Belagavi News:
ನವದೆಹಲಿ: ಸಾರ್ವಜನಿಕ ಪರೀಕ್ಷೆಗಳು (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ, 2026ರ ಕುರಿತು ಕೇಂದ್ರ ಸರ್ಕಾರ ಮತ್ತು ವಿರೋಧ ಪಕ್ಷಗಳ ನಡುವಿನ ಬಿಕ್ಕಟ್ಟು ಅಂತ್ಯಗೊಂಡಿದೆ. ಲೋಕಸಭೆ ಸ್ಪೀಕರ್ "ಓಂ ಬಿರ್ಲಾ" ಅವರ ಮಧ್ಯಸ್ಥಿಕೆಯ ಬಳಿಕ ಇಂದು ಮಸೂದೆ ಕುರಿತು ಸಮಗ್ರ ಚರ್ಚೆ ನಡೆಸಲು ಪ್ರಮುಖ ರಾಜಕೀಯ ಪಕ್ಷಗಳ ನಡುವೆ ಒಮ್ಮತ ಮೂಡಿದೆ.
ನೀಟ್ -ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿಗಳ ಪ್ರತಿಭಟನೆ ವೇಳೆ ಪೊಲೀಸರು ಲಾಠಿಚಾರ್ಜ್ ಹಾಗೂ ಪೆಲೆಟ್ ಗನ್ ಬಳಸಿದ್ದಾರೆ ಎಂಬ ಆರೋಪದ ಕುರಿತು ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಸ್ಪಷ್ಟನೆ ನೀಡಬೇಕು ಎಂದು ಒತ್ತಾಯಿಸಿ ವಿರೋಧ ಪಕ್ಷದ ಸದಸ್ಯರು ಸಂಸತ್ ಕಲಾಪಕ್ಕೆ ಅಡ್ಡಿಪಡಿಸಿದ್ದರು. ಇದರ ಪರಿಣಾಮವಾಗಿ ಸೋಮವಾರ ಲೋಕಸಭೆ ಮತ್ತು ರಾಜ್ಯಸಭೆ ಕಲಾಪವನ್ನು ದಿನದ ಮಟ್ಟಿಗೆ ಮುಂದೂಡಲಾಗಿತ್ತು.
ಈ ಹಿನ್ನೆಲೆಯಲ್ಲಿ ಸ್ಪೀಕರ್ ಓಂ ಬಿರ್ಲಾ, ಸಾರ್ವಜನಿಕ ಪರೀಕ್ಷೆಗಳ ಪಾರದರ್ಶಕತೆ ಮತ್ತು ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯಕ್ಕೆ ಸಂಬಂಧಿಸಿದ ಈ ವಿಚಾರದ ಕುರಿತು ಎಲ್ಲಾ ಪಕ್ಷಗಳು ಅರ್ಥಪೂರ್ಣ ಚರ್ಚೆಗೆ ಸಹಕರಿಸಬೇಕು ಎಂದು ಮನವಿ ಮಾಡಿದ್ದರು.
ಇದೀಗ ಇಂದು ಮಸೂದೆ ಕುರಿತು ಸುಮಾರು 10 ಗಂಟೆಗಳ ಕಾಲ ಚರ್ಚೆ ನಡೆಯುವ ಸಾಧ್ಯತೆ ಇದೆ. ಬಳಿಕ ಮಸೂದೆಯನ್ನು ಅಂಗೀಕರಿಸುವ ಪ್ರಕ್ರಿಯೆ ಮುಂದುವರಿಯಲಿದ್ದು, ನಾಳೆ ಅನುಮೋದನೆ ದೊರೆಯುವ ನಿರೀಕ್ಷೆ ಇದೆ ಎಂದು ಮೂಲಗಳು ತಿಳಿಸಿವೆ.
ಸ್ಪೀಕರ್ ಓಂ ಬಿರ್ಲಾ ಅವರು ವಿವಿಧ ರಾಜಕೀಯ ಪಕ್ಷಗಳ ನಾಯಕರೊಂದಿಗೆ ವೈಯಕ್ತಿಕವಾಗಿ ಮಾತುಕತೆ ನಡೆಸಿದ್ದು, ಇದರ ಫಲವಾಗಿ ಆಡಳಿತ ಪಕ್ಷ ಮತ್ತು ವಿರೋಧ ಪಕ್ಷಗಳ ನಡುವೆ ಚರ್ಚೆ ನಡೆಸಲು ಒಮ್ಮತ ಮೂಡಿದೆ.
ಪ್ರಶ್ನೆ ಪತ್ರಿಕೆ ಸೋರಿಕೆ, ಪರೀಕ್ಷಾ ಅಕ್ರಮ, ವಂಚನೆ ಹಾಗೂ ಸಂಘಟಿತ ಪರೀಕ್ಷಾ, ಮಾಫಿಯಾಗಳನ್ನು ತಡೆಯುವುದು ಈ ತಿದ್ದುಪಡಿ ಮಸೂದೆಯ ಪ್ರಮುಖ ಉದ್ದೇಶವಾಗಿದೆ. ಚರ್ಚೆಯ ವೇಳೆ ರಾಜಕೀಯ ಪಕ್ಷಗಳು ಮಸೂದೆಯಲ್ಲಿರುವ ಅಂಶಗಳ ಬಗ್ಗೆ ತಮ್ಮ ಸಲಹೆಯನ್ನು ಮತ್ತು ತಿದ್ದುಪಡಿಗಳನ್ನು ಮಂಡಿಸುವ ಅವಕಾಶ ಹೊಂದಿವೆ.
ವಿರೋಧ ಪಕ್ಷಗಳು ಈಗಾಗಲೇ ಮಸೂದೆಗೆ ಸಂಬಂಧಿಸಿದಂತೆ 93 ತಿದ್ದುಪಡಿಗಳನ್ನು ಸಲ್ಲಿಸಿವೆ ಎಂದು ತಿಳಿದುಬಂದಿದೆ. ಚರ್ಚೆಯ ನಂತರ ಸರ್ಕಾರ ಈ ಸಲಹೆಗಳಿಗೆ ಪ್ರತಿಕ್ರಿಯಿಸಿದ, ಬಳಿಕ ಮಸೂದೆಯನ್ನು ಸದನದ ಅನುಮೋದನೆಗಾಗಿ ಮಂಡಿಸಲಿದೆ.
Also Read :
ಚಿಕ್ಕಮಗಳೂರಿನಲ್ಲಿ ಮುಲ್ಲಾ ಹೇಳಿಕೆ ವಿವಾದ: ಸಿಟಿ ರವಿ ಪ್ರವೇಶಕ್ಕೆ ಮುಸ್ಲಿಂ ಮುಖಂಡರು ವಿರೋಧ