BELAGAVI NEWS :
ಕೊಪ್ಪಳ, ಜೂನ್ 15: ಜಿಲ್ಲೆಯಲ್ಲಿ ಕುತೂಹಲ ಮತ್ತು ಭಕ್ತಿಭಾವ ಮೂಡಿಸಿರುವ ಅಪರೂಪದ ಘಟನೆಯೊಂದು ಬೆಳಕಿಗೆ ಬಂದಿದೆ. ಉದ್ಯಮಿಯೊಬ್ಬರ ಜಮೀನಿನಲ್ಲಿ ಶಿವಲಿಂಗ ಪತ್ತೆಯಾಗಿದ್ದು, ಈ ಘಟನೆ ಸ್ಥಳೀಯರ ಗಮನ ಸೆಳೆದಿದೆ, ಇನ್ನು ವಿಶೇಷವೆಂದರೆ ಈ ಶಿವಲಿಂಗಕ್ಕೂ ಕರ್ನಾಟಕದ ಸಿಎಂ ಡಿ.ಕೆ ಶಿವಕುಮಾರ್ ಅವರು ಹೆಸರಿಗೂ ಸಂಬಂಧ ಕಲ್ಪಿಸುವ ವಿಚಾರವೊಂದು ಇದೀಗ ಚರ್ಚೆಗೆ ಗ್ರಾಸವಾಗಿದೆ.
ಉದ್ಯಮಿ ಹೇಳುವ ಪ್ರಕಾರ, ತಮಗೆ ಮೊದಲೇ ಕನಸಿನಲ್ಲಿ ಕಂಡಿದ್ದ ದೃಶ್ಯದಂತೆ ಜಮೀನಿನಲ್ಲಿ ಶಿವಲಿಂಗ ಪತ್ತೆಯಾಗಿದ್ದು, ಇದನ್ನು ಅವರು ದೈವಿಕ ಸಂಕೇತವೆಂದು ನಂಬಿದ್ದಾರೆ. ಈ ಅಚ್ಚರಿಯ ಬೆಳವಣಿಗೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭಕ್ತರ ಕುತೂಹಲ ಹೆಚ್ಚಿಸಿದ್ದು, ಶಿವಲಿಂಗದ ದರ್ಶನಕ್ಕಾಗಿ ಜನರು ಆಗಮಿಸುತ್ತಿದ್ದಾರೆ.
ಇದೀಗ ಜಿಲ್ಲೆಯ ಜನರ ಹಿತ ದೃಷ್ಟಿಯಿಂದ ಹಾಗೂ ಧಾರ್ಮಿಕ ನಂಬಿಕೆಯ ಹಿನ್ನೆಲೆ ಈ ಅಪರೂಪದ ಶಿವಲಿಂಗವನ್ನು ಸಿಎಂ ಡಿ.ಕೆ ಶಿವಕುಮಾರ್ ಅವರ ಕೈಯಿಂದ ಪ್ರತಿಷ್ಠಾಪಿಸುವ ಅಥವಾ ಸಂಬಂಧಿತ ಧಾರ್ಮಿಕ ಕಾರ್ಯ ನಡೆಸುವ ಕುರಿತು ಉದ್ಯಮಿಯ ಆಸಕ್ತಿ ವ್ಯಕ್ತಪಡಿಸುವುದಾಗಿ ತಿಳಿದುಬಂದಿದೆ. ಈ ಘಟನೆ ಜಿಲ್ಲೆಯಾದ್ಯಂತ ಚರ್ಚೆಗೆ ಕಾರಣವಾಗಿದ್ದು, ದೈವಿಕ ಪವಾಡವೇ ಅಥವಾ ಕಾಕತಾಳಿಯ ಬೆಳವಣಿಗೆಯೇ ಎಂಬ ಬಗ್ಗೆ ಜನರಲ್ಲಿ ಕುತೂಹಲ ಮೂಡಿಸಿದೆ.
ಮುಖ್ಯಾಂಶಗಳು;
ಕೊಪ್ಪಳದ ಉದ್ಯಮಿ ಜಮೀನಿನಲ್ಲಿ ಶಿವಲಿಂಗ ಪತ್ತೆ
ಸಿಎಂ ಡಿ.ಕೆ ಶಿವಕುಮಾರ್ ಗೆ ಕೊಡಲು ಮುಂದಾದ ಉದ್ಯಮಿ
ಶಿವಲಿಂಗ ಪತ್ತೆಯಾದ ಸ್ಥಳದಲ್ಲಿ ನಾಗರಹಾವು ಪ್ರತ್ಯಕ್ಷ
ಕನಸು ಬಿದ್ದ ಮರುದಿನವೇ ಜಮೀನಿನಲ್ಲಿ ಶಿವಲಿಂಗ ಪತ್ತೆ!
ಕೊಪ್ಪಳ ತಾಲೂಕಿನ ಬಸಾಪೂರ ಸಮೀಪದ ಜಮೀನಿನಲ್ಲಿ ಪತ್ತೆಯಾದ ಶಿವಲಿಂಗದ ಕಥೆ ಇದೀಗ ಭಕ್ತರಲ್ಲಿ ಕುತೂಹಲ ಕೆರಳಿಸಿದೆ. ನಗರದ ಉದ್ಯಮಿ Vipin Kumar ಅವರಿಗೆ ಸೇರಿದ ಜಮೀನಿನಲ್ಲಿ ಈ ಶಿವಲಿಂಗ ಪತ್ತೆಯಾಗಿದ್ದು, ಅದಕ್ಕೂ ಮುನ್ನ ನಡೆದ ಘಟನೆಗಳು ಅಚ್ಚರಿ ಮೂಡಿಸುವಂತಿವೆ.
ವಿಪಿನ್ ಕುಮಾರ್ ಅವರ ಹೇಳಿಕೆಯ ಪ್ರಕಾರ, ಶಿವಲಿಂಗ ಪತ್ತೆಯಾಗುವ ಮುನ್ನ ರಾತ್ರಿ ಅವರಿಗೆ ವಿಚಿತ್ರ ಕನಸೊಂದು ಬಿದ್ದಿತ್ತಂತೆ. ಆ ಕನಸಿನಲ್ಲಿ ತಮಗೆ ಸಿಗುವ ಶಿವಲಿಂಗವನ್ನು ಪರಮ ಶಿವಭಕ್ತರೆಂದು ಗುರುತಿಸಲ್ಪಡುವ ಕರ್ನಾಟಕದ ಸಿಎಂ ಡಿ.ಕೆ ಶಿವಕುಮಾರ್ ಅವರಿಗೆ ಹಸ್ತಾಂತರಿಸಬೇಕು ಎಂಬ ಸಂದೇಶ ದೊರೆತಿದೆ ಎಂದು ಅವರು ತಿಳಿಸಿದ್ದಾರೆ.
ಇನ್ನು ಆಶ್ಚರ್ಯದ ಸಂಗತಿಯೆಂದರೆ, ಕನಸು ಕಂಡ ಮರುದಿನವೇ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ರೈತ Jadiyappa ಅವರಿಗೆ ಈ ಪವಿತ್ರ ಶಿವಲಿಂಗ ಪತ್ತೆಯಾಗಿದೆ. ಈ ಘಟನೆಯನ್ನು ದೈವಿಕ ಸಂಕೇತವೆಂದು ನಂಬಿರುವ ಉದ್ಯಮಿ, ಅಂದಿನಿಂದ ಶಿವಲಿಂಗವನ್ನು ಅತ್ಯಂತ ಭಕ್ತಿ ಭಾವದಿಂದ ಜೋಪಾನವಾಗಿಟ್ಟುಕೊಂಡಿದ್ದಾರೆ.
ಸ್ಥಳೀಯರ ಪ್ರಕಾರ, ಶಿವಲಿಂಗ ಇರಿಸಲಾಗಿರುವ ಸ್ಥಳಕ್ಕೆ ನಾಗರಹಾವೊಂದು ಪದೇ ಪದೇ ಬಂದು ಕಾಣಿಸಿಕೊಳ್ಳುತ್ತಿರುವುದು ಮತ್ತಷ್ಟು ವಿಸ್ಮಯ ಮತ್ತು ಭಕ್ತಿ ಭಾವಕ್ಕೆ ಕಾರಣವಾಗಿದೆ. ಕನಸು, ಶಿವಲಿಂಗ ಪತ್ತೆ ಮತ್ತು ನಾಗರಹಾವಿನ ಉಪಸ್ಥಿತಿ ಈ ಮೂರು ಸಂಗತಿಗಳು ಸೇರಿ ಬಸಾಪೂರ ಪ್ರದೇಶದಲ್ಲಿ ಈ ಘಟನೆಯನ್ನು ಭಾರಿ ಚರ್ಚೆಯ ವಿಷಯವನ್ನಾಗಿ ಮಾಡಿವೆ.
ಕನಸಿನಲ್ಲಿ ಬಂದ ಆದೇಶದಂತೆ ಉದ್ಯಮಿ ವಿಪಿನ್ ಕುಮಾರ್ ಈಗ ಶಿವಲಿಂಗವನ್ನು ಡಿ.ಕೆ ಶಿವಕುಮಾರ್ ಅವರಿಗೆ ಹಸ್ತಾಂತರಿಸಲು ಕಾತುರದಿಂದ ಕಾಯುತ್ತಿದ್ದಾರೆ. ಆದರೆ, ಈ ಭಕ್ತಿಯ ಹಿಂದೆ ಕೊಪ್ಪಳ ಜಿಲ್ಲೆಯ ಜನರ ಮತ್ತು ರೈತರ ಹಿತ ದೃಷ್ಟಿಯು ಅಡಗಿದೆ. ಬಸಾಪೂರ ಭಾಗದಲ್ಲಿ ಬಾಲ್ಡೋಟಾ ಕಾರ್ಖಾನೆ ವಿಸ್ತರಣೆಯಾಗದಂತೆ ತಡೆಯಬೇಕು ಎನ್ನುವುದು ಇಡೀ ಜಿಲ್ಲೆಯ ಜನರ ಹಾಗೂ ಸ್ಥಳೀಯರ ಒತ್ತಾಯವಾಗಿದೆ. ಒಂದು ವೇಳೆ ಕಾರ್ಖಾನೆ ವಿಸ್ತರಣೆಯಾದರೆ ಕೊಪ್ಪಳದ ಜನರಿಗೆ ಶುದ್ಧ ಗಾಳಿ ಸಿಗುವುದು ಕಷ್ಟವಾಗುತ್ತದೆ ಎಂದು ರೈತರಿಗೂ ಬಾರಿ ತೊಂದರೆಯಾಗುತ್ತದೆ ಎನ್ನುವುದು ಇವರ ಕಳಕಳಿಯಾಗಿದೆ.
ಸಿಎಂ ಡಿ.ಕೆ. ಶಿವಕುಮಾರ್ ಕೈ ಸೇರಲಿದೆಯೇ ಶಿವಲಿಂಗ?
ಕೊಪ್ಪಳದಲ್ಲಿ ಪತ್ತೆಯಾಗಿರುವ ಶಿವಲಿಂಗ ಇದೀಗ ಧಾರ್ಮಿಕ ನಂಬಿಕೆಯ ಜೊತೆಗೆ ಸಾಮಾಜಿಕ ಹೋರಾಟದ ಸಂಕೇತವಾಗಿಯೂ ಗಮನ ಸೆಳೆಯುತ್ತಿದೆ. ಬಾಲ್ಡೋಟಾ ಕಾರ್ಖಾನೆ ವಿಸ್ತರಣೆ ವಿರೋಧಿಸಿ ಕಳೆದ 25 ದಿನಗಳಿಂದ ನಡೆಯುತ್ತಿರುವ ಹೋರಾಟದ ನಡುವೆ ಪರಿಸರ ಸಂರಕ್ಷಣೆ ಮತ್ತು ರೈತರ ಹಿತಾಸಕ್ತಿಯ ವಿಚಾರವನ್ನು ಸರ್ಕಾರದ ಗಮನಕ್ಕೆ ತರಲು ಉದ್ಯಮಿ ವಿಪಿನ್ ಕುಮಾರ್ ಹೊಸ ಹೆಜ್ಜೆ ಇಟ್ಟಿದ್ದಾರೆ.
ತಮ್ಮ ಜಮೀನಲ್ಲಿ ಪತ್ತೆಯಾದ ಈ ಶಿವಲಿಂಗವನ್ನು ಕರ್ನಾಟಕದ ಸಿಎಂ ಡಿ.ಕೆ ಶಿವಕುಮಾರ್ ಅವರಿಗೆ ಹಸ್ತಾಂತರಿಸಿ, ಜಿಲ್ಲೆಯ ಜನರ ಸಾಮಾಜಿಕ ಕಳಕಳಿ ಮತ್ತು ಪರಿಸರ ಕಾಳಜಿಯನ್ನು ಮನದಟ್ಟು ಮಾಡಲು ಅವರ ಮುಂದಾಗಿದ್ದಾರೆ. ಸ್ಥಳೀಯರ ಅಭಿಪ್ರಾಯದಂತೆ ಈ ಶಿವಲಿಂಗವು ಕೇವಲ ಧಾರ್ಮಿಕ ಪ್ರತೀಕವಲ್ಲ, ಪರಿಸರ ಸಂರಕ್ಷಣೆಗಾಗಿ ನಡೆಯುತ್ತಿರುವ ಜನಾಂದೋಲನದ ಪ್ರತೀಕದವು ಆಗಿದೆ.
ಒಟ್ಟಾರೆಯಾಗಿ, ಕೊಪ್ಪಳದಲ್ಲಿ ಪತ್ತೆಯಾದ ಈ ಶಿವಲಿಂಗದ ಸುತ್ತ ನಿರ್ಮಾಣವಾಗಿರುವ ಬೆಳವಣಿಗೆಗಳು ರಾಜ್ಯದ ಗಮನ ಸೆಳೆಯುತ್ತಿವೆ. ಪರಿಸರ ಮಾಲಿನ್ಯ ಮುಕ್ತ ಕೊಪ್ಪಳದ ಕನಸಿನೊಂದಿಗೆ ಉದ್ಯಮಿ ಕೈಗೊಂಡಿರುವ ಈ ನಿರ್ಧಾರಕ್ಕೆ ಸ್ಥಳೀಯರ ಬೆಂಬಲವು ವ್ಯಕ್ತವಾಗುತ್ತಿದೆ. ಇದೀಗ ಶಿವಭಕ್ತರೆಂದು ಗುರುತಿಸಲ್ಪಡುವ ಡಿ.ಕೆ ಶಿವಕುಮಾರ್ ಅವರು ಈ ಶಿವಲಿಂಗವನ್ನು ಸ್ವೀಕರಿಸಿ, ಜನರ ಬೇಡಿಕೆಗಳ ಕುರಿತು ಯಾವ ರೀತಿಯ ಕ್ರಮ ಕೈಗೊಳ್ಳುತ್ತಾರೆ ಎಂಬುದು ಕುತೂಹಲ ಮೂಡಿಸಿದೆ.