belagavi news :
ಕಾಂಗ್ರೆಸ್ ಪಕ್ಷದಲ್ಲಿ ರೇಟ್ ಫಿಕ್ಸ್ ಆಗಿದೆ, ಆದರೆ ಸಂಪುಟ ವಿಸ್ತರಣೆಗೆ ಮಾತ್ರ ಡೇಟ್ ಫಿಕ್ಸ್ ಆಗಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಬೆಂಗಳೂರಿನ ಬಿಜೆಪಿ ಮಲ್ಲೇಶ್ವರಂ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ನೀಡಿರುವ "ನೀರಿನ ಕೊರತೆಯಿಂದ ರೈತರು ಬೆಳೆ ಬೆಳೆಯಬೇಡಿ" ಎಂಬ ಹೇಳಿಕೆ ರೈತರ ಆತ್ಮಸ್ಥೈರ್ಯ ಕುಗ್ಗಿಸುವಂಥದ್ದು ಎಂದು ಟೀಕಿಸಿದರು.
ರಾಜ್ಯದ ಜಲಾಶಯಗಳಲ್ಲಿ ನೀರಿನ ಕೊರತೆ ಇರುವ ವಿಚಾರವನ್ನು ಸಂಪುಟದಲ್ಲಿ ಚರ್ಚಿಸಿದ ಬಳಿಕ ಮುಖ್ಯಮಂತ್ರಿಯವರೇ ರೈತರಿಗೆ ಬೆಳೆ ಬೆಳೆಯದಂತೆ ಹೇಳಿರುವುದು ಆಶ್ಚರ್ಯಕರ ಹಾಗೂ ನೋವುಂಟು ಮಾಡುವ ಸಂಗತಿ ಎಂದು ವಿಜಯೇಂದ್ರ ಹೇಳಿದರು. ಸಾರ್ವಜನಿಕ ಹುದ್ದೆಯಲ್ಲಿರುವವರು ಇಂತಹ ಸೂಕ್ಷ್ಮ ವಿಷಯಗಳು ಪ್ರಭುದ್ಧತೆ ಹಾಗೂ ಜವಾಬ್ದಾರಿಯಿಂದ ಮಾತನಾಡಬೇಕು ಎಂದು ಅವರು ಸಲಹೆ ನೀಡಿದರು.
ದೇಶದ ಹಲವು ಭಾಗಗಳಲ್ಲಿ ಮಳೆಯ ಕೊರತೆಯ ಆತಂಕವಿದ್ದರು. ಇಂತಹ ಸಂದರ್ಭದಲ್ಲಿ ಸರ್ಕಾರ ರೈತರಿಗೆ ಧೈರ್ಯ ಹಾಗೂ ಭರವಸೆ ನೀಡಬೇಕಿತ್ತು ಎಂದು ವಿಜಯೇಂದ್ರ ಅಭಿಪ್ರಾಯ ಪಟ್ಟರು. ಮುಂದಿನ 15 ರಿಂದ 20 ದಿನಗಳಲ್ಲಿ ಉತ್ತಮ ಮಳೆಯಾಗುವ ನಿರೀಕ್ಷೆಯಿದ್ದು, ಮುಖ್ಯಮಂತ್ರಿ ಹೇಳಿಕೆಯಿಂದ ರೈತರು ಬಿತ್ತನೆ ಮಾಡದೆ ಇದ್ದರೆ ಅದರ ಹೊಣೆ ಯಾರು? ಹೋರುತ್ತಾರೆ ಎಂದು ಅವರು ಪ್ರಶ್ನಿಸಿದರು.
ರಾಜ್ಯದಲ್ಲಿ 50 ರಿಂದ 60 ರಷ್ಟು ಮಳೆ ಕೊರತೆ ಇರುವ ಸಂದರ್ಭದಲ್ಲಿ ಸರ್ಕಾರದ ಆದ್ಯತೆ ಏನು ಎಂಬುದನ್ನು ಮುಖ್ಯಮಂತ್ರಿ ಸ್ಪಷ್ಟಪಡಿಸಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲಾಧಿಕಾರಿಗಳಿಗೆ ಅನಗತ್ಯ ಅನುದಾನ ಬಿಡುಗಡೆ ಮಾಡಲಾಗಿದೆಯೇ, ರೈತರು ಹಾಗೂ ಜಾನುವಾರುಗಳ ರಕ್ಷಣೆಗೆ ಯಾವುದೇ ವಿಶೇಷ ಪ್ಯಾಕೇಜ್ ಘೋಷಿಸಲಾಗಿದೆಯೇ ಎಂದು ಪ್ರಶ್ನಿಸಿದರು. ಬರಗಾಲದ ಮುನ್ಸೂಚನೆ ಹೊಸದಾಗಿ ಬಂದ ವಿಚಾರವಲ್ಲ. ಸರ್ಕಾರ ಸಮಯಕ್ಕೆ ಮುನ್ನ ಅಗತ್ಯ ಮುನ್ನೆಚ್ಚರಿಕೆ ಕ್ರಮವನ್ನು ಕೈಗೊಳ್ಳಬೇಕಿತ್ತು ಎಂದು ಅವರು ಟೀಕಿಸಿದರು.
ಮುಖ್ಯಮಂತ್ರಿ ರೈತರ ಹಿತಾಸಕ್ತಿಗಿಂತ ಬೇರೆ ವಿಷಯಗಳಿಗೆ ಹೆಚ್ಚು ಆದ್ಯತೆ ನೀಡುತ್ತಿದ್ದಾರೆ ಎಂದು ಆರೋಪಿಸಿದ ವಿಜಯೇಂದ್ರ, ರಾಜ್ಯದಲ್ಲಿ ನೀರಿನ ಕೊರತೆಯ ಪರಿಸ್ಥಿತಿ ಇರುವಾಗಲೂ ತಮಿಳುನಾಡಿಗೆ ನೀರು ಹರಿಸುವ ನಿರ್ಧಾರ ಏಕೆ ತೆಗೆದುಕೊಳ್ಳಲಾಗಿದೆ ಎಂಬುವುದಕ್ಕೂ ಉತ್ತರ ನೀಡಬೇಕು ಎಂದು ಒತ್ತಾಯಿಸಿದರು.
ಇದೆ ವೇಳೆ, ರೈತರ ನೆರವು, ಆಡಳಿತಾತ್ಮಕ ಸಿದ್ಧತೆ ಹಾಗೂ ಬರ ನಿರ್ವಹಣೆಯತ್ತ ಸರ್ಕಾರ ಹೆಚ್ಚಿನ ಗಮನಹರಿಸಬೇಕಿತ್ತು ಎಂದು ಅವರು ಹೇಳಿದರು. ಎಸ್ಐಆರ್ ಪ್ರಕ್ರಿಯೆಯ ಕಾರಣದಿಂದ ಆಗಸ್ಟ್ ಮಧ್ಯಭಾಗದಲ್ಲಿ ಮುಂಗಾರು ಅಧಿವೇಶನ ನಡೆಸಲಾಗುವುದು ಎಂಬ ಸರ್ಕಾರದ ಹೇಳಿಕೆಯನ್ನು ಪ್ರಶ್ನಿಸಿದವರು, ಈ ಕಾರಣವನ್ನೇ ಮುಂದಿಟ್ಟು ಅಧಿವೇಶನವನ್ನು ಮುಂದೂಡಲಾಗುತ್ತಿದೆ ಎಂದು ಆರೋಪಿಸಿದರು.
ಸಂಪೂರ್ಣ ಸಚಿವ ಸಂಪುಟ ಇದ್ದರೂ ಹಿಂದಿನ ಸಂದರ್ಭಗಳಲ್ಲಿ ನೆರೆ ಹಾಗೂ ರೈತರ ಸಂಕಷ್ಟಗಳಿಗೆ ಸರ್ಕಾರ ಸಮರ್ಪಕವಾಗಿ ಸ್ಪಂದಿಸಿರಲಿಲ್ಲ ಎಂದು ವಿಜಯೇಂದ್ರ ಟೀಕಿಸಿದರು.
ರಾಜ್ಯದಲ್ಲಿ ಹಿಂಸಾತ್ಮಕ ಘಟನೆಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಸರ್ಕಾರದ ಆಡಳಿತ ಹಾಗೂ ಕಾನೂನು ಸುವ್ಯವಸ್ಥೆ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಗಂಭೀರ ಆರೋಪಗಳನ್ನು ಮಾಡಿದರು.
ಹಾನಗಲ್ ತಾಲೂಕಿನ ನರೇಗಲ್ ನಲ್ಲಿ ಹಾಲುಮತ ಸಮಾಜದ ಒಂದೇ ಕುಟುಂಬದ ಆರು ಜನರ ಮೇಲೆ ಮಾರನಾಂತಿಕ ಹಲ್ಲೆ ನಡೆದಿರುವುದು ಹಾಗೂ ರಟ್ಟಿಹಳ್ಳಿಯಲ್ಲಿ ಮರಾಠಾ ಸಮಾಜದ ಬಡ ಕುಟುಂಬದ ಶಿವಾಜಿ ರಾವ್ ಅವರನ್ನು ಹಾಡಹಗಲೇ ಕೊಲೆ ಮಾಡಿರುವ ಘಟನೆಗಳು ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿರುವುದನ್ನು ತೋರಿಸುತ್ತದೆ ಎಂದು ಅವರು ಟೀಕಿಸಿದರು.
ಚಿಕ್ಕಬಳ್ಳಾಪುರದಲ್ಲಿ ನಡೆದ ಪಿಸಿಯೋಥೆರಪಿಸ್ಟ್ ಕೊಲೆ ಪ್ರಕರಣವನ್ನು ಉಲ್ಲೇಖಿಸಿದವರು, ರಾಜ್ಯದಲ್ಲಿ ಅಶಾಂತಿ ಮತ್ತು ಭಯದ ವಾತಾವರಣ ನಿರ್ಮಾಣವಾಗಿದೆ ಎಂದು ಆರೋಪಿದರು. ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ "ಸಾಫ್ಟ್ ಹಿಂದುತ್ವ" ನೀತಿ, ಗೃಹ ಸಚಿವರು ಮತ್ತು ಕೆಪಿಸಿಸಿ ಅಧ್ಯಕ್ಷರ ನಿಲುವುಗಳು ಮತಿಯ ಶಕ್ತಿಗಳಿಗೆ ಧೈರ್ಯ ನೀಡುತ್ತಿದೆ ಎಂದು ವಿಜಯೇಂದ್ರ ಹೇಳಿದರು.
ಎಸ್ಐಆರ್ ಪ್ರಕ್ರಿಯೆ ಕುರಿತು ಆರೋಪ:
ಬಿ ಎಲ್ ಒಗಳನ್ನು ಕಾಂಗ್ರೆಸ್ ಪರ ಪ್ರಚಾರಕ್ಕೆ ಬಳಸಲಾಗುತ್ತಿದೆ ಎಂದು ಆರೋಪಿಸಿದ ವಿಜಯೇಂದ್ರ, ಕೆಲವು ಸಂದರ್ಭಗಳಲ್ಲಿ ಮಸೀದಿಗಳಲ್ಲಿ ಕುಳ್ಳಿರಿಸಿ ಎಸ್ ಐ ಆರ್ ಪ್ರಕ್ರಿಯೆ ನಡೆಸಲಾಗುತ್ತಿದೆ ಎಂದು ಹೇಳಿದರು. ಸಾಗರ ಸೇರಿದಂತೆ ಹಲವೆಡೆ ಅಧಿಕಾರಿಗಳ ದುರುಪಯೋಗವಾಗುತ್ತಿದೆ ಎಂದು ಅವರು ದೂರಿದರು.
ಈ ಕುರಿತು ಚುನಾವಣಾ ಆಯೋಗಕ್ಕೆ ದೂರು ನೀಡಲಾಗಿದೆ ಎಂದು ತಿಳಿಸಿದ ಅವರು, ಗೊಂದಲಗಳಿರುವ ಸಂದರ್ಭಗಳಲ್ಲಿ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ರಾಜಕೀಯ ಟಿಕೆ:
ಸಂಪುಟ ವಿಸ್ತರಣೆ ವಿಳಂಬ ಹಾಗೂ ಎಸ್ಐಆರ್ ಪ್ರಕ್ರಿಯೆ ನೆಪದಲ್ಲಿ ಸರ್ಕಾರ ಆಡಳಿತಾತ್ಮಕ ನಿರ್ಧಾರಗಳನ್ನು ಮುಂದೂಡುತ್ತಿದೆ ಎಂದು ಅವರು ಆರೋಪಿಸಿದರು.ರಾಹುಲ್ ಗಾಂಧಿ ವರ್ಷದಲ್ಲಿ ಹೆಚ್ಚಿನ ಸಮಯ ವಿದೇಶದಲ್ಲೆ ಇರುತ್ತಾರೆ ಎಂದು ಟೀಕಿಸಿದ ವಿಜಯೇಂದ್ರ,ಆಡಳಿತದಲ್ಲಿ ಗಂಭೀರತೆ ಕೊರತೆ ಇದೆ ಎಂದು ಹೇಳಿದರು.
ಅಲ್ಲದೆ,ವ್ಯವಸ್ಥೆಯಲ್ಲಿ "ಮ್ಯಾನೇಜ್ಮೆಂಟ್ ಕೋಟಾ"ಮತ್ತು "ಪೇಮೆಂಟ್ ಕೋಟಾ"ಎಂಬ ಪದ್ಧತಿ ಇದೆ ಎಂದು ಹಿಂದೆ ಹೇಳಿದ್ದ ಮಾತನ್ನು ಪುನರಾವರ್ತಿಸಿದರು.