Belagavi News :
ಮುಖ್ಯಾಂಶಗಳು;
• ಭಾರತೀಯ ಚಿತ್ರರಂಗದ ಲೆಜೆಂಡರಿ ಗಾಯಕಿ ಎಸ್. ಜಾನಕಿ ನಿಧನ
• ಅವರ ಆಸೆಯಂತೆ ಮೈಸೂರಿನಲ್ಲಿಯೇ ನೆರವೇರಲಿದೆ ಅಂತ್ಯಕ್ರಿಯೆ.
• ಮಹಾರಾಜ ಮೈದಾನದಲ್ಲಿ ಮಧ್ಯಾಹ್ನ 3 ಗಂಟೆ ತನಕ ಅಂತಿಮ ದರ್ಶನ.
ಲೆಜೆಂಡರಿ ಗಾಯಕಿ ಎಸ್. ಜಾನಕಿ (S.Janaki) ಅವರ ನಿಧನದ ಸುದ್ದಿ ಸಂಗೀತ ಲೋಕವನ್ನು ತೀವ್ರ ದುಃಖಕ್ಕೀಡು ಮಾಡಿದೆ. ಮೈಸೂರಿನಲ್ಲಿ ಅವರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಸಾವಿರಾರು ಅಭಿಮಾನಿಗಳು, ಚಿತ್ರರಂಗದ ಗಣ್ಯರು ಹಾಗೂ ರಾಜಕೀಯ ಮುಖಂಡರು ಆಗಮಿಸಿ ಅಂತಿಮ ನಮನ ಸಲ್ಲಿಸಿದ್ದಾರೆ.
ದಶಕಗಳ ಕಾಲ ತಮ್ಮ ಸುಮಧುರ ಕಂಠದಿಂದ ಸಂಗೀತಾಸತ್ತರ ಮನಗೆದ್ದಿದ್ದ ಎಸ್. ಜಾನಕಿ ಅವರಿಗೆ ಅಪಾರ ಅಭಿಮಾನಿ ಬಳಗವಿದೆ. ತಮ್ಮ ನೆಚ್ಚಿನ ಗಾಯಕಿಯನ್ನು ಕೊನೆಯ ಬಾರಿ ನೋಡಲು ಆಗಮಿಸಿದ ಅನೇಕ ಅಭಿಮಾನಿಗಳು ಕಣ್ಣೀರು ಹಾಕುತ್ತಾ ಭಾವುಕರಾದ ದೃಶ್ಯಗಳು ಮನಕಲಕುವಂತಿದ್ದವು.
ಮೈಸೂರಿನೊಂದಿಗೆ ಎಸ್. ಜಾನಕಿ ಅವರಿಗೆ ವಿಶೇಷ ನಂಟು ಇದ್ದ ಕಾರಣ, ನಗರದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿತ್ತು. ಅವರ ಅಮೋಘ ಗಾಯನ, ಸರಳ ವ್ಯಕ್ತಿತ್ವ ಮತ್ತು ಭಾರತೀಯ ಸಂಗೀತಕ್ಕೆ ನೀಡಿದ ಅಪಾರ ಕೊಡುಗೆಯನ್ನು ಸ್ಮರಿಸಿಕೊಂಡು ಅಭಿಮಾನಿಗಳು ಹಾಗೂ ಗಣ್ಯರು ಭಾವಪೂರ್ಣವಾಗಿ ಗೌರವ ನಮನ ಸಲ್ಲಿಸಿದರು.
ಮೈಸೂರು ಎಂದರೆ ಎಸ್. ಜಾನಕಿ ಅವರಿಗೆ ವಿಶೇಷ ಅಭಿಮಾನ ಮತ್ತು ಆತ್ಮೀಯತೆ ಇತ್ತು. ತಮ್ಮ ಜೀವನದ ಕೊನೆಯ ದಿನಗಳನ್ನು ಅವರು ಮೈಸೂರಿನಲ್ಲಿ ಕಳೆದಿದ್ದರು. ಅವರ ಇಚ್ಛೆಯಂತೆ ಮೈಸೂರಿನಲ್ಲೇ ಅಂತ್ಯಕ್ರಿಯೆ ನೆರವೇರಿಸಲಾಗುತ್ತಿದೆ.
ಮೈಸೂರಿನ ಮಹಾರಾಜ ಮೈದಾನದಲ್ಲಿ ಸಾರ್ವಜನಿಕರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಮಧ್ಯಾಹ್ನ 3 ಗಂಟೆಯವರೆಗೆ ಅಭಿಮಾನಿಗಳು ಅಂತಿಮ ನಮನ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಸಾವಿರಾರು ಅಭಿಮಾನಿಗಳು, ಗಣ್ಯರು ಹಾಗೂ ಸಂಗೀತಾಸಕ್ತರು ಆಗಮಿಸಿ ತಮ್ಮ ನೆಚ್ಚಿನ ಗಾಯಕಿಗೆ ಭಾವಪೂರ್ಣವಾಗಿ ವಿದಾಯ ಹೇಳುತ್ತಿದ್ದಾರೆ.