H16 News
Logo

By Rakshita | Published on November 11, 2025

Image Not Found
Breaking News / November 11, 2025

ಮತ್ತೆ ಪ್ರತಿಧ್ವನಿಸಿದ ಪ್ರತ್ಯೇಕ ಉತ್ತರ ಕರ್ನಾಟಕದ ಕೂಗು

ಆಡಳಿತಾತ್ಮಕ ಅನುಕೂಲಕ್ಕಾಗಿ ಮತ್ತು ಸಮಗ್ರ ಅಭಿವೃದ್ಧಿಗಾಗಿ 15 ಜಿಲ್ಲೆಗಳನ್ನು ಒಳಗೊಂಡ ಹೊಸ ರಾಜ್ಯ ರಚನೆಗೆ ನನ್ನ ಅಗ್ರಹವಿದೆ ಎಂದು ಕಾಗವಾಡ ಶಾಸಕ ರಾಜು ಕಾಗೆ ಮುಖ್ಯಮಂತ್ರಿಗೆ ಪತ್ರ ಬರೆದಿದ್ದಾರೆ.

ಬೆಳಗಾವಿ: ಅಭಿವೃದ್ಧಿ ವಿಚಾರದಲ್ಲಿ ದಕ್ಷಿಣ ಕರ್ನಾಟಕ ಹೋಲಿಸಿದರೆ ಉತ್ತರ ಕರ್ನಾಟಕ ಹಿಂದುಳಿದಿದೆ. ದಕ್ಷಿಣಕ್ಕೆ ತೋರಿಸುವ ವಿಶೇಷ ಕಾಳಜಿ ಉತ್ತರಕ್ಕೆ ಯಾಕಿಲ್ಲ?. ಎಲ್ಲರೂ ಕನ್ನಡನಾಡಿನ ಮಕ್ಕಳೇ, ಆದರೂ ಯಾಕೆ ಮಲತಾಯಿ ಧೋರಣೆ?. ತಾರತಮ್ಯ ಹೋಗಲಾಡಿಸಿ, ಇಲ್ಲವೇ ಪ್ರತ್ಯೇಕ ಉತ್ತರ ಕರ್ನಾಟಕ ರಚನೆ ಮಾಡುವಂತೆ ಈ ಭಾಗದ ಕೆಲ ಹೋರಾಟಗಾರರು ಆಗ್ರಹಿಸುತ್ತಿದ್ದಾರೆ. ಮಾಜಿ ಸಚಿವ ದಿ.ಉಮೇಶ ಕತ್ತಿ ಬಳಿಕ ಮತ್ತೊಬ್ಬ ಬೆಳಗಾವಿ ಜಿಲ್ಲೆಯ ಶಾಸಕರಿಂದ ಪ್ರತ್ಯೇಕ ಉತ್ತರ ಕರ್ನಾಟಕ ಕೂಗು ಕೇಳಿ ಬಂದಿದೆ. ಪ್ರತ್ಯೇಕ ಉತ್ತರ ಕರ್ನಾಟಕಕ್ಕೆ ಆಗ್ರಹಿಸಿ ಮುಖ್ಯಮಂತ್ರಿಗೆ ಪತ್ರ ಬರೆದಿದ್ದು, ಪ್ರಾದೇಶಿಕ ಅಸಮಾನತೆ ವಿರುದ್ಧ ಹಿರಿಯ ರಾಜಕಾರಣಿ, ಕಾಗವಾಡ ಶಾಸಕ ರಾಜು ಕಾಗೆ ತಮ್ಮದೇ ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ಪತ್ರದಲ್ಲಿ ಏನಿದೆ?: ಆಡಳಿತಾತ್ಮಕ ಅನುಕೂಲಕ್ಕಾಗಿ ಮತ್ತು ಸಮಗ್ರ ಅಭಿವೃದ್ಧಿಗಾಗಿ ಉತ್ತರ ಕರ್ನಾಟಕದ 15 ಜಿಲ್ಲೆಗಳಾದ ಬೀದರ, ಕಲಬುರಗಿ, ವಿಜಯಪುರ, ಯಾದಗಿರಿ, ಬಾಗಲಕೋಟೆ, ಬೆಳಗಾವಿ, ಧಾರವಾಡ, ಗದಗ, ಕೊಪ್ಪಳ, ರಾಯಚೂರು, ಉತ್ತರಕನ್ನಡ, ಹಾವೇರಿ, ವಿಜಯನಗರ, ಬಳ್ಳಾರಿ, ದಾವಣಗೆರೆ ಇವುಗಳನ್ನು ಒಳಗೊಂಡ ಹೊಸ ರಾಜ್ಯ ರಚನೆಗೆ ನನ್ನ ಅಗ್ರಹವಿದೆ. ಕರ್ನಾಟಕ ಏಕೀಕರಣ ಆದಾಗಿನಿಂದ ಇಲ್ಲಿಯವರೆಗೂ ಎಲ್ಲ ಕ್ಷೇತ್ರಗಳಲ್ಲಿಯೂ ಈ ಭಾಗಕ್ಕೆ ನಿರಂತರವಾಗಿ ಅನ್ಯಾಯ, ತಾರತಮ್ಯ, ಮಲತಾಯಿ ಧೋರಣೆ ಆಗುತ್ತಲೆ ಬಂದಿದೆ. ಪ್ರತ್ಯೇಕ ರಾಜ್ಯ ರಚನೆಯಿಂದ ಮತ್ತೊಂದು ಕನ್ನಡ ನಾಡು ನಿರ್ಮಾಣವಾಗುವುದು ನಮಗೆ ಹೆಮ್ಮೆಯ ವಿಷಯ. ದಿ.ಉಮೇಶ ಕತ್ತಿ ಅವರು ಕೂಡ ಈ ವಿಚಾರದಲ್ಲಿ ಧ್ವನಿ ಎತ್ತಿದ್ದರು. ಅಲ್ಲದೇ ಉತ್ತರ ಕರ್ನಾಟಕ ವಿಕಾಸ ವೇದಿಕೆಯಡಿ ಈಗಲೂ ಹೋರಾಟ ಮುಂದುವರಿದಿದೆ. ಈ ನಡುವೆ ಶಾಸಕ ರಾಜು ಕಾಗೆ ಕೂಡ ಪ್ರತ್ಯೇಕ ಉತ್ತರ ಕರ್ನಾಟಕ ಆಗಲೇಬೇಕು ಅಂತಾ ಒತ್ತಾಯಿಸಿದ್ದಾರೆ. ಆ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರವನ್ನೂ ಬರೆದಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿದೆ. ನಾನೇ ನೇತೃತ್ವ ವಹಿಸುವೆ: ಈ ಸಂಬಂಧ ಮಾಧ್ಯಮಗಳ ಜೊತೆಗೆ ಮಾತನಾಡಿರುವ ರಾಜು ಕಾಗೆ, ಬೆಳಗಾವಿಯಲ್ಲಿ ನಡೆಯುವ ಚಳಿಗಾಲದ ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಬಗ್ಗೆ ಸುದೀರ್ಘವಾಗಿ ವಿಷಯ ಪ್ರಸ್ತಾಪಿಸುತ್ತೇನೆ. ಉತ್ತರ ಕರ್ನಾಟಕ ಪ್ರತ್ಯೇಕ ಆಗಬೇಕು ಎಂಬ ಬಗ್ಗೆ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದೇನೆ. ಆ ಹೋರಾಟದ ನೇತೃತ್ವವನ್ನು ನಾನೇ ವಹಿಸಿಕೊಳ್ಳುವೆ ಮತ್ತು ಜನ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಸಂಘಟನೆ ಮಾಡುತ್ತೇನೆ. ನನ್ನ ಜೊತೆಗೆ ಉತ್ತರ ಕರ್ನಾಟಕದ ಎಲ್ಲ ಶಾಸಕರು ಮತ್ತು ಜನರು ಇದ್ದಾರೆ ಎಂದು ಹೇಳಿದ್ದಾರೆ. ಸರ್ವತೋಮುಖ ಅಭಿವೃದ್ಧಿಗೆ ಪ್ರತ್ಯೇಕ ರಾಜ್ಯ ಕೇಳುತ್ತಿದ್ದೇವೆ: ಉತ್ತರ ಕರ್ನಾಟಕವು ಸರ್ವ ಸಂಪನ್ಮೂಲಗಳನ್ನು ಹೊಂದಿರುವ ಸಮೃದ್ಧ ನಾಡಾಗಿದೆ. ಕನ್ನಡ ಭಾಷೆಯ ಉಳಿವಿಗೆ ಮತ್ತು ಕರ್ನಾಟಕ ಏಕೀಕರಣಕ್ಕೆ ವಿಶೇಷ ಕೊಡುಗೆಯನ್ನು ಕೊಟ್ಟ ನಾಡು ನಮ್ಮದು. ಉತ್ತರ ಕರ್ನಾಟಕ ಹೋರಾಟ ಸಮಿತಿ(ರಿ)ಯ ಜನಪ್ರತಿನಿಧಿ ಸಹಿ ಸಂಗ್ರಹಣಾ ಅಭಿಯಾನಕ್ಕೆ ನನ್ನ ಸಂಪೂರ್ಣ ಬೆಂಬಲವಿದೆ. ಈಗಾಗಲೇ, ಒಂದು ಕೋಟಿಗೂ ಅಧಿಕ ಜನರಿಂದ ಸಹಿಯೊಂದಿಗೆ ಲಿಖಿತ ಅಭಿಪ್ರಾಯವನ್ನು ಪಡೆದುಕೊಂಡಿದ್ದಾರೆ. ಮತ್ತು ಗೌರವಾನ್ವಿತ ಮಾನ್ಯ ರಾಜ್ಯಪಾಲರಿಗೆ ಮತ್ತು ಗೌರವಾನ್ವಿತ ಮಾನ್ಯ ರಾಷ್ಟ್ರಪತಿಯವರಿಗೆ ಭೇಟಿಯಾಗಿ ಮನವಿಪತ್ರ ಸಲ್ಲಿಸಿದ್ದಾರೆ. ಅದೇ ರೀತಿ ಮಾನ್ಯ ಪ್ರಧಾನಿಗಳಿಗೆ ಪತ್ರವನ್ನು ಬರೆದಿರುತ್ತಾರೆ. ಈ ಭಾಗದ ಎಲ್ಲ ವರ್ಗದ ಜನರು ಅವರ ಸರ್ವತೋಮುಖ ಅಭಿವೃದ್ಧಿಗಾಗಿ ಪ್ರತ್ಯೇಕ ರಾಜ್ಯವನ್ನು ಕೇಳುತ್ತಿದ್ದಾರೆ. ದಯವಿಟ್ಟು ತಾವು ನಮ್ಮ ಮನವಿಯನ್ನು ಪರಿಗಣಿಸಿ, ಕೇಂದ್ರ ಸರ್ಕಾರಕ್ಕೆ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ನಿರ್ಮಾಣಕ್ಕಾಗಿ ಸೂಕ್ತ ಶಿಫಾರಸು ಮಾಡಬೇಕೆಂದು ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇನೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ. ಇನ್ನಷ್ಟು ಓದಿರಿ : ಮಾಲೂರು ವಿಧಾನಸಭಾ ಕ್ಷೇತ್ರದ ಮರು ಮತ ಎಣಿಕೆ
Sponsored Ads
image computer academy
image computer academy
image computer academy
image computer academy
LANDSCAPING IN CAD
LANDSCAPING IN CAD
HSRNEWS
HSRNEWS

Related News

Advertisement

logo

HSRNEWS

ತ್ವರಿತ ಸುದ್ದಿ. ಅನಂತ ಒಳನೋಟಗಳು
ADS

© gokakica.in. All Rights Reserved. Designed by Image Computer Academy