು ಪತ್ತೆಯಾಗಿದೆ. ಈಗಾಗಲೇ ಇದ್ದು ಐಷಾರಾಮಿ ಕಾರುಗಳನ್ನು ಜಪ್ತಿ ಮಾಡಲಾಗಿದ್ದು, ಇನ್ನೂ 11 ವೋಲ್ವೋ XC90 ಕಾರುಗಳನ್ನು ಖರೀದಿಸಿರುವ ಮಾಹಿತಿ ಲಭ್ಯವಾಗಿದೆ. ಅವುಗಳನ್ನು ಶೀಘ್ರದಲ್ಲೇ ಜಪ್ತಿ ಮಾಡಲಾಗುವುದು ಎಂದು ಡಿಐಜಿ ಗುಳೇದ್ ಹೇಳಿದರು.
ಇದಲ್ಲದೆ, ಹೂಡಿಕೆದಾರರಿಗೆ ಹೆಚ್ಚುವರಿಯಾಗಿ ನೀಡಲಾಗಿರುವ ಸುಮಾರು ₹400 ಕೋಟಿ ಹಣವನ್ನು ಮರುಪಡೆಯುವ ಪ್ರಕ್ರಿಯೆ ನಡೆಯುತ್ತಿದ್ದು, ಆ ಮೊತ್ತವನ್ನು ಉಳಿದ ಹೂಡಿಕೆದಾರರಿಗೆ ಹಂಚಲಾಗುವುದು ಎಂದು ಅವರು ಭರವಸೆ ನೀಡಿದರು.
ಶಿವಂ ಅಸೋಸಿಯೇಟ್ಸ್ ಹೂಡಿಕೆ ವಂಚನೆ ಪ್ರಕರಣದಲ್ಲಿ ತನಿಖೆ ಮುಂದುವರೆದಿದ್ದು, ಎಫ್ಐಆರ್ ದಾಖಲಾಗಿದ ನಂತರವೂ ಸಂಸ್ಥೆಯ ಖಾತೆಗಳಿಗೆ ₹4 ರಿಂದ ₹5 ಕೋಟಿ ಹಣ ಜಮೆಯಾಗಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ ಎಂದು ಸಿಐಡಿ ಡಿಐಜಿ ಡಾ. ಭೀಮಾಶಂಕರ್ ಗುಳೇದ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು , ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೆ 30 ಬ್ಯಾಂಕ್ ಖಾತೆಗಳ ಮಾಹಿತಿ ಲಭ್ಯವಾಗಿದ್ದು, ಅವುಗಳಲ್ಲಿ 7 ಖಾತೆಗಳಲ್ಲಿ ಅತಿ ಹೆಚ್ಚು ಹಣ ವರ್ಗಾವಣೆಯಾಗಿರುವುದು ಪತ್ತೆಯಾಗಿದೆ ಎಂದು ಹೇಳಿದರು. ಒಂದೇ ಖಾತೆಗೆ ಸಂಬಂಧಿಸಿದಂತೆ ಸುಮಾರು 36,200 ಪುಟಗಳ ದಾಖಲೆಗಳು ಲಭ್ಯವಾಗಿದ್ದು, ಹಣದ ಹರಿವಿನ ಬಗ್ಗೆ ಸವಿವರ ತನಿಖೆ ನಡೆಯುತ್ತಿದೆ ಎಂದು ತಿಳಿಸಿದರು.
ಇದೆ ವೇಳೆ, ಶಿವಂ ಅಸೋಸಿಯೇಟ್ಸ್ ನಿಂದ ಸಿನಿಮಾ ತಾರೆಯರು ಅಥವಾ ಇತರ ಗಣ್ಯರಿಗೆ ಹಣ ವರ್ಗಾವಣೆಯಾಗಿರುವುದು ಕಂಡುಬಂದರೆ, ಅವರಿಗೆ ಸಹ ನೋಟಿಸ್ ನೀಡಿ ವಿಚಾರಣೆಗೆ ಕರೆಯಲಾಗುವುದು ಎಂದು ಡಿಐಜಿ ಸ್ಪಷ್ಟಪಡಿಸಿದರು.
ಪ್ರಕರಣದಲ್ಲಿ ಪಕ್ಕದ ಮಹಾರಾಷ್ಟ್ರ ರಾಜ್ಯದ ಹೂಡಿಕೆದಾರರ ಪಾಲು ಹೆಚ್ಚಾಗಿದ್ದು, ಅಲ್ಲಿನ ಪೊಲೀಸರ ಸಹಕಾರದೊಂದಿಗೆ ಜಂಟಿ ತನಿಖೆ ನಡೆಸಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದರು.
ವಸೂಲಿಯಾಗುವ ಹಣವನ್ನು ಬಡ್ಸ್ ಕಾಯ್ದೆ ( BUDS Act) ಅಡಿಯಲ್ಲಿ ನೇಮಕಗೊಂಡಿರುವ ಪ್ರಾಧಿಕಾರದ ಮುಖ್ಯಸ್ಥೆ ಆದಿತ್ಯ ಆಮ್ಲಾನ್ ಬಿಸ್ವಾಸ್ ಅವರಿಗೆ ಹಸ್ತಾಂತರಿಸಲಾಗುವುದು. ಬಳಿಕ ಕಾನೂನು ಪ್ರಕ್ರಿಯೆಯಂತೆ ಹೂಡಿಕೆದಾರರಿಗೆ ಹಣ ಮರುಪಾವತಿ ಮಾಡಲಾಗುವುದು ಎಂದು ತಿಳಿಸಿದರು.
ಈ ವೇಳೆ ಕಂಪನಿ ಸಂಪೂರ್ಣವಾಗಿ ಕುಸಿಯುವ ಮುನ್ನವೇ ಜಿಲ್ಲಾಡಳಿತ ದಾಳಿ ನಡೆಸಿ ಕಾನೂನು ಕ್ರಮ ಕೈಗೊಂಡಿರುವುದನ್ನು ಡಾ. ಭೀಮಾ ಶಂಕರ್ ಗುಳೇದ್ ಶ್ಲಾಘಿಸಿದರು.
ಶಿವಂ ಅಸೋಸಿಯೇಟ್ಸ್ ಪ್ರಕರಣದ ಬಳಿಕವೂ ಹಣ ಹೂಡಿಕೆ ಮುಂದುವರಿಕೆ: ಜನರಿಗೆ ಸಿಐಡಿ ಎಚ್ಚರಿಕೆ
ಆಮಿಷವೊಡ್ಡಿ ಅಕ್ರಮವಾಗಿ ಠೇವಣಿ ಸಂಗ್ರಹ ಮಾಡುತ್ತಿದ್ದಾರೆ ಎಂಬ ಮಾಹಿತಿಯ ಮೇರೆಗೆ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ 20 ದಿನಗಳ ಹಿಂದೆ ಶಿವಂ ಅಸೋಸಿಯೇಟ್ಸ್ ಕಂಪನಿಯ ಮೇಲೆ ದಾಳಿ ನಡೆಸಿತ್ತು . ಬಳಿಕ ಪ್ರಕರಣ ದಾಖಲಿಸಿ ಸಿಐಡಿಗೆ ಹಸ್ತಾಂತರ ಮಾಡಲಾಗಿದೆ ಎಂದು ಸಿಐಡಿ ಡಿಐಜಿ ಡಾ. ಭೀಮಾಶಂಕರ್ ಗುಳೇದ್ ತಿಳಿಸಿದ್ದಾರೆ.
ಸಾಮಾನ್ಯವಾಗಿ ತನಿಖೆ ನಡೆಯುವ ಸಂದರ್ಭದಲ್ಲಿ ಸುದ್ದಿಗೋಷ್ಠಿ ನಡೆಸುವುದಿಲ್ಲ. ಆದರೆ, ಪ್ರಕರಣ ದಾಖಲಾಗಿದ್ದರು ಕೂಡ ಇಂದಿಗೂ ಕೆಲವರು ಶಿವಂ ಅಸೋಸಿಯೇಟ್ಸ್ ಹಣ ಹೂಡಿಕೆ ಮಾಡುತ್ತಿರುವುದು ಕಂಡು ಬಂದಿದೆ. ಕೆಲವು ಹೂಡಿಕೆದಾರರು ಇತರರನ್ನು ಪ್ರೇರೇಪಿಸಿ ಹಣ ಹೂಡಿಸುತ್ತಿರುವುದು ಗಂಭೀರ ವಿಷಯವಾಗಿದ್ದು, ಅದೇ ಕಾರಣಕ್ಕೆ ಸಾರ್ವಜನಿಕರಿಗೆ ಎಚ್ಚರಿಕೆ ನೀಡಲು ಸುದ್ದಿಗೋಷ್ಠಿ ನಡೆಸಲಾಗಿದೆ ಎಂದು ಅವರು ಹೇಳಿದರು.
ಶಿವಾನಂದ್ ನೀಲಣ್ಣವರ ವಿರುದ್ಧ ಜಿಲ್ಲಾಡಳಿತ ಪಿತೂರಿ ಮಾಡುತ್ತಿದೆ ಎಂಬಂತೆ ಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತಿರುವ ಆರೋಪಗಳು ಸಂಪೂರ್ಣ ಸುಳ್ಳು ಎಂದು ಸ್ಪಷ್ಟಪಡಿಸಿದ ಡಿಐಜಿ, ಇಂತಹ ತಪ್ಪು ಮಾಹಿತಿಯನ್ನು ಹರಡುವವರಿಗೂ ನೋಟಿಸ್ ನೀಡಿ ವಿಚಾರಣೆಗೆ ಒಳಪಡಿಸಲಾಗುವುದು ಎಂದು ಎಚ್ಚರಿಸಿದರು.
ಆರ್ಬಿಐ ಅನುಮತಿ ಇಲ್ಲದೆ ಠೇವಣಿ ಸಂಗ್ರಹಿಸುವುದು ಕಾನೂನುಬಾಹಿರವಾಗಿದ್ದು, ಅಂತ ಯಾವುದೇ ಕಂಪನಿಗಳು ಸಾರ್ವಜನಿಕರಿಂದ ಹಣ ಪಡೆಯುವುದು ಅಪರಾಧ ಎಂದು ಅವರು ತಿಳಿಸಿದರು. ಇತ್ತೀಚೆಗೆ ಇದೇ ರೀತಿಯ ಮತ್ತೊಂದು ಪ್ರಕರಣವು ಪತ್ತೆಯಾಗಿದ್ದು , ಅದರ ವಿರುದ್ಧವು ಪ್ರಕರಣ ದಾಖಲಿಸಿ ಸಿಐಡಿಗೆ ಹಸ್ತಾಂತರಿಸಲಾಗಿದೆ ಎಂದು ಮಾಹಿತಿ ನೀಡಿದರು.
ಶಿವಂ ಅಸೋಸಿಯೇಟ್ಸ್ ಮತ್ತು ಆದಿತ್ಯರಾಜ್ ಕ್ಯಾಪಿಟಲ್ ಎರಡು ಕಂಪನಿಗಳು ಯಾವುದೇ ಆರ್ ಬಿಐ ಅನುಮತಿ ಪಡೆಯದೆ ಕಾರ್ಯನಿರ್ವಹಿಸುತ್ತಿದ್ದವು ಎಂದು ಅವರು ಸ್ಪಷ್ಟಪಡಿಸಿದರು. 36% ಅಥವಾ 60% ಲಾಭ ನೀಡುವುದಾಗಿ ಹೇಳುವುದು ಯಾವುದೇ ಕಾನೂನುಬದ್ಧ ವ್ಯವಹಾರದಲ್ಲಿ ಸಾಧ್ಯವಿಲ್ಲ ಎಂದು ಎಚ್ಚರಿಸಿದ ಅವರು ಸಾರ್ವಜನಿಕರು ಇಂತಹ ಆಮಿಷಗಳಿಗೆ ಒಳಗಾಗಬಾರದು ಎಂದು ಮನವಿ ಮಾಡಿದರು.
ಇಂತಹವರದಿಂದ ಹಣ ಹೂಡಿಕೆಗೆ ಪ್ರೇರೇಪಣೆ ಬಂದರೆ ತಕ್ಷಣ ಪೊಲೀಸರಿಗೆ ದೂರು ನೀಡುವಂತೆ ಡಾ. ಭೀಮಾಶಂಕರ್ ಗುಳೇದ್ ಸಾರ್ವಜನಿಕರಿಗೆ ಸಲಹೆ ನೀಡಿದರು.
Also Read:
BCCI ಮಾಡಿದ್ದು ಸರಿನಾ? RCB ಆಟಗಾರನ ಆಯ್ಕೆ ಆಗದಿದ್ದಕ್ಕೆ ಹರ್ಭಜನ್ ಸಿಂಗ್ ಗರಂ!