BELAGAVI NEWS :
ಮಹಾರಾಷ್ಟ್ರದಲ್ಲೂ ನೀರಿನ ಅಭಾವ; ನೀರು ಬಿಡುವುದು ಕಷ್ಟ ಎಂದು ಸಚಿವ ಸತೀಶ್ ಜಾರಕಿಹೊಳಿ ಸ್ಪಷ್ಟನೆ
ಜಿಲ್ಲೆಯಲ್ಲಿ ಎದುರಾಗಿರುವ ನೀರಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ವಿವಿಧ ಮಾರ್ಗಗಳನ್ನು ಪರಿಶೀಲಿಸುತ್ತಿರುವ ಸಂದರ್ಭದಲ್ಲಿ, ಪಕ್ಕದ ಮಹಾರಾಷ್ಟ್ರ ರಾಜ್ಯದಿಂದ ನೀರು ಬಿಡುಗಡೆ ಸಾಧ್ಯತೆ ಕಡಿಮೆ ಇದೆ ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ. ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮಹಾರಾಷ್ಟ್ರದಲ್ಲಿಯೂ ತೀವ್ರ ನೀರಿನ ಅಭಾವ ಎದುರಾಗಿರುವುದರಿಂದ ಅಲ್ಲಿನ ಅಧಿಕಾರಿಗಳು ನೀರು ಬಿಡಲು ಸಾಧ್ಯವಿಲ್ಲ ಎಂಬುದನ್ನು ಈಗಾಗಲೇ ಕರ್ನಾಟಕದ ಅಧಿಕಾರಿಗಳಿಗೆ ಸ್ಪಷ್ಟಪಡಿಸಿದ್ದಾರೆ ಎಂದು ಹೇಳಿದರು.
ಈ ಕುರಿತು ಹೆಚ್ಚಿನ ವಿವರ ನೀಡಿದ ಸಚಿವರು, ಪ್ರಸ್ತುತ ಪರಿಸ್ಥಿತಿಯಲ್ಲಿ ಮಹಾರಾಷ್ಟ್ರದ ಜಲಾಶಯಗಳಲ್ಲಿಯೂ ನೀರಿನ ಮಟ್ಟ ಕಡಿಮೆಯಾಗಿದ್ದು, ಅಲ್ಲಿನ ಜನರ ಕುಡಿಯುವ ನೀರು ಮತ್ತು ಕೃಷಿ ಅಗತ್ಯಗಳಿಗೆ ಆದ್ಯತೆ ನೀಡಬೇಕಾದ ಅನಿವಾರ್ಯತೆ ಎದುರಾಗಿದೆ ಎಂದು ತಿಳಿಸಿದರು. ಹೀಗಾಗಿ ಕರ್ನಾಟಕದ ಮನವಿಗೆ ಸ್ಪಂದಿಸಿ ನೀರು ಬಿಡುಗಡೆ ಮಾಡುವ ಸಾಧ್ಯತೆ ಕಡಿಮೆಯಾಗಿದೆ ಎಂದು ಅವರು ಅಭಿಪ್ರಾಯ ಪಟ್ಟರು. ಇದು ಈ ವರ್ಷದ ಸಮಸ್ಯೆ ಮಾತ್ರವಲ್ಲ ಎಂದು ಹೇಳಿದ ಸಚಿವರು, ಕಳೆದ ಹಲವು ವರ್ಷಗಳಿಂದ ರಾಜ್ಯ ಸರ್ಕಾರ ಮಹಾರಾಷ್ಟ್ರಕ್ಕೆ ನೀರು ಬಿಡುಗಡೆ ಮಾಡುವಂತೆ ಮನವಿ ಸಲ್ಲಿಸುತ್ತಲೇ ಬಂದಿದೆ. ಆದರೆ ನಿರೀಕ್ಷಿತ ಪ್ರಮಾಣದಲ್ಲಿ ನೀರು ಲಭ್ಯವಾಗಿಲ್ಲ. ಕೊಯ್ನಾ ಜಲಾಶಯದಲ್ಲಿ ಸಮರ್ಪಕ ಪ್ರಮಾಣದ ನೀರು ಸಂಗ್ರಹವಾಗಿದ್ದ ಸಂದರ್ಭದಲ್ಲಿಯೂ ಮಹಾರಾಷ್ಟ್ರ ಸರ್ಕಾರ ನೀರು ಬಿಡುಗಡೆ ಮಾಡುವ ವಿಚಾರದಲ್ಲಿ ಹೆಚ್ಚು ಆಸಕ್ತಿ ತೋರಿಸಲಿಲ್ಲ ಎಂದು ಅವರು ಉಲ್ಲೇಖಿಸಿದರು.
ಪ್ರಸ್ತುತ ರಾಜ್ಯದ ಹಲವು ಭಾಗಗಳಲ್ಲಿ ಮಳೆ ಕೊರತೆಯಿಂದ ನೀರಿನ ಸಮಸ್ಯೆ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದೆ. ಕೋಲಾರ ಹಿನ್ನೆಲೆಯಲ್ಲಿ ಸರ್ಕಾರ ಸ್ಥಳೀಯ ಜಲಮೂಲಗಳ ಸಂರಕ್ಷಣೆ, ಪರ್ಯಾಯ ನೀರು ಸರಬರಾಜು ವ್ಯವಸ್ಥೆಗಳು ಹಾಗೂ ದೀರ್ಘಕಾಲಿಕ ನೀರಾವರಿ ಯೋಜನೆಗಳ ಅನುಷ್ಠಾನಕ್ಕೆ ಹೆಚ್ಚಿನ ಒತ್ತು ನೀಡುತ್ತಿದೆ ಎಂದು ಸಚಿವರು ಹೇಳಿದರು.
ರಾಜ್ಯದ ಜನರು ನೀರನ್ನು ಮಿತವಾಗಿ ಬಳಸಿ, ಸಂರಕ್ಷಣೆಗೆ ಆದ್ಯತೆ ನೀಡಬೇಕು ಎಂದು ಮನವಿ ಮಾಡಿದ ಅವರು, ನೀರಿನ ಭಾಗದ ಪರಿಸ್ಥಿತಿಯನ್ನು ಎದುರಿಸಲು ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ಭರವಸೆ ನೀಡಿದರು. ಮಹಾರಾಷ್ಟ್ರದಿಂದ ನೀರು ಬಿಡುಗಡೆಯ ನಿರೀಕ್ಷೆ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ರಾಜ್ಯದ ಲಭ್ಯ ಜಲಸಂಪನ್ಮೂಲಗಳ ಸಮರ್ಪಕ ನಿರ್ವಹಣೆ ಅತ್ಯಂತ ಅಗತ್ಯವಾಗಿದೆ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.
ಇನ್ನು ಮೊನ್ನೆ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಮುಂಬೈಗೆ ಮದುವೆ ಸಂಬಂಧ ಹೋಗಿದ್ದರು. ಈ ವೇಳೆ ಕೃಷ್ಣಾ ನದಿಗೆ ನೀರು ಬಿಡುವ ವಿಚಾರ ಅಲ್ಲಿನ ಮುಖ್ಯಮಂತ್ರಿಗಳ ಜೊತೆ ಚರ್ಚೆ, ಮಾತುಕತೆ ಆಗಿಲ್ಲ ಎಂದು ಸತೀಶ್ ಜಾರಕಿಹೊಳಿ ಸ್ಪಷ್ಟನೆ ನೀಡಿದರು.
ಬೆಳಗಾವಿ ನಗರದ ನಾಗರಿಕರಿಗೆ ಕುಡಿಯುವ ನೀರಿನ ಕುರಿತು ಯಾವುದೇ ಆತಂಕ ಅಗತ್ಯವಿಲ್ಲ ಎಂದು ಸಚಿವ ಸತೀಶ್ ಜಾರಕಿಹೊಳಿ ಭರವಸೆ ನೀಡಿದ್ದಾರೆ. ನಗರದ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಎರಡು ತಿಂಗಳುಗಳಿಗೆ ಸಾಕಾಗುವಷ್ಟು ಕುಡಿಯುವ ನೀರಿನ ಸಂಗ್ರ ಲಭ್ಯವಾಗಿದ್ದು, ನೀರಿನ ಕೊರತೆ ಉಂಟಾಗುವ ಪ್ರದೇಶಗಳಿಗೆ ಟ್ಯಾಂಕರ್ ಗಳ ಮೂಲಕ ನೀರು ಪೂರೈಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ .
ಗ್ರಾಮೀಣ ಪ್ರದೇಶಗಳಲ್ಲಿಯೂ ಕುಡಿಯುವ ನೀರಿನ ಸರಬರಾಜು ಸಮರ್ಪಕವಾಗಿ ನಡೆಯುವಂತೆ ಈಗಾಗಲೇ ಗ್ರಾಮ ಪಂಚಾಯಿತಿಗಳಿಗೆ ಸೂಚನೆ ನೀಡಲಾಗಿದೆ ಸಾರ್ವಜನಿಕರಿಗೆ ನಿರಂತರ ಮತ್ತು ಸುಗಮ ನೀರು ಪೂರೈಕೆ ಒದಗಿಸುವುದು, ಸರ್ಕಾರದ ಆದ್ಯತೆಯಾಗಿದ್ದು, ಎಲ್ಲ ಇಲಾಖೆಗಳು ಸಮನ್ವಯದಿಂದ ಕಾರ್ಯನಿರ್ವಹಿಸುತ್ತಿವೆ ಎಂದು ಅವರು ಹೇಳಿದರು.
ಇನ್ನು 24/7 ಕುಡಿಯುವ ನೀರಿನ ಯೋಜನೆಯ ಕಾಮಗಾರಿ ಸಂಪೂರ್ಣವಾಗಿ ಪೂರ್ಣಗೊಂಡಿಲ್ಲ. ಪ್ರಸ್ತುತ ನಗರದಲ್ಲಿ ಲಭ್ಯವಿರುವ ನೀರಿನ ಪ್ರಮಾಣ, ವಿತರಣಾ ವ್ಯವಸ್ಥೆ ಹಾಗೂ ಆರ್ಥಿಕ ಅಡಚಣೆಗಳನ್ನು ಪರಿಗಣಿಸಿ ನೀರು ಪೂರೈಕೆ ಮಾಡಲಾಗುತ್ತಿದೆ. ಯೋಜನೆ ಪೂರ್ಣ ಪ್ರಮಾಣದಲ್ಲಿ ಕಾರ್ಯರೂಪಕ್ಕೆ ಬಂದ ನಂತರ ನಗರದ ಜನತೆಗೆ ನಿರಂತರ ಕುಡಿಯುವ ನೀರಿನ ಪೂರೈಕೆ ಮಾಡುವ ಗುರಿಯನ್ನು ಸಾಧಿಸಲಾಗುವುದು ಎಂದು ಸತೀಶ್ ಜಾರಕಿಹೊಳಿ ತಿಳ್ಸಿದ್ದಾರೆ.
"ನೀರು ಸಾಕಷ್ಟಿದೆ-ಆತಂಕ ಬೇಡ; ಅಗತ್ಯವಿರುವ ಕಡೆ ಟ್ಯಾಂಕರ್ ಮೂಲಕ ಪೂರೈಕೆ, 24 /7 ಯೋಜನೆ ಪೂರ್ಣಗೊಂಡ ಬಳಿಕ ನಿರಂತರ ನೀರು ಸರಬರಾಜು" ಎಂಬ ಸಂದೇಶವನ್ನು ಸಚಿವರು ಪುನರುಚ್ಚರಿಸಿದರು.
ಮಹಾನಗರ ಪಾಲಿಕೆಯ ಕಾರ್ಯ ವೈಕರಿಯ ಕುರಿತ ಮಾಧ್ಯಮಗಳ ಪ್ರಶ್ನೆಗೆ ಸತೀಶ್ ಜಾರಕಿಹೊಳಿ, ನೀರಿನ ಸಮಸ್ಯೆ ಸೇರಿದಂತೆ ವಿವಿಧ ನಾಗರಿಕ ಸಮಸ್ಯೆಗಳನ್ನು ಮಹಾನಗರ ಪಾಲಿಕೆ ಸರ್ಕಾರದ ಗಮನಕ್ಕೆ ಸಮರ್ಪಕವಾಗಿ ತರುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು
ಸರ್ಕಾರಕ್ಕೆ ಸಮಸ್ಯೆಗಳ ಕುರಿತು ಸ್ಪಷ್ಟ ಮತ್ತು ಸಮಗ್ರ ಮಾಹಿತಿ ತಲುಪಿದಾಗ ಮಾತ್ರ ಅಗತ್ಯ ಕ್ರಮಗಳನ್ನು ಕೈಗೊಂಡು ಸೂಕ್ತ ಪರಿಹಾರ ಒದಗಿಸಲು ಸಾಧ್ಯವಾಗುತ್ತದೆ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದರು. ಸಾರ್ವಜನಿಕ ಸಮಸ್ಯೆಗಳ ಪರಿಹಾರಕ್ಕೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಸಮನ್ವಯದಿಂದ ಕಾರ್ಯನಿರ್ವಹಿಸುವ ಅಗತ್ಯವಿದೆ ಎಂದು ಅವರು ಅಭಿಪ್ರಾಯಪಟ್ಟರು.
ಸಚಿವ ಸಂಪುಟ ವಿಸ್ತರಣೆ ಮತ್ತು ಮಂತ್ರಿ ಸ್ಥಾನಗಳ ಕುರಿತಂತೆ ಮಾತನಾಡಿದ ಅವರು, ರಾಜಕೀಯದಲ್ಲಿ ಪ್ರತಿಯೊಬ್ಬ ಶಾಸಕರು ಸಚಿವ ಸ್ಥಾನ ಬಯಸುವುದು ಸಹಜ. ಆದರೆ ಎಲ್ಲರಿಗೂ ಅವಕಾಶ ದೊರೆಯುವುದಿಲ್ಲ. ಪ್ರಸ್ತುತ 20 ಸಚಿವ ಸ್ಥಾನಗಳು ಖಾಲಿ ಇದ್ದು, ಸುಮಾರು 40 - 60 ಶಾಸಕರು ಸಚಿವ ಸ್ಥಾನಕ್ಕಾಗಿ ಆಕಾಂಕ್ಷೆಗಳಾಗಿದ್ದಾರೆ ಎಂದು ತಿಳಿಸಿದರು.
ಮುಸ್ಲಿಂ ಸಮುದಾಯದ ಇನ್ನಿಬ್ಬರು ಶಾಸಕರಿಗೆ ಸಚಿವ ಸ್ಥಾನ ನೀಡುವಂತೆ ಪಕ್ಷದ ಮಟ್ಟದಲ್ಲಿ ಮನವಿ ಮಾಡಲಾಗಿದೆ. ಬೆಳಗಾವಿ ಜಿಲ್ಲೆಗೆ ಒಂದು ಸಚಿವ ಸ್ಥಾನ ಖಚಿತವಾಗಿದ್ದು, ಹೆಚ್ಚುವರಿ ಸ್ಥಾನ ನೀಡಬೇಕೇ ಅಥವಾ ಬೇಡವೇ ಎಂಬ ಅಂತಿಮ ನಿರ್ಧಾರವನ್ನು ಹೈಕಮಾಂಡ್ ಕೈಗೊಳ್ಳಲಿದೆ ಎಂದು ಹೇಳಿದರು. ಲಕ್ಷ್ಮಣ್ ಸವದಿ ಅವರಿಗೆ ಸಚಿವ ಸ್ಥಾನ ನೀಡುವ ಭರವಸೆಯ ಕುರಿತು ತಮಗೆ ಯಾವುದೇ ಮಾಹಿತಿ ಇಲ್ಲ ಎಂದು ಸ್ಪಷ್ಟಪಡಿಸಿದರು.
ನೀಟ್ ಪರೀಕ್ಷೆಯಲ್ಲಿ ಅಕ್ರಮಗಳ ಕುರಿತು ಪ್ರತಿಕ್ರಿಯಿಸಿದ ಅವರು, ಈ ವಿಷಯದ ಬಗ್ಗೆ ಪಕ್ಷದ ಹಿರಿಯ ನಾಯಕರು ಈಗಾಗಲೇ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಈ ಕುರಿತು ಹೆಚ್ಚಿನ ಪ್ರತಿಕ್ರಿಯೆ ನೀಡಲು ಇಚ್ಛಿಸುವುದಿಲ್ಲ ಎಂದರು.
ಇನ್ನೊಂದೆಡೆ, ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಮುಂಗಾರು ಅದಿವೇಶನ ನಡೆಯುವ ಕುರಿತು ಇನ್ನು ಯಾವುದೇ ಅಧಿಕೃತ ಚರ್ಚೆ ನಡೆದಿಲ್ಲ. ಈ ಸಂಬಂಧ ಅಂತಿಮ ತೀರ್ಮಾನವನ್ನು ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಕೈಗೊಳ್ಳಲಿದ್ದಾರೆ ಎಂದು ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದರು.
ಧಾರವಾಡ ಕೈಗಾರಿಕಾ ಪ್ರದೇಶಕ್ಕೆ ಹೆಚ್ಚುವರಿ ಆಗಿ ನೀರು ಪೂರೈಸಲಾಗುತ್ತಿದೆ ಎಂಬ ಆರೋಪಗಳನ್ನು ಸಚಿವ ಸತೀಶ್ ಜಾರಕಿಹೊಳಿ ಸ್ಪಷ್ಟವಾಗಿ ತಳ್ಳಿ ಹಾಕಿದ್ದಾರೆ. ಕೈಗಾರಿಕಾ ಪ್ರದೇಶಕ್ಕೆ ಯಾವುದೇ ಹೆಚ್ಚು ಅದಿ ನೀರು ಪೂರೈಕೆ ಮಾಡಲಾಗುತ್ತಿಲ್ಲ ಎಂದು ಅವರು ತಿಳಿಸಿದರು.
ಕೈಗಾರಿಕೆಗಳಿಗೆ ನೀರು ಪೂರೈಕೆ ಮಾಡುವುದಕ್ಕೂ ನಿಗದಿತ ನಿಯಮಗಳು ಮತ್ತು ಮಿತಿಗಳಿದ್ದು, ಅವುಗಳ ವ್ಯಾಪ್ತಿಯಲ್ಲಿಯೇ ನೀರು ಒದಗಿಸಲಾಗುತ್ತಿದೆ. ಖಾಸಗಿ ಕೈಗಾರಿಕೆಗಳು ತಮ್ಮ ಇಚ್ಛೆಯಂತೆ ನೀರನ್ನು ಸಾಗಿಸಲು ಅಥವಾ ಬಳಕೆ ಮಾಡಲು ಅವಕಾಶವಿಲ್ಲ. ನೀರಿನ ಬಳಕೆ ಹಾಗೂ ಸಾಗಾಣಿಗೆ ಸಂಬಂಧಿಸಿದ ಕಾನೂನು ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿದೆ ಎಂದು ಅವರು ಸ್ಪಷ್ಟಪಡಿಸಿದರು.
ಜಿಲ್ಲೆಯಲ್ಲಿ ಕುಡಿಯುವ ನೀರಿನ ಲಭ್ಯತೆಗೆ ಮೊದಲ ಆದ್ಯತೆ ನೀಡಲಾಗಿದೆ. ಸಾರ್ವಜನಿಕರ ಅಗತ್ಯಗಳಿಗೆ ಯಾವುದೇ ರೀತಿಯ ತೊಂದರೆ ಉಂಟಾಗದಂತೆ ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದ್ದು, ನೀರಿನ ನಿರ್ವಹಣೆಯನ್ನು ಸಮರ್ಪಕವಾಗಿ ನಡೆಸಲಾಗುತ್ತಿದೆ ಎಂದು ಸತೀಶ್ ಜಾರಕಿಹೊಳಿ ಹೇಳಿದರು.
ಕೈಗಾರಿಕೆಗಳಿಗೆ ನೀರು ಪೂರೈಕೆ ಮತ್ತು ಸಾರ್ವಜನಿಕರ ಕುಡಿಯುವ ನೀರಿನ ಅಗತ್ಯಗಳ ನಡುವೆ ಸಮತೋಲನ ಕಾಪಾಡುವ ನೀಟ್ಟಿನಲ್ಲಿ ಸರ್ಕಾರ ಕಾರ್ಯ ನಿರ್ವಹಿಸುತ್ತಿದ್ದು, ಜಿಲ್ಲೆಯ ಜನತೆ ಆತಂಕ ಪಡುವ ಅಗತ್ಯವಿಲ್ಲ ಎಂದು ಅವರು ಭರವಸೆ ನೀಡಿದರು.
Also Read:
ಸಚಿವ ಸತೀಶ್ ಜಾರಕಿಹೊಳಿ ಬಾವನಿಗೆ ಇಡಿ ಶಾಕ್! ವೈ ಮಂಜುನಾಥ್ ಮನೆ ಮೇಲೆ ಇಡಿ ದಾಳಿ