Belagavi News :
ಬೆಳಗಾವಿ: ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ವಾರ್ಷಿಕ ಅಖಿಲ ಭಾರತೀಯ ಪ್ರಾಂತ ಪ್ರಚಾರಕರ ಬೈಠಕ್ ಭಾನುವಾರ ಬೆಳಗಾವಿಯಲ್ಲಿ ಮುಕ್ತಾಯಗೊಂಡಿತು. ಸಭೆಯಲ್ಲಿ ಅಯೋಧ್ಯೆಯ ಶ್ರೀರಾಮ ಜನ್ಮಭೂಮಿ ರಾಮಮಂದಿರದ ದಾನ ಪೆಟ್ಟಿಗೆಯ ಕಾಣಿಕೆ ಎಣಿಕೆಗೆ ಸಂಬಂಧಿಸಿದ ಅಕ್ರಮದ ಆರೋಪಗಳ ಬಗ್ಗೆ ಸರಸಂಘಚಾಲಕ ಡಾ. ಮೋಹನ್ ಭಾಗವತ್ ಸೇರಿದಂತೆ ಪ್ರಮುಖರು ಕಳವಳ ವ್ಯಕ್ತಪಡಿಸಿದ್ದಾರೆ ಎಂದು ಉತ್ತರ ಕರ್ನಾಟಕ ಪ್ರಚಾರ ವಿಭಾಗ ಪ್ರಮುಖ ಕೃಷ್ಣಾ ಜೋಶಿ ತಿಳಿಸಿದ್ದಾರೆ.
ನಗರದ ಅನಗೋಳದಲ್ಲಿರುವ ಜನ ಕಲ್ಯಾಣ ಟ್ರಸ್ಟ್ ನ ಸಂತ ಮೀರಾ ಶಾಲೆಯಲ್ಲಿ ಮೂರು ದಿನಗಳ ಕಾಲ ನಡೆದ ಸಭೆಯ ಬಳಿಕ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಕೃಷ್ಣಾ ಜೋಶಿ, ರಾಮ ಮಂದಿರ ತೀರ್ಥಕ್ಷೇತ್ರ ನ್ಯಾಸದ ಮನವಿಯ ಮೇರೆಗೆ ನಡೆಯುತ್ತಿರುವ ಎಸ್ಐಟಿ ಹಾಗೂ ಪೊಲೀಸ್ ತನಿಖೆ ನಿರ್ಣಾಯಕ ಹಂತ ತಲುಪಲಿದೆ ಎಂದು ವಿಶ್ವಾಸವನ್ನು ಸಭೆಯಲ್ಲಿ ವ್ಯಕ್ತಪಡಿಸಲಾಗಿದೆ ಎಂದು ಹೇಳಿದರು.
ಭವಿಷ್ಯದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ತೀರ್ಥಕ್ಷೇತ್ರ ನ್ಯಾಸದ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು. ಯಾವುದೇ ಅಕ್ರಮದ ಆರೋಪಗಳಿಂದ ಸಮಸ್ತ ರಾಮಭಕ್ತರ ರಾಮ ಮಂದಿರದ ಮೇಲಿರುವ ಶ್ರದ್ಧೆ ಮತ್ತು ನಂಬಿಕೆಗೆ ಧಕ್ಕೆಯಾಗದಂತೆ ನೋಡಿಕೊಳ್ಳಬೇಕು ಎಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಯಿತು ಎಂದು ಅವರು ತಿಳಿಸಿದರು.
ಈ ಬೈಠಕ್ ನಲ್ಲಿ ಸರಸಂಘಚಾಲಕ ಡಾ. ಮೋಹನ್ ಭಾಗವತ್, ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೇ ಸೇರಿದಂತೆ 226 ಕಾರ್ಯಕರ್ತರು ಭಾಗವಹಿಸಿದ್ದರು. ಮಾರ್ಚ್ 2026ರ ನಂತರ ದೇಶಾದ್ಯಂತ ನಡೆದ ಸಂಘದ ವಿವಿಧ ತರಬೇತಿ ವರ್ಗಗಳ ಪರಿಶೀಲನೆಯು ಸಭೆಯಲ್ಲಿ ನಡೆಯಿತು. ಈ ವರ್ಷ 83 ಸಂಘ ಶಿಕ್ಷಾ ವರ್ಗಗಳು ಹಾಗೂ 12 ಕಾರ್ಯಕರ್ತ ವಿಕಾಸ ವರ್ಗಗಳು ನಡೆದಿದ್ದು, ಒಟ್ಟು 18,842 ಸ್ವಯಂಸೇವಕರು ತರಬೇತಿ ಪಡೆದಿದ್ದಾರೆ ಎಂದು ಕೃಷ್ಣಾ ಜೋಶಿ ಮಾಹಿತಿ ನೀಡಿದರು.
ಶಾಖಾ ಸಂಚಾಲನೆ, ಸಂಘ ಕಾರ್ಯಪದ್ಧತಿ, ಗ್ರಾಮ ವಿಕಾಸ್, ಕುಟುಂಬ ಪ್ರಬೋಧನ, ವಿಪತ್ತು ನಿರ್ವಹಣೆ ಮತ್ತು ಪರಿಸರ ಸಂರಕ್ಷಣೆ ಸೇರಿದಂತೆ ವಿವಿಧ ವಿಷಯಗಳಲ್ಲಿ ಸ್ವಯಂಸೇವಕರಿಗೆ ತರಬೇತಿ ನೀಡಲಾಗಿದೆ ಎಂದು ಅವರು ವಿವರಿಸಿದರು.
ಅಖಿಲ ಭಾರತ ಪ್ರಚಾರ ಪ್ರಮುಖ ಸುನೀಲ್ ಅಂಬೇಕರ್ ಮಾತನಾಡಿ, ಶಾಖಾ ಮಟ್ಟದಲ್ಲಿ ಕಾರ್ಯ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಕುರಿತು ಬೈಠಕ್ ನಲ್ಲಿ ಸುದೀರ್ಘ ಚರ್ಚೆ ನಡೆಸಲಾಗಿದೆ ಎಂದು ತಿಳಿಸಿದರು. ಸೆಪ್ಟೆಂಬರ್ ತಿಂಗಳಲ್ಲಿ ಗರಿಷ್ಠ ಶಾಖಾ ವಿಸ್ತರಣೆ ಅಭಿಯಾನ ಕೈಗೊಳ್ಳುವ ಯೋಜನೆ, ಸಂಘದ ಶತಾಬ್ದಿ ವರ್ಷದ ಅಂಗವಾಗಿ ನಡೆದ ಕಾರ್ಯಕ್ರಮಗಳ ಅವಲೋಕನ ಹಾಗೂ ಮುಂದಿನ ಕಾರ್ಯಕ್ರಮಗಳ ರೂಪುರೇಷೆಗಳ ಬಗೆಯು ಸಭೆಯಲ್ಲಿ ಚರ್ಚೆಯಾಯಿತು ಎಂದರು.
ಶತಾಬ್ದಿ ವರ್ಷದ ವಿವಿಧ ಕಾರ್ಯಕ್ರಮಗಳ ಮೂಲಕ ಸಂಪರ್ಕಕ್ಕೆ ಬಂದ ಜನರನ್ನು ಸಾಮಾಜಿಕ ಸೇವಾ ಚಟುವಟಿಕೆಗಳು ಹಾಗೂ ' ಪಂಚ ಪರಿವರ್ತನೆ' ಅಭಿಯಾನದಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವ ಯೋಜನೆಯ ಕುರಿತು ಸಭೆಯಲ್ಲಿ ವಿಚಾರ ವಿನಿಮಯ ನಡೆಯಿತು. ಇದೇ ವೇಳೆ 2026- 27ನೇ ಸಾಲಿನ ಸರಸಂಘಚಾಲಕರ ಪ್ರವಾಸದ ಯೋಜನೆಯ ಬಗ್ಗೆಯೂ ಚರ್ಚಿಸಲಾಯಿತು ಎಂದು ಅವರು ಮಾಹಿತಿ ನೀಡಿದರು.
ದೇಶದ ಪ್ರಸ್ತುತ ಸನ್ನಿವೇಶಕ್ಕೆ ಸಂಬಂಧಿಸಿದ ಹಲವು ಮಹತ್ವದ ವಿಷಯಗಳ ಮೇಲು ಬೈಠಕ್ ನಲ್ಲಿ ಗಮನಹರಿಸಲಾಯಿತು. ಜನಗಣತಿ, ಜನಸಂಖ್ಯಾ ಅಸಮತೋಲನದಿಂದ ಎದುರಾಗುವ ಸವಾಲುಗಳು, ಡ್ರಗ್ಸ್ ಬಳಕೆಯಿಂದ ಹೆಚ್ಚುತ್ತಿರುವ ದುಷ್ಪರಿಣಾಮಗಳು ಹಾಗೂ ವ್ಯಸನಮುಕ್ತ ಸಮಾಜ ನಿರ್ಮಾಣಕ್ಕೆ ಆದ್ಯತೆ ನೀಡುವ ಅಗತ್ಯದ ಕುರಿತು ಕಳವಳ ವ್ಯಕ್ತಪಡಿಸಲಾಯಿತು.
ಇದರ ಜೊತೆಗೆ ಸಂತ ಶಿರೋಮಣಿ ರವಿದಾಸ ಮಹಾರಾಜರ 560ನೇ ಜಯಂತ್ಯುತ್ಸವದ ಅಂಗವಾಗಿ ಹಮ್ಮಿಕೊಳ್ಳಲಿರುವ ಕಾರ್ಯಕ್ರಮಗಳ ಯೋಜನೆ ಕುರಿತು ಸಹ ಸಭೆಯಲ್ಲಿ ಚರ್ಚೆ ನಡೆದಿದ್ದು, ಸಮಾಜಮುಖಿ ಚಟುವಟಿಕೆಗಳನ್ನು ಇನ್ನಷ್ಟು ಬಳಪಡಿಸುವ ಸಂಕಲ್ಪ ವ್ಯಕ್ತವಾಯಿತು ಎಂದು ಸುನೀಲ್ ಅಂಬೇಕರ್ ಹೇಳಿದರು.