9ನೇ ದಿನಕ್ಕೆ ಕಾಲಿಟ್ಟ ಕಬ್ಬು ಬೆಳೆಗಾರರ ಹೋರಾಟ
ಪ್ರತಿ ಟನ್ ಕಬ್ಬಿಗೆ 3,500 ರೂಪಾಯಿ ನೀಡುವಂತೆ ಆಗ್ರಹಿಸಿ ಬೆಳಗಾವಿ ಜಿಲ್ಲೆಯ ರೈತರು ನಡೆಸುತ್ತಿರುವ ಹೋರಾಟ 9ನೇ ದಿನಕ್ಕೆ ತಲುಪಿದ್ದು, ಅಥಣಿ ಸೇರಿದಂತೆ ಹಲವೆಡೆ ಸ್ವಯಂ ಪ್ರೇರಿತವಾಗಿ ಬಂದ್ ಮಾಡಲಾಗಿದೆ.
ಚಿಕ್ಕೋಡಿ, ಬೆಳಗಾವಿ:
ಸರ್ಕಾರ ಆದಷ್ಟು ಬೇಗ ಟನ್ ಕಬ್ಬಿಗೆ 3,500 ರೂಪಾಯಿ ಬೆಲೆ ನಿಗದಿಪಡಿಸುವಂತೆ ಪಟ್ಟು ಹಿಡಿದಿರುವ ಕಬ್ಬು ಬೆಳೆಗಾರರು, ಅಥಣಿಯಿಂದ ಹೊರರಾಜ್ಯಕ್ಕೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿಯನ್ನು ಬಂದ್ ಮಾಡಿದ್ದಾರೆ. ಒಂದೆಡೆ ವಿಜಯಪುರ-ಸಂಕೇಶ್ವರ ರಾಷ್ಟ್ರೀಯ ಹೆದ್ದಾರಿಯನ್ನು ತಡೆದರೆ, ಮತ್ತೊಂದೆಡೆ ಜತ್-ಜಾಂಬೋಟಿ ರಾಷ್ಟ್ರೀಯ ಹೆದ್ದಾರಿಯನ್ನು ಬಂದ್ ಮಾಡಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಕಬ್ಬಿಗೆ ನ್ಯಾಯಯುತ ಬೆಲೆ ನಿಗದಿಪಡಿಸುವಂತೆ ಆಗ್ರಹಿಸಿ ರೈತರು ನಡೆಸುತ್ತಿರುವ ಹೋರಾಟ ಮುಂದುವರೆದಿದ್ದು, 9ನೇ ದಿನಕ್ಕೆ ಕಾಲಿಟ್ಟಿದೆ. ಪ್ರತಿಭಟನೆ ತೀವ್ರ ಸ್ವರೂಪ ಪಡೆದ ಪರಿಣಾಮ ಅಥಣಿ ಸೇರಿದಂತೆ, ಹುಕ್ಕೇರಿ, ಚಿಕ್ಕೋಡಿ, ಸಂಕೇಶ್ವರ್ ಪಟ್ಟಣಗಳು ಕಳೆದ ನಾಲ್ಕು ದಿನಗಳಿಂದ ಸ್ವಯಂ ಪ್ರೇರಿತವಾಗಿ ಬಂದ್ ಮಾಡಲಾಗಿದೆ. ಬಸ್ ಸಂಚಾರವಿಲ್ಲದೇ ಬಸ್ ನಿಲ್ದಾಣಗಳು ಬಿಕೋ ಎನ್ನುತ್ತಿವೆ.
ಸರ್ಕಾರ ನಮ್ಮ ಹೋರಾಟಕ್ಕೆ ಮಣಿದಿದೆ. ಆದರೆ, ಆದಷ್ಟು ಬೇಗನೆ ಒಳ್ಳೆಯ ತೀರ್ಮಾನಕ್ಕೆ ಬರಬೇಕು. ಇವತ್ತು ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಕಾರ್ಖಾನೆ ಮಾಲಿಕರು ಸಭೆ ನಡೆಸುತ್ತಿದ್ದಾರೆ. ಎಷ್ಟು ಸಾಧ್ಯವೋ ಅಷ್ಟು ಬೇಗನೆ ಸಿಹಿ ಸುದ್ದಿ ನೀಡಲಿ. ಒಂದು ವೇಳೆ ಸರ್ಕಾರ ಸ್ಪಷ್ಟ ನಿರ್ಧಾರಕ್ಕೆ ಬಾರದಿದ್ದರೆ ಈ ಹೋರಾಟ ನಿಲ್ಲುವುದಿಲ್ಲ. ಬರುವ ಬೆಳಗಾವಿ ಚಳಿಗಾಲ ಅಧಿವೇಶನದಲ್ಲಿ ರೈತರ ಶಕ್ತಿ ಏನೆಂಬುವುದು ತೋರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ರೈತ ಮಹಿಳೆ ಸಾವಿತ್ರಿ ಮಾತನಾಡಿ, ಕಳೆದ ಎಂಟು ದಿನಗಳಿಂದ ಈ ರಸ್ತೆ ಮೇಲೆ ಕುಳಿತಿದ್ದೇವೆ. ಸರ್ಕಾರ ನಮಗೆ ಗ್ಯಾರಂಟಿ ಕೊಟ್ಟು ಕಬ್ಬಿಗೆ ಸೂಕ್ತ ಬೆಲೆ ಗ್ಯಾರಂಟಿ ಕೊಟ್ಟಿಲ್ಲ. ದಯವಿಟ್ಟು ನಮ್ಮ ಕಡೆ ನೋಡಲಿ. ನಮ್ಮ ಬೆಳೆಗಳಿಗೆ ಸರಿಯಾದ ಬೆಲೆ ನಿಗದಿಪಡಿಸಲಿ ಎಂದು ಒತ್ತಾಯಿಸಿದರು.
ಇಂಡಿ ಕ್ಷೇತ್ರದ ಶಾಸಕರ ಹೇಳಿಕೆಗೆ ಕಿಡಿ:
ಗುರ್ಲಾಪುರದಲ್ಲಿ ಕುಳಿತವರೆಲ್ಲರೂ ರೈತರಲ್ಲ ಎಂಬ ಶಾಸಕರ ಹೇಳಿಕೆಗೆ ರೈತ ಮುಖಂಡ ಚುನ್ನಪ್ಪ ಪೂಜಾರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಲ್ಲಿ ಕುಳಿತವರು ಯಾರು ಅನ್ನೋದನ್ನು ಶಾಸಕರು ಸ್ಪಷ್ಟಪಡಿಸಬೇಕು. ಬಾಯಿಗೆ ಬಂದಂತೆ ಮಾತನಾಡಬಾರದು. ರೈತರ ಹೋರಾಟಕ್ಕೆ ಇಡೀ ಸರ್ಕಾರವೇ ಮಣಿದಿದೆ. ತಲೆ ಸರಿ ಇದೆಯಾ? ಅಂತ ನೋಡಿಕೊಂಡು ಮಾತನಾಡಬೇಕು. ಕಬ್ಬು ಬೆಳೆಯೋರು ನಾವೇ, ಕಾರ್ಖಾನೆ ಮಾಲೀಕರು ನಾವೇ. ನಮ್ಮ ಹೋರಾಟವನ್ನು ಗೌರವಿಸಿ. ಮೊದಲು ನೀಡಿದ ಹೇಳಿಕೆಯನ್ನು ಹಿಂಪಡೆದು ಕ್ಷಮೆ ಕೇಳಿ. ನಾವು ಕೊಟ್ಟ ಮತದ ಭಿಕ್ಷೆಯಿಂದ ನೀವು ಶಾಸಕರಾಗಿದ್ದೀರಿ. ಅದನ್ನು ಮರಿಯದಿರಿ ಎಂದು ಕಿಡಿಕಾರಿದರು.
ಗುರ್ಲಾಪುರದಲ್ಲೂ ಮುಂದುವರೆದ ಪ್ರತಿಭಟನೆ:
ರೈತರು ಸರ್ಕಾರ ಮೇಲೆ ಒತ್ತಡ ಹೇರಲು ಇವತ್ತೂ ಪ್ರತಿಭಟನೆಗೆ ಮುಂದಾಗಿದ್ದಾರೆ. ಸುರೇಶ್ ನುಳವಿ ಎಂಬ ರೈತ ಒಡೆದ ಗಾಜುಗಳ ಮೇಲೆ ಉರುಳು ಸೇವೆ ಮಾಡುವ ಮೂಲಕ ಸರ್ಕಾರದ ಗಮನ ಸೆಳೆಯುವ ಪ್ರಯತ್ನ ನಡೆಸಿದರು.
ಇನ್ನಷ್ಟು ಓದಿರಿ:
ರೈತರು ಸಂಘರ್ಷಕ್ಕೆ ಎಡೆಮಾಡಿಕೊಡಬಾರದು: ಸಚಿವ ಶಿವಾನಂದ ಪಾಟೀಲ