Belagavi News:
ಚಿಕ್ಕಮಗಳೂರು: ಬಿಜೆಪಿ ಎಂಎಲ್ ಸಿ ಸಿ.ಟಿ. ರವಿ ಅವರ ಮುಲ್ಲಾಗಳಿಗೆ ಎದೆ ಸೀಳಿದರೆ ಮೂರು ಅಕ್ಷರ ಬರಲ್ಲ ಎಂಬ ಹೇಳಿಕೆ ರಾಜಕೀಯ ವಲಯದಲ್ಲಿ ಹೊಸ ವಿವಾದಕ್ಕೆ ಕಾರಣವಾಗಿದೆ. ಈ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿರುವ ಮುಸ್ಲಿಂ ಮುಖಂಡರು, ಸಮುದಾಯವನ್ನು ಅವಹೇಳನ ಮಾಡುವಂತಹ ಭಾಷೆಯನ್ನು ಬಳಸಬಾರದು ಎಂದು ಆಗ್ರಹಿಸಿದ್ದಾರೆ.
ಚಿಕ್ಕಮಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಸ್ಡಿಪಿಐ ಮುಖಂಡ ಅತೀಕ್ ಮುಸ್ಲಿಮರನ್ನು ಮುಂದಿಟ್ಟುಕೊಂಡು ರಾಜಕೀಯ ಮಾಡುವುದನ್ನು ಸಿ.ಟಿ. ರವಿ ನಿಲ್ಲಿಸಬೇಕು ಎಂದು ಒತ್ತಾಯಿಸಿದರು. ಮುಲ್ಲಾಗಳು ಯಾರು ಅನಕ್ಷರಸ್ಥರಲ್ಲ. ಪ್ರತಿಯೊಬ್ಬರೂ ಶಿಕ್ಷಣ ಪಡೆದ ಹಾಗೂ ಜವಾಬ್ದಾರಿಯುತ್ತ ವ್ಯಕ್ತಿಗಳಾಗಿದ್ದಾರೆ ಎಂದು ಅವರು ಹೇಳಿದರು.
ದೇಶದ ಅಭಿವೃದ್ಧಿಯಲ್ಲಿ ಮುಸ್ಲಿಂ ಸಮುದಾಯದ ಕೊಡುಗೆ ಮಹತ್ವದ್ದಾಗಿದೆ ಎಂದು ಉಲ್ಲೇಖಿಸಿದ ಅತೀಕ್, ಸಮಾಜವನ್ನು ವಿಭಜಿಸುವಂತಹ ಹೇಳಿಕೆಗಳಿಂದ ರಾಜಕೀಯ ಲಾಭ ಪಡೆಯುವ ಪ್ರಯತ್ನ ಯಶಸ್ವಿಯಾಗುವುದಿಲ್ಲ ಎಂದು ಹೇಳಿದರು. "ಬಿಳಿ ಕೂದಲಿನ ರಾಜಕೀಯ ಈಗ ನಡೆಯುವುದಿಲ್ಲ" ಎಂದು ಅವರು ಟೀಕಿಸಿದರು.
ಮುಂದೆ ಯಾವುದೇ ಸಾರ್ವಜನಿಕ ಭಾಷಣ ಮಾಡುವ ಮುನ್ನ ಯೋಚಿಸಿ ಮಾತನಾಡಬೇಕು ಎಂದು ಸಿ.ಟಿ. ರವಿಗೆ ಎಚ್ಚರಿಕೆ ನೀಡಿದ ಅತೀಕ್ , ಇಂತಹ ಹೇಳಿಕೆಗಳು ಮುಂದುವರಿದರೆ ಮುಸ್ಲಿಂ ಸಮುದಾಯ ಒಗ್ಗೂಡಿ ಸಿ.ಟಿ. ರವಿ ಅವರು ಚಿಕ್ಕಮಗಳೂರಿಗೆ ಪ್ರವೇಶಿಸಿದಂತೆ ತಡೆಯಲಿದೆ ಎಂದು ಎಚ್ಚರಿಕೆ ನೀಡಿದರು.
ಇದರ ಜೊತೆಗೆ, ತಮ್ಮ ಆರೋಪಗಳನ್ನು ಸಮರ್ಥಿಸಿಕೊಳ್ಳಲು ನೇರ ಚರ್ಚೆಗೆ ಬರಲು ಸಿಟಿ ರವಿಗೆ ಅತೀಕ್ ಸವಾಲು ಹಾಕಿದರು. ಈ ಬೆಳವಣಿಗೆಯಿಂದ ಸಿ.ಟಿ. ರವಿ ಹೇಳಿಕೆ ವಿವಾದ ಚಿಕ್ಕಮಗಳೂರು ಜಿಲ್ಲೆಯಲ್ಲಿ ಮತ್ತಷ್ಟು ರಾಜಕೀಯ ಚರ್ಚೆಗೆ ಕಾರಣವಾಗಿದ್ದು, ಮುಂದಿನ ದಿನಗಳಲ್ಲಿ ಈ ವಿಚಾರ ಯಾವ ತಿರುವು ಪಡೆಯಲಿದೆ ಎಂಬುದು ಕುತೂಹಲ ಮೂಡಿಸಿದೆ.
Also Read :
ಚಾಮರಾಜೇಶ್ವರಸ್ವಾಮಿ ಆಷಾಢ ಮಾಸದ ರಥೋತ್ಸವ : ದೇವರ ದರ್ಶನಕ್ಕೆ ಭಕ್ತರ ಸಾಗರ