ಕಬ್ಬು ಬೆಳೆಗಾರರ ಪ್ರತಿಭಟನೆಯಲ್ಲಿ ಕಲ್ಲು ತೂರಾಟ ಪ್ರಕರಣ: 11 ಪೊಲೀಸರಿಗೆ ಗಾಯ
ಕಬ್ಬಿಗೆ ಸೂಕ್ತ ಬೆಲೆ ನೀಡುವಂತೆ ಆಗ್ರಹಿಸಿ ರೈತರ ಪ್ರತಿಭಟನೆಯಲ್ಲಿ ಶುಕ್ರವಾರ ನಡೆದ ಕಲ್ಲು ತೂರಾಟದಲ್ಲಿ ಗಾಯಗೊಂಡ ಪೊಲೀಸ್ ಸಿಬ್ಬಂದಿಯನ್ನು ಎಡಿಜಿಪಿ ಭೇಟಿಯಾಗಿ ವಿಚಾರಿಸಿದರು.
ಬೆಳಗಾವಿ:
ಬೆಳಗಾವಿ ನಗರದ ಕೆಎಲ್ಇ ಆಸ್ಪತ್ರೆಯಲ್ಲಿ ಗಾಯಾಳು ಪೊಲೀಸರು ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂದು ಬೆಳಗ್ಗೆ ಆಸ್ಪತ್ರೆಗೆ ಆಗಮಿಸಿದ ಎಡಿಜಿಪಿ ಅವರು ಗಾಯಾಳುಗಳಿಗೆ ಧೈರ್ಯ ತುಂಬಿ, ಕಲ್ಲು ತೂರಾಟ ಘಟನೆ ಕುರಿತು ಮಾಹಿತಿ ಪಡೆದರು.
ಈ ವೇಳೆ ಐಜಿಪಿ ಚೇತನ್ ಸಿಂಗ್ ರಾಥೋಡ್, ನಗರ ಪೊಲೀಸ್ ಆಯುಕ್ತ ಭೂಷಣ ಬೊರಸೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಭೀಮಾಶಂಕರ ಗುಳೇದ ಸೇರಿ ಮತ್ತಿತರರು ಇದ್ದರು.
ಆಸ್ಪತ್ರೆಗೆ ಭೇಟಿ ನೀಡಿದ ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದ ಎಡಿಜಿಪಿ ಹಿತೇಂದ್ರ ಆರ್, ಘಟನೆಯಲ್ಲಿ ನಮ್ಮ 11 ಜನ ಸಿಬ್ಬಂದಿಗೆ ಗಾಯಗಳಾಗಿವೆ. ಯಾವುದೇ ರೀತಿಯ ಅಹಿತಕರ ಘಟನೆ ನಡೆಯಬಾರದು ಅಂತ ಅಂದುಕೊಂಡಿದ್ದೆವು. ಆದರೂ ನಡೆದಿದೆ. ಹಾಗಾಗಿ ನಾನೇ ಖುದ್ದಾಗಿ ನಿನ್ನೆ ರಾತ್ರಿ ಬೆಳಗಾವಿಗೆ ಬಂದಿದ್ದೇನೆ. ನಮ್ಮ ಸಿಬ್ಬಂದಿಯ ಆರೋಗ್ಯ ವಿಚಾರಿಸಿದ್ದೇನೆ ಎಂದರು.
ಘಟನಾ ಸ್ಥಳದಲ್ಲಿನ 40-50 ಸಿಸಿಟಿವಿ ಪರಿಶೀಲನೆ ನಡೆಸುತ್ತಿದ್ದೇವೆ. ಈಗಾಗಲೇ ಘಟನೆ ಕುರಿತು ಯಮಕನಮರಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ರೈತರ ಪ್ರತಿಭಟನೆಯಲ್ಲಿ ಒಂದು ದೊಡ್ಡ ಗುಂಪು ಕ್ರಿಯೇಟ್ ಆಗಿರುವುದರಿಂದ ಈ ರೀತಿ ಅಹಿತಕರ ಘಟನೆ ಆಗಿದೆ ಎಂದು ಹಿತೇಂದ್ರ ಆರ್. ತಿಳಿಸಿದರು.
ಹುಕ್ಕೇರಿ ತಾಲೂಕಿನ ಹತ್ತರಗಿ ಟೋಲ್ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಶುಕ್ರವಾರ ನಡೆದ ಕಲ್ಲು ತೂರಾಟ ಪ್ರಕರಣದಲ್ಲಿ ಗಾಯಗೊಂಡ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯನ್ನು ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಹಿತೇಂದ್ರ ಆರ್. ಅವರು ಭೇಟಿಯಾಗಿ ಆರೋಗ್ಯ ವಿಚಾರಿಸಿದರು.
ನಾವು ಯಾರಿಗೂ ಲಾಠಿಯಿಂದ ಹೊಡೆಯಿರಿ ಅಂತ ನಿರ್ದೇಶನ ಕೊಟ್ಟಿಲ್ಲ. ರೈತರನ್ನು ನಿಯಂತ್ರಿಸಲು ಪ್ರಯತ್ನಿಸಿದ್ದೇವೆ. ಕಿಡಿಗೇಡಿಗಳು ಮಾಡಿರಬಹುದು ಅಂತ ನೋಡುತ್ತಿದ್ದೇವೆ. ಎಲ್ಲವನ್ನು ಪರಿಶೀಲನೆ ಮಾಡುತ್ತಿದ್ದೇವೆ. ನಾನು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಲಿದ್ದೇನೆ. ಈಗಾಗಲೇ 4-5 ಸರ್ಕಾರಿ ವಾಹನಗಳು ಹಾಗೂ ಇನ್ನಿತರ ವಾಹನಗಳು ಸೇರಿ 10ಕ್ಕೂ ಹೆಚ್ಚು ವಾಹನಗಳಿಗೆ ಹಾನಿಯಾಗಿದೆ. ಅದೇ ರೀತಿ ಪ್ರಕರಣದಲ್ಲಿ ಇದುವರೆಗೂ ಯಾರನ್ನು ವಶಕ್ಕೆ ಪಡೆದಿಲ್ಲ. ಕೆಲವು ವಿಡಿಯೋಗಳನ್ನ ಪರಿಶೀಲನೆ ಮಾಡಿ ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎಂದು ಎಡಿಜಿಪಿ ಹಿತೇಂದ್ರ ಆರ್. ಸ್ಪಷ್ಟಪಡಿಸಿದರು.
ಕಬ್ಬಿಗೆ ನ್ಯಾಯಯುತ ಬೆಲೆಗೆ ಆಗ್ರಹಿಸಿ ಪ್ರತಿಭಟನೆ:
ಈ ವೇಳೆ ಕಲ್ಲು ತೂರಾಟ ನಡೆದಿದೆ. ಇದರಿಂದ ಹಲವು ಪೊಲೀಸರಿಗೆ ಕಲ್ಲು ತಾಗಿ ಗಾಯವಾಗಿದೆ. ಸಾರಿಗೆ ಬಸ್, ಲಾರಿ ಸೇರಿ ಹಲವು ವಾಹನಗಳ ಗಾಜು ಪುಡಿ ಪುಡಿ ಆಗಿವೆ. ಕಬ್ಬಿಗೆ ನ್ಯಾಯಯುತ ಬೆಲೆ ನಿಗದಿಪಡಿಸುವಂತೆ ಆಗ್ರಹಿಸಿ ಹುಕ್ಕೇರಿ ತಾಲೂಕಿನ ಹತ್ತರಗಿ ಟೋಲ್ ಗೇಟ್ ಬಳಿಯ ಸಾವಿರಾರು ರೈತರು ರಾಷ್ಟ್ರೀಯ ಹೆದ್ದಾರಿ ತಡೆದು ಶುಕ್ರವಾರ ಪ್ರತಿಭಟಿಸುವಾಗ ಪರಿಸ್ಥಿತಿ ವಿಕೋಪಕ್ಕೆ ಹೋಯಿತು.
ಇನ್ನಷ್ಟು ಓದಿರಿ :
ಕಬ್ಬು ಬೆಳೆಗಾರರ ಸಮಸ್ಯೆ ಬಗ್ಗೆ ಕೇಂದ್ರದತ್ತ ಬೆರಳು ತೋರುವುದು ಸರಿಯಲ್ಲ