belagavi news :
ರಾಷ್ಟ್ರೀಯ ಹೆದ್ದಾರಿ 169 ಎ ರ ಆಗುಂಬೆ ಘಾಟಿಯಲ್ಲಿ ಜಲ್ಲಿ ಹಾಗೂ ಸರಕು ತುಂಬಿದ ಭಾರಿ ವಾಹನಗಳ ಸಂಚಾರವನ್ನು ಜೂನ್ 15ರಿಂದ ಮಳೆಗಾಲ ಮುಗಿಯುವವರೆಗೆ ನಿಷೇಧಿಸಿ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಆದೇಶ ಹೊರಡಿಸಿದ್ದಾರೆ.ಬಾರಿ ವಾಹನಗಳು ಪರ್ಯಾಯ ಮಾರ್ಗಗಳಲ್ಲಿ ಸಂಚರಿಸುವಂತೆ ಸೂಚಿಸಲಾಗಿದೆ.
ಶಿವಮೊಗ್ಗದಿಂದ ಹೊಸನಗರ-ಮಾಸ್ತಿಕಟ್ಟೆ ಮಾರ್ಗವಾಗಿ ಕುಂದಾಪುರ ಮತ್ತು ಉಡುಪಿಗೆ ಸಂಪರ್ಕ ಕಲ್ಪಿಸುವ ಹುಲಿಕಲ್ ಘಾಟಿಯಲ್ಲಿ ಭೂಕುಸಿತ ಸಂಭವಿಸಿದ ಹಿನ್ನೆಲೆಯಲ್ಲಿ ತಾತ್ಕಾಲಿಕ ರಕ್ಷಣಾತ್ಮಕ ಕಾಮಗಾರಿ ನಡೆಯುತ್ತಿದೆ.ಈ ಕಾಮಗಾರಿ ಇನ್ನು ಸಂಪೂರ್ಣಗೊಳ್ಳದ ಕಾರಣ, ರಾಷ್ಟ್ರೀಯ ಹೆದ್ದಾರಿ 169 ಎ ತೀರ್ಥಹಳ್ಳಿ - ಮಲ್ಪೆ - ಉಡುಪಿ ರಸ್ತೆಯ ಆಗುಂಬೆ ಘಾಟಿಯಲ್ಲಿ ಬಾರಿ ವಾಹನಗಳ ಓಡಾಟ ಹೆಚ್ಚಾಗಿದೆ.
ಮುಂದಿನ ದಿನಗಳಲ್ಲಿಯೂ ಇದೇ ಪರಿಸ್ಥಿತಿ ಮುಂದುವರೆದರೆ ರಸ್ತೆಯ ಬದಿಯಲ್ಲಿ ಭೂಕುಸಿತ ಸಂಭವಿಸುವ, ಅಪಘಾತಗಳು ಹೆಚ್ಚಾಗುವ ಹಾಗೂ ಸಾರ್ವಜನಿಕರ ಸಂಚಾರಕ್ಕೆ ತೊಂದರೆ ಉಂಟಾಗುವ ಸಾಧ್ಯತೆ ಇದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ. ಸಾರ್ವಜನಿಕರ ಸುರಕ್ಷತೆ ಮತ್ತು ಸಂಚಾರ ವ್ಯವಸ್ಥೆ ಸುಗಮವಾಗಿರಲು ಈ ಕ್ರಮ ಕೈಗೊಳ್ಳಲಾಗಿದೆ.
ಇದಲ್ಲದೆ, ಆರೋಗ್ಯ ಸೇವಿಗಾಗಿ ಮಣಿಪಾಲ್, ಉಡುಪಿ ಹಾಗೂ ಮಂಗಳೂರಿಗೆ ತೆರಳುವ ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ ಮತ್ತು ಹಾವೇರಿ ಜಿಲ್ಲೆಗಳ ನಾಗರಿಕರಿಗೆ ಈ ಮಾರ್ಗ ಪ್ರಮುಖ ಸಂಪರ್ಕವಾಗಿದೆ. ಈ ಸಂಪರ್ಕಕ್ಕೆ ಅಡಚಣೆ ಉಂಟಾದರೆ ನಾಲ್ಕು ಜಿಲ್ಲೆಗಳ ಜನರಿಗೆ ಗಂಭೀರ ತೊಂದರೆ ಎದುರಾಗುವ ಸಾಧ್ಯತೆ ಇರುವುದರಿಂದ ಮುನ್ನೆಚ್ಚರಿಕ ಕ್ರಮವಾಗಿ ಬಾರಿ ವಾಹನಗಳ ಸಂಚಾರವನ್ನು ನಿರ್ವಹಿಸಲಾಗಿದೆ ಎಂದು ಜಿಲ್ಲಾಧಿಕಾರಿ ಸ್ಪಷ್ಟಪಡಿಸಿದ್ದಾರೆ.
ಆಗುಂಬೆ ಘಾಟಿಯಲ್ಲಿ ಭಾರಿ ವಾಹನಗಳ ಸಂಚಾರ ನಿಷೇಧಿಸಿರುವ ಹಿನ್ನೆಲೆಯಲ್ಲಿ ತೀರ್ಥಹಳ್ಳಿಯಿಂದ ಉಡುಪಿ ಕಡೆಗೆ ತೆರಳಿರುವ ಜಲ್ಲಿ ಹಾಗೂ ಸರಕು ಸಾಗಣೆ ವಾಹನಗಳು ತೀರ್ಥಹಳ್ಳಿ-ನಗರ-ನಗೋಡಿ-ಕೊಲ್ಲೂರು-ಕುಂದಾಪುರ-ಉಡುಪಿ ಮಾರ್ಗ ಅಥವಾ ತೀರ್ಥಹಳ್ಳಿ-ಶೃಂಗೇರಿ-ಕೆರೆಕಟ್ಟೆ-ಬಜಗೋಳಿ-ಕಾರ್ಕಳ-ಉಡುಪಿ ಮಾರ್ಗವನ್ನು ಬಳಸುವಂತೆ ಜಿಲ್ಲಾಡಳಿತ ಸೂಚಿಸಿದೆ.
ಅದೇ ರೀತಿ, ಉಡುಪಿಯಿಂದ ತೀರ್ಥಹಳ್ಳಿ ಕಡೆಗೆ ಸಂಚರಿಸುವ ಭಾರಿ ವಾಹನಗಳು ಉಡುಪಿ-ಕುಂದಾಪುರ-ಕೊಲ್ಲೂರು-ನಾಗೋಡಿ-ನಗರ-ತೀರ್ಥ ಮಾರ್ಗ ಅಥವಾ ಕಾರ್ಕಳ-ಬಜಗೋಳಿ-ಕೆರೆಕಟ್ಟೆ-ಶೃಂಗೇರಿ-ತೀರ್ಥಹಳ್ಳಿ ಮಾರ್ಗವಾಗಿ ಸಂಚರಿಸಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಮಳೆಗಾಲದ ಅವಧಿಯಲ್ಲಿ ಆಗುಂಬೆ ಘಾಟಿಯಲ್ಲಿ ಭೂಕುಸಿತ, ರಸ್ತೆ ಹಾನಿ ಹಾಗೂ ಅಪಘಾತಗಳ ಸಂಭವವನ್ನು ತಡೆಯುವ ಉದ್ದೇಶದಿಂದ ಈ ಪರ್ಯಾಯ ಮಾರ್ಗ ವ್ಯವಸ್ಥೆ ಜಾರಿಗೆ ತರಲಾಗಿದೆ.
Also Read:
ಕಾಂಗ್ರೆಸ್ ಸರ್ಕಾರಕ್ಕೆ ಸಮಯ ನೀಡಿ, ಅಸಮಾಧಾನಗಳಿಗೆ ಪರಿಹಾರ ಕಂಡುಕೊಳ್ಳುತ್ತೇವೆ: ಸತೀಶ್ ಜಾರಕಿಹೊಳಿ