ಹತ್ತರಗಿ ಟೋಲ್ ಗೇಟ್ ಬಳಿ ಕಲ್ಲು ತೂರಾಟ
ಹತ್ತರಗಿ ಟೋಲ್ ಗೇಟ್ ಬಳಿ ಪ್ರತಿಭಟನೆ ವೇಳೆ ಕಲ್ಲು ತೂರಾಟ ಮಾಡಿದ ಪ್ರಕರಣದ ಸಂಬಂಧ ಆರು ಜನ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಬೆಳಗಾವಿ:
ನವೆಂಬರ್ 7ರಂದು ನಡೆದ ಕಲ್ಲು ತೂರಾಟ ಪ್ರಕರಣದಲ್ಲಿ ಡಿವೈಎಸ್ಪಿ ಮಹಾಂತೇಶ ಸಜ್ಜನ ಸೇರಿ 12 ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದರು. ಪೊಲೀಸ್ ವಾಹನ, ಕೆಎಸ್ಆರ್ಟಿಸಿ ಬಸ್ ಸೇರಿ ಖಾಸಗಿ ವಾಹನಗಳನ್ನು ಕಿಡಿಗೇಡಿಗಳು ಹಾನಿಗೊಳಿಸಿದ್ದರು. ಪರಿಸ್ಥಿತಿ ಉದ್ವಿಗ್ನಗೊಂಡಿತ್ತು. ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ ಭೇಟಿ ನೀಡಿ, ಪರಿಸ್ಥಿತಿ ಹತೋಟಿಗೆ ತಂದಿದ್ದರು. ಅಲ್ಲದೇ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದರು. ಕಲ್ಲು ತೂರಿದವರನ್ನು ಯಾವುದೇ ಕಾರಣಕ್ಕೂ ಬಿಡುವುದಿಲ್ಲ ಎಂದು ಎಚ್ಚರಿಸಿದ್ದರು. ಆ ಪ್ರಕಾರ ಆರು ಆರೋಪಿಗಳನ್ನು ಬಂಧಿಸಲಾಗಿದೆ.
ಬಂಧಿತರು ಹುಕ್ಕೇರಿ ತಾಲೂಕಿನ ಕೇಸ್ತಿ ಗ್ರಾಮದ ಶಿವಪ್ಪ ತಾತಪ್ಪ ವಾಣಿ, ಹೆಬ್ಬಾಳ ಗ್ರಾಮದ ನಿವಾಸಿಗಳಾದ ವಿನಾಯಕ ದುರದುಂಡಿ ಕೋಟೆವಾಲೆ, ಚನ್ನಗೌಡ ಬಸವರಾಜ ಸಸಾಲಟ್ಟಿ, ಪ್ರಶಾಂತ ಅಶೋಕ ಮುಗಳಿ, ಉಳ್ಳಾಗಡ್ಡಿ ಖಾನಾಪುರದ ಮಲ್ಲಪ್ಪ ಶಿವಪ್ಪ ಘಟ್ಟಿಗಿ, ಬಿದ್ರೆವಾಡಿಯ ಸೋಮನಾಥ ಬಸಯ್ಯ ಹಿರೇಮಠ ಎಂದು ಗುರುತಿಸಲಾಗಿದೆ.
ಹುಕ್ಕೇರಿ ತಾಲೂಕಿನ ಹತ್ತರಗಿ ಟೋಲ್ ಬಳಿ ರೈತರು ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸುತ್ತಿದ್ದ ವೇಳೆ ಕಲ್ಲು ತೂರಾಟ ನಡೆಸಿದ ಪ್ರಕರಣದಲ್ಲಿ ಯಮಕನಮರಡಿ ಠಾಣೆ ಪೊಲೀಸರು ಆರು ಮಂದಿ ಆರೋಪಿಗಳನ್ನು ಬಂಧಿಸುವ ಮೂಲಕ ಕಿಡಿಗೇಡಿಗಳಿಗೆ ಬಿಸಿ ಮುಟ್ಟಿಸಿದ್ದಾರೆ.
ಎಸ್ಪಿ ಮಾಹಿತಿ:
'ಬಂಧಿತರ ಪೈಕಿ ಶಿವಾನಂದ ನಿವೃತ್ತ ಸೈನಿಕ ಎಂಬುದು ತನಿಖೆಯಿಂದ ದೃಢವಾಗಿದೆ. ಅಲ್ಲದೆ, ಆರೋಪಿಗಳು ಮೊಬೈಲ್ ಶಾಪ್, ಕಾರ್ಮಿಕರಾಗಿ ಕೆಲಸ ಮಾಡುತ್ತಿರುವುದು ತನಿಖೆ ವೇಳೆ ಬಹಿರಂಗವಾಗಿದೆ. ಕಬ್ಬಿನ ಬೆಂಬಲ ಬೆಲೆಗಾಗಿ ಜಿಲ್ಲೆಯಲ್ಲಿ 10 ದಿನ ಪ್ರತಿಭಟನೆ ನಡೆದಿದೆ. ಆದರೂ ಎಲ್ಲಿಯೂ ಗಲಾಟೆ ಆಗಿಲ್ಲ. ಆದರೆ ಹತ್ತರಗಿ ಬಳಿ ನಡೆದ ಪ್ರತಿಭಟನೆಯಲ್ಲಿ ಮುಂಚೆಯೇ ಸಂಚು ರೂಪಿಸಿ ಕೃತ್ಯ ಎಸಗಿದ್ದಾರೆ. ಇನ್ನೂ ಯಾರೆಲ್ಲಾ ಕಲ್ಲು ತೂರಿದ್ದಾರೆಯೋ ಅವರನ್ನು ಬಿಡುವುದಿಲ್ಲ. ಕಾನೂನು ಪ್ರಕಾರ ಕ್ರಮ ತೆಗೆದುಕೊಳ್ಳುತ್ತೇವೆ' ಎಂದು ಡಾ.ಗುಳೇದ ಸ್ಪಷ್ಟಪಡಿಸಿದರು.
'ಪ್ರತಿಭಟನೆ ವೇಳೆ ಕೆಲ ಕಿಡಿಗೇಡಿಗಳು ಸೇರಿಕೊಂಡು ಗಲಾಟೆ ಮಾಡುತ್ತಿದ್ದಾರೆ. ಅವರನ್ನು ಇಲ್ಲಿಂದ ಕರೆದೊಯ್ಯಿರಿ ಅಂತಾ ಪ್ರತಿಭಟನಾನಿರತ ರೈತರೇ ಹೇಳಿದಾಗ, ನಮ್ಮ ಪೊಲೀಸರು ಸ್ಥಳಕ್ಕೆ ತೆರಳಿ ಅವರನ್ನು ವಶಕ್ಕೆ ಪಡೆಯಲು ಮುಂದಾಗಿದ್ದರು. ಆ ವೇಳೆ ಕಲ್ಲು ತೂರಾಟ ಮಾಡಿದ್ದಾರೆ. ಗಾಯಗೊಂಡಿರುವ ಪೊಲೀಸರಿಗೆ ಸರ್ಕಾರದಿಂದ ಪರಿಹಾರ ಕೊಡಿಸುವ ನಿಟ್ಟಿನಲ್ಲಿ ಪ್ರಯತ್ನಿಸಲಾಗುವುದು' ಎಂದು ಎಸ್ಪಿ ತಿಳಿಸಿದರು.
ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಡಾ.ಭೀಮಾಶಂಕರ ಗುಳೇದ, 'ದೊಂಬಿ, ಗುಂಪು ಗಲಭೆ, ಮಾರಣಾಂತಿಕ ಹಲ್ಲೆ ಪ್ರಕರಣದಡಿ ಕೇಸ್ ದಾಖಲಿಸಲಾಗಿದೆ. ಆರೋಪಿಗಳು ಪ್ರತಿಭಟನಾ ಸ್ಥಳದಲ್ಲಿ ಉದ್ದೇಶಪೂರ್ವಕವಾಗಿ ರೈತರ ಹೆಸರಿನಲ್ಲಿ ಶಾಲು ಹಾಕಿಕೊಂಡು ಬಂದಿದ್ದರು. ಅಂತವರನ್ನು ರೈತರು ಅನ್ನಲು ಆಗಲ್ಲ. ಅಮಾಯಕ ರೈತರನ್ನು ಬಂಧಿಸಿದ್ದೇವೆ ಅಂತಾ ಯಾರಾದರೂ ಆರೋಪ ಮಾಡಬಹುದು. ಆದರೆ, ಶಾಲು ಹಾಕಿಕೊಂಡು ಬಂದು ಕಲ್ಲು ತೂರಾಟ ಮಾಡಿದವರನ್ನು ರೈತರು ಎನ್ನಲು ಆಗುವುದಿಲ್ಲ. ವಿಡಿಯೋ ತುಣಕು, ಸಿಸಿಟಿವಿ ದೃಶ್ಯಗಳನ್ನು ಖಚಿತ ಪಡಿಸಿಕೊಂಡು ಆರೋಪಿಗಳನ್ನು ಬಂಧಿಸಿದ್ದೇವೆ' ಎಂದರು.
ಇನ್ನಷ್ಟು ಓದಿರಿ :
ಬಿಹಾರ ಚುನಾವಣೆಯಲ್ಲಿ ಮೋದಿ - ನಿತೀಶ್ ಜೋಡಿ ಕಮಾಲ್