ನಮ್ಮ ಆತ್ಮಗಳನ್ನು ಎಂದಿಗೂ ಅಲುಗಾಡಿಸಲು ಸಾಧ್ಯವಿಲ್ಲ: ಇಸ್ರೇಲ್ ಪ್ರಧಾನಿ
ಭಯೋತ್ಪಾದನೆ ನಮ್ಮ ನಗರಗಳ ಮೇಲೆ ಅಪ್ಪಳಿಸಬಹುದು. ಆದರೆ ನಮ್ಮ ಆತ್ಮಗಳನ್ನು ಅಲುಗಾಡಿಸಲು ಸಾಧ್ಯವಿಲ್ಲ ಎಂದು ದೆಹಲಿಯಲ್ಲಿ ಉಗ್ರರು ನಡೆಸಿದ ಕಾರ್ ಬಾಂಬ್ ಸ್ಫೋಟವನ್ನು ಇಸ್ರೇಲ್ ಪ್ರಧಾನಿ ಖಂಡಿಸಿದ್ದಾರೆ.
ಟೆಲ್ ಅವಿವ್(ಇಸ್ರೇಲ್):
ಭಯೋತ್ಪಾದನೆಯನ್ನು ಮಟ್ಟ ಹಾಕಲು ಎರಡೂ ರಾಷ್ಟ್ರಗಳು ಹೊಂದಿರುವ ಕಠಿಣ ನಿಲುವನ್ನು ಅವರು ಒತ್ತಿ ಹೇಳಿದ್ದಾರೆ. ಇಂಥ ಕೃತ್ಯಗಳು ನಮ್ಮ ನಗರಗಳನ್ನು ಗುರಿಯಾಗಿಸಿಕೊಳ್ಳಬಹುದಷ್ಟೇ. ಆದರೆ, ಅದೆಂದಿಗೂ ನಮ್ಮ ದೇಶಗಳ ಮನೋಭಾವವನ್ನು ಮುರಿಯಲು ಸಾಧ್ಯವಿಲ್ಲ ಎಂದಿದ್ದಾರೆ.
ನಮ್ಮ ಆತ್ಮೀಯ ಸ್ನೇಹಿತರಾದ ನರೇಂದ್ರ ಮೋದಿ ಮತ್ತು ಭಾರತದ ಧೈರ್ಯಶಾಲಿ ಜನರಿಗೆ ನನ್ನ ಸಂತಾಪಗಳನ್ನು ವ್ಯಕ್ತಪಡಿಸುತ್ತಿದ್ದೇನೆ. ಸಾರಾ(ಪತ್ನಿ), ನಾನು ಮತ್ತು ಇಸ್ರೇಲ್ ಜನರು ಸಂತ್ರಸ್ತರ ಕುಟುಂಬಗಳಿಗೆ ನಮ್ಮ ಆಳವಾದ ಸಂತಾಪವನ್ನು ತಿಳಿಸುತ್ತಿದ್ದೇವೆ. ಈ ಸಂದರ್ಭದಲ್ಲಿ ಇಸ್ರೇಲ್ ನಿಮ್ಮೊಂದಿಗೆ ಬಲವಾಗಿ ನಿಲ್ಲುತ್ತದೆ ಎಂದು ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ.
ದೆಹಲಿಯ ಐತಿಹಾಸಿಕ ಕೆಂಪು ಕೋಟೆ ಸಮೀಪ ಸೋಮವಾರ ಉಗ್ರರು ಎಸಗಿದ ಕಾರ್ ಬಾಂಬ್ ಸ್ಫೋಟವನ್ನು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಖಂಡಿಸಿದ್ದಾರೆ. ಇದೇ ವೇಳೆ, ಪ್ರಧಾನಿ ನರೇಂದ್ರ ಮೋದಿ ಮತ್ತು ಭಾರತದ ಜನರಿಗೆ ತಮ್ಮ ಸಂತಾಪ ಸೂಚಿಸಿದ್ದಾರೆ.
ದೆಹಲಿಯಲ್ಲಿ ನಡೆದ ಕಾರ್ ಬಾಂಬ್ ಸ್ಫೋಟದಲ್ಲಿ ಕನಿಷ್ಠ 12 ಜನರು ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ. ಇದನ್ನು ಭಯೋತ್ಪಾದಕ ಕೃತ್ಯವೆಂದು ಕೇಂದ್ರ ಸರ್ಕಾರ ನಿನ್ನೆ ಅಧಿಕೃತವಾಗಿ ಘೋಷಿಸಿದ್ದು, ವಿವಿಧ ಸಂಸ್ಥೆಗಳು ತನಿಖೆ ನಡೆಸುತ್ತಿವೆ. ರಾಷ್ಟ್ರೀಯ ತನಿಖಾ ಸಂಸ್ಥೆ (NIA) ತಜ್ಞರನ್ನು ಒಳಗೊಂಡ ವಿಶೇಷ ತನಿಖಾ ತಂಡ ರಚಿಸಿದೆ. ಈ ತಂಡ ಪೊಲೀಸ್ ವರಿಷ್ಠಾಧಿಕಾರಿ ಮತ್ತು ಅದಕ್ಕಿಂತ ಹೆಚ್ಚಿನ ಶ್ರೇಣಿಯ ಹಿರಿಯ ಅಧಿಕಾರಿಗಳ ಮೇಲ್ವಿಚಾರಣೆಯಲ್ಲಿ ಕೆಲಸ ಮಾಡುತ್ತಿದೆ.
ಸುಭಾಷ್ ರಸ್ತೆಯ ಸಿಗ್ನಲ್ ಬಳಿ ಸೋಮವಾರ ಸಂಜೆ 7 ಗಂಟೆಯ ಸುಮಾರಿಗೆ ಸ್ಫೋಟ ಸಂಭವಿಸಿತ್ತು. ನಿಧಾನವಾಗಿ ಚಲಿಸುತ್ತಿದ್ದ ಹುಂಡೈ ಐ20 ಕಾರು ಇದ್ದಕ್ಕಿದ್ದಂತೆ ಸ್ಫೋಟಗೊಂಡು ಹಲವರು ಪ್ರಾಣ ಕಳೆದುಕೊಂಡರೆ, ಹತ್ತಿರದಲ್ಲಿದ್ದ ಅನೇಕ ವಾಹನಗಳು ಜಖಂಗೊಂಡಿದ್ದವು. ದೆಹಲಿಯ ಅತ್ಯಂತ ಜನನಿಬಿಡ ಪಾರಂಪರಿಕ ಪ್ರದೇಶದಲ್ಲೇ ಉಗ್ರರು ಎಸಗಿದ ಈ ಸ್ಫೋಟದಿಂದಾಗಿ ದೇಶಾದ್ಯಂತ ಕಟ್ಟೆಚ್ಚರ ವಹಿಸಲಾಗಿದೆ.
ಉಭಯ ದೇಶಗಳ ನಡುವಿನ ಬಲವಾದ ದ್ವಿಪಕ್ಷೀಯ ಬಾಂಧವ್ಯವನ್ನು ಇದೇ ಸಂದರ್ಭದಲ್ಲಿ ನೆತನ್ಯಾಹು ಪುನರುಚ್ಚರಿಸಿದ್ದಾರೆ. ಭಾರತ-ಇಸ್ರೇಲ್ ಪರಸ್ಪರ ಹಂಚಿಕೆಯ ಮೌಲ್ಯಗಳು ಮತ್ತು ಗಟ್ಟಿ ಮನೋಭಾವದಿಂದ ಒಗ್ಗೂಡಿದ ಪ್ರಾಚೀನ ನಾಗರಿಕತೆಗಳಾಗು ಎಂದು ಬಣ್ಣಿಸಿದ್ದಾರೆ. ನಮ್ಮದು ಶಾಶ್ವತ ಸತ್ಯಗಳ ಮೇಲೆ ನಿಂತಿರುವ ಪ್ರಾಚೀನ ನಾಗರಿಕತೆಗಳು. ನಮ್ಮ ದೇಶಗಳ ಬೆಳಕು ನಮ್ಮ ಶತ್ರುಗಳ ಕತ್ತಲೆಯನ್ನು ಮೀರಿಸುತ್ತದೆ ಎಂದು ಅವರು ತಿಳಿಸಿದ್ದಾರೆ.
ಘೋರ ಭಯೋತ್ಪಾದನಾ ಕೃತ್ಯ-ಕೇಂದ್ರ ಸರ್ಕಾರ:
ಕಾರು ಸ್ಫೋಟದಲ್ಲಾದ ಜೀವಹಾನಿಗೆ ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಕೇಂದ್ರ ಸಚಿವ ಸಂಪುಟ ತೀವ್ರ ದುಃಖ ವ್ಯಕ್ತಪಡಿಸಿತು. ಸಚಿವ ಸಂಪುಟ ಸಭೆಯ ಬಳಿಕ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ ಕೇಂದ್ರ ರೈಲ್ವೆ, ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅಶ್ವಿನಿ ವೈಷ್ಣವ್, ದೇಶ ವಿರೋಧಿ ಶಕ್ತಿಗಳು ನಡೆಸಿದ ಘೋರ ಭಯೋತ್ಪಾದಕ ಘಟನೆಯನ್ನು ರಾಷ್ಟ್ರ ಕಂಡಿದೆ. ಈ ಸ್ಫೋಟವು ಹಲವಾರು ಸಾವು - ನೋವುಗಳಿಗೆ ಕಾರಣವಾಗಿದೆ ಎಂದು ಸಂಪುಟದ ನಿರ್ಣಯವನ್ನು ಉಲ್ಲೇಖಿಸಿ ಮಾಹಿತಿ ಒದಗಿಸಿದರು.
ಇನ್ನಷ್ಟು ಓದಿರಿ :
ಹಸೀನಾ ವಿರುದ್ಧ ನ.17ರಂದು ತೀರ್ಪು ಪ್ರಕಟಿಸಲಿರುವ ಬಾಂಗ್ಲಾದೇಶ ವಿಶೇಷ ನ್ಯಾಯಮಂಡಳಿ