ಫಿಲಿಪೈನ್ಸ್ನಲ್ಲಿ ಭೀಕರ ಚಂಡಮಾರುತ: 114 ಮಂದಿ ಸಾವು
ಫಿಲಿಪೈನ್ಸ್ನಲ್ಲಿ ಭೀಕರ ಚಂಡಮಾರುತದಿಂದ ಉಂಟಾದ ಪ್ರವಾಹದಲ್ಲಿ 114 ಮಂದಿ ಸಾವಿಗೀಡಾಗಿದ್ದಾರೆ. ನೂರಾರು ಜನರು ನಾಪತ್ತೆಯಾಗಿದ್ದಾರೆ. ಈ ಮಧ್ಯೆ ಮತ್ತೊಂದು ಸೈಕ್ಲೋನ್ ಎಚ್ಚರಿಕೆ ನೀಡಲಾಗಿದೆ.
ಮನಿಲಾ (ಫಿಲಿಪೈನ್ಸ್) :
ಪ್ರತಿ ವರ್ಷ ಅಪ್ಪಳಿಸುವ ಚಂಡಮಾರುತದಿಂದ ಸೆಬು ಮಧ್ಯಪ್ರಾಂತ್ಯದಲ್ಲಿ ಹಠಾತ್ ಪ್ರವಾಹ ಉಂಟಾಗಿದೆ. ಇದರಿಂದ 127 ಮಂದಿ ಇನ್ನೂ ನಾಪತ್ತೆಯಾಗಿದ್ದಾರೆ ಎಂದು ಸರ್ಕಾರ ತಿಳಿಸಿದೆ. ಚಂಡಮಾರುತವು ಸುಮಾರು 2 ಮಿಲಿಯನ್ ಜನರ ಮೇಲೆ ಪರಿಣಾಮ ಬೀರಿದೆ. 5,60,000 ಕ್ಕೂ ಹೆಚ್ಚು ಜನರನ್ನು ಸ್ಥಳಾಂತರಿಸಲಾಗಿದೆ. ಇದರಲ್ಲಿ ಸುಮಾರು 4,50,000 ಜನರು ತುರ್ತು ಆಶ್ರಯ ಕೇಂದ್ರಗಳಲ್ಲಿದ್ದಾರೆ ಎಂದು ನಾಗರಿಕ ರಕ್ಷಣಾ ಕಚೇರಿ ತಿಳಿಸಿದೆ.
ಸದ್ಯ ಮಾರಕ ಚಂಡಮಾರುತ ದಕ್ಷಿಣ ಚೀನಾ ಸಮುದ್ರದ ಕಡೆ ಸಾಗಿದೆ. ದೇಶದ ಅಧ್ಯಕ್ಷ ಫರ್ಡಿನಾಂಡ್ ಮಾರ್ಕೋಸ್ ಜೂನಿಯರ್ ಅವರು ಗುರುವಾರ ತುರ್ತು ಪರಿಸ್ಥಿತಿ ಘೋಷಿಸುವ ಮೂಲಕ ಜನರ ರಕ್ಷಣೆಗೆ ಧಾವಿಸಿದ್ದಾರೆ.
ಚಂಡಮಾರುತ ಸೃಷ್ಟಿ ಮಾಡಿದ ಭೀಕರತೆ ಬಗ್ಗೆ ನಡೆದ ಸಭೆಯಲ್ಲಿ ಮಾರ್ಕೋಸ್ ಅವರು, ಇದೊಂದು ರಾಷ್ಟ್ರೀಯ ವಿಪತ್ತಾಗಿದೆ. ಜನರಿಗೆ ತುರ್ತು ನೆರವು ನೀಡಬೇಕಾಗಿದೆ. ಆಹಾರ ಸಂಗ್ರಹಣೆ ಮತ್ತು ಬೆಲೆ ಏರಿಕೆಯನ್ನು ತಡೆಯಲು ರಾಷ್ಟ್ರೀಯ ತುರ್ತು ಪರಿಸ್ಥಿತಿ ಘೋಷಿಸಲಾಗುತ್ತಿದೆ ಎಂದು ತಿಳಿಸಿದರು.
ಆಗ್ನೇಯ ಏಷ್ಯಾ ರಾಷ್ಟ್ರವಾದ ಫಿಲಿಪೈನ್ಸ್ ನೈಸರ್ಗಿಕ ವಿಕೋಪಕ್ಕೆ ತುತ್ತಾಗಿದೆ. 180 ಕಿಲೋ ಮೀಟರ್ ವೇಗದಲ್ಲಿ ಬೀಸಿದ ಚಂಡಮಾರುತದಿಂದ ಹಲವು ನಗರಗಳು ತೀವ್ರ ಹಾನಿಗೀಡಾಗಿವೆ. ಈವರೆಗೆ 114 ಮಂದಿ ಸಾವಿಗೀಡಾಗಿದ್ದರೆ, ನೂರಾರು ಮಂದಿ ಕಾಣೆಯಾಗಿದ್ದಾರೆ. ಇದರಿಂದ ಅಲ್ಲಿನ ಸರ್ಕಾರ ರಾಷ್ಟ್ರೀಯ ತುರ್ತು ಪರಿಸ್ಥಿತಿ ಘೋಷಿಸಿದೆ.
ರಕ್ಷಣಾ ಕಾರ್ಯಾಚರಣೆಯ ವೇಳೆ ದುರಂತ:
ದಕ್ಷಿಣ ಪ್ರಾಂತ್ಯದ ಅಗುಸನ್ ಡೆಲ್ ಸುರ್ನಲ್ಲಿ ರಕ್ಷಣಾ ಕಾರ್ಯಾಚರಣೆಯ ವೇಳೆ ವಾಯುಪಡೆಯ ಹೆಲಿಕಾಪ್ಟರ್ ಅಪಘಾತಕ್ಕೀಡಾಗಿದೆ. ಇದರಿಂದ ಆರು ಜನರು ಸಾವನ್ನಪ್ಪಿದ್ದಾರೆ. ಚಂಡಮಾರುತದಿಂದ ಹಾನಿಗೊಳಗಾದ ಪ್ರಾಂತ್ಯಗಳಿಗೆ ನೆರವು ನೀಡಲು ಸಿಬ್ಬಂದಿ ತೆರಳುತ್ತಿದ್ದರು. ಅಪಘಾತಕ್ಕೆ ನಿಖರ ಕಾರಣ ತಿಳಿದಿಲ್ಲ ಎಂದು ಎಂದು ಅಲ್ಲಿನ ಸೇನೆ ಹೇಳಿದೆ.
ಫಿಲಿಪೈನ್ಸ್ ಪ್ರತಿ ವರ್ಷ ಸುಮಾರು 20 ಚಂಡಮಾರುತಗಳನ್ನು ಎದುರಿಸುತ್ತದೆ. ದೇಶವು ಆಗಾಗ್ಗೆ ಭೂಕಂಪಗಳಿಂದಲೂ ಹಾನಿಗೀಡಾಗುತ್ತದೆ. ಒಂದು ಡಜನ್ಗಿಂತಲೂ ಹೆಚ್ಚು ಸಕ್ರಿಯ ಜ್ವಾಲಾಮುಖಿಗಳು ಇಲ್ಲಿವೆ. ಈ ದೇಶವು ವಿಶ್ವದ ಅತ್ಯಂತ ವಿಪತ್ತು ಪೀಡಿತ ರಾಷ್ಟ್ರಗಳಲ್ಲಿ ಒಂದಾಗಿದೆ.
ಮತ್ತೊಂದು ಚಂಡಮಾರುತ ಎಚ್ಚರಿಕೆ:
ಸೆಬು ಮಧ್ಯ ಪ್ರಾಂತ್ಯದಲ್ಲಿ ಭೀಕರತೆ ಸೃಷ್ಟಿಸಿದ್ದ ಚಂಡಮಾರುತ ಶಾಂತವಾದ ಬೆನ್ನಲ್ಲೇ, ಮತ್ತೊಂದು ಸೈಕ್ಲೋನ್ ಬಡಿಯುವ ಎಚ್ಚರಿಕೆಯನ್ನು ಹವಾಮಾನ ಇಲಾಖೆ ತಿಳಿಸಿದೆ. ಇದು ಉತ್ತರ ಫಿಲಿಪೈನ್ಸ್ಹಗೆ ಅಪ್ಪಳಿಸಬಹುದು. ಜನರು ಎಚ್ಚರ ವಹಿಸಬೇಕು ಎಂದು ಸೂಚನೆ ನೀಡಿದೆ.
ಕಲ್ಮೇಗಿಯಲ್ಲಿ ಹಠಾತ್ ಪ್ರವಾಹ ಉಂಟಾದರೆ, ಸೆಬು ಪ್ರಾಂತ್ಯದಲ್ಲಿ ನದಿ ಮತ್ತು ಇತರ ಜಲಮಾರ್ಗಗಳು ಉಕ್ಕಿ ಹರಿದವು. ಪರಿಣಾಮ ನೀರು ವಸತಿ ಪ್ರದೇಶವನ್ನು ಕೊಚ್ಚಿಕೊಂಡು ಹೋಗಿದೆ. ಸೆಬುವಿನಲ್ಲಿ ಕನಿಷ್ಠ 71 ಮಂದಿ ಸಾವಿಗೀಡಾಗಿದ್ದಾರೆ. 65 ಮಂದಿ ಕಾಣೆಯಾಗಿದ್ದರೆ, 69 ಮಂದಿ ಗಾಯಗೊಂಡಿದ್ದಾರೆ. ಸೆಬು ಬಳಿ ಇರುವ ನೀಗ್ರೋಸ್ ಆಕ್ಸಿಡೆಂಟಲ್ನ ಮಧ್ಯ ಪ್ರಾಂತ್ಯದಲ್ಲಿ 62 ಜನರು ಕಾಣೆಯಾಗಿದ್ದಾರೆ ಎಂದು ನಾಗರಿಕ ರಕ್ಷಣಾ ಕಚೇರಿ ತಿಳಿಸಿದೆ.
ಸಮುದ್ರದಲ್ಲಿ ಪ್ರಕ್ಷುಬದ್ಧತೆ ಹೆಚ್ಚಿರುವ ಕಾರಣ, ದೋಣಿಗಳು ಮತ್ತು ಮೀನುಗಾರಿಕೆಯನ್ನು ನಿಷೇಧಿಸಲಾಗಿದೆ. ಸುಮಾರು 100 ಬಂದರುಗಳಲ್ಲಿ 3,500 ಕ್ಕೂ ಹೆಚ್ಚು ಪ್ರಯಾಣಿಕರು ಮತ್ತು ಸರಕು ಟ್ರಕ್ ಚಾಲಕರು ಸಿಲುಕಿಕೊಂಡಿದ್ದಾರೆ ಎಂದು ಕರಾವಳಿ ಕಾವಲು ಪಡೆ ತಿಳಿಸಿದೆ. ಕನಿಷ್ಠ 186 ದೇಶಿಯ ವಿಮಾನಗಳ ಹಾರಾಟ ರದ್ದುಗೊಂಡಿದೆ.
ಇನ್ನಷ್ಟು ಓದಿರಿ :
ಟ್ರಂಪ್ ಹೇಳಿಕೆ ಬೆನ್ನಲ್ಲೇ ಪರಮಾಣು ಪರೀಕ್ಷೆ ಮತ್ತೆ ಆರಂಭಿಸಲು ಸಜ್ಜಾದ ರಷ್ಯಾ