Belagavi News:
ಬೆಳಗಾವಿ: ಕೃಷ್ಣಾ ನದಿಗೆ 2 ಟಿಎಂಸಿ ನೀರು ಬಿಡುಗಡೆ ಮಾಡುವ ವಿಚಾರವಾಗಿ ಜೂನ್ 20ರಂದು ಮುಂಬೈನಲ್ಲಿ ಕರ್ನಾಟಕ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಹಾಗೂ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ನಡುವೆ ಮಹತ್ವದ ಸಭೆ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ತಿಳಿಸಿದ್ದಾರೆ.
ಗುರುವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಹಿಂದೆ ಬೇಸಿಗೆ ಸಂದರ್ಭದಲ್ಲಿ ಮಹಾರಾಷ್ಟ್ರದಿಂದ 2 ಟಿಎಂಸಿ ನೀರು ಬಿಡುಗಡೆ ಮಾಡಲಾಗುತ್ತಿತ್ತು. ಆದರೆ ಕಳೆದ ಐದಾರು ವರ್ಷಗಳಿಂದ ನೀರು ಬಿಡುತ್ತಿಲ್ಲ. ಈ ಹಿನ್ನೆಲೆಯಲ್ಲಿ ಹಿಂದಿನಂತೆ ನೀರು ಬಿಡುಗಡೆ ಮಾಡುವಂತೆ ಕರ್ನಾಟಕ ಸರ್ಕಾರ ಮನವಿ ಮಾಡಲಿದೆ ಎಂದು ಹೇಳಿದರು.
"ಈ ಬಾರಿ 2 ಟಿಎಂಸಿ ನೀರು ದೊರೆಯುವ ವಿಶ್ವಾಸವಿದೆ. ನೀರು ಬಿಡುಗಡೆಯಾಗಲು ಇನ್ನೂ ಸುಮಾರು 10 ದಿನಗಳ ಸಮಯ ಬೇಕಾಗಬಹುದು. ಬಿಡುಗಡೆಯಾಗುವ ನೀರನ್ನು ಕೇವಲ ಕುಡಿಯುವ ನೀರಿನ ಉದ್ದೇಶಕ್ಕೆ ಮಾತ್ರ ಬಳಸಲಾಗುವುದು" ಎಂದು ಜಿಲ್ಲಾಧಿಕಾರಿ ಸ್ಪಷ್ಟಪಡಿಸಿದ್ದರು.
ಮುಂಬೈನಲ್ಲಿ ನಡೆಯಲಿರುವ ಈ ಸಭೆಯ ಫಲಿತಾಂಶದ ಮೇಲೆ ಉತ್ತರ ಕರ್ನಾಟಕದ ಹಲವು ಜಿಲ್ಲೆಗಳ ಕುಡಿಯುವ ನೀರಿನ ಪರಿಸ್ಥಿತಿ ಅವಲಂಬಿತವಾಗಿದ್ದು, ಜನರಲ್ಲಿ ನಿರೀಕ್ಷೆ ಹೆಚ್ಚಿದೆ.
ಇದೇ ವೇಳೆ, ಹಿಪ್ಪರಗಿ ಬ್ಯಾರೇಜ್ ಗೆ ಗೇಟ್ ಮುರಿದು ಪರಿಣಾಮ ಸುಮಾರು ಒಂದೂವರೆ ಟಿಎಂಸಿ ನೀರು ವ್ಯರ್ಥವಾಗಲಿದ್ದು, ಪ್ರಸ್ತುತ ಅಲ್ಲಿ ಕೇವಲ 0.08 ಟಿಎಂಸಿ ನೀರು ಮಾತ್ರ ಸಂಗ್ರಹವಾಗಿದೆ ಎಂದು ಅವರು ಹೇಳಿದರು. ಈ ಗಂಭೀರ ಪರಿಸ್ಥಿತಿಯನ್ನು ಈಗಾಗಲೇ ಮುಖ್ಯಮಂತ್ರಿ ಗಮನಕ್ಕೆ ತರಲಾಗಿದ್ದು, ನೀರಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ನೀತಿನಲ್ಲಿ ರಾಜ್ಯ ಸರ್ಕಾರ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ ಎಂದರು.
ಕೃಷ್ಣಾ ನದಿ ನೀರಿನ ಲಭ್ಯತೆ ಕುರಿತು ನಡೆಯಲಿರುವ ಈ ಸಭೆ ಉತ್ತರ ಕರ್ನಾಟಕದ ಹಲವು ಜಿಲ್ಲೆಗಳ ಕುಡಿಯುವ ನೀರಿನ ಭವಿಷ್ಯದ ದೃಷ್ಟಿಯಿಂದ ಮಹತ್ವದ ಪಡೆದಿದ್ದು, ಸಭೆಯ ಫಲಿತಾಂಶದತ್ತ ಜನರ ಗಮನ ನೆಟ್ಟಿದೆ.
ಕುಡಿಯುವ ನೀರಿನ ಸಮಸ್ಯೆ ಇಲ್ಲ:
ಹಿಡಕಲ್ ಜಲಾಶಯ (ರಾಜಾ ಲಖಮಗೌಡ ಜಲಾಶಯ) ಹಾಗೂ ಮಲಪ್ರಭಾ ನದಿಯ ಜಲಾಶಯಗಳಲ್ಲಿ ಪ್ರಸ್ತುತ ಸಾಕಷ್ಟು ನೀರಿನ ಸಂಗ್ರಹವಿದ್ದು, ಕುಡಿಯುವ ನೀರಿನ ಸಮಸ್ಯೆ ಇಲ್ಲ ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ತಿಳಿಸಿದ್ದಾರೆ.
ಹುಕ್ಕೇರಿ ತಾಲೂಕಿನ ಘಟಪ್ರಭಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಹಿಡಕಲ್ ಜಲಾಶಯದಲ್ಲಿ ಸದ್ಯಕ್ಕೆ ಸುಮಾರು 5.5 ಟಿಎಂಸಿ ನೀರಿದೆ. ಕೃಷಿ ಚಟುವಟಿಕೆಗೆ ನೀರು ಪೂರೈಕೆ ಸ್ಥಗಿತಗೊಳಿಸಲಾಗಿದ್ದು, ಈ ನೀರನ್ನು ಕೇವಲ ಕುಡಿಯುವ ಉದ್ದೇಶಕ್ಕೆ ಮಾತ್ರ ಬಳಸಲಾಗುತ್ತದೆ ಎಂದು ಅವರು ಸ್ಪಷ್ಟಪಡಿಸಿದರು.
ಅದೇ ರೀತಿ ಮಲಪ್ರಭಾ ನದಿಯಲ್ಲಿ ಸುಮಾರು 8 ಟಿಎಂಸಿ ನೀರಿನ ಸಂಗ್ರಹವಿದ್ದು, ಅದರಲ್ಲಿ ಜಿಲ್ಲಾಡಳಿತದ ನಿಯಂತ್ರಣದಲ್ಲಿ 5 ಟಿಎಂಸಿ ನೀರು ಲಭ್ಯವಿದೆ. ಧಾರವಾಡ ಜಿಲ್ಲೆಗೆ ಜುಲೈ ಅಂತ್ಯದವರೆಗೆ 0.36 ಟಿಎಂಸಿ ನೀರಿನ್ ಅಗತ್ಯವಿದೆ ಎಂದು ಸವದತ್ತಿ ಮತ್ತು ಬೈಲಹೊಂಗಲ ಭಾಗಗಳಿಗೆ 0.03 ಟಿಎಂಸಿ ನೀರು ಪೂರೈಕೆ ಮಾಡಲಾಗುತ್ತದೆ ಎಂದು ಅವರು ತಿಳಿಸಿದರು.
ಈ ಹಿನ್ನೆಲೆಯಲ್ಲಿ ಹಿಡಕಲ್ ಹಾಗೂ ನವಿಲುತೀರ್ಥ ಜಲಾಶಯಗಳಲ್ಲಿ ಕುಡಿಯುವ ನೀರಿನ ತಕ್ಷಣದ ಸಮಸ್ಯೆ ಇಲ್ಲ ಎಂದು ಜಿಲ್ಲಾಧಿಕಾರಿ ಹೇಳಿದರು.
ಇದರ ಜೊತೆಗೆ ಬೆಳಗಾವಿ ನಗರದಲ್ಲಿ ತುರ್ತು ನಿಗಾ ಯೋಜನೆ, ರೂಪಿಸಲು ಮಹಾನಗರ ಪಾಲಿಗೆ ಆಯುಕ್ತರಿಗೆ ಸೂಚಿಸಲಾಗಿದೆ. ಖಾಸಗಿ ಬೋರ್ ವೆಲ್ ಗಳು ಹಾಗೂ ಟ್ಯಾಂಕರ್ ಗಳನ್ನು ಗುರುತಿಸಿ ಅವುಗಳನ್ನು ಅಗತ್ಯವಿದ್ದಲ್ಲಿ ವಶಕ್ಕೆ ಪಡೆದು ಬಾಡಿಗೆ ಆಧಾರದಲ್ಲಿ ಬಳಸಲಾಗುವುದು ಟ್ಯಾಂಕರ್ ದರ ನಿಗದಿ ಸೇರಿದಂತೆ ಎಲ್ಲಾ ಕ್ರಮಗಳನ್ನು ಜಿಲ್ಲಾ ವಿಪತ್ತು ನಿರ್ವಹಣೆ ಪ್ರಾಧಿಕಾರದಲ್ಲಿ ಅಂತಿಮ ಗೊಳಿಸಲಾಗುತ್ತದೆ ಎಂದು ಅವರು ಮಾಹಿತಿ ನೀಡಿದರು.
ಮುಂಗಾರು ಮಳೆ ಫೇಲ್ ಆಗುವ ಸಾಧ್ಯತೆ: ಈ ಬಾರಿ ಸೂಪರ್ ಎಲ್ ನಿನೋ ಉಂಟಾಗುತ್ತಿದೆ. ಪೆಸಿಫಿಕ್ ಮಹಾನಗರದ ನೀರಿನ ಮೇಲ್ಮೈ ತಾಪಮಾನದಲ್ಲಿ ಉಂಟಾಗುವ ನೈಸರ್ಗಿಕ ಬದಲಾವಣೆ ಮತ್ತು ಅದರದಿಂದ ಜಾಗತಿಕ ಹವಾಮಾನದಲ್ಲಿ ಏರುಪೇರು ಉಂಟಾಗಲಿದೆ. ಇದರಿಂದ ನಮ್ಮಲ್ಲಿ ಮಳೆ ಕೊರತೆ ಬರಗಾಲ ಮತ್ತು ಕೃಷಿ ವಲಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಹೀಗಾಗಿ ಈ ವರ್ಷ ಶೇ. 60ರಷ್ಟು ಮುಂಗಾರು ಮಳೆ ಫೇಲ್ ಆಗುವ ಸಾಧ್ಯತೆ ಇದೆ ಎಂದು ಜಿಲ್ಲಾಧಿಕಾರಿ ವಿವರಿಸಿದರು.
140 ವರ್ಷಕ್ಕೆ ಒಮ್ಮೆ ಈ ರೀತಿ ಸೂಪರ್ ಎಲ್ ನಿನೋದಿಂದ ಈ ರೀತಿ ಪರಿಸ್ಥಿತಿ ಉದ್ಭವಿಸುತ್ತದೆ. ಇಂತಹ ಸಂದರ್ಭದಲ್ಲಿ ಕುಡಿಯುವ ನೀರಿಗೆ ಮೊದಲ ಆದ್ಯತೆ ನೀಡುತ್ತೇವೆ. ಕುಡಿಯುವ ಸಾಕಷ್ಟು ನೀರಿದೆ ಎಂದ ನಂತರವೇ ಕೃಷಿ ಚಟುವಟಿಕೆ ಬಗ್ಗಿ ಗಮನಹರಿಸುತ್ತೇವೆ. ಒಂದು ವೇಳೆ ಬೆಳೆ ಹಾನಿಯಾದರೆ, ಬರಗಾಲ ಅಂತಾ ಘೋಷಿಸಿ, ಬೆಳೆ ಪರಿಹಾರವನ್ನು ನೀಡಲಾಗುತ್ತಿದೆ ಎಂದು ತಿಳಿಸಿದರು.
ಮಿತವಾಗಿ ನೀರು ಬಳಸಿ:
ಜಿಲ್ಲೆಯಲ್ಲಿ ಪ್ರಸ್ತುತ 36 ವಾರಗಳಿಗೆ ಸಾಕಾಗುವಷ್ಟು ಮೇವಿನ ಲಭ್ಯತೆ ಇದ್ದರೂ, ಮುಂದಿನ ಮೂರ್ನಾಲ್ಕು ವಾರಗಳ ಪರಿಸ್ಥಿತಿಯನ್ನು ಅವಲೋಕಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ. ಮುಂಗಾರು ಮುಗಿಯುವವರೆಗೆ ಜಿಲ್ಲೆಯಲ್ಲಿ ತಕ್ಷಣ ಮೇವಿನ ಕೊರೆತು ಉಂಟಾಗುವ ಸಾದ್ಯತೆ ಇಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಜಾನುವಾರುಗಳಿಗೆ ಅಗತ್ಯವಾದ ನೀರಿನ ವ್ಯವಸ್ಥೆಯನ್ನು ಗ್ರಾಮ ಪಂಚಾಯಿತಿಗಳು ಹಾಗೂ ಸ್ಥಳೀಯ ಸಂಸ್ಥೆಗಳ ಮೂಲಕ ಒದಗಿಸಲಾಗುವುದು ಗೋಶಾಲೆಗಳಲ್ಲಿಯೂ ನೀರಿನ ಸಂಗ್ರಹಣೆ ಕಡ್ಡಾಯವಾಗಿ ಮಾಡಲಾಗುತ್ತಿದ್ದು, ಈ ಎಲ್ಲ ಕಾರ್ಯಗಳನ್ನು ಜಿಲ್ಲಾ ಮಟ್ಟದ ಟಾಸ್ಕ್ ಫೋರ್ಸ್ ಸಮಿತಿ ನಿರಂತರವಾಗಿ ಮೇಲ್ವಿಚಾರಣೆ ಮಾಡಲಿದೆ ಎಂದು ಹೇಳಿದರು.
ಇದೇ ವೇಳೆ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ ಜಿಲ್ಲಾಧಿಕಾರಿ, " ಕಠಿಣ ಪರಿಸ್ಥಿತಿಯಲ್ಲಿ ಪ್ರತಿಯೊಂದು ಹನಿ ನೀರು ಮುಖ್ಯ. ಹೀಗಾಗಿ ನೀರನ್ನು ಬಹಳ ಮಿತವಾಗಿ ಬಳಸಬೇಕು" ಎಂದು ಮನವಿ ಮಾಡಿದರು.
ಸಾಮಾನ್ಯವಾಗಿ ಪ್ರತಿಯೊಬ್ಬರಿಗೆ ದಿನಕ್ಕೆ 135 ಲೀಟರ್ ನೀರು ಪೂರೈಕೆ ಮಾಡಲಾಗುತ್ತದೆ. ಆದರೆ ನೀರಿನ ಕೊರತೆ ಇರುವ ಸಂದರ್ಭಗಳಲ್ಲಿ ಅದನ್ನು ಇನ್ನಷ್ಟು ಕಡಿಮೆ ಮಾಡಬೇಕಾಗಬಹುದು ಎಂದು ಅವರು ಸೂಚಿಸಿದ್ದಾರೆ. ಸಾರ್ವಜನಿಕರು ಸಹಕರಿಸಿ ನೀರಿನ ಸಂರಕ್ಷಣೆಗೆ ಆದ್ಯತೆ ನೀಡಬೇಕು ಎಂದು ಅವರು ಒತ್ತಾಯಿಸಿದರು.
Also Read:
ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ಡಿಕೆ ಶಿವಕುಮಾರ್ ದಂಪತಿ : ಭಕ್ತಿಭಾವದ ಭೇಟಿ