Belagavi News:
ಬೆಂಗಳೂರಿನ ಪಾಲಿಗೆ ಜೂನ್ 27 ವಿಶೇಷ ದಿನವಾಗಿ ದಾಖಲಾಗಿದೆ. ಒಂದೆಡೆ ನಾಡಪ್ರಭು ಕೆಂಪೇಗೌಡರ ಜಯಂತಿ ಸಂಭ್ರಮ, ಮತ್ತೊಂದೆಡೆ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ನಗರದ ವಿವಿಧ ಭಾಗಗಳಲ್ಲಿ ನಡೆದ ಬೃಹತ್ ಕಾರ್ಯಕ್ರಮಗಳು ಗಮನ ಸೆಳೆದವು. ಸಿಎಂ ಆದ ಬಳಿಕ ಡಿಕೆ ಶಿವಕುಮಾರ್ ಭಾಗವಹಿಸಿದ ಅತಿ ದೊಡ್ಡ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಇದು ಒಂದಾಗಿದೆ.
ಕೆಂಪೇಗೌಡ ಜಯಂತಿ ಅಂಗವಾಗಿ ಆಯೋಜಿಸಲಾದ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ ಮುಖ್ಯಮಂತ್ರಿ ಡಿಕೆ ಶಿವಕುಮಾರ್, ನಗರದ ಅಭಿವೃದ್ಧಿಗೆ ಸಂಬಂಧಿಸಿದ ಹಲವು ಯೋಜನೆಗಳಿಗೆ ಚಾಲನೆ ನೀಡಿದರು. ಬೆಂಗಳೂರಿನ ವಾಹನ ಸವಾರರು ಬಹುಕಾಲದಿಂದ ಕಾಯುತ್ತಿದ್ದ ಮಾಗಡಿ ರಸ್ತೆ - ಮೈಸೂರು ರಸ್ತೆ ಸಂಪರ್ಕಿಸುವ ಎಸ್ಎಂ ಕೃಷ್ಣ ದಶಪಥ ರಸ್ತೆಯನ್ನು ಉದ್ಘಾಟಿಸುವ ಮೂಲಕ ಜನರಿಗೆ ಸಮರ್ಪಿಸಿದರು.
ಒಂದೇ ದಿನ ಹಲವು ಸರ್ಕಾರಿ ಹಾಗೂ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ ಸಿಎಂ, ನಗರದ ಅಭಿವೃದ್ಧಿ, ಸಂಚಾರ ಸುಗಮೀಕರಣ ಮತ್ತು ಕೆಂಪೇಗೌಡರ ಪರಂಪರೆಯನ್ನು ಸ್ಮರಿಸುವ ಕಾರ್ಯಕ್ರಮಗಳಿಗೆ ಆದ್ಯತೆ ನೀಡಿದರು. ವಿವಿಧ ಕಾರ್ಯಕ್ರಮಗಳಲ್ಲಿ ಸಾವಿರಾರು ಜನರು ಭಾಗವಹಿಸಿದ್ದು, ಬಿಗಿ ಭದ್ರತಾ ವ್ಯವಸ್ಥೆ ಹಾಗೂ ಸುಸೂತ್ರ ಆಯೋಜನೆ ವಿಶೇಷವಾಗಿ ಗಮನ ಸೆಳೆಯಿತು.
ಕೆಂಪೇಗೌಡ ಜಯಂತಿ ಆಚರಣೆ,ಎಸ್ ಎಮ್ ಕೃಷ್ಣ ದಶಪಥ ರಸ್ತೆ ಉದ್ಘಾಟನೆ ಮತ್ತು ಸಾಲು ಅಭಿವೃದ್ಧಿ ಕಾರ್ಯಕ್ರಮಗಳ ಮೂಲಕ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರ ಆಡಳಿತದ ಮಹತ್ವದ ಸಾರ್ವಜನಿಕ ಕಾರ್ಯಕ್ರಮವಾಗಿ ಈ ದಿನ ಗುರುತಿಸಿಕೊಂಡಿದೆ.
ಎಸ್.ಎಂ.ಕೃಷ್ಣ ದಶಪಥ ರಸ್ತೆ ಲೋಕಾರ್ಪಣೆ - ಬೆಂಗಳೂರಿಗೆ ಹೊಸ ಸಂಚಾರ ಕ್ರಾಂತಿ ಟೋಲ್ ಫ್ರೀ - ಸಿಗ್ನಲ್ ಫ್ರೀ ಕಾರಿಡಾರ್ ಉದ್ಘಾಟಿಸಿದ ಸಿಎಂ ಡಿಕೆ ಶಿವಕುಮಾರ್ :
ಬೆಂಗಳೂರು ನಗರದ ವಾಹನ ಸವಾರರು ಬಹುಕಾಲದಿಂದ ಎದುರು ನೋಡುತ್ತಿದ್ದ ಎಸ್ಎಂ ಕೃಷ್ಣ ದಶಪಥ ರಸ್ತೆಗೆ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಚಾಲನೆ ನೀಡಿದ್ದಾರೆ. ನಾಡಪ್ರಭು ಕೆಂಪೇಗೌಡರ ಜಯಂತಿಯ ಅಂಗವಾಗಿ ಕಡಬಗೆರೆ ಕ್ರಾಸ್ ನಲ್ಲಿ ರಿಬ್ಬನ್ ಕತ್ತರಿಸುವ ಮೂಲಕ ರಸ್ತೆ ಲೋಕಾರ್ಪಣೆಗೊಂಡಿದ್ದು, ಮಾಗಡಿ ರಸ್ತೆ ಮತ್ತು ಮೈಸೂರು ರಸ್ತೆಯನ್ನು ಸಂಪರ್ಕಿಸುವ ಈ ನೂತನ ಕಾರಿಡಾರ್ ಬೆಂಗಳೂರಿನ ಸಂಚಾರ ವ್ಯವಸ್ಥೆಗೆ ಮಹತ್ವದ ಸೇರ್ಪಡೆಯಾಗಿದೆ.
ಕಡಬಗೆರೆ ಕ್ರಾಸ್ ನಿಂದ ಚೆಲ್ಲ ಘಟ್ಟ ಮೆಟ್ರೋ ನಿಲ್ದಾಣದವರೆಗೆ ಸಂಪರ್ಕ ಕಲ್ಪಿಸುವ ಈ ರಸ್ತೆ 10.7 ಕಿಲೋಮಿಟರ್ ಉದ್ದ ಹಾಗೂ 100 ಮೀಟರ್ ಅಗಲ ಹೊಂದಿದ್ದು, ಸಂಪೂರ್ಣ ಸಿಗ್ನಲ್ ಫ್ರೀ ಮತ್ತು ಟೋಲ್ ಫ್ರೀ ಕಾರಿಡಾರ್ ಆಗಿದೆ. ಸುಮಾರು ₹ 631 ಕೋಟಿ ವೆಚ್ಚದಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಈ ಯೋಜನೆಯನ್ನು ನಿರ್ಮಿಸಿದೆ.
ರಸ್ತೆಯ ಎರಡು ಬದಿಗಳಲ್ಲಿ 27 ಅಗಲದ ಹಸಿರು ಅಭಿವೃದ್ಧಿಪಡಿಸಲಾಗಿದ್ದು, ಭವಿಷ್ಯದ ಮೆಟ್ರೋ ಯೋಜನೆಯನ್ನು ಗಮನದಲ್ಲಿಟ್ಟುಕೊಂಡು ಮೂರು ಮೀಟರ್ ಮಧ್ಯದ ವಿಭಜಕ ನಿರ್ಮಿಸಲಾಗಿದೆ. ಜೊತೆಗೆ ಸುಸಜ್ಜಿತ ಸರ್ವಿಸ್ ರಸ್ತೆಗಳು, ಸೈಕ್ಲಿಂಗ್ ಗಾಗಿ ಪ್ರತ್ಯೇಕ ಟ್ರ್ಯಾಕ್, 3 ಅಂಡರ್ ಪಾಸ್ , 11 ಸೇತುವೆಗಳು ಹಾಗೂ 770 ಮೀಟರ್ ಉದ್ದದ ಸುರಂಗ ಮಾರ್ಗ ಈ ಯೋಜನೆಯ ಪ್ರಮುಖ ಆಕರ್ಷಣೆಗಳಾಗಿವೆ.
ಈ ದಶಪಥ ರಸ್ತೆ ನಾಡಪ್ರಭು ಕೆಂಪೇಗೌಡ ಲೇಔಟ್ ನ ಎಲ್ಲಾ 9 ಬ್ಲಾಕ್ ಗಳಿಗೆ ನೇರ ಸಂಪರ್ಕ ಕಲ್ಪಿಸುವುದರ ಜೊತೆಗೆ, ಕಡಬಗೆರೆ ಚಲ್ಲಘಟ್ಟ ಮೆಟ್ರೋ ನಿಲ್ದಾಣದವರೆಗೆ ವೇಗದ ಮತ್ತು ಸುಧಾ ಸಂಚಾರಕ್ಕೆ ದಾರಿ ಮಾಡಿಕೊಡಲಿದೆ. ಇದರಿಂದ ನಗರದ ಪಶ್ಚಿಮ ಭಾಗದ ಸಂಚಾರ ದಟ್ಟಣೆ ಕಡಿಮೆಯಾಗುವ ನಿರೀಕ್ಷೆಯಿದ್ದು, ಬೆಂಗಳೂರಿನ ಮೂಲ ಸೌಕರ್ಯ ಅಭಿವೃದ್ಧಿಯಲ್ಲಿ ಇದು ಮಹತ್ವದ ಮೈಲಿಗಲ್ಲಾಗಿ ಪರಿಗಣಿಸಲಾಗಿದೆ.
ಕೆಂಪೇಗೌಡ ಲೇಔಟ್ ನಲ್ಲಿ ಭವ್ಯ ಮ್ಯಾರಥಾನ್ - 50 ಸಾವಿರಕ್ಕೂ ಹೆಚ್ಚು ಜನರಿಂದ ಪರಿಸರ ಜಾಗೃತಿ, 15 ಲಕ್ಷ ಸಸಿ ನೆಡುವ ಮಹಾ ಅಭಿಯಾನ :
ಬೆಂಗಳೂರಿನ ಕೆಂಪೇಗೌಡ ಲೇಔಟ್ ನಲ್ಲಿ ನಡೆದ ರಸ್ತೆ ಉದ್ಘಾಟನೆ ಕಾರ್ಯಕ್ರಮವು ಕೇವಲ ಉದ್ಘಾಟನೆಗೆ ಮಾತ್ರ ಸೀಮಿತವಾಗದೆ, ಪರಿಸರ ಸಂರಕ್ಷಣೆ ಹಾಗೂ ಆರೋಗ್ಯ ಜಾಗೃತಿಯ ಸಂದೇಶ ಸಾರಿದ ಮಹತ್ವದ ಕಾರ್ಯಕ್ರಮವಾಗಿ ಗಮನ ಸೆಳೆಯಿತು. ಕಾರ್ಯಕ್ರಮದಲ್ಲಿ ಎಸ್ಎಂ ಕೃಷ್ಣ ಅವರ ಪತ್ನಿ ಪ್ರೇಮಾ ಕೃಷ್ಣ ಉಪಮುಖ್ಯಮಂತ್ರಿ ಡಾಕ್ಟರ್ ಜಿ ಪರಮೇಶ್ವರ್, ಸಚಿವರಾದ ಕೃಷ್ಣ ಬೈರೇಗೌಡ, ಕೆ.ಎಚ್. ಮುನಿಯಪ್ಪ, ಶಾಸಕರಾದ ಎನ್.ಎ.ಹ್ಯಾರಿಸ್, ಎಚ್.ಸಿ.ಬಾಲಕೃಷ್ಣ, ಎಸ್ ಟಿ ಸೋಮಶೇಖರ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು.
ಇದರ ಜೊತೆಗೆ 15 ಲಕ್ಷ ಸಸಿಗಳನ್ನು ನೆಡುವ ಬೃಹತ್ ಪರಿಸರ ಅಭಿಯಾನ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿತ್ತು. ಕೆಂಪೇಗೌಡ ಲೇಔಟ್ ನ 17 ವಿವಿಧ ಸ್ಥಳಗಳಲ್ಲಿ 5 ಲಕ್ಷಕ್ಕೂ ಅಧಿಕ ಸಸಿಗಳನ್ನು ನೀಡಲಾಗಿದ್ದು, ಉಳಿದ ಸಸಿಗಳನ್ನು ಬಿಡಿಎ ವ್ಯಾಪ್ತಿಯ ವಿವಿಧ ಲೇಔಟ್ ಗಳಲ್ಲಿ ನೆಡುವ ಕಾರ್ಯವೂ ಕೈಗೊಳ್ಳಲಾಗಿದೆ.
ಈ ಅಭಿಯಾನದಲ್ಲಿ ಕಾಲೇಜು ವಿದ್ಯಾರ್ಥಿಗಳು, ಮಕ್ಕಳು, ಬಿಬಿಎಂಪಿ ಪೌರ ಕಾರ್ಮಿಕರು, ಸ್ವಯಂ ಸೇವಕರು ಸೇರಿದಂತೆ 50,000ಕ್ಕೂ ಹೆಚ್ಚು ಮಂದಿ ಭಾಗವಹಿಸಿ ಪರಿಸರ ಸಂರಕ್ಷಣೆಗೆ ತಮ್ಮ ಕೈಜೋಡಿಸಿದರು.
ನಗರದ ಹಸಿರು ಪರಿಸರ ವೃದ್ಧಿ, ವಾಯು ಮಾಲಿನ್ಯ ನಿಯಂತ್ರಣ ಹಾಗೂ ಮುಂದಿನ ಪೀಳಿಗೆಗೆ ಉತ್ತಮ ಪರಿಸರ ನಿರ್ಮಾಣದ ಉದ್ದೇಶದಿಂದ ಹಮ್ಮಿಕೊಂಡ ಈ ಅಭಿಯಾನಕ್ಕೆ ಸಾರ್ವಜನಿಕರಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.
ಎಸ್ ಎಮ್ ಕೃಷ್ಣ ರಸ್ತೆಗೆ ಭೂಮಿ ನೀಡಿದ ಸ್ಥಳೀಯರಿಗೆ ಬಿಡಿಎ ಗೌರವ :
ನಗರದ ಅಭಿವೃದ್ಧಿಗೆ ಸಹಕರಿಸಿದ ಸ್ಥಳೀಯ ನಿವಾಸಿಗಳನ್ನು ಗೌರವಿಸುವ ವಿಶಿಷ್ಟ ಹೆಜ್ಜೆಯನ್ನು ಬೆಂಗಳೂರು ಅಭಿವೃದ್ದಿ ಪ್ರಾಧಿಕಾರ ಇಟ್ಟಿದೆ. ಎಸ್ ಎಮ್ ಕೃಷ್ಣ ದಶಪಥ ರಸ್ತೆ ನಿರ್ಮಾಣಕ್ಕೆ ಯಾವುದೇ ತಕರಾರು ಇಲ್ಲದೆ ಭೂಮಿ ನೀಡಿದ ಸ್ಥಳೀಯರು ಸೇವೆಯನ್ನು ಮರಿಸುವ ಉದ್ದೇಶದಿಂದ ರಸ್ತೆ ಜಂಕ್ಷನ್ ಗಳಲ್ಲಿ "ವಾಲ್ ಆಫ್ ಗ್ರಾಟಿಟ್ಯೂಡ್ " ನಿರ್ಮಿಸಿ ಅವರ ಹೆಸರನ್ನು ಶಾಶ್ವತವಾಗಿ ಅಳವಡಿಸಲಾಗಿದೆ.
ನಗರಾಭಿವೃದ್ಧಿ ಯೋಜನೆಗಳಲ್ಲಿ ಸಾರ್ವಜನಿಕರ ಸಹಕಾರವೇ ದೊಡ್ಡ ಶಕ್ತಿ ಎಂಬ ಸಂದೇಶ ಸಾರಿರುವ ಬಿಡಿಎ, ಭೂಮಿ ನೀಡಿದ ಕುಟುಂಬಗಳಿಗೆ ಈ ಮೂಲಕ ಕೃತಜ್ಞತೆ ಸಲ್ಲಿಸಿದೆ. ಈ ಕ್ರಮ ಸಾರ್ವಜನಿಕ ವಲಯದಲ್ಲೂ ಮೆಚ್ಚುಗೆಗೆ ಪಾತ್ರವಾಗಿದೆ.
ಇದೇ ವೇಳೆ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಮುಖ್ಯಮಂತ್ರಿ ಹುದ್ದೆಯ ಜವಾಬ್ದಾರಿ ವಹಿಸಿಕೊಂಡ ಬಳಿಕ ನಡೆದ ಅತಿ ದೊಡ್ಡ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಇದು ಒಂದಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ರಸ್ತೆ ಉದ್ಘಾಟನೆಯ ಜೊತೆಗೆ ಮ್ಯಾರಥಾನ್, ಪರಿಸರ ಜಾಗೃತಿ ಹಾಗೂ ಬೃಹತ್ ಸಸಿ ನೆಡುವ ಅಭಿಯಾನ ಕಾರ್ಯಕ್ರಮಕ್ಕೆ ವಿಶೇಷ ಮೆರಗು ತಂದವು.
ನಗರದ ವೇಗವಾಗಿ ಹೆಚ್ಚುತ್ತಿರುವ ವಾಹನ ದಟ್ಟನಿಗೆ ಪರಿಹಾರ ಕಲ್ಪಿಸುವ ಉದ್ದೇಶದಿಂದ ನಿರ್ಮಿಸಲಾದ ಎಸ್ಎಂ ಕೃಷ್ಣ ರಸ್ತೆ, ಬೆಂಗಳೂರಿನ ಪಶ್ಚಿಮ ಭಾಗದ ಸಂಚಾರ ವ್ಯವಸ್ಥೆಗೆ ಹೊಸ ದಿಕ್ಕು ನೀಡುವ ನಿರೀಕ್ಷೆ ಇದೆ. ಈ ದಶಪಥ ಕಾರ್ಯಕ್ರಮ ಕಾರ್ಯಾ rambha ವಾದ ಬಳಿಕ ಪ್ರಮುಖ ಜಂಕ್ಷನ್ ಗಳಲ್ಲಿ ಟ್ರಾಫಿಕ್ ಒತ್ತಡ ಕಡಿಮೆಯಾಗುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಅಭಿಪ್ರಾಯ ಪಟ್ಟಿದ್ದಾರೆ.
ನಗರಾಭಿವೃದ್ಧಿ, ಪರಿಸರ ಸಂರಕ್ಷಣೆ ಹಾಗೂ ಸಾರ್ವಜನಿಕ ಸಹಭಾಗಿತ್ವವನ್ನು ಒಂದೇ ವೇದಿಕೆಯಲ್ಲಿ ಕಗ್ಗೂಡಿಸಿದ ಈ ಕಾರ್ಯಕ್ರಮ ಬೆಂಗಳೂರಿನ ಅಭಿವೃದ್ಧಿ ಪಯಣದಲ್ಲಿ ಮಹತ್ವದ ಮೈಲಿಗಲ್ಲಾಗಿ ಪರಿಣಮಿಸಿದೆ.
Also Read:
ಸಬ್ಸಿಡಿ ಲೋನ್ ಹೆಸರಿನಲ್ಲಿ ವಂಚನೆ ಮಹಿಳೆಯ ಖಾತೆಯಿಂದ ಲಕ್ಷಾಂತರ ರೂ. ಅಕ್ರಮ ಹಣ ವರ್ಗಾವಣೆ ಆರೋಪ