BELAGAVI NEWS :
ಭಾರತದ ರಕ್ಷಣಾ ಸಾಮರ್ಥ್ಯಕ್ಕೆ ಮತ್ತೊಂದು ಐತಿಹಾಸಿಕ ಬಲ ಸೇರ್ಪಡೆಯಾಗಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಇಂದು ಮೂರು ಅತ್ಯಾಧುನಿಕ ಸ್ವದೇಶಿ ನಿರ್ಮಿತ ಯುದ್ಧ ನೌಕೆಗಳನ್ನು ಭಾರತೀಯ ನೌಕಾಪಡೆಗೆ ಅಧಿಕೃತವಾಗಿ ಸೇರ್ಪಡೆಗೊಳಿಸಿದೆ.
ಪಶ್ಚಿಮ ಬಂಗಾಳದ ಕೊಲ್ಕತ್ತಾದ ಶ್ಯಾಮ ಪ್ರಸಾದ್ ಮುಖರ್ಜಿ ಬಂದರಿನಲ್ಲಿ ನಡೆದ ವಿಶೇಷ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ದುನಗಿರಿ,ಸಂಶೋಧಕ ಮತ್ತು ಅಗ್ರೇ ನೌಕೆಗಳಿಗೆ ಹಸಿರು ನಿಶಾನೆ ತೋರಿದರು. ಭಾರತದಲ್ಲಿ ವಿನ್ಯಾಸಗೊಳಿಸಿ ನಿರ್ಮಿಸಲಾದ ಈ ನೌಕೆಗಳು ದೇಶದ ಸಮುದ್ರ ಭದ್ರತೆ ಮತ್ತು ರಕ್ಷಣಾ ಸಿದ್ಧತೆಯನ್ನು ಮತ್ತಷ್ಟು ಬಲಪಡಿಸಲಿದೆ.
ಈ ಮೂರು ನೌಕೆಗಳು ವಿಭಿನ್ನ ಕಾರ್ಯಾಚರಣೆಗಳಿಗೆ ಸಜ್ಜಾಗಿವೆ. ದುನಗಿರಿ ಅತ್ಯಾಧುನಿಕ ಯುದ್ಧ ಸಾಮರ್ಥ್ಯ ಹೊಂದಿರುವ ಫ್ರೀಗೇಟ್ ಆಗಿದ್ದು, ಶತ್ರುಗಳ ವಿರುದ್ಧ ಸಮುದ್ರದಲ್ಲಿ ಪರಿಣಾಮಕಾರಿ ಕಾರ್ಯಾಚರಣೆ ನಡೆಸಬಲ್ಲದು. ಸಂಶೋಧಕ್ ಸಮುದ್ರ ಸಮೀಕ್ಷೆ ಮತ್ತು ನಕ್ಷೆ ತಯಾರಿಕಾ ಕಾರ್ಯಾಗಳಿಗೆ ಬಳಸಲಾಗುವ ನೌಕೆಯಾಗಿದ್ದು, ನೌಕಾಪಡೆಯ ಕಾರ್ಯತಂತ್ರಗಳಿಗೆ ಪ್ರಮುಖ ಮಾಹಿತಿಯನ್ನು ಒದಗಿಸುತ್ತದೆ. ಅಗ್ರೇ ಜಲಾಂತರ್ಗಾಮಿ ವಿರೋಧಿ ಕಾರ್ಯಾಚರಣೆಯಲ್ಲಿ ಪರಿಣಿತಿ ಹೊಂದಿದ್ದು, ಸಮುದ್ರದೊಳಗಿನ ಅಪಾಯಗಳನ್ನು ಪತ್ತೆಹಚ್ಚಿ ತಡೆಯುವ ಸಾಮರ್ಥ್ಯವನ್ನು ಹೊಂದಿದೆ.
'ಮೇಕ್ ಇನ್ ಇಂಡಿಯಾ' ಮತ್ತು 'ಆತ್ಮ ನಿರ್ಬರ ಭಾರತ' ಅಭಿಯಾನಗಳ ಭಾಗವಾಗಿ ನಿರ್ಮಿಸಲಾದ ಈ ನೌಕೆಗಳು ದೇಶಿಯ ರಕ್ಷಣಾ ಉತ್ಪಾದನಾ ಕ್ಷೇತ್ರದ ಸಾಮರ್ಥ್ಯವನ್ನು ಜಗತ್ತಿಗೆ ಮತ್ತೊಮ್ಮೆ ತೋರಿಸಿವೆ. ಭಾರತೀಯ ನೌಕಾ ಪಡೆಯ ಶಕ್ತಿಯನ್ನು ಹೆಚ್ಚಿಸುವುದರ ಜೊತೆಗೆ, ಸಮುದ್ರ ಕಡಲ ಭದ್ರತೆಯಲ್ಲಿ ಈ ನೌಕೆಗಳು ಮಹತ್ವದ ಪಾತ್ರ ವಹಿಸಲಿವೆ.
ದೇಶಿಯ ತಂತ್ರಜ್ಞಾನ, ಅತ್ಯಾಧುನಿಕ ಉಪಕರಣಗಳು ಮತ್ತು ಸುಧಾರಿತ ಯುದ್ಧ ವ್ಯವಸ್ಥೆಗಳೊಂದಿಗೆ ಸಜ್ಜುಗೊಂಡಿರುವ ಈ ಮೂರು ನೌಕೆಗಳ ಸೇರ್ಪಡೆ ಭಾರತದ ನೌಕಾ ಇತಿಹಾಸದಲ್ಲಿ ಮಹತ್ವದ ಅಧ್ಯಾಯವಾಗಿ ಗುರುತಿಸಿಕೊಳ್ಳಲಿದೆ.
ಅತ್ಯಾಧುನಿಕ ದುನಗಿರಿ ಯುದ್ಧ ನೌಕೆ : ಭಾರತದ ಸಮುದ್ರ ಶಕ್ತಿಗೆ ಹೊಸ ಬಲ!
ಭಾರತೀಯ ನೌಕಾಪಡೆಗೆ ಸೇರ್ಪಡೆಯಾದ ದುನಗಿರಿ ಯುದ್ಧ ನೌಕೆ ಅತ್ಯಾಧುನಿಕ ತಂತ್ರಜ್ಞಾನ ಮತ್ತು ಶಸ್ತ್ರಾಸ್ತ್ರ ವ್ಯವಸ್ಥೆಗಳೊಂದಿಗೆ ಸಜ್ಜುಗೊಂಡಿದ್ದು, ದೇಶದ ಸಮುದ್ರ ಭದ್ರತೆಯನ್ನು ಮತ್ತಷ್ಟು ಬಲಪಡಿಸುವ ಸಾಮರ್ಥ್ಯ ಹೊಂದಿದೆ. ನೌಕಾಪಡೆ ತನ್ನ ಅಧಿಕೃತ ಯೂಟ್ಯೂಬ್ ವಿಡಿಯೋದಲ್ಲಿ ದುನಗಿರಿಯನ್ನು ಶಕ್ತಿಶಾಲಿ, ವೇಗದ ಹಾಗೂ ಮುಂದುವರೆದ ಯುದ್ಧ ನೌಕೆ ಎಂದು ಬಣ್ಣಿಸಿದೆ.
ಅತ್ಯುನ್ನತ ನಿಖರತೆ, ಚುರುಕು ಕಾರ್ಯಾಚರಣೆ, ಸುಧಾರಿತ ಸಂವೇದಕಗಳು ಮತ್ತು ಆಧುನಿಕ ಶಸ್ತ್ರಾಸ್ತ್ರ ವ್ಯವಸ್ಥೆಗಳನ್ನು ಹೊಂದಿರುವ ಈ ನೌಕೆ, ಆಳ ಸಮುದ್ರದಲ್ಲಿ ದೀರ್ಘಾವಧಿಯ ಕಾರ್ಯಾಚರಣೆಗಳನ್ನು ಯಶಸ್ವಿಯಾಗಿ ನಿರ್ವಹಿಸಲು ವಿನ್ಯಾಸಗೊಳಿಸಲಾಗಿದೆ. ಯಾವುದೇ ಸವಾಲಿನ ಪರಿಸ್ಥಿತಿಯಲ್ಲೂ ಶತ್ರುಗಳ ಚಲನವಲನವನ್ನು ಪತ್ತೆ ಹಚ್ಚಿ ತಕ್ಷಣ ಪ್ರತಿಕ್ರಿಯಿಸುವ ಸಾಮರ್ಥ್ಯ ದುನಗಿರಿಗೆ ಇದೆ.
ದುನಗಿರಿಯ ಪ್ರಮುಖ ವಿಶೇಷತೆ ಎಂದರೆ, ಇದು ಬ್ರಹ್ಮೋಸ್ ಕ್ಷಿಪಣಿಗಳನ್ನು ಮೇಲ್ಮೈನಿಂದ ಮೇಲ್ಮೈಗೆ ಉಡಾಯಿಸುವ ಸಾಮರ್ಥ್ಯ ಹೊಂದಿದೆ. ಜೊತೆಗೆ, ಮಧ್ಯಮ ಶ್ರೇಣಿಯ ಮೇಲ್ಮೈ ದಿಂದ ಗಾಳಿ ಕ್ಷಿಪಣಿಗಳನ್ನು ಹಾರಿಸಬಲ್ಲ ಅತ್ಯಾಧುನಿಕ ವ್ಯವಸ್ಥೆಯನ್ನು ಒಳಗೊಂಡಿದೆ. ಈ ಸಾಮರ್ಥ್ಯಗಳು ನೌಕೆಗೆ ಶತ್ರುಗಳ ಹಡಗುಗಳು, ವಿಮಾನಗಳು ಮತ್ತು ಇತರ ಗುರಿಗಳ ವಿರುದ್ಧ ಪರಿಣಾಮಕಾರಿ ದಾಳಿ ನಡೆಸುವ ಶಕ್ತಿ ನೀಡುತ್ತವೆ.
ಆಧುನಿಕ ಯುದ್ಧ ತಂತ್ರಜ್ಞಾನ,ಬಲಿಷ್ಟ ಶಸ್ತ್ರಾಸ್ತ್ರಗಳು ಮತ್ತು ಸುಧಾರಿತ ರಕ್ಷಣಾ ವ್ಯವಸ್ಥೆಗಳೊಂದಿಗೆ ದುನಗಿರಿ ಭಾರತದ ನೌಕಾಪಡೆಯ ಹೊಸ ತಲೆಮಾರಿನ ಯುದ್ಧ ನೌಕೆಗಳ ಪ್ರತಿಕವಾಗಿ ಹೊರಹೊಮ್ಮಿದೆ. 'ಆತ್ಮ ನಿರ್ಭರ ಭಾರತ' ಕನಸಿಗೆ ಮತ್ತೊಂದು ಗರಿ ಸೇರಿಸಿರುವ ಈ ನೌಕೆ, ಭಾರತೀಯ ಸಮುದ್ರ ಗಡಿಗಳ ಭದ್ರತೆಯಲ್ಲಿ ಮಹತ್ವದ ಪಾತ್ರ ವಹಿಸಲಿದೆ.
ಸಂಶೋಧಕ್ ಮತ್ತು ಅಗ್ರೇ : ನೌಕಾಪಡೆಯ ಹೊಸ ಕಣ್ಣು ಮತ್ತು ಕವಚ!
ಭಾರತೀಯ ನೌಕಾ ಕಡೆಗೆ ಸೇರ್ಪಡೆಯಾದ ಮೂರು ಸ್ವದೇಶಿ ನೌಕೆಗಳಲ್ಲಿ ಸಂಶೋಧಕ್ ಮತ್ತು ಅಗ್ರೇ ವಿಶೇಷ ಮಹತ್ವ ಪಡೆದಿವೆ. ಒಂದು ಸಮುದ್ರದ ಆಳದ ಮಾಹಿತಿಯನ್ನು ಸಂಗ್ರಹಿಸುವ 'ಕಣ್ಣು' ಯಾಗಿದ್ದರೆ, ಮತ್ತೊಂದು ಕರಾವಳಿ ಪ್ರದೇಶಗಳನ್ನು ರಕ್ಷಿಸುವ 'ಕವಚ' ವಾಗಿ ಕಾರ್ಯನಿರ್ವಹಿಸಲಿದೆ.
ಸಂಶೋಧಕ್ : ಸಮುದ್ರದ ರಹಸ್ಯ ಬಿಚ್ಚಿಡುವ ಸರ್ವೇ ನೌಕೆ
ನೌಕಾಪಡೆಯ 4ನೇ ಸರ್ವೇ ನೌಕೆಯಾದ ಸಂಶೋಧಕ್ ,ಕರಾವಳಿ ಹಾಗೂ ಆಳ ಸಮುದ್ರ ಪ್ರದೇಶಗಳಲ್ಲಿ ಅತ್ಯಧುನಿಕ ಹೈಡ್ರೋಗ್ರಾಫಿಕ್ ಸಮೀಕ್ಷೆ ನಡೆಸುವ ಸಾಮರ್ಥ್ಯ ಹೊಂದಿದೆ ಸಮುದ್ರದ ತಳಭಾಗದ ನಕ್ಷೆ ರೂಪಿಸುವುದು, ಸಾಗರ ಶಾಸ್ತ್ರೀಯ ಮತ್ತು ಭೂಭೌತಿಕ ಮಾಹಿತಿಯನ್ನು ಸಂಗ್ರಹಿಸುವುದು, ರಕ್ಷಣಾ ಕಾರ್ಯಾಚರಣೆಗಳಿಗೆ ಅಗತ್ಯವಾದ ಡೇಟಾವನ್ನು ಒದಗಿಸುವುದು ಇದರ ಪ್ರಮುಖ ಕರ್ತವ್ಯವಾಗಿದೆ.
ಇದರಲ್ಲಿರುವ ಅತ್ಯಾಧುನಿಕ ನೀರೊಳಗಿನ ವಾಹನಗಳು ಮತ್ತು ಸುಧಾರಿತ ಸಮೀಕ್ಷಾ ವ್ಯವಸ್ಥೆಗಳು ಸಮುದ್ರದ ಆಳ ಮಾಹಿತಿಯನ್ನು ನಿಖರವಾಗಿ ಸಂಗ್ರಹಿಸಲು ನೆರವಾಗುತ್ತದೆ. ಭವಿಷ್ಯದ ನೌಕಾ ಕಾರ್ಯಾಚರಣೆಗಳು, ಸಂಶೋಧನಾ ಮತ್ತು ಸಮುದ್ರಭದ್ರತೆಗೆ ಸಂಶೋಧಕ್ ಮಹತ್ವದ ಆಸ್ತಿಯಾಗಲಿದೆ.
ಅಗ್ರೇ:ಕರಾವಳಿ ಭದ್ರತೆಯ ಹೊಸ ಕಾವಲುಗಾರ:
ಆಳವಿಲ್ಲದ ನೀರಿನಲ್ಲಿ ಕಾರ್ಯಾಚರಣೆ ನಡೆಸಲು ವಿನ್ಯಾಸಗೊಳಿಸಲಾದ ಅಗ್ರೇ ಜಲಾಂತರ್ಗ್ರಾಮಿ ವಿರೋಧಿ ನೌಕೆಯಾಗಿದ್ದು, ಸಮುದ್ರ ತೀರ ಪ್ರದೇಶಗಳ ಭದ್ರತೆಯನ್ನು ಬಲಪಡಿಸಲು ನಿರ್ಮಿಸಲಾಗಿದೆ. ಇದು ಹಗುರ ಟಾರ್ಪಿಡೋಗಳು, ಸ್ವದೇಶಿ ಟಿಕೆಟ್ ಲಾಂಚರ್ ಗಳು ಹಾಗೂ ಆಧುನಿಕ ಸೋನಾರ್ ವ್ಯವಸ್ಥೆಗಳನ್ನು ಹೊಂದಿದೆ.
ಅಗ್ರೇಯ ಅತ್ಯಂತ ದೊಡ್ಡ ವಿಶೇಷತೆ ಎಂದರೆ,ಕರಾವಳಿ ಮತ್ತು ಆಳವಿಲ್ಲದ ನೀರಿನಲ್ಲಿ ಅಡಗಿರುವ ಜಲಾಂತರ್ಗಾಮಿ ಬೆದರಿಕೆಗಳನ್ನು ಪತ್ತೆ ಹಚ್ಚಿ ಅವುಗಳನ್ನು ಪರಿಣಾಮಕಾರಿಯಾಗಿ ಎದುರಿಸುವ ಸಾಮರ್ಥ್ಯ.ಶತ್ರುಗಳ ನೀರೊಳಗಿನ ಚಲನವಲನಗಳ ಮೇಲೆ ನಿಗಾ ಇಡುವ ಈ ನೌಕೆ,ಭಾರತದ ಸಮುದ್ರ ತೀರ ಭದ್ರತೆಯಲ್ಲಿ ಪ್ರಮುಖ ಪಾತ್ರ ವಹಿಸಲಿದೆ.
ದುನಗಿರಿ, ಸಂಶೋಧಕ ಮತ್ತು ಅಗ್ರೇ-ಈ ಮೂರು ಸ್ವದೇಶಿ ನೌಕೆಗಳ ಸೇರ್ಪಡೆ ಭಾರತವನ್ನು ಮತ್ತಷ್ಟು ಬಲಿಷ್ಠ ಸಮುದ್ರ ಶಕ್ತಿಯಾಗಿ ರೂಪಿಸುವತ್ತ ಮಹತ್ವದ ಹೆಜ್ಜೆಯಾಗಿದೆ. 'ಆತ್ಮ ನಿರ್ಬರ ಭಾರತ' ದ ಯಶಸ್ವಿಗೆ ಸಾಕ್ಷಿಯಾಗಿರುವ ಈ ನೌಕೆಗಳು ಭಾರತೀಯ ನೌಕಾಪಡೆಯ ಸಾಮರ್ಥ್ಯವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲಿದೆ.
ಕೊಲ್ಕತ್ತಾದಲ್ಲಿ ಐತಿಹಾಸಿಕ ಕ್ಷಣ : ಸ್ವದೇಶಿ ಯುದ್ಧ ನೌಕೆಗಳ ಸೇರ್ಪಡೆಗೆ ಸಾಕ್ಷಿಯಾದ ಗಣ್ಯರು
ಭಾರತೀಯ ನೌಕಾಪಡೆಯ ಸಾಮರ್ಥ್ಯವನ್ನು ಮತ್ತಷ್ಟು ಬಲಪಡಿಸುವ ಮೂರು ಸ್ವದೇಶಿ ನೌಕೆಗಳ ಸೇರ್ಪಡೆ ಕಾರ್ಯಕ್ರಮ ಕೊಲ್ಕತ್ತಾದಲ್ಲಿ ಅದ್ದೂರಿಯಾಗಿ ನಡೆಯಿತು. ಈ ಐತಿಹಾಸಿಕ ಸಮಾರಂಭದಲ್ಲಿ ಹಲವು ಗಣ್ಯರು ಉಪಸ್ಥಿತರಿದ್ದು, ಭಾರತದ ರಕ್ಷಣಾ ಕ್ಷೇತ್ರದ ಮತ್ತೊಂದು ಮಹತ್ವದ ಸಾಧನೆಗೆ ಸಾಕ್ಷಿಯಾಗಿದ್ದರು.
ಕಾರ್ಯಕ್ರಮದಲ್ಲಿ ಪಶ್ಚಿಮ ಬಂಗಾಳ ರಾಜ್ಯಪಾಲ ಸಿ.ವಿ. ಆನಂದ ಬೋಸ್,ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸುವೆಂದು ಅಧಿಕಾರಿ ಹಾಗೂ ಭಾರತೀಯ ನೌಕಾಪಡೆಯ ಉಪ ಮುಖ್ಯಸ್ಥ ಅಡ್ಮಿರಲ್ ಕೃಷ್ಣ ಸ್ವಾಮಿನಾಥನ್ ಸೇರಿದಂತೆ ಹಲವು ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು. ಪ್ರಧಾನಿ ನರೇಂದ್ರ ಮೋದಿ ಅವರು ದುನಗಿರಿ, ಸಂಶೋಧಕ್ ಮತ್ತು ಅಗ್ರೇ ನೌಕೆಗಳಿಗೆ ಹಸಿರು ನಿಶಾನೆ ತೋರಿಸುವ ಮೂಲಕ ಅವುಗಳನ್ನು ಅಧಿಕೃತವಾಗಿ ನೌಕಾಪಡೆಗೆ ಸೇರ್ಪಡೆಗೊಳಿಸಿದರು.
ಈ ಮೂರು ನೌಕೆಗಳನ್ನು ಭಾರತೀಯ ನೌಕಾಪಡೆಯ ವಾರ್ ಶಿಪ್ ಡಿಸೈನ್ ಬ್ಯೂರೋ ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ವಿನ್ಯಾಸಗೊಳಿಸಿದೆ. ನಿರ್ಮಾಣದ ಜವಾಬ್ದಾರಿಯನ್ನು ಕೊಲ್ಕತ್ತಾದ ಸಾರ್ವಜನಿಕ ವಲಯದ ಪ್ರಮುಖ ರಕ್ಷಣಾ ಸಂಸ್ಥೆಯಾದ ಗಾರ್ಡನ್ ರಿಚ್ ಶಿಪ್ ಬಿಲ್ಡರ್ಸ್ ಅಂಡ್ ಇಂಜಿನಿಯರ್ಸ್ ಲಿಮಿಟೆಡ್ ಯಶಸ್ವಿಯಾಗಿ ನಿರ್ವಹಿಸಿದೆ.
ಸ್ವದೇಶಿ ತಂತ್ರಜ್ಞಾನ, ದೇಶಿಯ ಉತ್ಪಾದನೆ ಮತ್ತು ಉನ್ನತ ಮಟ್ಟದ ಇಂಜಿನಿಯರಿಂಗ್ ಸಾಮರ್ಥ್ಯದ ಪ್ರತೀಕವಾಗಿರುವ ಈ ನೌಕೆಗಳು 'ಮೇಕ್ ಇನ್ ಇಂಡಿಯಾ' ಹಾಗೂ 'ಆತ್ಮ ನಿರ್ಭರ ಭಾರತ' ಅಭಿಯಾನಗಳಿಗೆ ಮತ್ತಷ್ಟು ಬಲ ತುಂಬಿದೆ. ಸಮುದ್ರ ಭದ್ರತೆ, ಕರಾವಳಿ ರಕ್ಷಣೆ ಮತ್ತು ಯುದ್ಧ ಸನ್ನದ್ಧತೆಯಲ್ಲಿ ಈ ನೌಕೆಗಳು ಭಾರತೀಯ ನೌಕಾಪಡೆಯ ಶಕ್ತಿಯನ್ನು ಹೊಸ ಮಟ್ಟಕ್ಕೆ ಕೊಂಡೊಯ್ಯಲಿವೆ.
Also Read:
ಫುಟ್ಬಾಲ್ ನಲ್ಲಿ ಇತಿಹಾಸ ! ಗೋಲ್ ಕೀಪರ್ ನಿಂದ ವಿಶ್ವ ದಾಖಲೆ ಬರೆದ ಕ್ಷಣ