BELAGAVI NEWS:
ಟೆಹ್ರಾನ್: ಅಮೆರಿಕ ಮತ್ತು ಇರಾನ್ ನಡುವಿನ ಉದ್ವಿಗ್ನತೆ ಮತ್ತಷ್ಟು ಹೆಚ್ಚಾಗಿದ್ದು, ಮಧ್ಯಪ್ರಾಚ್ಯದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಈ ನಡುವೆ, ಅಮೆರಿಕ ಇರಾನ್ ನ ಖುಜಿಸ್ತಾನ್ ಪ್ರಾಂತ್ಯದಲ್ಲಿರುವ ಒಮೈದಿಯಾ ಏರ್ ಪೋರ್ಟ್ ಮೇಲೆ ವೈಮಾನಿಕ ದಾಳಿ ನಡೆಸಿದೆ ಎಂಬ ವರದಿಗಳು ಪ್ರಕಟವಾಗಿವೆ.
ಲಭ್ಯವಿರುವ ಮಾಹಿತಿಯ ಪ್ರಕಾರ, ಇದು ಇರಾನ್ ಮೇಲೆ ಅಮೆರಿಕ ನಡೆಸಿದ ಐದನೇ ಸುತ್ತಿನ ದಾಳಿಯಾಗಿದೆ ಎಂದು ವರದಿಗಳು ತಿಳಿಸಿವೆ. ದಾಳಿಯ ವೇಳೆ ಏರ್ಪೋರ್ಟ್ ಪ್ರದೇಶವನ್ನು ಗುರಿಯಾಗಿಸಿಕೊಂಡು ಬಾಂಬ್ ದಾಳಿ ನಡೆಸಲಾಗಿದೆ ಎನ್ನಲಾಗಿದೆ.
ಇರಾನ್ ಬೆಂಬಲಿತ ಪಡೆಗಳಿಂದ ಸಮುದ್ರ ಮಾರ್ಗದಲ್ಲಿನ ಹಡಗುಗಳ ಮೇಲೆ ನಡೆದ ದಾಳಿಗಳಿಗೆ ಪ್ರತಿಕ್ರಿಯೆಯಾಗಿ ಅಮೆರಿಕ ಈ ಕ್ರಮ ಕೈಗೊಂಡಿದೆ ಎಂದು ವರದಿಗಳು ಹೇಳಿವೆ. ಆದರೆ, ಈ ಕುರಿತು ಅಮೆರಿಕ ಹಾಗೂ ಇರಾನ್ ಸರ್ಕಾರಗಳಿಂದ ಅಧಿಕೃತ ಮತ್ತು ಸಮಗ್ರ ಮಾಹಿತಿ ಇನ್ನಷ್ಟೇ ಹೊರ ಬರಬೇಕಿದೆ.
ದಾಳಿಯಿಂದ ಉಂಟಾದ ಹಾನಿ, ಸಂಭವನೀಯ ಸಾವು-ನೋವು ಹಾಗೂ ಪರಿಸ್ಥಿತಿಯ ಕುರಿತು ಅಧಿಕಾರಿಗಳಿಂದ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ. ಈ ಬೆಳವಣಿಗೆಯಿಂದ ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಮತ್ತಷ್ಟು ಹೆಚ್ಚುವ ಸಾಧ್ಯತೆ ಇದೆ.
ಅಮೆರಿಕದ ದಾಳಿಗೆ ಪ್ರತಿಯಾಗಿ ಇರಾನ್ ಕೂಡ ಪ್ರತಿದಾಳಿ ನಡೆಸಿರುವುದಾಗಿ ವರದಿಗಳು ತಿಳಿಸಿವೆ. ಇರಾನ್ ಅಮೆರಿಕದ ಸೇನಾ ನೆಲೆಗಳು ಹಾಗೂ ಇಸ್ರೇಲ್ ಕಡೆಗೆ ಕ್ಷಿಪಣಿಗಳನ್ನು ಉಡಾಯಿಸಿದೆ ಎಂದು ಹೇಳಲಾಗಿದೆ. ಅಲ್ಲದೆ, ಕತಾರ್, ಕುವೈತ್, ಓಮನ್ ಹಾಗೂ ಬಹ್ರೇನ್ ಸೇರಿದಂತೆ ಕೆಲವು ಗಲ್ಪ್ ರಾಷ್ಟ್ರಗಳತ್ತ ಡ್ರೋನ್ ದಾಳಿಯ ಪ್ರಯತ್ನಗಳು ನಡೆದಿದೆ ಎಂದು ವರದಿಗಳು ಹೊರಬಿದ್ದಿವೆ.
ದುಬೈನಲ್ಲಿ ಸ್ಪೋಟ ಸಂಭವಿಸಿರುವ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಕೆಲವು ಮಾಧ್ಯಮಗಳಲ್ಲಿ ವರದಿಗಳು ಹರಿದಾಡುತ್ತಿದ್ದರು, ಅದರ ಕಾರಣ ಹಾಗೂ ದಾಳಿಗೆ ಸಂಬಂಧಿಸಿದ ಅಧಿಕೃತ ದೃಢೀಕರಣ ಇನ್ನಷ್ಟೇ ಹೊರ ಬರಬೇಕಿದೆ.
ಅಮೆರಿಕವು ಇರಾನ್ ಹಲವು ಸೇನಾ ಹಾಗೂ ವಾಣಿಜ್ಯ ಗುರಿಗಳ ಮೇಲೆ ದಾಳಿ ನಡೆಸಿರುವುದಾಗಿ ಹೇಳಿಕೊಂಡಿದ್ದು, ಮತ್ತೊಂದೆಡೆ ಇರಾನ್ ತನ್ನ ಪ್ರತಿದಾಳಿಗೆ ಸಂಬಂಧಿಸಿದ ದೃಶ್ಯಗಳನ್ನು ಬಿಡುಗಡೆ ಮಾಡಿದೆ ಎಂದು ವರದಿಗಳು ತಿಳಿಸಿವೆ. ಉಭಯ ದೇಶಗಳ ನಡುವಿನ ಉದ್ವಿಗ್ನತೆಯಿಂದ ಜಾಗತಿಕ ಇಂಧನ ಮಾರುಕಟ್ಟೆಯಲ್ಲು ಪರಿಣಾಮ ಕಂಡುಬಂದಿದ್ದು, ಕಚ್ಚಾ ತೈಲ ಬೆಲೆಯಲ್ಲಿ ಏರಿಕೆ ದಾಖಲಾಗಿದೆ. ಈ ಬೆಳವಣಿಗೆಗಳಿಂದ ಮಧ್ಯಪ್ರಾಚ್ಯದ ಪರಿಸ್ಥಿತಿ ಮತ್ತಷ್ಟು ಉದ್ವಿಗ್ನಗೊಂಡಿದ್ದು, ಅಂತಾರಾಷ್ಟ್ರೀಯ ಸಮುದಾಯ ಆತಂಕದಿಂದ ಬೆಳವಣಿಗೆಗಳನ್ನು ಗಮನಿಸುತ್ತಿದೆ.