Belagavi News :
ಬೆಂಗಳೂರು: ಮತದಾರ ಪಟ್ಟಿಗಳ ವಿಶೇಷ ಪರಿಷ್ಕರಣೆ (Special Intensive Revision -SIR) ಪ್ರಕ್ರಿಯೆ ಕುರಿತು ಕರ್ನಾಟಕದ ಮುಖ್ಯ ಚುನಾವಣಾಧಿಕಾರಿ ಅನ್ಬು ಕುಮಾರ್ ಮಹತ್ವದ ಮಾಹಿತಿ ನೀಡಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಫಾರ್ಮ್ ಗಳ ವಿತರಣೆ, ಮತದಾರರ ಪಟ್ಟಿಯಲ್ಲಿನ ವಿಳಾಸದ ವ್ಯತ್ಯಾಸಗಳು ಹಾಗೂ ಸಾರ್ವಜನಿಕರಿಂದ ಬಂದಿರುವ ದೂರುಗಳ ಕುರಿತು ಸ್ಪಷ್ಟನೆ ನೀಡಿದರು.
ಮತದಾರ ಪಟ್ಟಿಗೆ ಸಂಬಂಧಿಸಿದ, ಒಂದೇ ಒಂದು ಅರ್ಜಿ ನಮೂನೆಯೂ (ಫಾರ್ಮ್) ತಪ್ಪು ಮತಗಟ್ಟೆಗೆ ತಲುಪಿಲ್ಲ ಎಂದು ಅನ್ಬು ಕುಮಾರ್ ಸ್ಪಷ್ಟಪಡಿಸಿದರು. ಈ ಕುರಿತು ಯಾವುದೇ ದೂರುಗಳು ಬಂದರೆ ತಕ್ಷಣ ಪರಿಶೀಲಿಸಿ, ಅಗತ್ಯ ತಿದ್ದುಪಡಿ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆಗೆಯನ್ನೂ ಪಾರದರ್ಶಕ ಹಾಗೂ ನಿಖರವಾಗಿ ನಡೆಸಲು ಚುನಾವಣಾ ಆಯೋಗ ಬದ್ಧವಾಗಿದೆ ಎಂದು ಅವರು ತಿಳಿಸಿದರು. ಮತದಾರರು ತಮ್ಮ ಹೆಸರು, ವಿಳಾಸ ಮತ್ತು ಇತರ ವಿವರಗಳಲ್ಲಿ ಯಾವುದೇ ದೋಷ ಕಂಡುಬಂದರೆ ಸಂಬಂಧಿತ ಅಧಿಕಾರಿಗಳಿಗೆ ಮಾಹಿತಿ ನೀಡಿ ತಿದ್ದುಪಡಿ ಮಾಡಿಸಿಕೊಳ್ಳುವಂತೆ ಮನವಿ ಮಾಡಿದರು.
ಮತದಾರರ ಪಟ್ಟಿಯ ಪರಿಷ್ಕರಣೆ ಕಾರ್ಯವನ್ನು ಸುಗಮವಾಗಿ ಪೂರ್ಣಗೊಳಿಸಲು ಚುನಾವಣಾ ಇಲಾಖೆ ಅಗತ್ಯ ಕ್ರಮಗಳನ್ನು ಕೈಗೊಂಡಿದ್ದು, ಸಾರ್ವಜನಿಕರ ಸಹಕಾರವು ಅತ್ಯಂತ ಮುಖ್ಯವಾಗಿದೆ ಎಂದು ಅನ್ಬು ಕುಮಾರ್ ಹೇಳಿದರು.
ಮತದಾರರಿಗೆ ಯಾವುದೇ ತೊಂದರೆಯಾಗದಂತೆ ರಾಜ್ಯಾದ್ಯಂತ ಗ್ರಾಮ ಮಟ್ಟದಲ್ಲಿ ಮತದಾರರ ಸೌಲಭ್ಯ ಕೇಂದ್ರಗಳನ್ನು ಸ್ಥಾಪಿಸಲಾಗಿದೆ ಎಂದು ಕರ್ನಾಟಕದ ಮುಖ್ಯ ಚುನಾವಣಾಧಿಕಾರಿ ಅನ್ಬು ಕುಮಾರ್ ತಿಳಿಸಿದ್ದಾರೆ. ವಿಶೇಷ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಪ್ರತಿಯೊಬ್ಬ ಮತದಾರರು ಸುಲಭವಾಗಿ ಭಾಗವಹಿಸಲು ಅಗತ್ಯ ವ್ಯವಸ್ಥೆಗಳನ್ನು ಮಾಡಲಾಗಿದೆ ಎಂದು ಅವರು ಹೇಳಿದರು.
ತಾಂತ್ರಿಕ ಹಾಗೂ ನೆಟ್ವರ್ಕ್ ಸಮಸ್ಯೆಗಳು ಎದುರಿಸುತ್ತಿರುವ ಬೂತ್ ಮಟ್ಟದ ಅಧಿಕಾರಿಗಳ (BLO) ನೆರವಿಗಾಗಿ ಪ್ರತಿ ತಾಲ್ಲೂಕಿನಲ್ಲಿ ಎರಡು ಅಥವಾ ಮೂರು " ಫೆಸಿಲಿಟೇಶನ್ ಕೇಂದ್ರಗಳನ್ನು" ತೆರೆಯಲಾಗಿದೆ. ಇದರಿಂದ ಅರ್ಜಿಗಳ ಸ್ವೀಕಾರ ಹಾಗೂ ಮಾಹಿತಿ ನವೀಕರಣ ಪ್ರಕ್ರಿಯೆ ಇನ್ನಷ್ಟು ಸುಗಮವಾಗಲಿದೆ ಎಂದು ಅವರು ತಿಳಿಸಿದರು.
ನಗರ ಪ್ರದೇಶಗಳ ಮತದಾರರಿಗೆ ಹೆಚ್ಚಿನ ಅನುಕೂಲವಾಗುವಂತೆ "ಶನಿವಾರ ಮತ್ತು ಭಾನುವಾರ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ ಅಭಿಯಾನ"ನಡೆಸಲು ಸೂಚಿಸಲಾಗಿದೆ. ವಾರಂತ್ಯದಲ್ಲಿ ಹೆಚ್ಚು ಮಂದಿ ಸಾರ್ವಜನಿಕರು ಸೇವೆ ಪಡೆಯಲು ಸಾಧ್ಯವಾಗುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ಹೇಳಿದರು.
ಪ್ರತಿಯೊಬ್ಬ ಅರ್ಹ ಮತದಾರರಿಗೆ ಅರ್ಜಿ ( ಫಾರ್ಮ್) ಭರ್ತಿ ಮಾಡಲು, ಅಗತ್ಯ ದಾಖಲೆಗಳನ್ನು ಸಲ್ಲಿಸಲು ಹಾಗೂ ಸಮಯಕ್ಕೆ ಸರಿಯಾಗಿ ಅರ್ಜಿಯನ್ನು ಹಿಂತಿರುಗಿಸಲು ಸಂಪೂರ್ಣ ನೆರವು ನೀಡುವುದು ಚುನಾವಣಾ ಇಲಾಖೆಯ ಪ್ರಮುಖ ಉದ್ದೇಶವಾಗಿದೆ ಎಂದು ಅನ್ಬು ಕುಮಾರ್ ತಿಳಿಸಿದ್ದಾರೆ.