3,300 ರೂ. ದರ ನಿಗದಿ ಅವೈಜ್ಞಾನಿಕ; 3,500 ರೂ. ದರಕ್ಕಾಗಿ ಬೈಲಹೊಂಗಲ ಬಂದ್!
ನಿನ್ನೆ ಮುಖ್ಯಮಂತ್ರಿಗಳು ರಿಕವರಿ ಆಧಾರದ ಮೇಲೆ 3,300 ರೂ. ನೀಡುವುದಾಗಿ ಹೇಳಿರುವುದು ಅವೈಜ್ಞಾನಿಕ. ಇದನ್ನು ಕಬ್ಬು ಬೆಳೆಗಾರರು ಒಪ್ಪುವ ಪ್ರಶ್ನೆಯೇ ಇಲ್ಲ ಎಂದು ಮುಖಂಡರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬೆಳಗಾವಿ:
ಬೈಲಹೊಂಗಲ ನಗರದಲ್ಲಿ ಇಂದು ಬೆಳಗ್ಗೆಯಿಂದ ಅಂಗಡಿ - ಮುಂಗಟ್ಟು ಬಂದ್ ಮಾಡಿರುವ ಹೋರಾಟಗಾರರು, ರಾಜ್ಯ ಸರ್ಕಾರ ಮತ್ತು ಸಕ್ಕರೆ ಕಾರ್ಖಾನೆ ಮಾಲೀಕರ ವಿರುದ್ಧ ಘೋಷಣೆ ಮೊಳಗಿಸಿದರು. ಪ್ರತಿ ಟನ್ಗೆ 3,500 ರೂ. ಘೋಷಣೆ ಮಾಡಲೇಬೇಕು. ಅಲ್ಲಿಯವರೆಗೂ ಹೋರಾಟ ಮುಂದುವರಿಯುತ್ತದೆ. ನಿನ್ನೆ ಮುಖ್ಯಮಂತ್ರಿಗಳು ರಿಕವರಿ ಆಧಾರದ ಮೇಲೆ 3,300 ರೂ. ನೀಡುವುದಾಗಿ ಹೇಳಿರುವುದು ಅವೈಜ್ಞಾನಿಕ. ಇದನ್ನು ಕಬ್ಬು ಬೆಳೆಗಾರರು ಒಪ್ಪುವ ಪ್ರಶ್ನೆಯೇ ಇಲ್ಲ ಎಂದು ಮುಖಂಡರು ಅಸಮಾಧಾನ ವ್ಯಕ್ತಪಡಿಸಿದರು.
ರಿಕವರಿ ಆಧಾರದ ಮೇಲೆ ಪ್ರತಿ ಟನ್ ಕಬ್ಬಿಗೆ 3,300 ರೂ. ರಾಜ್ಯ ಸರ್ಕಾರ ಘೋಷಣೆ ಮಾಡುತ್ತಿದ್ದಂತೆ ಒಂದೆಡೆ ವಿಜಯೋತ್ಸವ ಆಚರಿಸುತ್ತಿದ್ದರೆ, ಮತ್ತೊಂದೆಡೆ 3,500 ರೂ. ದರವನ್ನೇ ನಿಗದಿಪಡಿಸುವಂತೆ ಹೋರಾಟ ಮುಂದುವರಿದಿದೆ. ಬೈಲಹೊಂಗಲ ಬಂದ್ ಮಾಡಿ
ರೈತರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಒಂದು ಟನ್ ಕಬ್ಬಿಗೆ ಹಿಂದೆ ನಿಗದಿಯಾಗಿದ್ದ 3,200ರ ಜತೆಗೆ ಹೆಚ್ಚುವರಿಯಾಗಿ 50 ರೂ. ಹಾಗೂ ರಾಜ್ಯ ಸರ್ಕಾರವು ಒಂದು ಅವಧಿಯ ಪ್ರೋತ್ಸಾಹ ಧನವಾಗಿ 50 ಪಾವತಿಸಲಿದೆ. ಸಾಗಣೆ ಮತ್ತು ಕಟಾವು ವೆಚ್ಚ ಹೊರತುಪಡಿಸಿ ಶೇ 11.25 ಇಳುವರಿ ಪ್ರಮಾಣ ಇರುವ ಪ್ರತಿ ಟನ್ ಕಬ್ಬಿಗೆ 3,300 ಹಾಗೂ ಶೇ. 10.5 ಇಳುವರಿ ಪ್ರಮಾಣ ಇರುವ ಕಬ್ಬಿಗೆ ₹3,200 ದರ ಸಿಗಲಿದೆ.
ಬೈಲಹೊಂಗಲಕ್ಕೆ ಬರುವ ಬಸ್ಗಳ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದ್ದು, ಅಂಗಡಿಗಳ ಮಾಲೀಕರು ಸ್ವಯಂ ಪ್ರೇರಣೆಯಿಂದ ಬಂದ್ ಮಾಡಿ ರೈತರ ಹೋರಾಟಕ್ಕೆ ಕೈಜೋಡಿಸಿದ್ದಾರೆ. ನಗರದ ಚನ್ನಮ್ಮ ವೃತ್ತದಲ್ಲಿ ರಾಜಕೀಯ ನಾಯಕರು, ರೈತ ಮುಖಂಡರು ಕಳೆದ ಆರು ದಿನಗಳಿಂದ ಅಹೋರಾತ್ರಿ ಧರಣಿ ಕುಳಿತಿದ್ದಾರೆ. ಇಂದು ಬೈಲಹೊಂಗಲ ಬಂದ್ ಮಾಡುವ ಮೂಲಕ ಸರ್ಕಾರಕ್ಕೆ ಬಿಸಿ ಮುಟ್ಟಿಸುವ ಕೆಲಸ ಮಾಡಿದ್ದಾರೆ.
ಜೆಡಿಎಸ್ ಜಿಲ್ಲಾಧ್ಯಕ್ಷ ಶಂಕರ ಮಾಡಲಗಿ ಮಾತನಾಡಿ, ಮುಖ್ಯಮಂತ್ರಿಗಳು 3,300 ರೂ.ದರ ಘೋಷಿಸಿರುವುದಕ್ಕೆ ನಮ್ಮ ಒಪ್ಪಿಗೆ ಇಲ್ಲ ಅಂತಾ ಕಾರ್ಖಾನೆ ಮಾಲೀಕರು ಹೇಳುತ್ತಿದ್ದಾರೆ. ಎರಡು ಟ್ರಾಲಿಯಲ್ಲಿ ಏನಿಲ್ಲ ಅಂದರೂ ಐದು ಟನ್ ತೂಕದಲ್ಲಿ ಕಾರ್ಖಾನೆಯವರು ಮೋಸ ಮಾಡುತ್ತಾರೆ. ಇದಕ್ಕೆ ಸರ್ಕಾರ, ಮುಖ್ಯಮಂತ್ರಿ ಮತ್ತು ಸಕ್ಕರೆ ಸಚಿವರ ಉತ್ತರ ಏನು? 50 ರೂ. ಕೊಟ್ಟು 5 ಟನ್ ಹೊಡೆದರೆ ಅಲ್ಲಿಯೇ ನಮ್ಮ 15 ಸಾವಿರ ಹೋಗುತ್ತದೆ ಎಂದು ಆರೋಪಿಸಿದರು.
3,300 ರೂ. ದರದ ಬಗ್ಗೆ ಯಾವುದೇ ಸ್ಪಷ್ಟ ಆದೇಶವನ್ನು ಸರ್ಕಾರ ಹೊರಡಿಸಿಲ್ಲ. ಅದು ರಿಕವರಿ ಆಧಾರದ ಮೇಲೆ ದರ ಕೊಡುತ್ತಾರೆ. ಈ ರಿಕವರಿಯನ್ನು ಸ್ಪಷ್ಟಪಡಿಸುವವರು ಯಾರು? ಸರ್ಕಾರ, ಜಿಲ್ಲಾಧಿಕಾರಿ ಮತ್ತು ಜಿಲ್ಲಾಡಳಿತ ನೋಡುತ್ತದೆಯೇ? ಅದನ್ನು ಕಾರ್ಖಾನೆಯವರೇ ನಿರ್ಧರಿಸುತ್ತಾರೆ. ಹಾಗಾಗಿ, ಈ ಎಲ್ಲಾ ಗೊಂದಲಗಳನ್ನು ನಿವಾರಿಸಬೇಕು. ಆ ನಿಟ್ಟಿನಲ್ಲಿ 3500 ರೂ. ದರ ಘೋಷಣೆ ಮಾಡಿದ ಆದೇಶ ಪ್ರತಿ ನಮಗೆ ತಲುಪಿಸಬೇಕು. ಅಲ್ಲಿಯವರೆಗೂ ಹೋರಾಟ ಮುಂದುವರಿಯುತ್ತದೆ ಎಂದು ಶಂಕರ ಮಾಡಲಗಿ ರಾಜ್ಯ ಸರ್ಕಾರಕ್ಕೆ ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ರೈತ ಮುಖಂಡರಾದ ಶ್ರೀಶೈಲ ಬೋಳಣ್ಣವರ, ಭೀರಪ್ಪ ದೇಶನೂರ, ಮಹಾಂತೇಶ ಕಮತ, ಬಸನಗೌಡ ಪಾಟೀಲ, ನ್ಯಾಯವಾದಿ ಎಫ್.ಎಸ್.ಸಿದ್ದನಗೌಡರ ಸೇರಿ ಮತ್ತಿತರರು ಇದ್ದರು.
ಸದ್ಯ ಗುರ್ಲಾಪುರ ಕ್ರಾಸ್ನಲ್ಲಿ ರೈತರ ಪ್ರತಿಭಟನಾ ವೇದಿಕೆಗೆ ಸಕ್ಕರೆ ಸಚಿವ ಶಿವಾನಂದ ಪಾಟೀಲ ಆಗಮಿಸಿ ಅಲ್ಲಿ ಸರ್ಕಾರದ ಆದೇಶದ ಕುರಿತು ಹೋರಾಟಗಾರರಿಗೆ ಮಾಹಿತಿ ನೀಡುತ್ತಿದ್ದಾರೆ. ಇದರ ಜೊತೆಗೆ ಬೆಳಗಾವಿ, ಬಾಗಲಕೋಟೆ, ವಿಜಯಪುರ ಜಿಲ್ಲೆಗಳ ತಾಲ್ಲೂಕು ಪ್ರದೇಶಗಳಲ್ಲಿ ಹೋರಾಟ ಮುಂದುವರಿದಿದ್ದು, ಮುಂದೆ ಇನ್ನು ಇದು ಸ್ವರೂಪ ಪಡೆದುಕೊಳ್ಳುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.
ಮತ್ತೊಂದೆಡೆ ರಾಜ್ಯ ಸರ್ಕಾರ 3,300 ರೂ. ದರ ಘೋಷಣೆ ಮಾಡಿದ ಹಿನ್ನೆಲೆಯಲ್ಲಿ ಬೆಳಗಾವಿ ಚನ್ನಮ್ಮ ವೃತ್ತದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ನಾರಾಯಣಗೌಡ ಬಣದಿಂದ ಪಟಾಕಿ ಸಿಡಿಸಿ, ಸಿಹಿ ಹಂಚಿ ವಿಜಯೋತ್ಸವ ಆಚರಿಸಲಾಯಿತು. ಈ ವೇಳೆ ಕರವೇ ಜಿಲ್ಲಾಧ್ಯಕ್ಷ ದೀಪಕ ಗುಡಗನಟ್ಟಿ, ರಾಜ್ಯ ಸಂಚಾಲಕ ಸುರೇಶ ಗವನ್ನವರ, ಗಣೇಶ ರೋಖಡೆ ಸೇರಿ ಮತ್ತಿತರರು ಇದ್ದರು.
ಮಾಜಿ ಶಾಸಕ ಡಾ.ವಿಶ್ವನಾಥ ಪಾಟೀಲ ಮಾತನಾಡಿ, ಶೇ.11.25 ರಿಕವರಿ ಇದ್ದರೆ 3,300 ರೂ., ಶೇ.10.25 ಇದ್ದರೆ 3,200 ರೂ. ದರ ನೀಡುವುದಾಗಿ ನಿನ್ನೆ ಮುಖ್ಯಮಂತ್ರಿಗಳು ಘೋಷಣೆ ಮಾಡಿದ್ದು ನಮಗೆ ಸಮಾಧಾನ ತಂದಿಲ್ಲ. ಇದರಿಂದ ರೈತರಿಗೆ ಅನುಕೂಲ ಆಗುವುದಿಲ್ಲ. ಹಾಗಾಗಿ, ಪ್ರತಿ ಟನ್ಗೆೆ 3,500 ರೂ. ದರ ನೀಡಬೇಕು. ಅಲ್ಲಿಯವರೆಗೂ ಹೋರಾಟ ಮುಂದುವರಿಯುವುದು ನಿಶ್ಚಿತ ಎಂದು ಎಚ್ಚರಿಸಿದ ಅವರು, ಬಹುತೇಕ ಸಕ್ಕರೆ ಕಾರ್ಖಾನೆಗಳ ಮಾಲೀಕರು ಶಾಸಕರು, ಸಚಿವರೇ ಇದ್ದಾರೆ. ಹಾಗಾಗಿ, ಅವರ ಮರ್ಜಿ ಕಾಯಲು ಈ ರೀತಿ ರೈತರ ಕಣ್ಣೊರೆಸುವ ಕೆಲಸ ಮಾಡಿದ್ದಾರೆ ಎಂದು ಆರೋಪಿಸಿದರು.
ಇನ್ನಷ್ಟು ಓದಿರಿ :
ಧರ್ಮಸ್ಥಳದಲ್ಲಿ 74 ಪ್ರತ್ಯೇಕ ಎಫ್ಐಆರ್ ದಾಖಲಿಸಿ ತನಿಖೆ ನಡೆಸಬೇಕು