Belagavi News:
ಬೆಂಗಳೂರು: ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ಸಂಘಟನೆಗೆ ಕಾನೂನು ನೆರವು ನೀಡಲು ಮಹಾರಾಷ್ಟ್ರ ಸರ್ಕಾರ ಕೈಗೊಂಡಿರುವ ನಿರ್ಧಾರಕ್ಕೆ ಕರ್ನಾಟಕ ಸಚಿವ ಪ್ರಿಯಾಂಕ್ ಖರ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯದ ನೆಲ, ಜಲ ಮತ್ತು ಭಾಷೆಯ ವಿಚಾರದಲ್ಲಿ ಯಾವುದೇ ಕಾರಣಕ್ಕೂ ಹಿಂದೆ ಸರಿಯುವ ಪ್ರಶ್ನೆಯಿಲ್ಲ ಎಂದು ಸ್ಪಷ್ಟಪಡಿಸಿದರು. ಮಹಾರಾಷ್ಟ್ರ, ಗೋವಾ, ತಮಿಳುನಾಡು, ಆಂಧ್ರ ಸೇರಿದಂತೆ ಯಾವುದೇ ರಾಜ್ಯದೊಂದಿಗೆ ಗಡಿ ಅಥವಾ ಇತರ ವಿಚಾರಗಳಿದ್ದರೂ ಅವುಗಳನ್ನು ಕಾನೂನಾತ್ಮಕವಾಗಿ ಎದುರಿಸಬೇಕು ಎಂದು ಹೇಳಿದರು.
ಗಡಿ ವಿಚಾರದಲ್ಲಿ ಸಂವಿಧಾನಾತ್ಮಕ ಹಾಗೂ ಕಾನೂನು ಮಾರ್ಗಗಳ ಮೂಲಕ ಹೋರಾಟ ನಡೆಸುವುದು ಸೂಕ್ತವಾಗಿದ್ದು, ಕರ್ನಾಟಕದ ಹಿತಾಸಕ್ತಿಗೆ ಧಕ್ಕೆಯಾಗುವ ಯಾವುದೇ ಕ್ರಮವನ್ನು ಸಹಿಸಲಾಗುವುದಿಲ್ಲ ಎಂದು ಪ್ರಿಯಾಂಕ್ ಖರ್ಗೆ ಅಭಿಪ್ರಾಯಪಟ್ಟರು.
ಯಾವುದೇ ಸಂಘಟನೆ ಅಥವಾ ನಾಯಕರು ಹೇಳಿದ ಮಾತ್ರಕ್ಕೆ ಗಡಿ ವಿಚಾರದಲ್ಲಿ ಬೇಕಾಬಿಟ್ಟಿಯಾಗಿ ಗೆರೆ ಎಳೆಯಲು ಸಾಧ್ಯವಿಲ್ಲ ಎಂದು ಸಚಿವ ಪ್ರಿಯಾಂಕ್ ಖರ್ಗೆ ಎಚ್ಚರಿಕೆ ನೀಡಿದ್ದಾರೆ. ಇದನ್ನು ಎಚ್ಚರಿಕೆ ಎಂದಾದರೂ ಪರಿಗಣಿಸಲಿ ಅಥವಾ ಮನವಿ ಎಂದಾದರೂ ತಿಳಿದುಕೊಳ್ಳಲಿ ಎಂದು ಅವರು ಹೇಳಿದರು.
ಕರ್ನಾಟಕದ ನೆಲದಲ್ಲಿ ಬಂದು ಪುಂಡಾಟಿಕೆ ನಡೆಸುವುದು, ಶಾಂತಿ ಸುವ್ಯವಸ್ಥೆಗೆ ಧಕ್ಕೆ ತರುವಂತಹ ಯಾವುದೇ ಚಟುವಟಿಕೆಗಳಿಗೆ ಅವಕಾಶ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದ ಅವರು, ಗಡಿ ಹಾಗೂ ಭಾಷೆಯ ವಿಚಾರದಲ್ಲಿ ರಾಜ್ಯದ ಹಿತಾಸಕ್ತಿಯನ್ನು ಕಾಪಾಡಲು ಸರ್ಕಾರ ಬದ್ಧವಾಗಿದೆ ಎಂದು ತಿಳಿಸಿದರು.
ಕಾನೂನಿನ ಚೌಕಟ್ಟಿನೊಳಗೆ ಯಾವುದೇ ವಿವಾದಗಳನ್ನು ಬಗೆಹರಿಸಿಕೊಳ್ಳಬೇಕು. ಆದರೆ ರಾಜ್ಯದಲ್ಲಿ ಅಶಾಂತಿ ಸೃಷ್ಟಿಸುವ ಅಥವಾ ಸಂಘರ್ಷಕ್ಕೆ ಕಾರಣವಾಗುವ ಪ್ರಯತ್ನಗಳನ್ನು ಸಹಿಸಲಾಗುವುದಿಲ್ಲ ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.
Also Read:
ಕೃಷ್ಣಾ ನದಿ ಪ್ರವಾಹ ಭೀತಿ:ಕುಡಚಿ ಉಗಾರಖುರ್ದ್ ಸೇತುವೆ ಮುಳುಗಡೆ, ಜಮಖಂಡಿ-ಮೀರಜ್ ಹೆದ್ದಾರಿ ಬಂದ್