BELAGAVI NEWS:
ಮೈಸೂರು: ಮೈಸೂರು ದಸರಾ ಕಂಬಳ ವಿವಾದದ ನಡುವೆ ಮತ್ತೊಂದು ಬೆಳವಣಿಗೆ ನಡೆದಿದೆ. ಕಂಬಳಕ್ಕಾಗಿ ಗುರುತಿಸಲಾಗಿರುವ ಸಾತಗಳ್ಳಿ ಪ್ರದೇಶದಲ್ಲಿ ಜಾಗ ಸ್ವಚ್ಛಗೊಳಿಸುವ ವೇಳೆ ಅನುಮತಿ ಪಡೆಯದೆ ಮರಗಳನ್ನು ಕಡಿದ ಆರೋಪದಡಿ ಅರಣ್ಯ ಇಲಾಖೆ ಎಫ್ಐಆರ್ ದಾಖಲಿಸಿದೆ.
ಈ ಪ್ರಕರಣದಲ್ಲಿ ಯುವಜನ ಸಬಲೀಕರಣ ಇಲಾಖೆಯ ಉಪನಿರ್ದೇಶಕರು ಸೇರಿದಂತೆ ಮೂವರ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ತಿಳಿದುಬಂದಿದೆ. ಕಂಬಳ ಆಯೋಜನೆಗಾಗಿ ಸ್ಥಳ ಸಿದ್ಧಪಡಿಸುವ ಸಂದರ್ಭದಲ್ಲಿ ಮರಗಳನ್ನು ಕಡಿದಿರುವ ಬಗ್ಗೆ ದೂರು ಬಂದೆ ಹಿನ್ನೆಲೆಯಲ್ಲಿ ಕ್ರಮ ಕೈಗೊಂಡಿದೆ.
ಘಟನೆ ಕುರಿತು ತನಿಖೆ ಮುಂದುವರೆದಿದ್ದು, ಮರ ಕಡಿತಕ್ಕೆ ಅಣುಮತಿ ಪಡೆಯಲಾಗಿತ್ತೆ ಅಥವಾ ನಿಯಮ ಉಲ್ಲಂಘನೆಯಾಗಿದೆಯೇ ಎಂಬುದನ್ನು ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ.
ಸಾತಗಳ್ಳಿ ಪ್ರದೇಶದಲ್ಲಿ ಕಂಬಳ ಯೋಜನೆಗಾಗಿ ಜಾಗ ಸಿದ್ದ ಪಡಿಸುವ ವೇಳೆ 20 ಜಾಲಿ ಮರಗಳು ಸೇರಿದಂತೆ ಒಟ್ಟು 25 ಮರಗಳನ್ನು ಕಡಿದಿರುವ ಆರೋಪ ಕೇಳಿಬಂದಿದೆ. ಈ ಸಂಬಂಧ ಅರಣ್ಯ ಕಾಯ್ದೆಯ ಸೆಕ್ಷನ್ 25, 33/2 ಹಾಗೂ 33/3ರ ಅಡಿಯಲ್ಲಿ ಅರಣ್ಯ ಇಲಾಖೆ ಎಫ್ಐಆರ್ ದಾಖಲಿಸಿದೆ.
ಮರಗಳ ಕಡಿತದ ವಿಚಾರಕ್ಕೆ ಪರಿಸರವಾದಿಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಈಗಾಗಲೇ ಇರುವ ಮರ-ಗಿಡಗಳನ್ನು ನಾಶಪಡಿಸಿ ಕಂಬಳ ಆಯೋಜಿಸುವಾಗ ಅಗತ್ಯವೇನು ಎಂದು ಅವರು ಪ್ರಶ್ನಿಸಿದ್ದಾರೆ.
ಮರಗಳನ್ನು ತೆರವುಗೊಳಿಸುವ ಬದಲು ಕಂಬಳವನ್ನು ಪರ್ಯಾಯ ಸ್ಥಳದಲ್ಲಿ ಆಯೋಜಿಸಬೇಕು ಅಥವಾ ಪರಿಸರಕ್ಕೆ ಯಾವುದೇ ಹಾನಿಯಾಗದಂತೆ ಕ್ರಮ ಕೈಗೊಳ್ಳಬೇಕು ಎಂದು ಪರಿಸರ ಸಂಘಟನೆಗಳು ಒತ್ತಾಯಿಸಿವೆ. ಪ್ರಕರಣದ ಕುರಿತು ಅರಣ್ಯ ಇಲಾಖೆ ತನಿಖೆ ಮುಂದುವರಿಸಿದೆ.