ಕಬ್ಬು ಬೆಳೆಗಾರರ ಬೆಂಬಲಕ್ಕೆ ಬಂದ ಕರವೇ
ಕಬ್ಬು ಬೆಳೆಗಾರರು ನಡೆಸುತ್ತಿರುವ ಅಹೋರಾತ್ರಿ ಪ್ರತಿಭಟನೆಗೆ ಬೆಂಬಲ ನೀಡಿರುವ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು, ಇಲ್ಲಿನ ರಾಷ್ಟ್ರೀಯ ಹೆದ್ದಾರಿ ತಡೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಳಗಾವಿ:
ಜಿಲ್ಲಾದ್ಯಂತ ಕಬ್ಬು ಬೆಳೆಗಾರರ ಹೋರಾಟ ತೀವ್ರಗೊಂಡಿದ್ದು, ಬಹುತೇಕ ಎಲ್ಲ ತಾಲೂಕುಗಳಲ್ಲಿ ದಿನನಿತ್ಯ ಪ್ರತಿಭಟನೆಗಳು ನಡೆಯುತ್ತಿವೆ. ಈಗ ರೈತರ ಹೋರಾಟಕ್ಕೆ ಕರ್ನಾಟಕ ರಕ್ಷಣಾ ವೇದಿಕೆ ಕೂಡ ಮುಂದಾಗಿದೆ. ಕರವೇ ನಾರಾಯಣಗೌಡ ಬಣದ ಕಾರ್ಯಕರ್ತರು ರಾಷ್ಟ್ರೀಯ ಹೆದ್ದಾರಿ-4 ಅನ್ನು ತಡೆದು ರಸ್ತೆ ಮೇಲೆಯೇ ಧರಣಿ ಕುಳಿತರು. ರಾಜ್ಯ ಸರ್ಕಾರದ ವಿರುದ್ಧ ದಿಕ್ಕಾರದ ಘೋಷಣೆ ಮೊಳಗಿಸಿದರು. ಟೈರ್ಗೆ ಬೆಂಕಿ ಹಚ್ಚಲು ಪ್ರತಿಭಟನಾಕಾರರು ಮುಂದಾದರು. ಈ ವೇಳೆ ಹೋರಾಟಗಾರರು ಮತ್ತು ಪೊಲೀಸರ ನಡುವೆ ವಾಗ್ವಾದ ಉಂಟಾಯಿತು.
ಕಬ್ಬಿಗೆ 3,500 ರೂ. ದರ ನಿಗದಿಗೆ ಆಗ್ರಹಿಸಿ ಮೂಡಲಗಿ ತಾಲೂಕಿನ ಗುರ್ಲಾಪುರ ಕ್ರಾಸ್ನಲ್ಲಿ ರೈತರು ಕಳೆದ 7 ದಿನಗಳಿಂದ ನಡೆಸುತ್ತಿರುವ ಅಹೋರಾತ್ರಿ ಪ್ರತಿಭಟನೆಗೆ ಕರ್ನಾಟಕ ರಕ್ಷಣಾ ವೇದಿಕೆ ಬೆಂಬಲ ಸೂಚಿಸಿದ್ದು, ಬೆಳಗಾವಿ ಸುವರ್ಣ ವಿಧಾನಸೌಧ ಮುಂಭಾಗದಲ್ಲಿ ರಾಷ್ಟ್ರೀಯ ಹೆದ್ದಾರಿ ತಡೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕರವೇ ಜಿಲ್ಲಾಧ್ಯಕ್ಷ ದೀಪಕ ಗುಡಗನಟ್ಟಿ ಮಾತನಾಡಿ, ಈ ನಾಡಿಗೆ ಅನ್ನ ನೀಡುವ ರೈತರ ಹೋರಾಟಕ್ಕೆ ಕರವೇ ಬೆಂಬಲ ಸೂಚಿಸಿದೆ. ಗುರ್ಲಾಪುರ ಕ್ರಾಸ್ನಲ್ಲಿ ರೈತರು ಕ್ರಾಂತಿಯ ಕಿಡಿ ಹೊತ್ತಿಸಿದ್ದಾರೆ. ಇದು ರಾಜ್ಯವ್ಯಾಪಿ ವಿಸ್ತರಿಸುವ ಮುನ್ನ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡು ಕಬ್ಬಿಗೆ 3,500 ರೂ. ಬೆಂಬಲ ಬೆಲೆ ಘೋಷಿಸಬೇಕು. ಇಲ್ಲದಿದ್ದರೆ ಮುಂದೆ ಆಗುವ ಅನಾಹುತಕ್ಕೆ ರಾಜ್ಯ ಸರ್ಕಾರವೇ ನೇರ ಹೊಣೆ ಆಗುತ್ತದೆ ಎಂದು ಎಚ್ಚರಿಸಿದರು.
ಹೆದ್ದಾರಿ ತಡೆದ ಪರಿಣಾಮ ರಸ್ತೆ ಸಂಚಾರ ಸ್ಥಗಿತವಾಗಿ ನೂರಾರು ವಾಹನಗಳು ಸಾಲುಗಟ್ಟಿ ನಿಂತು ಪ್ರಯಾಣಿಕರು ಕೆಲಕಾಲ ಪರದಾಡಿದರು. ಸರ್ವೀಸ್ ರಸ್ತೆಯಲ್ಲೂ ವಾಹನಗಳನ್ನು ತಡೆದ ಕರವೇ ಕಾರ್ಯಕರ್ತರು, ಕಬ್ಬು ಬೆಳೆಗಾರರ ಬೇಡಿಕೆ ತಕ್ಷಣ ಈಡೇರಿಸುವಂತೆ ಆಗ್ರಹಿಸಿದರು. ಪ್ರತಿಭಟನೆ ವಿಕೋಪಕ್ಕೆ ಹೋಗುತ್ತಿದ್ದಂತೆ ಕರವೇ ಜಿಲ್ಲಾಧ್ಯಕ್ಷ ದೀಪಕ ಗುಡಗನಟ್ಟಿ, ರಾಜ್ಯ ಸಂಚಾಲಕ ಸುರೇಶ ಗವನ್ನವರ ಸೇರಿ ಇನ್ನಿತರ ಮುಖಂಡರು ಮತ್ತು ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದು ತಮ್ಮ ವಾಹನದಲ್ಲಿ ಕರೆದೊಯ್ದರು.
ಪ್ರತಿಭಟನೆಯಲ್ಲಿ ಕರವೇ ಮುಖಂಡರಾದ ಗಣೇಶ ರೋಕಡೆ, ಹೊಳೆಪ್ಪ ಸುಲಧಾಳ, ಭೂಪಾಲ್ ಅತ್ತು, ಸಿದ್ರಾಯ ನಾಯಿಕ, ರಮೇಶ ಯರಗನ್ನವರ, ಮಧು ಇಟಗಿ ಸೇರಿ ಮತ್ತಿತರರು ಪಾಲ್ಗೊಂಡಿದ್ದರು.
ಕರವೇ ರಾಜ್ಯ ಸಂಚಾಲಕ ಸುರೇಶ ಗವನ್ನವರ ಮಾತನಾಡಿ, ರಾತ್ರಿ-ಹಗಲು, ಚಳಿ-ಮಳೆ-ಬಿಸಿಲು ಎನ್ನದೇ ಕಳೆದ 7 ದಿನಗಳಿಂದ ರೈತರು ಪ್ರತಿಭಟನೆ ಮಾಡುತ್ತಿದ್ದಾರೆ. ಜೈ ಜವಾನ್-ಜೈ ಕಿಸಾನ್ ಎನ್ನುವ ಸರ್ಕಾರಗಳು ರೈತರ ಬೇಡಿಕೆ ಈಡೇರಿಸಲು ಮುಂದಾಗದೇ ಇರುವುದು ನಾಚಿಕೆಗೇಡಿನ ಸಂಗತಿ. ದೇಶದ ಅಸ್ಮಿತೆ ಆಗಿರುವ ರೈತರನ್ನು ಬದುಕಿಸುವ ಕೆಲಸವನ್ನು ಶಾಸಕರು, ಸಚಿವರು ಮಾಡಬೇಕು ಎಂದು ಆಗ್ರಹಿಸಿದರು.
ರೈತ ಮಹಿಳೆಯರಿಂದ ತಲೆ ಮೇಲೆ ಬುತ್ತಿ ತಂದು ಬೆಂಬಲ:
ಕಬ್ಬಿಗೆ ಸೂಕ್ತ ಬೆಲೆ ನಿಗದಿ ಪಡಿಸುವಂತೆ ಕಳೆದ ಏಳು ದಿನಗಳಿಂದ ಗುರ್ಲಾಪುರ ಗ್ರಾಮದಲ್ಲಿ ನಡೆಯುವ ಹೋರಾಟಕ್ಕೆ ರಾಯಭಾಗ ತಾಲೂಕಿನ ಮುಗಳಖೋಡ ಗ್ರಾಮದ ರೈತ ಮಹಿಳೆಯರು ತಲೆ ಮೇಲೆ ಬೃಹತ್ ರೊಟ್ಟಿ ಬುತ್ತಿ ಹೊತ್ತುಕೊಂಡು ಬಂದು ಬೆಂಬಲ ನೀಡಿದರು. ಮಧ್ಯಾಹ್ನದ ಊಟಕ್ಕೆ ಸಾವಿರಾರು ರೊಟ್ಟಿ ತೆಗೆದುಕೊಂಡು ಬಂದು ರೈತ ಮಹಿಳೆಯರು, ಹೋರಾಟಕ್ಕೆ ಪುರುಷರು ಅಷ್ಟೇ ಅಲ್ಲ ನಾವು ನಿಮ್ಮ ಜೊತೆ ಇರುತ್ತೇವೆಂದು ಸಂದೇಶ ನೀಡಿದರು.
ರಾಜ್ಯ ಸರ್ಕಾರದ ಗಮನ ಸೆಳೆಯಲು ರೈತರು ನಿಪ್ಪಾಣಿ - ಮುದೋಳ ರಾಜ್ಯ ಹೆದ್ದಾರಿ ಮೇಲೆ ಅರೆ ಬೆತ್ತಲೆ ಪ್ರತಿಭಟನೆ ಕೂಡ ನಡೆಸಿದ್ದಾರೆ. ಕಳೆದ ಏಳು ದಿನದಿಂದ ಪ್ರತಿಭಟನೆ ನಡೆಯುತ್ತಿದ್ದರೂ ಸ್ಥಳಕ್ಕೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಾರು ಬರುತ್ತಿಲ್ಲವೆಂದು ಬೊಬ್ಬೆ ಹೊಡೆದು ಆಕ್ರೋಶ ವ್ಯಕ್ತಪಡಿಸಿದರು. ಮತ್ತೊಂದೆಡೆ ಬಾರುಕೋಲು ಬೀಸಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
ಹೋರಾಟದ ವೇದಿಕೆಯಲ್ಲಿ ವಿಜಯೇಂದ್ರ ಅವರ ಹುಟ್ಟುಹಬ್ಬವನ್ನು ರೈತರು ಬೆಲ್ಲ ಹಾಗೂ ಕಬ್ಬಿನ ಜೊತೆಗೆ ಪೇಡಾ ತಿನ್ನಿಸಿ ಸರಳವಾಗಿ ಆಚರಣೆ ಮಾಡಿದರು. ಬೃಹತ್ ರೊಟ್ಟಿ ಬುತ್ತಿ ತಂದ ರೈತ ಮಹಿಳೆಯರನ್ನು ನೋಡಿದ ವಿಜಯೇಂದ್ರ ಅವರಿಗೆ ಅಭಿನಂದನೆ ಸಲ್ಲಿಸಿದರು.
ಪ್ರತಿ ತಾಲೂಕಿನಲ್ಲೂ ಕೋರ್ಟ್ ಕಲಾಪವನ್ನು ಬಿಟ್ಟು ವಕೀಲರ ಸಂಘಗಳು ಪ್ರತಿಭಟನೆಯಲ್ಲಿ ಭಾಗಿಯಾಗುವ ಮೂಲಕ ರೈತರಿಗೆ ಬೆಂಬಲ ಸೂಚಿಸಿದ್ದಾರೆ. ರೈತರು ವಂತಿಕೆ ಮಾಡಿಕೊಂಡು ರಸ್ತೆ ಮೇಲೆ ಬಗೆ ಬಗೆ ಆಹಾರ ತಯಾರಿಸಿ ಊಟವನ್ನು ಮಾಡುತ್ತಿದ್ದಾರೆ ಎಂದಿದ್ದಾರೆ.
ಇನ್ನಷ್ಟು ಓದಿರಿ :
7ನೇ ದಿನಕ್ಕೆ ಕಾಲಿಟ್ಟ ಕಬ್ಬು ಹೋರಾಟಗಾರರ ಪ್ರತಿಭಟನೆ