Belagavi news:
ಬೆಂಗಳೂರು: ಕನ್ನಡ ಚಿತ್ರರಂಗದ ಖ್ಯಾತ ನಟ, ನಿರ್ದೇಶಕ ಹಾಗೂ ನಿರ್ಮಾಪಕ ದಿಲೀಪ್ ರಾಜ್ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರಿಗೆ 47 ವರ್ಷ ವಯಸ್ಸಾಗಿತ್ತು. ಹಿಟ್ಲರ್ ಕಲ್ಯಾಣ ಧಾರಾವಾಹಿ ಮೂಲಕ ಅಪಾರ ಜನಪ್ರಿಯತೆ ಗಳಿಸಿದ್ದ ದಿಲೀಪ್ ರಾಜ್ ಅವರ ಅಕಾಲಿಕ ನಿಧನ ಸ್ಯಾಂಡಲ್ ವುಡ್ ಹಾಗೂ ಅಭಿಮಾನಿ ವಲಯದಲ್ಲಿ ಆಘಾತ ಮೂಡಿಸಿದೆ.
ಕಿರುತೆರೆ ಮತ್ತು ಹಿರಿತೆರೆಯಲ್ಲಿ ತಮ್ಮದೇ ಆದ ನಟನಾ ಶೈಲಿಯಿಂದ ಗುರುತಿಸಿಕೊಂಡಿದ್ದ ದಿಲೀಪ್ ರಾಜ್ ಪ್ರತಿಭಾವಂತ ಕಲಾವಿದರಾಗಿದ್ದರು. ಇಂದು ಮುಂಜಾನೆ ಹೃದಯಾಘಾತವಾದ ಹಿನ್ನೆಲೆಯಲ್ಲಿ ಅವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದಾರೆ.
ದಿಲೀಪ್ ರಾಜ್ ನಿಧನ ಸುದ್ದಿ ತಿಳಿದ ತಕ್ಷಣ ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳು ಮತ್ತು ಸಿನಿ ತಾರೆಯರು ಸಂತಾಪ ಸೂಚಿಸುತ್ತಿದ್ದಾರೆ. ಹಲವು ವರ್ಷಗಳಿಂದ ಕನ್ನಡ ಕಿರುತೆರೆ ಮತ್ತು ಸಿನಿಮಾ ರಂಗದಲ್ಲಿ ಸಕ್ರಿಯರಾಗಿದ್ದ ಅವರು ಅನೇಕ ಜನಪ್ರಿಯದ ಧಾರಾವಾಹಿ ಹಾಗೂ ಚಿತ್ರಗಳಲ್ಲಿ ಅಭಿನಯಿಸಿ ಪ್ರೇಕ್ಷಕರ ಮನೆಗೆದ್ದಿದ್ದರೂ.
ಕನ್ನಡ ಚಿತ್ರರಂಗದಲ್ಲಿ ನಾಯಕ ನಟ, ಖಳನಟ ಹಾಗೂ ಪೋಷಕ ಪಾತ್ರಗಳಲ್ಲಿ ಅಭಿನಯಿಸಿ ಹೆಸರು ಮಾಡಿದ್ದರು. ಜೊತೆಗೆ ಕಂಠದಾನ ಕಲಾವಿದರಾಗಿಯು ಗುರುತಿಸಿಕೊಂಡಿದ್ದರು. 2007 ರಲ್ಲಿ ಪುನೀತ್ ರಾಜಕುಮಾರ್ ಅವರೊಂದಿಗೆ ಅಭಿನಯಿಸಿದ ಮಿಲನ್ ಚಿತ್ರದ ಮೂಲಕ ಹೆಚ್ಚು ಜನಪ್ರಿಯತೆ ಪಡೆದರು. ನಂತರ ತಮ್ಮ "DR Creations" ಬ್ಯಾನರ್ ಅಡ್ಡಿಯಲ್ಲಿ ಹಲವು ಧಾರಾವಾಹಿಗಳನ್ನು ನಿರ್ಮಿಸಿದರು.
ಕನ್ನಡಿಗರ ಮನೆ ಮಾತಾಗಿದ್ದ ಹಿಟ್ಲರ್ ಕಲ್ಯಾಣ ಸೀರಿಯಲ್ ನಲ್ಲಿ ನಾಯಕನಾಗಿ ನಟಿಸುವ ಮೂಲಕ ದಿಲೀಪ್ ರಾಜ್ ವ್ಯಾಪಕ ಜನಪ್ರಿಯತೆ ಗಳಿಸಿದ್ದರು. ನಟನೆ, ನಿರ್ದೇಶನ ಮತ್ತು ನಿರ್ಮಾಣದ ಜೊತೆಗೆ ರಂಗಭೂಮಿಯಲ್ಲಿಯು ಸಕ್ರಿಯರಾಗಿದ್ದ ಅವರು, ಪ್ರಸಿದ್ಧ ಡಬ್ಬಿಂಗ್ ಕಲಾವಿದರಾಗಿಯು ಗುರುತಿಸಿಕೊಂಡಿದ್ದರು.
ಮಿಲನ್, ಯೂ ಟರ್ನ್, ಗಾನ್ ಬಜಾನ, ಅಂಬಿ ನಿಂಗ್ ವಯಸ್ಸಾಯ್ತೋ, ಇತ್ತೀಚಿಗೆ ಬಿಡುಗಡೆಯಾದ ಲವ್ ಮಾಕ್ಟೇಲ್ 3 ಸೇರಿದಂತೆ ಸುಮಾರು 25ಕ್ಕೂ ಹೆಚ್ಚು ಸಿನಿಮಾಗಳಲ್ಲಿ ದಿಲೀಪ್ ರಾಜ್ ಅಭಿನಯಿಸಿದ್ದರು. ಅವರ ಪತ್ನಿಯು ಸೀರಿಯಲ್ ನಿರ್ದೇಶಕಿಯಾಗಿದ್ದು, ಹಲವು ದಾರವಾಹಿಗಳ ನಿರ್ಮಾಣದಲ್ಲೂ ದಿಲೀಪ್ ರಾಜ್ ತೊಡಗಿಸಿಕೊಂಡಿದ್ದರು.
ಶ್ರದ್ಧಾಂಜಲಿಯ ಪೋಸ್ಟ್ ಹಂಚಿಕೊಂಡಿರುವ ಜೀ ಕನ್ನಡ, " ನಟ, ನಿರ್ದೇಶಕ, ನಿರ್ಮಾಪಕ ದಿಲೀಪ್ ರಾಜ್ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ!" ಎಂದು ಬರೆದುಕೊಂಡಿದ್ದಾರೆ. ಅಭಿಮಾನಿಗಳು ಸಂತಾಪ ಸೂಚಿಸುತ್ತಿದ್ದಾರೆ.
ಜೀ ಕನ್ನಡದಲ್ಲಿ ಪ್ರಸಾರವಾದ ಹಿಟ್ಲರ್ ಕಲ್ಯಾಣ್ ಧಾರಾವಾಹಿ ತನ್ನ ವಿಭಿನ್ನ ಕಥಾಹಂದರ ಮತ್ತು ಮನಸೂರೆಗೊಳ್ಳುವ ಪಾತ್ರಗಳ ಮೂಲಕ ವ್ಯಾಪಕ ಜನಪ್ರಿಯತೆ ಗಳಿಸಿತ್ತು. 2021ರ ಆಗಸ್ಟ್ 9ರಂದು ಆರಂಭವಾದ ಈ ಧಾರಾವಾಹಿ 2024ರ ಮಾರ್ಚ್ 14ರಂದು ಯಶಸ್ವಿಯಾಗಿ ಪೂರ್ಣಗೊಂಡಿತು.
ಈ ಧಾರಾವಾಹಿಯಲ್ಲಿ ದಿಲೀಪ್ ರಾಜ್ ಗಂಭೀರ ವ್ಯಕ್ತಿತ್ವದ ನಾಯಕನಾಗಿ ಕಾಣಿಸಿಕೊಂಡಿದ್ದು ಅವರ ಅಮೋಘ ಅಭಿನಯಕ್ಕೆ ಪ್ರೇಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿದರು. ಕನ್ನಡದ ಟಾಪ್ ಸೀರಿಯಲ್ ಗಳ ಪೈಕಿ ಹಿಟ್ಲರ್ ಕಲ್ಯಾಣ ಕೂಡ ಒಂದು ವಿಶೇಷ ಸ್ಥಾನ ಪಡೆದಿತ್ತು.
ನಟಿ ಮಲೈಕಾ ವಸುಪಾಲ್ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ ಈ ಧಾರಾವಾಹಿಯನ್ನು ದಿಲೀಪ್ ರಾಜ್ ಸ್ವತಃ ನಿರ್ಮಾಣ ಮಾಡಿದ್ದರು. ಧಾರಾವಾಹಿಗೆ ತ್ರಿಶೂಲ್ ನಿರ್ದೇಶನ ನೀಡಿದ್ದರು.
Also Read: