ಈ ಬಾರಿ ಕೇರಳದ ಪದ್ಮನಾಭಸ್ವಾಮಿ ದೇಗುಲದಲ್ಲಿ 'ಮುರಜಪಂ'
ಮುರಜಪಂ 56 ದಿನಗಳ ಕಾಲ ನಡೆಯುವ ಆಚರಣೆಯಾಗಿದ್ದು, ಆರು ವರ್ಷಗಳಿಗೊಮ್ಮೆ ಜರುಗುತ್ತದೆ.
ತಿರುವನಂತಪುರಂ(ಕೇರಳ):
ಮುರಜಪಂ 56 ದಿನಗಳ ಕಾಲ ನಡೆಯುವ ಆಚರಣೆಯಾಗಿದ್ದು, ಆರು ವರ್ಷಗಳಿಗೊಮ್ಮೆ ಜರುಗುತ್ತದೆ. ಈ ಆಚರಣೆಯಲ್ಲಿ ನಿರಂತರವಾಗಿ ವೇದಗಳು ಮತ್ತು ವಿಷ್ಣು ಸಹಸ್ರನಾಮಗಳನ್ನು ಪಠಿಸಲಾಗುತ್ತದೆ. ಜನವರಿ 14ರ ಮಕರ ಸಂಕ್ರಾಂತಿಯಂದು ಲಕ್ಷ ದೀಪೋತ್ಸವದೊಂದಿಗೆ ಆಚರಣೆ ಮುಕ್ತಾಯಗೊಳ್ಳುತ್ತದೆ. ಅಂದು ದೇಗುಲದಲ್ಲಿ 1 ಲಕ್ಷ ಎಣ್ಣೆ
ದೀಪಗಳನ್ನು ಹಚ್ಚುವುದು ವಿಶೇಷ.
56 ದಿನಗಳ ಕಾಲ ನಡೆಯುವ ಈ ಹಬ್ಬದ ಆಚರಣೆಯಲ್ಲಿ ದೇಶಾದ್ಯಂತ ವೇದ ಪಂಡಿತರು ಆಗಮಿಸಲಿದ್ದಾರೆ. ಇವರು ಎಲ್ಲ ದಿನಗಳಲ್ಲಿ ವೇದಗಳನ್ನು ನಿರಂತರವಾಗಿ ಪಠಿಸಲಿದ್ದಾರೆ. ಋಗ್ವೇದ, ಯಜುರ್ವೇದ ಮತ್ತು ಸಾಮವೇದದ ವಿಧ್ಯುಕ್ತ ಪಠಣ ನಡೆಯಲಿದೆ. ದೇಗುಲದ ಕೊಳದಲ್ಲಿ 48 ದಿನಗಳ ಕಾಲ ಬೆಳಗ್ಗೆ 6ರಿಂದ 7ರ ವರೆಗೆ ಜಲದೀಪವನ್ನೂ ಕೂಡ ಹಚ್ಚಲಾಗುತ್ತದೆ. ಇದೂ ಕೂಡ ಈ ಆಚರಣೆಯ ಭಾಗವಾಗಿದೆ.
ಕಳೆದ ಬಾರಿ ಅಂದರೆ ಆರು ವರ್ಷದ ಹಿಂದೆ ನಡೆದ ಈ ಆಚರಣೆಯ ಸಂದರ್ಭದಲ್ಲಿ 25,000 ಜನರು ಭಾಗಿಯಾಗಿದ್ದು, ಈ ವರ್ಷ ಮತ್ತಷ್ಟು ಭಕ್ತರು ಆಗಮಿಸುವ ನಿರೀಕ್ಷೆ ಇದೆ. ಲಕ್ಷ ದೀಪೋತ್ಸವದ ಹಿನ್ನೆಲೆಯಲ್ಲಿ ಬೆಂಕಿಯ ಅಪಾಯಗಳು ಮತ್ತು ಇತರೆ ಭದ್ರತಾ ವ್ಯವಸ್ಥೆಗಳ ಪರಿಗಣನೆಗಳಿಂದಾಗಿ ಜನಸಂದಣಿಯನ್ನು ನಿರ್ಬಂಧಗಳೊಂದಿಗೆ ನಿರ್ವಹಿಸಲಾಗುವುದು ಎಂದು ತಿರುವಾಂಕೂರು ರಾಜ ಕುಟುಂಬದ ರಾಜ ಆದಿತ್ಯ ವರ್ಮಾ ತಿಳಿಸಿದರು.
ಪ್ರತಿದಿನ ಮುರಜಪಂ ನಂತರ ವಿಶೇಷವಾಗಿ ವಿನ್ಯಾಸಗೊಳಿಸಲಾದ ವಿವಿಧ ವಾಹನಗಳಲ್ಲಿ ಅನಂತಪದ್ಮನಾಭ ವಿಗ್ರಹದ ಮೆರವಣಿಗೆ ಮುರಸೀವೇಲಿ ನಡೆಸಲಾಗುವುದು ಎಂದು ಅವರು ಮಾಹಿತಿ ನೀಡಿದರು.
ಇಲ್ಲಿನ ಐತಿಹಾಸಿಕ ಶ್ರೀ ಪದ್ಮನಾಭಸ್ವಾಮಿ ದೇಗುಲದಲ್ಲಿ ಆರು ವರ್ಷಗಳಿಗೆ ಒಮ್ಮೆ ನಡೆಯುವ ಮುರಜಪಂ ಲಕ್ಷದೀಪೋತ್ಸವ ಇದೇ ನವೆಂಬರ್ 20ರಿಂದ ಪ್ರಾರಂಭವಾಗಲಿದೆ ಎಂದು ದೇಗುಲದ ಅಧಿಕಾರಿಗಳು ತಿಳಿಸಿದ್ದಾರೆ.
ತಿರುವಾಂಕೂರು ಸಾಮ್ರಾಜ್ಯದ ಸ್ಥಾಪಕ ಅನಿಳಂ ತಿರುನಾಳ್ ಮಾರ್ತಾಂಡ ವರ್ಮ, ದೇವಾಲಯದಲ್ಲಿ ಮುರಜಪಂ ಲಕ್ಷದ್ವೀಪಂ ಉತ್ಸವವನ್ನು ಆರಂಭಿಸಿದ್ದರು. ಅಲ್ಲದೇ, ಪ್ರತೀ ಆರು ವರ್ಷಗಳಿಗೊಮ್ಮೆ ಇದನ್ನು ನೆರವೇರಿಸಬೇಕೆಂದು ಸೂಚಿಸಿದ್ದರು. ಮುಂದಿನ ಆವೃತ್ತಿಗಳಲ್ಲಿ ಮುರಜಪಂ–ಲಕ್ಷದ್ವೀಪ ಉತ್ಸವವನ್ನು ದಕ್ಷಿಣದ ಕುಂಭಮೇಳವನ್ನಾಗಿ ಮಾಡುವ ಆಶಯವಿದೆ ಎಂದು ಕಾರ್ಯಕ್ರಮದ ಸಂಘಟಕರು ತಿಳಿಸಿದ್ದಾರೆ.
ಶೃಂಗೇರಿ, ಉಡುಪಿ, ಉತ್ತರಾದಿ ಮಠ ಮತ್ತು ಕಾಂಚೀಪುರಂನ ವೈದಿಕ ತಜ್ಞರು ಮುರಜಪಂನಲ್ಲಿ ಭಾಗವಹಿಸಲಿದ್ದು, ಪಂಡಿತರನ್ನು ಸ್ವಾಗತಿಸಲು ವ್ಯವಸ್ಥೆಗಳನ್ನು ಮಾಡಲಾಗಿದೆ. ಋಗ್ವೇದ, ಯಜುರ್ವೇದ ಮತ್ತು ಸಾಮವೇದಗಳನ್ನು ದೇಶದ ಕಲ್ಯಾಣ ಮತ್ತು ಸಮೃದ್ಧಿಗಾಗಿ ಪಠಿಸಲಾಗುತ್ತದೆ ಎಂದು ಅವರು ಹೇಳಿದರು.
ಇನ್ನಷ್ಟು ಓದಿರಿ :
ಐಪಿಎಲ್ 2026: ನಾಯಕನಾಗಿ ಕಮ್ಮಿನ್ಸ್ ಮರು ನೇಮಕ!