ಪುಟ್ಟ ಗಾತ್ರದ 'ಕಿಯೊ' ಪಿಸಿ ಬೆಂಗಳೂರು ಟೆಕ್ ಸಮ್ಮಿಟ್ ಆಕರ್ಷಣೆ
ಬೆಂಗಳೂರು ಟೆಕ್ ಶೃಂಗಸಭೆಯಲ್ಲಿ ರಾಜ್ಯ ಸರ್ಕಾರ ಕಿಯೊ (KEO) ಪಿಸಿ ಬಿಡುಗಡೆ ಮಾಡಿದೆ. ಇದು ರಾಜ್ಯಾದ್ಯಂತ ವಿದ್ಯಾರ್ಥಿಗಳು, ಸಣ್ಣ ವ್ಯವಹಾರಗಳು ಮತ್ತು ಮನೆಗಳಿಗೆ ಡಿಜಿಟಲ್ ಸೌಲಭ್ಯ ಸುಧಾರಣೆಗೆ ನೆರವಾಗಲಿದೆ.
ಬೆಂಗಳೂರು:
ಬೆಂಗಳೂರು ಟೆಕ್ ಸಮ್ಮಿಟ್ನಲ್ಲಿ ಕಿಯೊನಿಕ್ಸ್ ಅಭಿವೃದ್ಧಿಪಡಿಸಿರುವ ಕಿಯೊ ಪಿಸಿಯನ್ನು ಅನಾವರಣಗೊಳಿಸಲಾಯಿತು. ಈ ಪುಟ್ಟ ಗಾತ್ರದ ಪಿಸಿ ಬೆಲೆ 18,999 ರೂ. ಇರಲಿದೆ. ಕೆಇಒ ಖರೀದಿಯ ಮುಂಗಡ ಆರ್ಡರ್ ಮಾಡಬಹುದಾಗಿದೆ. 'ಕಿಯೊ' ಕಂಪ್ಯೂಟರನ್ನು ಸಂಪೂರ್ಣವಾಗಿ ಕರ್ನಾಟಕದಲ್ಲಿ ವಿನ್ಯಾಸಗೊಳಿಸಲಾದ ಮತ್ತು ಅಭಿವೃದ್ಧಿಪಡಿಸಲಾದ ಕಾಂಪ್ಯಾಕ್ಟ್ ಕೈಗೆಟುಕುವ, ಕೃತಕ ಬುದ್ಧಿಮತ್ತೆಯ ಪರ್ಸನಲ್ ಕಂಪ್ಯೂಟರ್ ಆಗಿದೆ.
ಈ 'ಕಿಯೊ' ಪಿಸಿ ಸದ್ಯಕ್ಕೆ 8 ಜಿಬಿ RAM ಹೊಂದಿದೆ.
ಆಂತರಿಕ ಸ್ಟೋರೇಜ್ ಸಾಮರ್ಥ್ಯ ಸುಮಾರು 32 ಜಿಬಿ ಇದ್ದು, ಅದನ್ನು 1 ಟಿಬಿ ತನಕ ವಿಸ್ತರಿಸಬಹುದಾಗಿದೆ. ಈ ಪುಟ್ಟ ಕಿಯೊ ಪಿಸಿಯ ಭಾರ ಕೇವಲ 300 ಗ್ರಾಂ. ಬೆಂಗಳೂರು ಟೆಕ್ ಸಮ್ಮಿಟ್ನಲ್ಲಿ ಈ ಮಿನಿ ಪಿಸಿ ಕಿಯೊವನ್ನು ಪ್ರದರ್ಶನ ಮಳಿಗೆಯಲ್ಲಿ ಇಡಲಾಗಿದ್ದು, ಎಲ್ಲರ ಗಮನ ಸೆಳೆಯುತ್ತಿದೆ. ಈ ಮಿನಿ ಪಿಸಿಯ ದರವನ್ನು 18,999 ರೂ. ನಿಗದಿಪಡಿಸಲಾಗಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಅಗ್ಗದ, ಪುಟ್ಟ ಗಾತ್ರದ ಕೃತಕ ಬುದ್ಧಿಮತ್ತೆಯ ಪರ್ಸನಲ್ ಕಂಪ್ಯೂಟರ್ 'ಕಿಯೊ'ವನ್ನು ಸಿಎಂ ಸಿದ್ದರಾಮಯ್ಯ ಅಧಿಕೃತವಾಗಿ ಬಿಡುಗಡೆ ಮಾಡಿದ್ದು, ಟೆಕ್ ಸಮ್ಮಿಟ್ನ ಆಕರ್ಷಣೆಯ ಕೇಂದ್ರಬಿಂದುವಾಗಿ ಹೊರಹೊಮ್ಮುತ್ತಿದೆ.
'ಕಿಯೊ' ಹೊಂದಿದೆ 64 ಬಿಟ್ ಚಿಪ್:
ಶಾಲೆಗಳು, ವಿಶ್ವವಿದ್ಯಾಲಯಗಳು, ಸಣ್ಣ ಉದ್ದಿಮೆಗಳು, ಸರ್ಕಾರಿ ಕಚೇರಿಗಳು ಮತ್ತು ಮನೆಗಳಲ್ಲಿ ಕೆಇಒ ಬಳಕೆಗೆ ಸಹಕಾರಿಯಾಗಿದೆ. ಡಿಜಿಟಲ್ ಕಲಿಕೆ, ಕೌಶಲ್ಯ ಮತ್ತು ಉದ್ಯಮಶೀಲತೆಗೆ ಇದು ಹೊಸ ಮಾರ್ಗಗಳನ್ನು ಸೃಷ್ಟಿಸಲಿದೆ. ಈ ಪಿಸಿಯ 64 ಬಿಟ್ ಚಿಪ್ ಅನ್ನು ಬೆಂಗಳೂರು ಆಧಾರಿತ ಸೆಮಿಕಂಡಕ್ಟರ್ ಫ್ಯಾಬ್ಲೆಸ್ ಮ್ಯಾನ್ಯುಫ್ಯಾಕ್ಚರರ್ ಅಭಿವೃದ್ಧಿಪಡಿಸಿದೆ. ಆರ್ಐಎಸ್ಸಿ-V ಪ್ರೊಸೆಸರ್ ಶಕ್ತಿಯುತ ಚಿಪ್ ಇದಾಗಿದೆ.
ಬೆಂಗಳೂರು ತಂತ್ರಜ್ಞಾನ ಶೃಂಗಸಭೆಯಲ್ಲಿ ಬಹಳಷ್ಟು ಮಂದಿ ಈ ಮಿನಿ ಪಿಸಿ ಕಿಯೊ ಬಗ್ಗೆ ಮಾಹಿತಿ ಪಡೆಯುತ್ತಿರುವುದು ಕಂಡು ಬಂತು. ಹಲವರು ಕಿಯೊ ಪಿಸಿ ಕಾರ್ಯನಿರ್ವಹಣೆ, ತಂತ್ರಜ್ಞಾನ, ಹಾರ್ಡ್ವೇರ್ ಅಂಶಗಳ ಬಗ್ಗೆ ಮಾಹಿತಿ ಪಡೆದುಕೊಳ್ಳುತ್ತಿದ್ದರು. ಈಗಾಗಲೇ ಎನ್ಜಿಒದಿಂದ ಶಾಲೆಗಳಲ್ಲಿ ಬಳಸಲು ಸುಮಾರು 500 ಕಿಯೊ ಪಿಸಿಗಾಗಿ ಪ್ರಿ-ಆರ್ಡರ್ ಬುಕ್ ಮಾಡಲಾಗಿದೆ.
ಕಂಪ್ಯೂಟಿಂಗ್ ಬಳಕೆಯ ಅನುಭವ:
ಜ್ಞಾನ ಆಧಾರಿತ (ಕೆ), ಮಿತವ್ಯಯ (ಇ) ಮತ್ತು ಮುಕ್ತ - ಕಂಪ್ಯೂಟಿಂಗ್ (ಓಪನ್ ಸೋರ್ಸ್) -ಕಿಯೊ' ವಿದ್ಯಾರ್ಥಿ ಸಮುದಾಯದ ಕಲಿಕೆಗೆ ನೆರವಾಗಲಿದೆ. ಲಿನಕ್ಸ್ ಆಧಾರಿತ ಅಪರೇಟಿಂಗ್ ಸಿಸ್ಟಮ್ (ಬಎನ್) ಹೊಂದಿರುವ ಓಪನ್ - ಸೋರ್ಸ್ ಆರ್ಐಎಸ್ಸಿ-ವಿ ಪ್ರೊಸೆಸರ್ನಲ್ಲಿ ನಿರ್ಮಿಸಿರುವ 'ಕಿಯೊ' ಕೈಗೆಟುಕುವ ಬೆಲೆಯಲ್ಲಿ ಸಂಪೂರ್ಣ ಕಂಪ್ಯೂಟಿಂಗ್ ಬಳಕೆಯ ಅನುಭವ ನೀಡಲಿದೆ.
ಇದು 4ಜಿ ವೈ-ಫೈ, ಈಧರ್ನೆಟ್, ಯುಎಸ್ಬಿ - ಎ ಮತ್ತು ಯುಎಸ್ಬಿ - ಸಿ ಪೋರ್ಟ್ಗಳು, ಹೆಚ್ಡಿಎಂಐ ಮತ್ತು ಆಡಿಯೋ ಪ್ಯಾಕ್ ಸೌಲಭ್ಯ ಹೊಂದಿದೆ. ಕಲಿಕೆ, ಪ್ರೋಗ್ರಾಮಿಂಗ್ ಮತ್ತು ಉತ್ಪಾದಕತೆ ಪರಿಕರಗಳೊಂದಿಗೆ ಸಂಪೂರ್ಣ ಸಜ್ಜಾಗಿದೆ.
ಅನ್ - ಡಿವೈಸ್ ಎಐ ಕೋರ್ ಒಳಗೊಂಡಿದ್ದು, ಇದು ಇಂಟರ್ನೆಟ್ ಲಭ್ಯವಿರದಿದ್ದರೂ ಸ್ಥಳೀಯವಾಗಿ ಕಾರ್ಯನಿರ್ವಹಿಸಲು ಎಐ ಅನುವು ಮಾಡಿಕೊಡುತ್ತದೆ. ಅಲ್ಲದೇ, ಕಡಿಮೆ ಸಂಪರ್ಕ ಹೊಂದಿರುವ ಪ್ರದೇಶಗಳಲ್ಲಿಯೂ ಸಹ ವಿದ್ಯಾರ್ಥಿಗಳಿಗೆ ಸಹಾಯ ಮಾಡಲು ಕರ್ನಾಟಕ ಡಿಎಸ್ಇಆರ್ಟಿ ಪಠ್ಯಕ್ರಮದಲ್ಲಿ ತರಬೇತಿ ಪಡೆದ ಎಐ ಏಜೆಂಟ್ ಬುದ್ಧ (BUDDH) ಜೊತೆಗೆ ಬರಲಿದೆ. ವಿದ್ಯಾರ್ಥಿಗಳು, ನವೋದ್ಯಮಿಗಳು, ಉದ್ಯಮ ಮುಖಂಡರು ಮತ್ತು ಸಂದರ್ಶಕರು ಇದನ್ನು ಬಳಸಲು ಮತ್ತು ರಾಜ್ಯಾದ್ಯಂತ ಸಾಮೂಹಿಕ ಬಳಕೆಗೆ ಅನುವು ಮಾಡಿಕೊಡುವ ಚಿಂತನೆ ಹೊಂದಲಾಗಿದೆ.
ಇನ್ನಷ್ಟು ಓದಿರಿ :
ಚಳಿಗಾಲದ ಅಧಿವೇಶನಕ್ಕೆ ಸಕಲ ಸಿದ್ಧತೆ: ಸಭಾಪತಿ ಬಸವರಾಜ ಹೊರಟ್ಟಿ