Belagavi News:
ಟೆಹ್ರಾನ್: ಮಧ್ಯಪ್ರಾಚ್ಯದಲ್ಲಿ ಮತ್ತೆ ಉದ್ವಿಗ್ನತೆ ತಾರಕ್ಕೇರಿದ್ದು, ಹಾರ್ಮುಜ್ ಜಲಸಂಧಿಯನ್ನು ಮುಚ್ಚುವುದಾಗಿ ಇರಾನ್ ನ ಇಸ್ಲಾಮಿಕ್ ರೆಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಘೋಷಿಸಿದೆ. ಪಶ್ಚಿಮ ಏಷ್ಯಾ ಪ್ರದೇಶದಲ್ಲಿ ಅಮೆರಿಕ ತನ್ನ ಹಸ್ತಕ್ಷೇಪವನ್ನು ಸಂಪೂರ್ಣವಾಗಿ ಕೊನೆಗೊಳಿಸುವವರೆಗೆ ಈ ಪ್ರಮುಖ ಜಲಮಾರ್ಗವನ್ನು ಮುಚ್ಚಿಡಲಾಗುವುದು ಎಂದು ಇರಾನ್ ನ ಸರ್ಕಾರಿ ಮಾಧ್ಯಮಗಳು ವರದಿ ಮಾಡಿವೆ.
ವಿದೇಶಿ ಶಕ್ತಿಗಳ ಕಾನೂನುಬಾಹಿರ ಹಸ್ತಕ್ಷೇಪದ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಐಆರ್ ಜಿಸಿ ಹೇಳಿದೆ. ಮುಂದಿನ ಆದೇಶ ಬರುವರೆಗೆ ಹಾರ್ಮುಜ್ ಜಲಸಂಧಿ ಮುಚ್ಚಿರುತ್ತದೆ. ಅಮೆರಿಕ ತನ್ನ ಹಸ್ತಕ್ಷೇಪವನ್ನು ನಿಲ್ಲಿಸುವವರೆಗೆ ಯಾವುದೇ ವಾಣಿಜ್ಯ ಅಥವಾ ಇತರೆ ಹಡುಗುಗಳಿಗೆ ಈ ಜಲಮಾರ್ಗದಲ್ಲಿ ಸಂಚರಿಸಲು ಅವಕಾಶ ಇರುವುದಿಲ್ಲ" ಎಂದು ಎಚ್ಚರಿಕೆ ನೀಡಿದೆ.
ಇದರ ಬೆನ್ನೆಲೆ ಅಮೆರಿಕ ಮತ್ತು ಇರಾನ್ ನಡುವಿನ ಉದ್ವಿಗ್ನತೆ ಮತ್ತಷ್ಟು ತೀವ್ರಗೊಂಡಿದೆ. ವಾಣಿಜ್ಯ ಹಡಗಿನ ಮೇಲಿನ ದಾಳಿಗೆ ಪ್ರತಿಯಾಗಿ ಅಮೆರಿಕ ಇರಾನ್ ನ ಹಲವು ಗುರಿಗಳ ಮೇಲೆ ವೈಮಾನಿಕ ದಾಳಿ ನಡೆಸಿದೆ ಎಂದು ವರದಿಯಾಗಿದ್ದು, ಇದಕ್ಕೆ ಪ್ರತಿಯಾಗಿ ಇರಾನ್ ಬಹ್ರೇನ್, ಕತಾರ್ ಹಾಗೂ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಕಡೆಗೆ ಕ್ಷಿಪಣಿ ಮತ್ತು ಡ್ರೋನ್ ದಾಳಿಗಳನ್ನು ನಡೆಸಿರುವುದಾಗಿ ಹೇಳಿದೆ.
ಈ ಬೆಳವಣಿಗೆಯಿಂದ ಮಧ್ಯಪ್ರಾಚ್ಯದಲ್ಲಿ ಭದ್ರತಾ ಪರಿಸ್ಥಿತಿ ಮತ್ತಷ್ಟು ಸೂಕ್ಷ್ಮವಾಗಿದ್ದು, ಜಾಗತಿಕ ತೈಲ ಪೂರೈಕೆ ಮತ್ತು ಅಂತಾರಾಷ್ಟ್ರೀಯ ವ್ಯಾಪಾರದ ಮೇಲು ಪರಿಣಾಮ ಬೀರುವ ಆತಂಕ ವ್ಯಕ್ತವಾಗಿದೆ. ಇದೇ ವೇಳೆ ಉದ್ವಿಗ್ನತೆ ಶಮನಗೊಳಿಸಿ ಅಮೆರಿಕ ಇರಾನ್ ಮಾತುಕತೆಗಳನ್ನು ಪುನರಾರಂಭಿಸುವ ಉದ್ದೇಶದಿಂದ ಕತಾರ್ ಮಧ್ಯಸ್ಥಿಕೆ ವಹಿಸಲು ಮುಂದಾಗಿರುವುದಾಗಿ ವರದಿಗಳು ತಿಳಿಸಿವೆ.
ಹಾರ್ಮುಜ್ ಜಲಸಂಧಿಯಲ್ಲಿ ಉದ್ವಿಗ್ನತೆ ಹೆಚ್ಚುತ್ತಿರುವ ನಡುವೆಯೇ, ಇರಾನ್ ವಿದೇಶಾಂಗ ಸಚಿವ ಸಯ್ಯದ್ ಅಬ್ಬಾಸ್ ಅರಖ್ಚಿ ಅವರು ಒಮಾನ್ ವಿದೇಶಾಂಗ ಸಚಿವ ಸಯ್ಯದ್ ಬದ್ರ್ ಅಲ್ ಬುಸೈದಿ ಅವರೊಂದಿಗೆ ಮಸ್ಕತ್ ನಲ್ಲಿ ಮಹತ್ವದ ಮಾತುಕತೆ ನಡೆಸಿದ್ದಾರೆ. ಸಭೆಯಲ್ಲಿ ದ್ವಿಪಕ್ಷೀಯ ಸಂಬಂಧಗಳ ಬಲವರ್ಧನೆ, ಪ್ರಾದೇಶಿಕ ಬೆಳವಣಿಗೆಗಳು ಹಾಗೂ ಹಾರ್ಮುಜ್ ಜಲಸಂಧಿಯ ಕಡಲ ಭದ್ರತೆ ಕುರಿತು ಸಮಾಲೋಚನೆ ನಡೆದಿರುವುದು ತಿಳಿದುಬಂದಿದೆ.
ತಮ್ಮ ಅಧಿಕೃತ ಟೆಲಿಗ್ರಾಂ ಚಾನೆಲ್ ನಲ್ಲಿ ಅರಖ್ಚಿ, ಟೆಹ್ರಾನ್ ಮತ್ತು ಮಸ್ಕತ್ ನಡುವಿನ ವಿವಿಧ ಕ್ಷೇತ್ರಗಳ ಸಹಕಾರ ಹಾಗೂ ಪ್ರಾದೇಶಿಕ ಭದ್ರತಾ ಪರಿಸ್ಥಿತಿಯ ಕುರಿತು ವಿಸ್ತೃತ ಚರ್ಚೆ ನಡೆದಿರುವುದಾಗಿ ತಿಳಿಸಿದ್ದಾರೆ. ಇರಾನ್ ವಿದೇಶಾಂಗ ಸಚಿವಾಲಯದ ಪ್ರಕಾರ, ಇಸ್ಮಾಮಾಬಾದ್ ತಿಳುವಳಿಕೆ ಒಪ್ಪಂದದ 5ನೇ ವಿಧಿಗೆ ಅನುಗುಣವಾಗಿ ಹಡಗುಗಳ ಸುರಕ್ಷಿತ ಸಂಚಾರವನ್ನು ಖಚಿತಪಡಿಸಿಕೊಳ್ಳುವ ಕ್ರಮಗಳ ಬಗ್ಗೆಯೂ ಎರಡು ದೇಶಗಳ ಪ್ರತಿನಿಧಿಗಳು ಚರ್ಚಿಸಿದ್ದಾರೆ.
ಇದರ ನಡುವೆ, ಟೆಹ್ರಾನ್ ನ ಮನವಿಯ ಮೇರೆಗೆ ಇರಾನ್ ಜೊತೆ ಮಾತುಕತೆ ಮುಂದುವರಿಸಲು ಅಮೆರಿಕ ಸಮ್ಮತಿಸಿದೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿಳಿಸಿದ್ದಾರೆ. ಮತ್ತೊಂದೆಡೆ, ಹಾರ್ಮುಜ್ ಜಲಸಂಧಿಯಲ್ಲಿ ವಾಣಿಜ್ಯ ಹಡಗುಗಳ ಮೇಲಿನ ಇತ್ತೀಚಿನ ದಾಳಿಗಳನ್ನು ಇರಾನ್ ಅಧಿಕಾರಿಗಳು ಖಂಡಿಸಿದ್ದು, ಈ ಕುರಿತು ಅಮೆರಿಕ ಅಧ್ಯಕ್ಷರ ಸಲಹೆಗಾರರೊಂದಿಗೆ ಖಾಸಗಿ ಮಟ್ಟದಲ್ಲಿ ತಮ್ಮ ನಿಲುವು ಹಂಚಿಕೊಂಡಿದ್ದಾರೆ ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.
ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಈ ಬೆಳವಣಿಗೆಗಳ ನಡುವೆ ರಾಜತಾಂತ್ರಿಕ ಮಾತುಕತೆಗಳು ಮುಂದುವರಿದಿದ್ದು, ಪ್ರಾದೇಶಿಕ ಉದ್ವಿಗ್ನತೆ ತಗ್ಗಿಸಲು ಹಲವು ರಾಷ್ಟ್ರಗಳು ಪ್ರಯತ್ನ ನಡೆಸುತ್ತಿವೆ.