7ನೇ ದಿನಕ್ಕೆ ಕಾಲಿಟ್ಟ ಕಬ್ಬು ಹೋರಾಟಗಾರರ ಪ್ರತಿಭಟನೆ
ಕಬ್ಬಿಗೆ ಕನಿಷ್ಠ ಬೆಂಬಲ ಬೆಲೆಗೆ ಆಗ್ರಹಿಸಿ ಬೆಳಗಾವಿ ಜಿಲ್ಲೆಯ ಗುರ್ಲಾಪುರ ಗ್ರಾಮದಲ್ಲಿ ರೈತರ ಪ್ರತಿಭಟನೆ ಏಳನೇ ದಿನಕ್ಕೆ ಕಾಲಿಟ್ಟಿದೆ. ಸರ್ಕಾರದ ವಿರುದ್ಧ ರೈತರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಚಿಕ್ಕೋಡಿ (ಬೆಳಗಾವಿ):
ಮೂಡಲಗಿ ತಾಲೂಕಿನ ಗುರ್ಲಾಪುರ ಗ್ರಾಮದಲ್ಲಿ ನಡೆಯುತ್ತಿರುವ ಅಹೋರಾತ್ರಿ ಪ್ರತಿಭಟನೆಯು 7ನೇ ದಿನಕ್ಕೆ ಕಾಲಿಟ್ಟಿದ್ದು, ಬೇಡಿಕೆ ಈಡೇರದಿದ್ದರೆ ಕರ್ನಾಟಕ ಬಂದ್ ಮಾಡುವ ಬಗ್ಗೆ ರೈತ ಮುಖಂಡರು ಎಚ್ಚರಿಕೆ ನೀಡಿದ್ದಾರೆ. ಕಬ್ಬಿಗೆ ಕನಿಷ್ಠ ಬೆಂಬಲ ಬೆಲೆ ನೀಡುವಂತೆ ಆಗ್ರಹಿಸಿ ಜಿಲ್ಲೆಯಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆ ಮತ್ತಷ್ಟು ತೀವ್ರ ಸ್ವರೂಪ ಪಡೆದಿದೆ.
ಹೆಚ್ಚಿನ ಸಂಖ್ಯೆಯಲ್ಲಿ ಸೇರಿರುವ ರೈತರು ಸರ್ಕಾರದ ವಿರುದ್ಧ ಅರೆಬೆತ್ತಲೆಯಾಗಿ ಪ್ರತಿಭಟನೆ ಕುಳಿತಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಅವರು, ''ಕಳೆದ ಏಳು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದೇವೆ. ಆದರೂ ಸಹ ಸರ್ಕಾರದ ಯಾವುದೇ ಸಚಿವರು, ಪ್ರತಿನಿಧಿಗಳು ಇಲ್ಲಿಗೆ ಬಂದಿಲ್ಲ. ನಮ್ಮ ಅಧ್ಯಕ್ಷರು ಹೇಳಿದ್ದು, ನ.7ರಂದು ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಲಿದ್ದೇವೆ. ನಮ್ಮ ಬಿಲ್ ಕೊಡುವವರೆಗೂ ನಾವು ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ರಸ್ತೆ ಮೇಲೆಯೇ ಇರುತ್ತೇವೆ'' ಎಂದು ಆಕ್ರೋಶ ಹೊರಹಾಕಿದರು. ಇದೇ ವೇಳೆ, ರೈತರು ಸರ್ಕಾರದ ವಿರುದ್ಧ ಬೊಬ್ಬೆ ಹೊಡೆದರು.
ಕಳೆದು ಒಂದು ವಾರದಿಂದ ಪ್ರತಿಭಟನೆ ನಡೆಯುತ್ತಿದ್ದರೂ, ಸರ್ಕಾರದ ಯಾವುದೇ ಪ್ರತಿನಿಧಿಗಳು ಸ್ಥಳಕ್ಕೆ ಬಾರದೇ ಇರುವುದರಿಂದ ರೈತರು ಮತ್ತಷ್ಟು ಆಕ್ರೋಶ ಹೊರಹಾಕುತ್ತಿದ್ದಾರೆ. ಅಲ್ಲದೆ, ಜಿಲ್ಲೆಯ ಹಲವು ಗ್ರಾಮಗಳು ಹಾಗೂ ಪಟ್ಟಣದ ಪ್ರಮುಖ ರಸ್ತೆಗಳನ್ನು ಬಂದ್ ಮಾಡಿದ್ದಾರೆ. ಇದರಿಂದ ಜನರು ಸಂಚಾರಕ್ಕೆ ಪರದಾಡುವಂತಾಗಿದೆ.
ಕರ್ನಾಟಕ ಬಂದ್ ಮಾಡುತ್ತೇವೆ:
''ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಅವರು ಪಕ್ಷಾತೀತವಾಗಿ ನಮ್ಮ ಹೋರಾಟಕ್ಕೆ ಬೆಂಬಲ ನೀಡಿದ್ದಾರೆ. ಅವರಿಗೆ ನಾವು ಧನ್ಯವಾದ ತಿಳಿಸುತ್ತೇವೆ. ಯಾವುದೇ ಪಕ್ಷದವರಾದರೂ ಗೌರವ ಕೊಟ್ಟು ಅವರಿಗೆ ಹೋರಾಟಕ್ಕೆ ಅವಕಾಶ ನೀಡುತ್ತೇವೆ. ನಾವು ಸರ್ಕಾರಕ್ಕೆ ಹೇಳುವುದು ಒಂದೇ, ಆದಷ್ಟು ಬೇಗನೆ ನಮಗೆ ನ್ಯಾಯ ಒದಗಿಸಬೇಕು. ಪ್ರತಿ ಟನ್ ಕಬ್ಬಿಗೆ 3,500 ರೂಪಾಯಿ ನೀಡಬೇಕು ಎಂಬುದು ನಮ್ಮ ಒತ್ತಾಯವಾಗಿದೆ. ಸರ್ಕಾರದ ಪ್ರತಿನಿಧಿಯು ನಮ್ಮ ಬೇಡಿಕೆ ಈಡೇರಿಸಿದರೆ ಮಾತ್ರ ಹೋರಾಟ ಕೈಬಿಡುತ್ತೇವೆ. ಬೇಡಿಕೆ ಈಡೇರದಿದ್ದರೆ, ನ.7ರಂದು ನಾವು ಸಂಪೂರ್ಣ ಕರ್ನಾಟಕ ಬಂದ್ ಮಾಡುತ್ತೇವೆ'' ಎಂದು ಶಶಿಕಾಂತ್ ಗುರೂಜಿ ಎಚ್ಚರಿಕೆ ರವಾನಿಸಿದರು.
ವಿವಿಧೆಡೆಯಿಂದ ಇಂದೂ ಸಹ ಹೆಚ್ಚಿನ ರೈತರು ಜನಾಂದೋಲನ ರೀತಿಯಲ್ಲಿ ಪ್ರತಿಭಟನೆಗೆ ಬರುತ್ತಿದ್ದಾರೆ. ಅಥಣಿ, ಹಾರುಗೇರಿ, ಚಿಕ್ಕೋಡಿ, ಜಮಖಂಡಿಯ ವಿವಿಧ ನಗರ ಪ್ರದೇಶವನ್ನು ಬಂದ್ ಮಾಡಲಾಗಿದೆ. ನಮಗೆ ನ್ಯಾಯ ಒದಗಿಸಬೇಕು ಇಲ್ಲವಾದರೆ ಎಲ್ಲಾ ನಗರ ಪಟ್ಟಣಗಳ ರಸ್ತೆ ಸಂಪರ್ಕ ಬಂದ್ ಮಾಡಲಾಗುವುದು ಎಂದು ರೈತರು ಎಚ್ಚರಿಸಿದರು.
ರೈತರೊಂದಿಗೆ ವಿಜಯೇಂದ್ರ ಜನ್ಮದಿನ ಆಚರಣೆ:
ಬಿಜೆಪಿ ರಾಜ್ಯಾಧ್ಯಕ್ಷ ಬಿ.ಬೈ.ವಿಜಯೇಂದ್ರ ಅವರು ತಮ್ಮ ಜನ್ಮದಿನವನ್ನು ಆಚರಿಕೊಳ್ಳದೇ ರೈತರ ಹೋರಾಟದಲ್ಲಿ ಭಾಗಿಯಾಗಿದ್ದಾರೆ. ಇದೇ ವೇಳೆ, ಹೋರಾಟಕ್ಕೆ ಬೆಂಬಲ ನೀಡಿರುವ ಅವರ ಹುಟ್ಟುಹಬ್ಬವನ್ನು ವೇದಿಕೆಯಲ್ಲಿಯೇ ರೈತರು ಬೆಲ್ಲ ಹಾಗೂ ಕಬ್ಬು ನೀಡಿ, ಪೇಡಾ ತಿನ್ನಿಸಿ ಆಚರಣೆ ಮಾಡಿದರು. ಕಬ್ಬು ಬೆಳೆಗಾರರ ಹೋರಾಟದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಮಾಹಿತಿ ನೀಡಿರುವ ವಿಜಯೇಂದ್ರ, ಕಬ್ಬಿಗೆ ರೈತರ ಬೇಡಿಕೆಯಂತೆ ದರ ನೀಡುವಂತೆ ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
2 ಗಂಟೆ ಸಿಎಂ ಸ್ಥಾನ ನಮಗೆ ಬಿಟ್ಟು ಕೊಡಿ:
ರೈತ ಮುಖಂಡ ಶಶಿಕಾಂತ್ ಗುರೂಜಿ ಮಾತನಾಡಿ, ''ಸರ್ಕಾರದ ಪ್ರತಿನಿಧಿ ಇಲ್ಲಿಗೆ ಬರಲಿ ಎಂಬ ಆಪೇಕ್ಷೆಯೇ ನಮಗಿಲ್ಲ. ಹೋರಾಟದ ಕಿಚ್ಚು ಗಟ್ಟಿಯಾದಾಗ ಸರ್ಕಾರ ಅದಾಗಿಯೇ ತಲೆಬಾಗಿದ ಇತಿಹಾಸವೇ ಇದೆ. ಸರ್ಕಾರದ ಪ್ರತಿನಿಧಿ ಬರಲಿದ್ದಾರೆ ಎನ್ನಲಾಗುತ್ತಿದೆ, ಅವರೊಂದಿಗೆ ಮಾತನಾಡಿ ಮುಂದಿನ ನಿರ್ಧಾರ ಮಾಡುತ್ತೇವೆ. ಸಿಎಂ ಸಿದ್ದರಾಮಯ್ಯ ಅವರು ಕಬ್ಬಿಗೆ ಬೆಲೆ ನಿಗದಿ ಮಾಡುವುದು ಕೇಂದ್ರ ಸರ್ಕಾರ ಎಂದಿದ್ದಾರೆ, ಹೀಗಾಗಿ ದಯವಿಟ್ಟು ಅವರು ಎರಡು ಗಂಟೆಗಳ ಕಾಲ ತಮ್ಮ ಸಿಎಂ ಸ್ಥಾನವನ್ನು ರೈತರಿಗೆ ಬಿಟ್ಟು ಕೊಡಬೇಕು ಎಂದು ಮನವಿ ಮಾಡುತ್ತೇವೆ. ಕಾರ್ಖಾನೆಯವರಿಂದ ನಮ್ಮ ಬಿಲ್ ಪಡೆದುಕೊಂಡು ನಾವು ಮರಳಿ ನಿಮಗೆ ನೀಡುತ್ತೇವೆ. ಕಾರ್ಖಾನೆಯವರಿಗೆ ನೀವು ತಲೆಬಾಗುವುದು ಎಕೆ?'' ಎಂದು ಪ್ರಶ್ನಿಸಿದರು.
ಇನ್ನಷ್ಟು ಓದಿರಿ :
ಲೋಕಸಭಾ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ವಿರುದ್ಧಆರ್.ಅಶೋಕ್ ವಾಗ್ದಾಳಿ