belaagvi news :
ಇದೀಗ ಕ್ರಿಕೆಟ್ ಲೋಕದ ಹೊಸ ಸೆನ್ಸೇಶನ್ ಆಗಿ ಹೊರಹೊಮ್ಮಿರುವ 15 ವರ್ಷದ ಬ್ಯಾಟಿಂಗ್ ಪ್ರತಿಭೆ ವೈಭವ್ ಸೂರ್ಯವಂಶಿ ಮತ್ತೊಮ್ಮೆ ಸುದ್ದಿಯ ಕೇಂದ್ರ ಬಿಂದುವಾಗಿದ್ದಾರೆ. ಅತಿ ಚಿಕ್ಕ ವಯಸ್ಸಿನಲ್ಲಿ ತನ್ನ ಅದ್ಭುತ ಬ್ಯಾಟಿಂಗ್ ಮೂಲಕ ಗಮನ ಸೆಳೆದಿರುವ ವೈಭವ್, ಭಾರತ ತಂಡದ ಭವಿಷ್ಯದ ತಾರೆಯಾಗಿ ಪರಿಗಣಿಸಲ್ಪಡುತ್ತಿದ್ದಾರೆ.
ಭಾರತ-ಇಂಗ್ಲೆಂಡ್ ಸರಣಿಗಳ ಮುನ್ನ, ವಿಶ್ವ ಕ್ರಿಕೆಟ್ನ ಅತ್ಯಂತ ಗೌರವಾನ್ವಿತ ಪ್ರಕಟಣೆಗಳಲ್ಲಿ ಒಂದಾದ ವಿಸ್ಡನ್ ತನ್ನ ಹೊಸ ಸಂಚಿಕೆಯನ್ನು ಬಿಡುಗಡೆ ಮಾಡಿದೆ. ಈ ಸಂಚಿಕೆಯ ಮುಖಪುಟದಲ್ಲಿ ವೈಭವ್ ಸೂರ್ಯವಂಶಿ ಸ್ಥಾನ ಪಡೆದಿರುವುದು ವಿಶೇಷ ಆಕರ್ಷಣೆಯಾಗಿದೆ. ಸಾಮಾನ್ಯವಾಗಿ ವಿಶ್ವ ಕ್ರಿಕೆಟ್ ನಲ್ಲಿ ದೊಡ್ಡ ಸಾಧನೆ ಮಾಡಿದ ಆಟಗಾರರಿಗೆ ಮಾತ್ರ ಈ ಗೌರವ ಸಿಗುತ್ತದೆ. ಆದರೆ ಕೇವಲ 15ನೇ ವಯಸ್ಸಿನಲ್ಲಿ ವೈಭವ್ ಈ ಅಪರೂಪದ ಗೌರವಕ್ಕೆ ಪಾತ್ರರಾಗಿರುವುದು ಅವರ ಮೇಲಿರುವ ನಿರೀಕ್ಷೆ ಹಾಗೂ ಪ್ರತಿಭೆಗೆ ಸಾಕ್ಷಿಯಾಗಿದೆ.
ಇಂಗ್ಲೆಂಡ್ ನೆಲದಲ್ಲಿಯೂ ವೈಭವ ಬಗ್ಗೆ ಚರ್ಚೆಗಳು ಜೋರಾಗಿದ್ದು, ಅವರ ಆಕ್ರಮಣಕಾರಿ ಬ್ಯಾಟಿಂಗ್ ಶೈಲಿ ಮತ್ತು ನಿರ್ಭಿತ ಆಟ ಕ್ರಿಕೆಟ್ ಅಭಿಮಾನಿಗಳ ಗಮನ ಸೆಳೆದಿದೆ. ಭಾರತ ತಂಡಕ್ಕೆ ಆಯ್ಕೆಯಾಗಿರುವ ಅವರು ಅತ್ಯಂತ ಕಿರಿಯ ವಯಸ್ಸಿನಲ್ಲಿ ದೇಶವನ್ನು ಪ್ರತಿನಿಧಿಸುವ ಸಾಧನೆಯತ್ತ ಹೆಜ್ಜೆ ಇಡುತ್ತಿದ್ದಾರೆ.
ಕ್ರಿಕೆಟ್ ಅಂಗಳದಲ್ಲಿ ಹೊಸ ಅಧ್ಯಾಯ ಬರೆಯಲು ಸಜ್ಜಾಗಿರುವ ವೈಭವ ಸೂರ್ಯವಂಶಿ ಇದೀಗ ಭಾರತೀಯ ಕ್ರಿಕೆಟ್ ನ ಭರವಸೆಯ ಮುಖವಾಗಿದ್ದು, ಅವರ ಮುಂದಿನ ಪ್ರದರ್ಶನದತ್ತ ಇಡೀ ಕ್ರಿಕೆಟ್ ಜಗತ್ತನ್ನು ಕಾತರದಿಂದ ಕಾಯುತ್ತಿದೆ.
ಕ್ರಿಕೆಟ್ ಲೋಕದಲ್ಲಿ ಅತ್ಯಂತ ಪ್ರತಿಷ್ಠಿತ ಸ್ಥಾನವನ್ನು ಹೊಂದಿರುವ ವಿಸ್ಡನ್ ನಿಯತಕಾಲಿಕೆಯಲ್ಲಿ ಕಾಣಿಸಿಕೊಳ್ಳುವುದು ಯಾವುದೇ ಆಟಗಾರನಿಗೆ ದೊಡ್ಡ ಗೌರವ. 1864 ರಲ್ಲಿ ಜಾನ್ ವಿಸ್ಡನ್ ಸ್ಥಾಪಿಸಿದ ಈ ಪ್ರಕಟಣೆಯನ್ನು "ಕ್ರಿಕೆಟ್ ನ ಬೈಬಲ್" ಎಂದೆ ಕರೆಯಲಾಗುತ್ತದೆ. ವಿಶ್ವ ಕ್ರಿಕೆಟ್ನ ಇತಿಹಾಸ, ದಾಖಲೆಗಳು ಮತ್ತು ಸಾಧಕರನ್ನು ದಾಖಲಿಸುವ ಈ ನಿಯತಕಾಲಿಕೆಗೆ ಕ್ರಿಕೆಟ್ ವಲಯದಲ್ಲಿ ವಿಶೇಷ ಮಾನ್ಯತೆ ಇದೆ.
ಇದೀಗ ಇದೆ ಪ್ರತಿಷ್ಠಿತ ವಿಸ್ಡನ್ ನ ಹೊಸ ಸಂಚಿಕೆಯ ಮುಖಪುಟದಲ್ಲಿ 15 ವರ್ಷದ ಭಾರತೀಯ ಬ್ಯಾಟಿಂಗ್ ಪ್ರತಿಭೆ ವೈಭವ್ ಸೂರ್ಯವಂಶಿ ಕಾಣಿಸಿಕೊಂಡಿರುವುದು ವಿಶೇಷ ಗಮನ ಸೆಳೆದಿದೆ. ಇನ್ನು ಅಂತರಾಷ್ಟ್ರೀಯ ಕ್ರಿಕೆಟ್ ಗೆ ಪಾದರ್ಪಣೆ ಮಾಡಿದ ಆಟಗಾರನೊಬ್ಬ ವಿಸ್ಡನ್ ಮುಖಪುಟದಲ್ಲಿ ಸ್ಥಾನ ಪಡೆಯುವದು ಅಪರೂಪದ ಸಾಧನೆಯಾಗಿದೆ.
ಈ ಸಂಚಿಕೆಯ ಮುಖಪುಟದಲ್ಲಿ ವೈಭವ್ ಸೂರ್ಯವಂಶಿಯ ಆಕರ್ಷಕ ಚಿತ್ರವನ್ನು ಬಳಸಲಾಗಿದ್ದು, "ಕ್ರಿಕೆಟ್ ದಾಖಲೆಗಳನ್ನು ಧೂಳಿಪಟ ಮಾಡಿದ ಹುಡುಗ" ಎಂಬ ಅರ್ಥ ಬರುವ ಶೀರ್ಷಿಕೆಯನ್ನು ನೀಡಲಾಗಿದೆ. ಇದು ಕೇವಲ ಅವರ ಪ್ರತಿಭೆಗೆ ದೊರೆತ ಮಾನ್ಯತೆಯಷ್ಟೇ ಅಲ್ಲ, ಭವಿಷ್ಯದ ಕ್ರಿಕೆಟ್ ತಾರೆಯಾಗಿ ವಿಶ್ವ ಕ್ರಿಕೆಟ್ ವಲಯ ಅವರ ಮೇಲೆ ಇಟ್ಟಿರುವ ನಂಬಿಕೆಯ ಪ್ರತೀಕವಾಗಿದೆ.
ಸಣ್ಣ ವಯಸ್ಸಿನಲ್ಲಿ ದಾಖಲೆಗಳ ಮೇಲೆ ದಾಖಲೆಗಳನ್ನು ನಿರ್ಮಿಸಿರುವ ವೈಭವ್, ಈಗಾಗಲೇ ಭಾರತದ ಕ್ರಿಕೆಟ್ ಅಭಿಮಾನಿಗಳ ಗಮನ ಸೆಳೆದಿದ್ದಾರೆ. ಇದೀಗ ವಿಸ್ಡನ್ ಮುಖಪುಟ ಅಲಂಕರಿಸುವ ಮೂಲಕ ಅವರು ಜಾಗತಿಕ ಮಟ್ಟದಲ್ಲೂ ಚರ್ಚೆಯ ವಿಷಯವಾಗಿದ್ದು, ಈ ಗೌರವ ಪಡೆದ ಅತ್ಯಂತ ಕಿರಿಯ ಆಟಗಾರರಲ್ಲಿ ಮುಂದುವರೆದರೆಂಬ ಹೆಗ್ಗಳಿಗೆಗೆ ಪಾತ್ರರಾಗಿದ್ದಾರೆ. ಭಾರತ ಕ್ರಿಕೆಟ್ ನ ಮುಂದಿನ ಸೂಪರ್ ಸ್ಟಾರ್ ಆಗಿ ರೂಪುಗೊಳ್ಳುತ್ತಿರುವ ವೈಭವ್ ಸೂರ್ಯವಂಶಿಯ ಪಯಣದ ಮೇಲೆ ಇದೀಗ ಇಡೀ ಕ್ರಿಕೆಟ್ ಜಗತ್ತಿನ ಕಣ್ಣು ನೆಟ್ಟಿದೆ.
ಇನ್ನು ಈ ಸಂಚಿಕೆಯಲ್ಲಿ ಸ್ಪೋಟಕ ಬ್ಯಾಟಿಂಗ್ ಶೈಲಿ ಹಾಗೂ ಆಧುನಿಕ ಕ್ರಿಕೆಟ್ ಗೆ ಅವರ ಕೊಡುಗೆಯನ್ನು ಆಳವಾಗಿ ವಿಶ್ಲೇಷಿಸಲಾಗಿದೆ
ವಿಸ್ಡನ್ ನ ಈ ವಿಶೇಷ ಸಂಚಿಕೆಯಲ್ಲಿ ವೈಭವ್ ಸೂರ್ಯವಂಶಿ ಕುರಿತು ಹಲವು ಆಸಕ್ತಿಕರ ಲೇಖನಗಳು ಪ್ರಕಟವಾಗಿವೆ. ವೈಭವ್ ಅವರ ಮಾರ್ಗದರ್ಶಕರಾದ ಸುಬಿನ್ ಭರುಚಾ, ಕೇವಲ 15ನೇ ವಯಸ್ಸಿನಲ್ಲಿ ಅವರು ಒತ್ತಡದ ಸಂದರ್ಭದಲ್ಲಿ ಹೇಗೆ ಸಮರ್ಥವಾಗಿ ನಿಭಾಯಿಸುತ್ತಾರೆ ಎಂಬುದನ್ನು ವಿವರಿಸಿದ್ದಾರೆ. ದೊಡ್ಡ ವೇದಿಕೆಗಳನ್ನು ಆತ್ಮವಿಶ್ವಾಸ ಕಳೆದುಕೊಳ್ಳದೆ ಆಡುತ್ತಿರುವುದು ವೈಭವ್ ಅವರ ಮಾನಸಿಕ ದೃಢತೆ ಮತ್ತು ಆಟದ ಮೇಲಿನ ಏಕಾಗ್ರತೆ ಅವರನ್ನು ಇತರ ಯುವ ಆಟಗಾರರಿಂದ ವಿಭಿನ್ನರನ್ನಾಗಿಸಿದೆ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.
ಇದರ ಜೊತೆಗೆ ಗ್ರೇಮ್ ಸ್ಮಿತ್ ಬರೆದಿರುವ ವಿಶೇಷ ಲೇಖನವು ಸಾಕಷ್ಟು ಗಮನ ಸೆಳೆದಿದೆ. ದಕ್ಷಿಣ ಆಫ್ರಿಕಾ ತಂಡದ ಮಾಜಿ ನಾಯಕ ಸ್ಮಿತ್, "ನಾನು ನನ್ನ ಜೀವನದಲ್ಲಿ ಕಂಡ ಅತ್ಯುತ್ತಮ ಟಿ20 ಬ್ಯಾಟಿಂಗ್ ಪ್ರತಿಭೆ ವೈಭವ್" ಎಂದು ಕೊಂಡಾಡಿರುವುದು ಯುವ ಆಟಗಾರನ ಸಾಮರ್ಥ್ಯಕ್ಕೆ ಸಿಕ್ಕಿರುವ ದೊಡ್ಡ ಮೆಚ್ಚುಗೆಯಾಗಿದೆ. ಕ್ರಿಕೆಟ್ನ ದಿಗ್ಗಜರಿಂದಲೇ ಇಂತಹ ಪ್ರಶಂಸೆ ದೊರಕಿರುವುದು ವೈಭವ್ ಅವರ ಭವಿಷ್ಯದ ಮೇಲಿನ ನಿರೀಕ್ಷೆಗಳನ್ನು ಮತ್ತಷ್ಟು ಹೆಚ್ಚಿಸಿದೆ.
ಒಟ್ಟಾರೆ, ಅಂತರಾಷ್ಟ್ರೀಯ ಕ್ರಿಕೆಟ್ ಗೆ ಇನ್ನೂ ಪಾದರ್ಪಣೆ ಮಾಡದ ವಯಸ್ಸಿನಲ್ಲಿ ವಿಸ್ಡನ್ ಮುಖಪುಟ ಅಲಂಕರಿಸಿರುವುದು ವೈಭವ್ ಸೂರ್ಯವಂಶಿಯವರ ಅಸಾಧಾರಣ ಪ್ರತಿಭೆ ಮತ್ತು ಸಾಧನೆಗಳಿಗೆ ದೊರೆತ ಜಾಗತಿಕ ಮಾನ್ಯತೆಯಾಗಿದೆ. ಕ್ರಿಕೆಟ್ ಲೋಕದ ಅನೇಕ ದಿಗ್ಗಜರನ್ನು ತಮ್ಮ ಬ್ಯಾಟಿಂಗ್ ಕೌಶಲ್ಯದಿಂದ ಬೆರಗುಗೊಳಿಸಿರುವ ಈ ಯುವ ಪ್ರತಿಭೆ, ಶೀಘ್ರದಲ್ಲೇ ಭಾರತ ತಂಡದ ಪರ ಅಂತರಾಷ್ಟ್ರೀಯ ಕ್ರಿಕೆಟ್ ಗೆ ಕಾಲಿಡುವ ನಿರೀಕ್ಷೆಯಲ್ಲಿದ್ದಾರೆ.
ಮುಂಬರುವ ಐರ್ಲೆಂಡ್ ವಿರುದ್ಧದ ಟಿ20 ಸರಣಿಯ ಮೂಲಕ ಟೀಮ್ ಇಂಡಿಯಾ ಪರ ಪರ ತಮ್ಮ ಅಂತರಾಷ್ಟ್ರೀಯ ಪಯಣ ಆರಂಭಿಸುವ ಸಾಧ್ಯತೆಗಳ ಬಗ್ಗೆ ಚರ್ಚೆಗಳು ಜೋರಾಗಿದ್ದು,ಭಾರತೀಯ ಕ್ರಿಕೆಟ್ ಅಭಿಮಾನಿಗಳು ಈಗಾಗಲೇ ಅವರ ಮೊದಲ ಪ್ರದರ್ಶನಕ್ಕಾಗಿ ಕಾತುರದಿಂದ ಕಾಯುತ್ತಿದ್ದಾರೆ .ಪ್ರತಿಭೆ,ಆತ್ಮವಿಶ್ವಾಸ ಮತ್ತು ನಿರ್ಭೀತ ಆಟದ ಮೂಲಕ ಹೊಸ ತಲೆಮಾರಿನ ಕ್ರಿಕೆಟ್ ತಾರೆಯಾಗಿ ಹೊರ ಹೊಮ್ಮುತ್ತಿರುವ ವೈಭವ್ ಸೂರ್ಯವಂಶಿ, ಭಾರತೀಯ ಕ್ರಿಕೆಟ್ ನ ಭವಿಷ್ಯದ ದೊಡ್ಡ ಆಶಾಕಿರಣವಾಗಿ ಗುರುತಿಸಿಕೊಂಡಿದ್ದಾರೆ.
Also Read:
ಕಣ್ಣೆದುರೇ ನಡೆದ ಅವಘಡ: ಮುಂಬೈ ಮೇಯರ್ ಎದುರೇ ಮ್ಯಾನ್ ಹೋಲ್ ಗೆ ಬಿದ್ದ ಸಿಬ್ಬಂದಿ