belagavi news:
ಚೆನ್ನೈ (ತಮಿಳುನಾಡು): ತಮಿಳುನಾಡಿನಲ್ಲಿ ಟಿವಿ ನಾಯಕ ವಿಜಯ್ ನೇತೃತ್ವದ ನೂತನ ಸರಕಾರಕ್ಕೆ ಬೆಂಬಲ ನೀಡಲು ತಮಿಳುನಾಡು ಕಾಂಗ್ರೆಸ್ ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ.
ಮಂಗಳವಾರ ತಡರಾತ್ರಿ ತಮಿಳುನಾಡು ಕಾಂಗ್ರೆಸ್ ನ ರಾಜಕೀಯ ವ್ಯವಹಾರಗಳ ಸಮಿತಿ (ಪಿಎಸಿ) ಯ ತುರ್ತು ಸಭೆ ನಡೆಯಿತು. ಈ ಸಭೆಯಲ್ಲಿ ಟಿವಿಕೆಗೆ ಬೆಂಬಲ ನೀಡುವ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ.
ಟಿವಿಗೆ ಬೆಂಬಲಿಸುವ ಬಗ್ಗೆ ಚರ್ಚಿಸಲು ಪಕ್ಷದ ತಮಿಳುನಾಡು ವ್ಯವಹಾರಗಳ ಎಐಸಿಸಿ ಉಸ್ತುವಾರಿ ಗಿರೀಶ್ ಚೊಡಂಕರ್ ಅವರು ಆನ್ಲೈನ್ ಮೂಲಕ ಸಭೆ ಕರೆದಿದ್ದರು.
ಸಭೆಯಲ್ಲಿ ಭಾಗವಹಿಸಿದ ಹಿರಿಯ ಸದಸ್ಯರು ನಟ ಹಾಗು ರಾಜಕಾರಣಿ ವಿಜಯವರನ್ನು ಬೆಂಬಲಿಸುವ ಪರವಾಗಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಕೊನೆಗೆ ಜಾತ್ಯಾತೀತ ಸರ್ಕಾರ ರಚನೆಗೆ ಸಹಕರಿಸುವ ಉದ್ದೇಶದಿಂದ ನೇತೃತ್ವದ ಟಿವಿಕೆಗೆ ಬೆಂಬಲ ನೀಡಲು ತಮಿಳುನಾಡು ಕಾಂಗ್ರೆಸ್ನ ಪಿಎಸಿ ಸರ್ವಾನುಮತದಿಂದ ತೀರ್ಮಾನಿಸಿದೆ ಎಂದು ಮೂಲಗಳು ದೃಢಪಟ್ಟಿಸಿದೆ.
ಇದಕ್ಕೂ ಮುನ್ನ, ಮಂಗಳವಾರ ಸಂಜೆ ಪಕ್ಷದ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಅವರ ನಿವಾಸದಲ್ಲಿ ಕಾಂಗ್ರೆಸ್ ಉನ್ನತ ಮಟ್ಟದ ನಾಯಕರು ಸಭೆ ನಡೆಸಿದ್ದರು. ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮತ್ತು ತಮಿಳುನಾಡು ಉಸ್ತುವಾರಿ ಗಿರೀಶ್ ಚೋಡಂಕರ್ ಸೇರಿದಂತೆ ಇತರರು ಭಾಗವಹಿಸಿದ್ದರು.
ಈ ಸಭೆಯ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಕಾಂಗ್ರೆಸ್ ಸಂಘಟನಾ ಪ್ರಧಾನ ಕಾರ್ಯದರ್ಶಿ ಕೆ .ಸಿ. ವೇಣುಗೋಪಾಲ್, ತಮಿಳುನಾಡಿನ ಚುನಾವಣೋತ್ತರ ರಾಜಕೀಯ ಪರಿಸ್ಥಿತಿಗಳ ಕುರಿತು ಪಕ್ಷದ ನಾಯಕತ್ವ ಚರ್ಚೆ ನಡೆಸಿದೆ ಎಂದು ಹೇಳಿದರು. ಇದೇ ವೇಳೆ, ಟಿವಿಕೆ ಅಧ್ಯಕ್ಷ ವಿಜಯ್ ಅವರು ಸರ್ಕಾರ ರಚಿಸಲು ಕಾಂಗ್ರೆಸ್ ಪಕ್ಷದ ಬೆಂಬಲ ಕೋರಿರುವುದಾಗಿ ತಿಳಿಸಿದರು.
ತಮಿಳುನಾಡಿನಲ್ಲಿ ಸಂವಿಧಾನವನ್ನು ಕಾಪಾಡುವ ಜಾತ್ಯತೀತ ಸರ್ಕಾರಕ್ಕೆ ಜನಾದೇಶ ದೊರೆತಿದೆ ಎಂಬುದು ಸ್ಪಷ್ಟವಾಗಿದೆ. ಬಿಜೆಪಿ ಹಾಗೂ ಅದರ ಮಿತ್ರ ಪಕ್ಷಗಳು ರಾಜ್ಯದಲ್ಲಿ ಅಧಿಕಾರಕ್ಕೆ ಬರಬಾರದು ಎಂಬ ದೃಢ ನಿಶ್ಚಯ ಕಾಂಗ್ರೆಸ್ ಹೊಂದಿದೆ. ಈ ಹಿನ್ನೆಲೆಯಲ್ಲಿ ರಾಜ್ಯದ ಜನಾಭಿಪ್ರಾಯವನ್ನು ಗಮನದಲ್ಲಿಟ್ಟುಕೊಂಡು ವಿಜಯ್ ಅವರ ಮನವಿಗೆ ಸಂಬಂಧಿಸಿದಂತೆ ಅಂತಿಮ ನಿರ್ಧಾರ ಕೈಗೊಳ್ಳುವಂತೆ ಪಕ್ಷದ ನಾಯಕತ್ವವು ತಮಿಳುನಾಡು ಕಾಂಗ್ರೆಸ್ ಗೆ ಸೂಚನೆ ನೀಡಿದೆ ಎಂದು ಅವರು ಹೇಳಿದರು.
234 ಸದಸ್ಯ ಬಲದ ತಮಿಳುನಾಡು ವಿಧಾನಸಭೆಯಲ್ಲಿ ವಿಜಯ್ ನೇತೃತ್ವದ ಟಿವಿಕೆ 108 ಸ್ಥಾನಗಳನ್ನು ಗೆದ್ದಿದೆ. ಸರಳ ಬಹುಮತದೊಂದಿಗೆ ಸರಕಾರ ರಚಿಸಲು ಅವರಿಗೆ ಇನ್ನೂ 10 ಶಾಸಕರ ಬೆಂಬಲ ಅಗತ್ಯವಿದೆ.
ಚುನಾವಣೆಯಲ್ಲಿ ಪ್ರಮುಖ ಪಕ್ಷಗಳಾದ ದ್ರಾವಿಡ್ ಮುನ್ನೆತ್ರ ಕಳಗಂ (ಡಿಎಂಕೆ) 59 ಸ್ಥಾನಗಳನ್ನು ಮತ್ತು ಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೆತ್ರ ಕಳಗಂ (ಎಐಎಡಿಎಂಕೆ) 47 ಸ್ಥಾನಗಳನ್ನು ಗೆದ್ದಿವೆ.
ಇನ್ನುಳಿದಂತೆ ಕಾಂಗ್ರೆಸ್ 5, ಪಟ್ಟಾಳಿ ಮಕ್ಕಳ ಕಚ್ಚಿ (ಪಿಎಂಕೆ) 4, ಸಿಪಿಐ ಮತ್ತು ಸಿಪಿಐ(ಎಂ) ತಲಾ 2 ಸ್ಥಾನಗಳನ್ನು ಪಡೆದಿವೆ.
ಭಾರತೀಯ ಜನತಾ ಪಕ್ಷ (ಬಿಜೆಪಿ) ಮುರ್ಪೋಕ್ಕು ದ್ರಾವಿಡ್ ಕಳಗಂ (ಡಿಎಂಡಿಕೆ) ಮತ್ತು ಅಮ್ಮ ಮಕ್ಕಳ ಮುನ್ನೆತ್ರ ಕಳಗಂ (ಎಎಂಎಂಕೆ) ತಲಾ ಒಂದೊಂದು ಸ್ಥಾನ ಗೆದ್ದಿವೆ. ವಿಸಿಕೆ ಪಕ್ಷವು ಎರಡು ಸ್ಥಾನಗಳನ್ನು ಜಯಿಸಿದೆ.
ಕಾಂಗ್ರೆಸ್ ಡಿಎಂಕೆ ಜೊತೆ ಚುನಾವಣಾಪೂರ್ಣ ಮೈತ್ರಿ ಮಾಡಿಕೊಂಡಿದ್ದರೆ ಬಿಜೆಪಿ ಎಐಎಡಿಎಂಕೆ ಜೊತೆ ಮೈತ್ರಿ ಮಾಡಿಕೊಂಡಿತ್ತು.
Also Read:
"ಮಿಲಿಟರಿ ಆಪರೇಷನ್ ಗೆ ಬ್ರೇಕ್ ಬ್ರೇಕ್ -'ಪ್ರಾಜೆಕ್ಟ್ ಫ್ರೀಡಂ' ಸ್ಥಗಿತ"